ಭುವನೇಶ್ವರ: ಆರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶೇಖ್ ಆಸಿಫ್ ಅಲಿ (Sheikh Asif Ali)ಯ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಒರಿಸ್ಸಾ ಹೈಕೋರ್ಟ್ (Orissa High Court) ತೀರ್ಪು ನೀಡಿದೆ.
ಆಸಿಫ್ ದಿನಕ್ಕೆ ಹಲವು ಬಾರಿ ನಿರಂತರವಾಗಿ ನಮಾಜ್ ಮಾಡುತ್ತಿರುವುದನ್ನು ಗಮನಿಸಿದ ಕೋರ್ಟ್ ಆತ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ ಪಡುತ್ತಿರುವುದನ್ನು ಉಲ್ಲೇಖಿಸಿದ ಈ ತೀರ್ಪು ನೀಡಿದೆ. ಜತೆಗೆ ನ್ಯಾಯಮೂರ್ತಿ ಎಸ್.ಕೆ.ಸಾಹೂ ಮತ್ತು ನ್ಯಾಯಮೂರ್ತಿ ಆರ್.ಕೆ.ಪಟ್ನಾಯಕ್ ಅವರನ್ನೊಳಗೊಂಡ ನ್ಯಾಯಪೀಠವು, ಶೇಖ್ ಆಸಿಫ್ ಅಲಿ ವಿರುದ್ಧ ಮರಣ ದಂಡನೆ ವಿಧಿಸಬಹುದಾದ ಪ್ರಬಲ ಸಾಕ್ಷಿಗಳಿಲ್ಲ ಎಂದು ತಿಳಿಸಿದೆ. ಈ ಪ್ರಕರಣವು ಸಾಂದರ್ಭಿಕ ಪುರಾವೆಗಳನ್ನು ಆಧರಿಸಿದೆ ಮತ್ತು ಅಪರಾಧವನ್ನು ಪೂರ್ವಯೋಜಿತ ರೀತಿಯಲ್ಲಿ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿ ಶಿಕ್ಷೆಯನ್ನು ಕಡಿತಗೊಳಿಸಿದೆ.
Orissa High Court commuted the death sentence of a man Asif Ali, who was convicted for rape & murder of a 6-year-old girl.
— Anshul Saxena (@AskAnshul) June 26, 2024
Court noted that he is offering prayer to God many times in a day. He is ready to accept punishment as he has surrendered before God.
What? Is this true? pic.twitter.com/0CoVWwNwQo
ಘಟನೆಯ ಹಿನ್ನೆಲೆ
ಇದು ಸುಮಾರು 10 ವರ್ಷಗಳ ಹಿಂದಿನ ಘಟನೆ. 2014ರ ಆಗಸ್ಟ್ 21ರಂದು ಆರು ವರ್ಷದ ಸಂತ್ರಸ್ತೆ ತನ್ನ ಅಪ್ರಾಪ್ತ ವಯಸ್ಸಿನ ಕಸಿನ್ ಜತೆ ಅಪರಾಹ್ನ 2 ಗಂಟೆ ಸುಮಾರಿಗೆ ಚಾಕೋಲೆಟ್ ಖರೀದಿಸಲು ಅಂಗಡಿಗೆ ತೆರಳಿದ್ದಳು. 3 ಗಂಟೆಯಾದರೂ ಬಾಲಕಿ ಹಿಂದಿರುಗದ ಕಾರಣ ಮನೆಯವರಿಗೆ ಗಾಬರಿ ಅಕ್ಕ ಪಕ್ಕದ ಮನೆಯವರಿಗೆ ಸುದ್ದಿ ತಿಳಿಸಿದರು. ಹೀಗೆ ಅವರೆಲ್ಲ ಸೇರಿ ಬಾಲಕಿಯನ್ನು ಹುಡುಕತೊಡಗಿದರು.
ಅನೇಕ ತಾಸಿನ ಹುಡುಕಾಟದ ಬಳಿಕ ಆರು ವರ್ಷದ ಬಾಲಕಿ ನಗ್ನಾವಸ್ಥೆಯಲ್ಲಿ, ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಶೇಖ್ ಖೈರುದ್ದೀನ್ ಎಂಬಾತನ ಮನೆಯ ಸಮೀಪ ಕಂಡು ಬಂದಿದ್ದಳು. ಕೂಡಲೇ ಆಕೆಯನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಅವರು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ದಾಖಲಿಸುವಂತೆ ಸಲಹೆ ನೀಡಿದರು. ಆದರೆ ಅಷ್ಟರಲ್ಲಿ ಬಾಲಕಿ ಅಸುನೀಗಿದ್ದಳು.
ಶೇಕ್ ಆಸಿಫ್ ಅಲಿ ಮತ್ತು ಶೇಕ್ ಅಕಿಲ್ ಅಲಿ ಬಾಲಕಿಯನ್ನು ಬಲವಂತದಿಂದ ಕರೆದೊಯ್ದಿರುವುದನ್ನು ನೋಡಿರುವುದಾಗಿ ಆಕೆಯ ಜತೆಗಿದ್ದ ಕಸಿನ್ ತಿಳಿಸಿದ್ದಳು. ಹೀಗಾಗಿ ಸಂತ್ರಸ್ತೆಯ ಕುಟುಂಬ ನೀಡಿದ ದೂರಿನಂತೆ ಈ ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302, 376-ಡಿ ಮತ್ತು 376-ಎ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮರಣೋತ್ತರ ವರದಿ ಮತ್ತು ವಿಚಾರಣೆ ವೇಳೆ, ಆರೋಪಿಗಳು ಬಾಲಕಿಯ ಬಾಯಿಯನ್ನು ಮುಚ್ಚಿಕೊಂಡು ಅವಳನ್ನು ಕರೆದೊಯ್ದು, ಅತ್ಯಾಚಾರ ಎಸಗಿ ನಂತರ ಕತ್ತು ಹಿಸುಕಿದ್ದಾರೆ ಎಂದು ತಿಳಿದು ಬಂದಿತ್ತು. ಬಳಿಕ ವಿಚಾರಣಾ ನ್ಯಾಯಾಲಯವು ಐಪಿಸಿ ಮತ್ತು ಪೋಕ್ಸೊ ಸೆಕ್ಷನ್ ಅಡಿಯಲ್ಲಿ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ್ದರೂ, ಒರಿಸ್ಸಾ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಶೇಖ್ ಅಕಿಲ್ ಅಲಿಯನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತ್ತು.
ಶೇಖ್ ಆಸಿಫ್ ಅಲಿ ಪ್ರಕರಣದಲ್ಲಿ ತೀರ್ಪು ನೀಡಿ “ಶೇಖ್ ಆಸಿಫ್ ಅಲಿ ವಿರುದ್ಧ ಐಪಿಸಿಯ ಸೆಕ್ಷನ್ 376-ಡಿ ಅಡಿಯಲ್ಲಿ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಆದರೆ ಐಪಿಸಿಯ ಸೆಕ್ಷನ್ 302, 376-ಎ ಮತ್ತು ಪಿಒಸಿಯ ಸೆಕ್ಷನ್ 6ರ ಅಡಿಯಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆʼʼ ಎಂದು ಹೇಳಿತ್ತು. ಇದೀಗ ಪೂರಕ ಸಾಕ್ಷ್ಯಾಧಾರಗಳ ಕೊರತೆಯಿಂದ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದೆ.
ಇದನ್ನೂ ಓದಿ: Physical Abuse : ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನಿಸಿದ ಕಾಮುಕ