ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಮಾತು ಬಾರದ ಮತ್ತು ಶ್ರವಣದೋಷವುಳ್ಳ ಅಪ್ರಾಪ್ತ ಬಾಲಕನ ಮೇಲೆ ಸಂಬಂಧಿಕರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಜತೆಗೆ ಆತನ ಗುದ ದ್ವಾರಕ್ಕೆ ಪೆನ್ ತುರುಕಿಸಿ ವಿಕೃತಿ ಮೆರೆದಿದ್ದಾರೆ. ಇದರಿಂದ ಸುಮಾರು ಮೂರು ವಾರಗಳ ಕಾಲ ಬಾಲಕ ನೋವು ಅನುಭವಿಸಿದ್ದು, ಕೊನೆಗೂ ಗುದ ದ್ವಾರದಿಂದ ಪೆನ್ ಹೊರಕ್ಕೆ ತೆಗೆಯಲಾಗಿದೆ (Crime News).
ಬಾಯಿ ಬಾರದ ಹಿನ್ನೆಲೆಯಲ್ಲಿ ಈ 16 ವರ್ಷದ ಬಾಲಕನಿಗೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಮನೆಯವರ ಬಳಿ ಹೇಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆತ ಮೂರು ವಾರಗಳ ಕಾಲ ನೋವು ಸಹಿಸಿಕೊಂಡಿದ್ದ. ಲೈಂಗಿಕ ಕಿರುಕುಳ ನೀಡಿದ ಬಳಿಕ ಪಾಪಿಗಳು ಬಾಲಕನ ಗುದ ದ್ವಾರಕ್ಕೆ ಪೆನ್ ತುರುಕಿಸಿದ್ದರು. ಈ ಘಟನೆ ಫೆಬ್ರವರಿ 5ರಂದು ನಡೆದಿದ್ದು, ಫೆಬ್ರವರಿ 25ರ ವರೆಗೆ ಬೆಳಕಿಗೆ ಬಂದಿರಲಿಲ್ಲ. ನೋವು ಮತ್ತು ನಿದ್ದೆಯ ಸಮಸ್ಯೆಯಿಂದ ಬಾಲಕ ಒದ್ದಾಡುತ್ತಿರುವುದನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಘಟನೆ ಬೆಳಕಿಗೆ ಬಂದಿತ್ತು.
ಘಟನೆಯ ವಿವರ
ಮನೆಯಿಂದ ಹೊರ ಹೋಗಿದ್ದ ಬಾಲಕ ಅಳುತ್ತಾ ಹಿಂದಿರುಗಿದ್ದ. ಆರಂಭದಲ್ಲಿ ಪೋಷಕರು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿರಬೇಕು. ಈ ಭಯದಲ್ಲಿ ಅಳುತ್ತಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಬಳಿಕವೂ ಅಳು ಮಂದುವರಿಸಿದ್ದ ಆತ ತನ್ನ ಗುದ ದ್ವಾರ ಮತ್ತು ಹೊಟ್ಟೆಯತ್ತ ಕೈ ತೋರಿ ವಿಪರೀತ ನೋವು ಎಂದು ತಿಳಿಸಿದ್ದ. ಬಳಿಕ ಆತನಿಗೆ ಆಹಾರ ಸೇವಿಸಲು, ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ.
ಕೂಡಲೇ ಬಾಲಕನ್ನು ಶಹೀದ್ ನಗರದ ಮಾರಿಗೋಲ್ಡ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರಿಶೀಲನೆ ವೇಳೆ ಆತನ ಗುದ ದ್ವಾರದಲ್ಲಿ ಹುದುಗಿಸಿದ್ದ ಪೆನ್ ಕಂಡು ಬಂದಿತ್ತು. ಬಳಿಕ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಯಿತು. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಎಫ್‌ಐಆರ್ ದಾಖಲು
ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ 377 (ಸಲಿಂಗಕಾಮ) ಸೆಕ್ಷನ್ ಸೇರಿದಂತೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮತ್ತು ಪೋಕ್ಸೊ ಕಾಯ್ದೆಯಡಿ ಪೊಲೀಸರು 5 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಾಲಕನ ತಂದೆ ಮತ್ತು ಅವರ ಸೋದರ ಸಂಬಂಧಿಗಳ ನಡುವಿನ ಭೂ ವಿವಾದದ ಹಿನ್ನೆಲೆಯಲ್ಲಿ ಆತನನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: Jharkhand shocker: ಪ್ರವಾಸಕ್ಕೆ ಬಂದ ಸ್ಪೇನ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 10 ಕಿರಾತಕರು
ಇನ್ನೊಂದು ಪ್ರಕರಣ
ನವೀ ಮುಂಬೈನಲ್ಲಿ ಎಂಟು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 38 ವರ್ಷದ ವ್ಯಕ್ತಿಯನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಮುಂಬೈಯ ಮಸ್ಜಿದ್ ಬಂದರ್ ನಿವಾಸಿ ಸನೌಲ್ ಹಕೀಮ್ ಶೇಖ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಐಪಿಸಿಯ ಸಂಬಂಧಿತ ವಿಭಾಗಗಳಾದ 377 (ಅಸ್ವಾಭಾವಿಕ ಅಪರಾಧಗಳು) ಮತ್ತು 506 (2) (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಖಂಡೇಶ್ವರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ