ಛತ್ತೀಸ್‌ಗಢ: ಹರಿಯಾಣದ ಸಿರ್ಸಾದ ಚೌಧರಿ ದೇವಿಲಾಲ್ ವಿಶ್ವವಿದ್ಯಾಲಯದ (Chaudhary Devi Lal University) ಪ್ರೊಫೆಸರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ (Physical Abuse). 500 ಕಾಲೇಜು ವಿದ್ಯಾರ್ಥಿನಿಯರು ಪ್ರಧಾನಿ ನರೇಂದ್ರ ಮೋದಿ (Narendra Modi) ಕಚೇರಿ ಮತ್ತು ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಅವರಿಗೆ ಪತ್ರ ಬರೆದು ಚೌಧರಿ ದೇವಿಲಾಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಆ ಪ್ರಾಧ್ಯಾಪಕನನ್ನು ಅಮಾನತುಗೊಳಿಸುವಂತೆ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ದೂರಿನ ಪ್ರತಿಗಳನ್ನು ಉಪಕುಲಪತಿ ಡಾ.ಅಜ್ಮೀರ್ ಸಿಂಗ್ ಮಲಿಕ್, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಆಯ್ದ ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಲಾಗಿದೆ.
ಪ್ರೊಫೆಸರ್ ಅಶ್ಲೀಲ ಕೃತ್ಯಗಳನ್ನು ಎಸಗಿದ್ದಾನೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಹುಡುಗಿಯರನ್ನು ತನ್ನ ಕಚೇರಿಗೆ ಕರೆದು ಪ್ರೊಫೆಸರ್ ಅವರನ್ನು ಸ್ನಾನಗೃಹಕ್ಕೆ ಕರೆದೊಯ್ಯುತ್ತಾನೆ ಮತ್ತು ಖಾಸಗಿ ಭಾಗಗಳನ್ನು ಸ್ಪರ್ಶಿಸುತ್ತಾನೆ. ಮಾತ್ರವಲ್ಲ ಅಶ್ಲೀಲವಾಗಿ ಮಾತನಾಡುತ್ತಾನೆ. ಪ್ರತಿಭಟನೆ ವ್ಯಕ್ತಪಡಿಸಿದರೆ ತುಂಬ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ವಿದ್ಯಾರ್ಥಿನಿಯರು ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿಯ ಕೃತ್ಯ ಕೆಲವು ತಿಂಗಳಿನಿಂದ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಅಧಿಕಾರಿಗಳು ಹೇಳಿದ್ದೇನು?
ಈ ಬಗ್ಗೆ ವಿಶೇಷ ತನಿಖಾ ತಂಡ (SIT) ಕ್ರಮ ಕೈಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಐಪಿಎಸ್ ಅಧಿಕಾರಿ ದೀಪ್ತಿ ಗರ್ಗ್ ನೇತೃತ್ವದಲ್ಲಿ ಎಸ್ಐಟಿಯನ್ನು ರಚಿಸಿದ್ದೇವೆ. ಎಸ್ಐಟಿ ಈಗಾಗಲೇ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಆರಂಭಿಸಿದೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೀಕಾಂತ್ ಜಾಧವ್ ತಿಳಿಸಿದ್ದಾರೆ. ʼʼಎಸ್ಐಟಿ ಈಗಾಗಲೇ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದೆʼʼ ಎಂದು ಅವರು ಹೇಳಿದ್ದಾರೆ.
ಅಪಾರ ರಾಜಕೀಯ ಪ್ರಭಾವ ಹೊಂದಿರುವ ಪ್ರೊಫೆಸರ್ ನಮ್ಮನ್ನು ಕಾಲೇಜಿನಿಂದ ಹೊರಹಾಕುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಸದ್ಯ ಈ ಅನಾಮಧೇಯ ಪತ್ರ ಸ್ವೀಕರಿಸಿರುವುದನ್ನು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ರಾಜೇಶ್ ಕುಮಾರ್ ಬನ್ಸಾಲ್ ದೃಢಪಡಿಸಿದ್ದಾರೆ. ” ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಶ್ವವಿದ್ಯಾಲಯ ಕೂಡ ತನ್ನದೇ ಆದ ಸಮಿತಿ ರಚಿಸಿದ್ದು, ಅದರ ಮೂಲಕ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದೆ. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಪತ್ರದಲ್ಲಿ ಯಾವುದೇ ಹೆಸರಿಲ್ಲ. ಆದರೂ ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ʼʼಸೂಕ್ತ ತನಿಖೆ ನಡೆದ ನಂತರವೇ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಬಿಡುವುದಿಲ್ಲ. ಆದರೆ ನಿರಪರಾಧಿಗಳ ಚಾರಿತ್ರ್ಯವನ್ನು ಹತ್ಯೆ ಮಾಡಬಾರದು. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆʼʼ ಎಂದು ಡಾ.ರಾಜೇಶ್ ಕುಮಾರ್ ಹೇಳಿದ್ದಾರೆ. ಆದಾಗ್ಯೂ ಆರೋಪಿ ಪ್ರೊಫೆಸರ್ ಈಗಾಗಲೇ ಕೃತ್ಯದ ದೃಶ್ಯಗಳನ್ನು ಅಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಮ್ಮ ಕುಟುಂಬಗಳ ಗೌರವಕ್ಕೆ ಧಕ್ಕೆ ಬರುವ ಕಾರಣ ಗುರುತನ್ನು ಬಹಿರಂಗ ಪಡಿಸಲು ಇಚ್ಛಿಸುವುದಿಲ್ಲ ಎಂದೂ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಇದನ್ನೂ ಓದಿ: Physical Abuse: 50ಕ್ಕೂ ಹೆಚ್ಚು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್
ಶಂಕಿತ ಪ್ರೊಫೆಸರ್‌ನನ್ನೂ ಪ್ರಶ್ನಿಸಲಾಗಿದೆ ಎಂದು ಐಪಿಎಸ್ ಅಧಿಕಾರಿ ದೀಪ್ತಿ ಗರ್ಗ್ ಹೇಳಿದ್ದಾರೆ. ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲ ತನ್ನ ಆರೈಕೆಯಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾದ ತಿಂಗಳ ನಂತರ ಈ ಪತ್ರ ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ