ಮೈಸೂರು/ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ (MM Hills) ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ (Self Harming) ಯತ್ನಿಸಿದ ಪ್ರಕರಣಕ್ಕೆ (Physical Abuse) ಸಂಬಂಧಿಸಿದ್ದಂತೆ ಮೊನ್ನೆ ಶುಕ್ರವಾರ ತಂದೆ ಮಹಾದೇವನಾಯಕ (65) ಮೃತಪಟ್ಟಿದ್ದರು. ಇಂದು ಸೋಮವಾರ (ಜೂ.10) ಚಿಕಿತ್ಸೆ ಫಲಕಾರಿಯಾಗದೆ ಅವರ ಮಗಳು ಲೀಲಾವತಿ (45 ) ಮೃತಪಟ್ಟಿದ್ದಾರೆ. ಲೀಲಾವತಿಗೆ ಮೂರು ದಿನಗಳಿಂದ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕ್ರಿಮಿ ನಾಶಕ ಸೇವಿಸಿದ ತೀವ್ರತೆಗೆ ಮೃತಪಟ್ಟಿದ್ದಾರೆ.
ಲೀಲಾವತಿ ಅವರ ಮಗಳು ರಿಷೀತಾಳ ನಗ್ನ ಫೋಟೊ ತೋರಿಸಿ ಕಾಮುಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದೇ ಕಾರಣಕ್ಕೆ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ತಂದೆ-ಮಗಳು ಮೃತಪಟ್ಟರೆ, ಅಜ್ಜಿ- ಮೊಮ್ಮಗಳ ಸ್ಥಿತಿ ಗಂಭೀರವಾಗಿದ್ದು, ಇಬ್ಬರಿಗೂ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸಂತ್ರಸ್ತೆಯ ದೂರು ಸ್ವೀಕರಿಸದ ಮೂವರು ಅಮಾನತು
ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ, ಇಬ್ಬರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆಆರ್‌ನಗರ ಠಾಣೆ ಇನ್ಸ್‌ಪೆಕ್ಟರ್, ಎಎಸ್‌ಐ ಹಾಗೂ ಮುಖ್ಯಪೇದೆ ಅಮಾನತು ಮಾಡಲಾಗಿದೆ. ಸಂತ್ರಸ್ತೆಯ ಪೋಷಕರ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಪಿ.ಪಿ.ಸಂತೋಷ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗಿರೀಶ್ ಹಾಗೂ ಮುಖ್ಯಪೇದೆ ರಾಘವೇಂದ್ರ ಎಂಬುವವರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಆದೇಶಿಸಿದ್ದಾರೆ.
ಅಪ್ರಾಪ್ತೆ ಕುಟುಂಬಸ್ಥರು ನೀಡಿದ ದೂರನ್ನು ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಐಪಿಸಿ 370 ಸೆಕ್ಷನ್‌ನಡಿ ದಾಖಲು ಮಾಡಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಕೆಆರ್‌ನಗರ ತಾಲೂಕಿನ ಗ್ರಾಮವೊಂದರ ಲೋಕೇಶ್ ಎಂಬಾತ ಸಂತ್ರಸ್ತೆ ಬಾಲಕಿಯ ಖಾಸಗಿ ಫೋಟೋ, ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ.
ಈ ಸಂಬಂಧ ಸಂತ್ರಸ್ತೆಯ ಪೋಷಕರು ಕೆ.ಆರ್.ನಗರ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ದೂರು ದಾಖಲಿಸಿಕೊಳ್ಳದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ತಮಗೆ ನ್ಯಾಯ ಸಿಗುವ ಭರವಸೆ ಇಲ್ಲದೆ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿತ್ತು. ಅದರಂತೆ ಕಳೆದ ಶುಕ್ರವಾರ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳಬೆಟ್ಟದಲ್ಲಿ ಆತ್ಮಹತ್ಯೆ ಯತ್ನಿಸಿದ್ದರು. ಘಟನೆಯಲ್ಲಿ ಬಾಲಕಿ ರಿಷಿತಾಳ ತಾತ ಮೃತಪಟ್ಟಿದ್ದರು. ಅಸ್ವಸ್ಥಗೊಂಡಿದ್ದ ಅಜ್ಜಿ, ತಾಯಿ, ಮೊಮ್ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇದೀಗ ರಿಷಿತಾಳ ತಾಯಿ ಕೂಡ ಮೃತಪಟ್ಟಿದ್ದು, ಅಜ್ಜಿ, ಮೊಮ್ಮಗಳು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಇದನ್ನೂ ಓದಿ: Self Harming : ಮಗಳ ನಗ್ನ ಫೋಟೊ ತೋರಿಸಿ ಪ್ರಿಯಕರ ಬ್ಲ್ಯಾಕ್‌ಮೇಲ್; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಕುಟುಂಬಸ್ಥರು
ಬಾಲಕಿಯ ಡೆತ್‌ನೋಟ್ ಪತ್ತೆ
ಮಹಾದೇವನಾಯಕ ಹಾಗೂ ಗೌರಮ್ಮ ದಂಪತಿಯ ಮಗಳು ಲೀಲಾವತಿ ಹಾಗೂ ಈಕೆ ಮಗಳು ರಿಷಿತಾ ಈ ನಾಲ್ವರು ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಕಾಮ ಕ್ರಿಮಿ ಲೋಕೇಶ್ ಕೊಟ್ಟ ಟಾರ್ಚರ್‌ಗೆ ಬೇಸತ್ತು ಇಡೀ ಕುಟುಂಬ ಕ್ರಿಮಿ ನಾಶಕ ಸೇವಿಸಿದ್ದರು. ಅಪ್ರಾಪ್ತೆ ಬರೆದಿಟ್ಟ ಡೆತ್‌ನೋಟ್ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಡೆತ್‌ನೋಟ್‌ನಲ್ಲಿ ಆರೋಪಿ ಲೋಕೇಶ್ ಕೊಟ್ಟ ಹಿಂಸೆಯನ್ನು ಎಳೆ ಎಳೆಯಾಗಿ ಬರೆದಿಟ್ಟಿದ್ದಾಳೆ. ಲೋಕೇಶ್ ಎಲ್ಲಾ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಠಿಯಿಂದ ನೋಡುತ್ತಾನೆ. ನನ್ನನ್ನು ಸಹ ಲೋಕೇಶ್ ಕೆಟ್ಟ ದೃಷ್ಠಿಯಿಂದ ನೋಡಿದ್ದ. ನಮ್ಮ ಕುಟುಂಬದ ಮಾನ ಮರ್ಯಾದೆ ಕಳೆದು ಹಾಕಿದ್ದಾನೆ. ಲೋಕೇಶ್‌ನನ್ನು ಸುಮ್ಮನೆ ಬಿಡಬೇಡಿ, ಆತನನ್ನ ಸುಮ್ಮನೆ ಬಿಟ್ಟರೆ ನನ್ನಂತ ಎಷ್ಟೋ ಹೆಣ್ಣು ಮಕ್ಕಳ ಜೀವ ಹಾಳಾಗುತ್ತೆ ಎಂದು ತನಗೆ ಆದ ಅಪಮಾನ ಹಾಗೂ ಮಾನಸಿಕ ಹಿಂಸೆಯ ಕುರಿತು ಬರೆದಿಟ್ಟಿದ್ದಾಳೆ.
ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
ಈ ವಿಷಯ ತಿಳಿಯುತ್ತಿದ್ದ ಆಕ್ರೋಶಗೊಂಡ ಚಂದಗಾಲು ಗ್ರಾಮಸ್ಥರು ಮಹದೇವನಾಯಕರ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಕೆ.ಆರ್.ನಗರ ಮುಖ್ಯರಸ್ತೆಯಲ್ಲಿ ಶವ ಇಟ್ಟು ಪ್ರತಿಭಟಿಸಿ, ಆರೋಪಿಗೆ ಉಗ್ರ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದರು. ನಿರ್ಲಕ್ಷ್ಯ ವಹಿಸಿದ ಪೊಲೀಸರ ಮೇಲೂ ಕಠಿಣ ಕ್ರಮ ಆಗಬೇಕೆಂದರು. ರಸ್ತೆ ತಡೆಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ