ಚಿಕ್ಕಬಳ್ಳಾಪುರ: ಆಸ್ಪತ್ರೆ (Hospital) ಆವರಣದಲ್ಲೇ 65 ವರ್ಷದ ವೃದ್ಧೆಯೊಬ್ಬರ ಮೇಲೆ ಕಾಮಪಿಶಾಚಿಯೊಬ್ಬ ಅತ್ಯಾಚಾರ (Physical Abuse) ಎಸಗಿದ್ದಾನೆ. ಚಿಕ್ಕಬಳ್ಳಾಪುರ (Chikkaballapur news) ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ (Chintamani) ಕೃತ್ಯ ನಡೆದಿದ್ದು, ಇರ್ಫಾನ್ (24) ಎಂಬಾತ ವೃದ್ಧೆಯನ್ನೂ ಬಿಡದ ಕಾಮುಕ.
ಇರ್ಫಾನ್ ಚಿಂತಾಮಣಿ ನಗರದ ಹೈದರಾಲಿ ನಗರದ ನಿವಾಸಿಯಾಗಿದ್ದು, ಚಿಕಿತ್ಸೆಗೆಂದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ವೃದ್ಧೆಯ ಮೇಲೆ ಕೃತ್ಯ ಎಸಗಿದ್ದಾನೆ. ಆಕ್ಸಿಜನ್ ಪ್ಲಾಂಟ್ ಪಕ್ಕದ ಶೆಡ್‌ನಲ್ಲಿ ಮಲಗಿದ್ದ ಮಹಿಳೆಯ ಮೇಲೆ ಈತ ಅತ್ಯಾಚಾರ ಎಸಗಿದ್ದು, ಈತನನ್ನು ಬಂಧಿಸಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಮುರುಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಲ್ಕತಾ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಜೂನಿಯರ್ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಸರಕಾರಿ ಆಸ್ಪತ್ರೆಗಳಲ್ಲಿನ ಸುರಕ್ಷಿತತೆಯ ಬಗೆಗೆ ಕಳವಳ ಮೂಡಿದ್ದು, ಇದಕ್ಕೆ ಈ ಘಟನೆ ಇನ್ನೊಂದು ಸೇರ್ಪಡೆಯಾಗಿದೆ.
ಹೋಟೆಲ್‌ನಲ್ಲಿ ಏರ್ ಇಂಡಿಯಾ ಗಗನಸಖಿ ಮೇಲೆ ಹಲ್ಲೆ; ನೆಲಕ್ಕೆ ಕೆಡವಿ ಎಳೆದಾಡಿದ ದುಷ್ಕರ್ಮಿ
ಲಂಡನ್: ಏರ್ ಇಂಡಿಯಾ ವಿಮಾನದ ಗಗನಸಖಿ (Air India Hostess)ಯೊಬ್ಬರ ಮೇಲೆ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಗಗನಸಖಿ ತಂಗಿದ್ದ ಹೋಟೆಲ್ ರೂಮ್‌ಗೆ ನುಗ್ಗಿದ ಅಪರಿಚಿತನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಲಂಡನ್‌ನ ಹೀಥ್ರೂನಲ್ಲಿರುವ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಆಗಸ್ಟ್ 15ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏರ್ ಇಂಡಿಯಾ ವಿಮಾನದ ಹಲವು ಸಿಬ್ಬಂದಿ ತಂಗಿರುವ ಈ ಹೋಟೆಲ್‌ಗೆ ನುಗ್ಗಿದ ದುಷ್ಕರ್ಮಿ ಏಕಾಏಕಿ ದಾಳಿ ನಡೆಸಿದ್ದಾನೆ. ಸದ್ಯ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಹಲ್ಲೆಗೊಳಗಾದ ಗಗನಸಖಿಗೆ ಸೂಕ್ತ ಚಿಕಿತ್ಸೆ ನೀಡಿ ಭಾರತಕ್ಕರ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.
“ಪ್ರಮುಖ ಅಂತಾರಾಷ್ಟ್ರೀಯ ಹೋಟೆಲ್‌ನಲ್ಲಿ ನಡೆದ ಈ ಕಾನೂನುಬಾಹಿರ ಒಳನುಸುಳುವಿಕೆಯಿಂದ ಆಘಾತಕ್ಕೆ ಒಳಗಾಗಿದ್ದೇವೆ. ಇದು ನಮ್ಮ ಸಿಬ್ಬಂದಿಯೊಬ್ಬರ ಮೇಲೆ ಪರಿಣಾಮ ಬೀರಿದೆ. ಕೌನ್ಸಿಲಿಂಗ್ ಸೇರಿದಂತೆ ನಮ್ಮ ಸಹೋದ್ಯೋಗಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆʼʼ ಎಂದು ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾ ವಿಮಾನದ ಸಿಬ್ಬಂದಿ ತಂಗಿರುವ ಹೋಟೆಲ್‌ನಲ್ಲಿ ಮಧ್ಯರಾತ್ರಿಯ ವೇಳೆಗೆ ಈ ಘಟನೆ ನಡೆದಿದೆ. ʼʼಗಗನಸಖಿ ತಮ್ಮ ರೂಮ್‌ನಲ್ಲಿ ನಿದ್ರಿಸುತ್ತಿದ್ದರು. ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಆಗಂತುಕನೊಬ್ಬ ಗಗನಸಖಿಯ ರೂಮ್‌ಗೆ ನುಗ್ಗಿದ. ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೊಳಗಾದ ಆಕೆ ಕೂಡಲೇ ಸಹಾಯಕ್ಕಾಗಿ ಕೂಗಿಕೊಂಡರು. ಸಿಟ್ಟಿನಿಂದ ಆತ ಹ್ಯಾಂಗರ್‌ನಿಂದ ಹಲ್ಲೆ ನಡೆಸಿದ. ಅಲ್ಲದೆ ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆಯನ್ನು ನೆಲಕ್ಕೆ ಕೆಡವಿ ಎಳೆದಾಡಿದ್ದಾನೆʼʼ ಎಂದು ಮೂಲಗಳು ತಿಳಿಸಿವೆ.
ಈ ದಾಳಿಯಿಂದ ಗಗನಸಖಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಪೊಲೀಸರನ್ನು ಕರೆಸಿ ಆತನನ್ನು ಅವರ ವಶಕ್ಕೆ ಒಪ್ಪಿಸಲಾಯಿತು. ದಾಳಿಗೊಳಗಾದ ಗಗನಸಖಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರೊಂದಿಗೆ ಸ್ನೇಹಿತರು ಉಳಿದುಕೊಂಡಿದ್ದರು. ಈ ಹಿಂದೆಯೂ ವಿಮಾನ ಸಿಬ್ಬಂದಿ ತಮಗಾಗುತ್ತಿರುವ ಕರಾಳ ಅನುಭವಗಳ ಬಗ್ಗೆ ದೂರು ನೀಡಿದ್ದರು. ಸೂಕ್ತ ದೀಪದ ವ್ಯವಸ್ಥೆ ಇಲ್ಲದಿರುವುದು, ಪದೇ ಪದೆ ಬಾಗಿಲು ತಟ್ಟುವುದು ಇತ್ಯಾದಿ ಅನುಭವಗಳ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ದುಷ್ಕರ್ಮಿ ಯಾಕಾಗಿ ಈ ದಾಳಿ ನಡೆಸಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Bomb Threat: ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ, ತಿರುವನಂತಪುರಂ ಏರ್‌ಪೋರ್ಟ್‌ನಲ್ಲಿ ತುರ್ತುಸ್ಥಿತಿ