ಚೆನ್ನೈ: ತಮಿಳುನಾಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಅರ್ಚಕ ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ (Physical Abuse) ನಡೆಸಿದ್ದಾಗಿ ಜನಪ್ರಿಯ ಟಿವಿ ನಿರೂಪಕಿಯೊಬ್ಬರು ಆರೋಪಿಸಿದ್ದಾರೆ. ಚೆನ್ನೈಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇಗುಲದ ಅರ್ಚಕ ಕಾರ್ತಿಕ್ ಮುನಿಸ್ವಾಮಿ ವಿರುದ್ಧ ಇದೀಗ ನಿರೂಪಕಿ ವಿರುಗಂಬಾಕ್ಕಂ ಮಹಿಳಾ ಠಾಣೆಗೆ ದೂರು ದಾಖಲಿಸಿದ್ದಾರೆ.
ಸಾಲಿಗ್ರಾಮ ಮೂಲದ, ಖಾಸಗಿ ವಾಹಿನಿ ನಿರೂಪಕಿ ಕಾರ್ತಿಕ್ ಮುನಿಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ಪ್ರಕರಣದ ವಿವರ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
30 ವರ್ಷದ ನಿರೂಪಕಿ ಆಧ್ಯಾತ್ಮಿಕತೆ ಕಡೆಗೆ ಒಲವು ಹೊಂದಿರುವ ವ್ಯಕ್ತಿಯಾಗಿದ್ದು, ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅದರಂತೆ ಚೆನ್ನೈಯ ಪರ್ಯಾಸ್‌ನಲ್ಲಿರುವ ಈ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಅರ್ಚಕ ಕಾರ್ತಿಕ್ ಮುನಿಸ್ವಾಮಿ ಜತೆಗೆ ಪರಿಚಯವಾಗಿತ್ತು. ಕ್ರಮೇಣ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ನಡುವೆ ಗೆಳೆತನ ಗಟ್ಟಿಯಾಗುತ್ತಿದ್ದಂತೆ ಕಾರ್ತಿಕ್ ಮುನಿಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮ, ವಿಶೇಷ ಪೂಜೆಗಳ ಬಗ್ಗೆ ನಿರೂಪಕಿಗೆ ಮಾಹಿತಿ ನೀಡುತ್ತಿದ್ದ. ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುತ್ತಿದ್ದ. ಸಂತ್ರಸ್ತೆ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲ ವಿಶೇಷ ದರ್ಶನದ ವ್ಯವಸ್ಥೆ ಮಾಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೀಗೆ ಇವರಿಬ್ಬರ ನಡುವೆ ಆತ್ಮೀಯತೆ ಬೆಳದಿತ್ತು. ಒಂದು ದಿನ ಸಂತ್ರಸ್ತೆ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಕಾರ್ತಿಕ್ ಮುನಿಸ್ವಾಮಿ ಆಕೆಯನ್ನು ತನ್ ಬೆನ್ಝ್ ಕಾರಿನಲ್ಲಿ ಕರೆದುಕೊಂಡು ಮನೆಗೆ ಡ್ರಾಪ್ ಮಾಡಿದ್ದ. ಈ ವೇಳೆ ಆತ ತೀರ್ಥದಲ್ಲಿ ನಿದ್ದೆ ಬರುವ ಮಾತ್ರ ಬೆರೆಸಿ ನೀಡಿದ್ದ. ಬಳಿಕ ಅತ್ಯಾಚಾರ ಎಸಗಿದ್ದ. ನಂತರ ನಿರೂಪಕಿಗೆ ತನ್ನ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ತಿಳಿದು ಬಂದಿತ್ತು. ಅಲ್ಲದೆ ಆಕೆ ಗರ್ಭಿಣಿಯೂ ಆಗಿದ್ದರು. ಇದನ್ನು ತಿಳಿದ ಕಾರ್ತಿಕ್ ಆಕೆಯನ್ನು ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದ. ನಂತರ ವಡಾಪಳನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದ. ಬಳಿಕ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಯ ಬಂಧನ
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆರೋಪಿ ಕಾರ್ತಿಕ್ ಮುನಿಸ್ವಾಮಿಯನ್ನು ವಿರುಗಂಬಾಕ್ಕಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಕಾರ್ತಿಕ್ ಮುನಿಸ್ವಾಮಿ ಮೊಬೈಲ್‌ನಲ್ಲಿ ಸಂತ್ರಸ್ತೆ ಜತೆಗಿದ್ದ ಖಾಸಗಿ ಫೋಟೊ ಮತ್ತು ವಿಡಿಯೊ ಕೂಡ ಲಭ್ಯವಾಗಿದೆ. ಹೀಗಾಗಿ ಆತನ ವಿರುದ್ಧ 6 ಪ್ರಕರಣ ದಾಖಲಾಗಿದೆ. ಎಂಜಿನಿಯರಿಂಗ್ ಪದವಿ ಮುಗಿಸಿರುವ ಸಂತ್ರಸ್ತೆ ಹಲವು ವರ್ಷಗಳಿಂದ ಚೆನ್ನೈಯಲ್ಲಿರುವ ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಎಲ್ಲ ಆಯಾಮದಿಂದಲೂ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Physical Abuse: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸದ್ದಾಂ ಹುಸೇನ್ ಕಾಲಿಗೆ ಗುಂಡೇಟು