ನವದೆಹಲಿ: ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿ (PMO Official) ಎಂದು ಸುಳ್ಳು ಹೇಳಿ 7 ಮದುವೆಯಾಗಿರುವ ವ್ಯಕ್ತಿಯನ್ನು ಒಡಿಶಾ ಪೊಲೀಸ್ ವಿಶೇಷ ಕಾರ್ಯಪಡೆ(STF) ಬಂಧಿಸಿದೆ. ಆರೋಪಿಯನ್ನು 37 ವರ್ಷದ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಸೈಯದ್ ಇಶಾನ್ ಬುಖಾರಿ ಅಲಿಯಾಸ್ ಇಶಾನ್ ಬುಖಾರಿ ಎಂದು ಗುರುತಿಸಲಾಗಿದೆ. ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿಯೂ ಈತ ಭಾಗಿಯಾಗುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಒಡಿಶಾದ ಜಜ್ಪುರ್ ಜಿಲ್ಲೆಯ ಧರ್ಮಶಾಲಾ ಪ್ರದೇಶದ ನ್ಯೂಲ್ಪುರದಲ್ಲಿ ದಾಳಿ ನಡೆಸಿದ ವೇಳೆ ಸೈಯದ್ ಇಶಾನ್ ಬುಖಾರಿ ಸಿಕ್ಕಿಬಿದ್ದಿದ್ದಾನೆ.
ವಿವಿಧ ಹೆಸರಿನಲ್ಲಿ ವಂಚನೆ
ಸೈಯದ್ ಇಶಾನ್ ಬುಖಾರಿ ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿ ಎಂದು ಮಾತ್ರವಲ್ಲದೆ ಇನ್ನೂ ಅನೇಕ ಸುಳ್ಳು ಹೇಳಿ ಜನರಿಗೆ ವಂಚಿಸುತ್ತಿದ್ದ. ನ್ಯೂರೋ ಸ್ಪೆಷಲಿಸ್ಟ್ ಡಾಕ್ಟರ್, ಸೇನಾ ವೈದ್ಯ, ಕೆಲವು ಉನ್ನತ ಎನ್ಐಎ ಅಧಿಕಾರಿಯ ನಿಕಟ ಸಹವರ್ತಿ ಎಂದು ಪರಿಚಯಿಸಿಕೊಂಡು ಹಲವರನ್ನು ವಂಚಿಸಿದ್ದಾನೆ ಎಂದು ಎಸ್‌ಟಿಎಫ್ ಹೇಳಿದೆ.
“ಆರೋಪಿಯು ನ್ಯೂರೋ ಸ್ಪೆಷಲಿಸ್ಟ್, ಸೇನಾ ವೈದ್ಯ, ಪಿಎಂಒ ಅಧಿಕಾರಿ, ಉನ್ನತ ಮಟ್ಟದ ಎನ್ಐಎ ಅಧಿಕಾರಿಗಳ ನಿಕಟ ಸಹವರ್ತಿ ಎನ್ನುವ ಹೆಸರಿನಿಂದ ಮೋಸಗೊಳಿಸಿರುವುದು ಕಂಡು ಬಂದಿದೆ. ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯ, ಕೆನಡಿಯನ್ ಹೆಲ್ತ್ ಸರ್ವೀಸಸ್ ಇನ್‌ಸ್ಟಿಟ್ಯೂಟ್ ಮತ್ತು ಇತರರ ಕಡೆಗಳಿಂದ ಲಭಿಸಿದೆ ಎನ್ನಲಾದ ವೈದ್ಯಕೀಯ ಪದವಿ ಪ್ರಮಾಣಪತ್ರಗಳಂತಹ ಹಲವು ನಕಲಿ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆʼʼ ಎಂದು ಎಸ್‌ಟಿಎಫ್ ಐಜಿ ಜೆ.ಎನ್.ಪಂಕಜ್ ತಿಳಿಸಿದ್ದಾರೆ.
ಕಾಶ್ಮೀರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಒಡಿಶಾಗಳಲ್ಲಿ ಈತ ಮದುವೆಯಾಗಿದ್ದ. 6-7 ಮದುವೆ ಆಗಿರುವುದು ಕಂಡು ಬಂದಿದೆ. ಮಾತ್ರವಲ್ಲ ವಿದೇಶಿ ವೈದ್ಯಕೀಯ ಪದವಿಗಳನ್ನು ಹೊಂದಿರುವ ವೈದ್ಯನೆಂದು ಗುರುತಿಸಿಕೊಂಡು ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ವೇಳೆ ವಿದೇಶಿ ವೈದ್ಯಕೀಯ ಪದವಿ ಪ್ರಮಾಣಪತ್ರಗಳು, ಸಹಿ ಮಾಡಿದ ದಾಖಲೆಗಳು, ಅಫಿದವಿತ್‌ಗಳು, ಬಾಂಡ್‌ಗಳು, ಗುರುತಿನ ಚೀಟಿಗಳು, ಎಟಿಎಂ ಕಾರ್ಡ್‌ಗಳು, ಖಾಲಿ ಚೆಕ್‌ಗಳು, ಆಧಾರ್ ಕಾರ್ಡ್‌ಗಳು ಮತ್ತು ವಿಸಿಟಿಂಗ್ ಕಾರ್ಡ್‌ಗಳಂತಹ 100ಕ್ಕೂ ಹೆಚ್ಚು ನಕಲಿ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ತನಿಖೆಯಲ್ಲಿ ಸೈಯದ್ ಇಶಾನ್ ಬುಖಾರಿ ಕೇರಳದ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಕೆಲವು ಪಾಕಿಸ್ತಾನಿ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದ ಎನ್ನುವುದು ತಿಳಿದು ಬಂದಿದೆ. ವಂಚನೆ ಮತ್ತು ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ಬಂಧನಕ್ಕೆ ಕಾಶ್ಮೀರ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು.
ಇದನ್ನೂ ಓದಿ: Sajjan Jindal: ಕೋಟ್ಯಧಿಪತಿ ಉದ್ಯಮಿಯ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ
ʼʼಇಶಾನ್ ಬುಖಾರಿ ಐಎಸ್ಐ ಜತೆ ಸಂಪರ್ಕದಲ್ಲಿದ್ದ. ಅಲ್ಲದೆ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ. ಈತ 2018ರಿಂದ ಒಡಿಶಾದಲ್ಲಿ ವಾಸಿಸುತ್ತಿದ್ದ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼʼ ಎಂದು ಎಸ್ ಟಿಎಫ್ ಐಜಿ ಜಯನಾರಾಯಣ್ ಓಂಕಾಜ್ ತಿಳಿಸಿದ್ದಾರೆ. ಡಿಸೆಂಬರ್ 15ರಂದು ಬಂದ ಖಚಿತ ಮಾಹಿತಿಯ ಮೇರೆಗೆ ಎಸ್‌ಟಿಎಫ್ ಸ್ಥಳೀಯ ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿ ಆತನನ್ನು ಬಂಧಿಸಿದೆ.