ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಬೆಳ್ಳಂಬೆಳಿಗ್ಗೆಯೇ ಪೊಲೀಸರ ಗುಂಡಿನ ಸದ್ದು ಮೊಳಗಿದೆ (Police Firing). ರೌಡಿ ಶೀಟರ್ ಕಾಲಿಗೆ ಪೊಲೀಸರ ಗುಂಡೇಟು ತಗುಲಿದೆ. ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾದ ಕೊಲೆ ಆರೋಪಿಯ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮರಕ್ಷಣೆಗಾಗಿ ಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಫೈರಿಂಗ್ ಮಾಡಿದ್ದು, ಗುಂಡೇಟು ತಗುಲಿದ ರೌಡಿಶೀಟರ್ ಮುತ್ತುರಾಜ ಅಲಿಯಾಸ್ ಡಕ್ಕ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ವಿವರ
ಕಾರ್ಯಾಚರಣೆ ಬಗ್ಗೆ ಮಂಡ್ಯದಲ್ಲಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ. ಜುಲೈ 30ರಂದು ಕಾಂತರಾಜು ಎಂಬಾತನ ಕೊಲೆಯಾಗಿತ್ತು. ಆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸಿಪಿಐ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿತ್ತು. ತನಿಖೆ ವೇಳೆ ಕಾಂತರಾಜು ಕೊಲೆಗೆ ರೌಡಿಶೀಟರ್ ಡಕ್ಕ ಸುಪಾರಿ ನೀಡಿದ್ದಾಗಿ ಬಂಧಿತರು ಬಾಯ್ಬಿಟ್ಟಿದ್ದರು. ಮುತ್ತುರಾಜ್ ಸೂಚನೆ ಮೇರೆಗೆ ಕೊಲೆ ನಡೆಸಿರುವುದಾಗಿ ಅವರು ಹೇಳಿಕೆ ನೀಡಿದ್ದರು. ಹೀಗಾಗಿ ಸಿಪಿಐ ಶ್ರೀಧರ್ ಮತ್ತುವರ ತಂಡ ಡಕ್ಕನನ್ನು ಬಂಧಿಸಲು ಮುಂದಾಗಿತ್ತು. ಆತ ಚಿಕ್ಕಮಲಗೂಡು ಬಳಿ ಇರುವ ಬಗ್ಗೆ ಮಾಹಿತಿ ಲಭಿಸಿ ಅಲ್ಲಿಗೆ ತೆರಳಿದ್ದರು.
ಬೈಕ್‌ನಲ್ಲಿ ತೆರಳುತ್ತಿದ್ದ ಡಕ್ಕನ್ನು ಹಿಡಿಯಲು ಸಿಪಿಐ ಶ್ರೀಧರ್ ಮತ್ತು ತಂಡ ಮುಂದಾಯಿತು. ಈ ವೇಳೆ
ಬೈಕ್ ಬೀಳಿಸಿ ಆತ ಓಡಲು ಮುಂದಾಗಿದ್ದ. ತಡೆಯಲು ಮುಂದಾದ ಪೇದೆ ಮೇಲೆ ಡ್ರ್ಯಾಗನ್‌ನಿಂದ ಹಲ್ಲೆ ನಡೆಸಿದ್ದ.
ಏರ್‌ಫೈರ್ ವಾರ್ನಿಂಗ್‌ಗೂ ಡಕ್ಕ ಬಗ್ಗಿರಲಿಲ್ಲ. ಕೊನೆಗೆ ಸ್ವಯಂ ರಕ್ಷಣೆಗಾಗಿ ಸಿಪಿಐ ಶ್ರೀಧರ್ ಫೈರಿಂಗ್ ನಡೆಸಿದ್ದರು. ಈ ವೇಳೆ ಡಕ್ಕನ ಬಲಗಾಲಿಗೆ ಗುಂಡೇಟು ತಗುಲಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
11 ಪ್ರಕರಣದಲ್ಲಿ ಆರೋಪಿ
3 ಕೊಲೆ, 3 ಕೊಲೆಗೆ ಯತ್ನ, 2 ರಾಬರಿ ಪ್ರಕರಣ ಸೇರಿ ಡಕ್ಕನ ವಿರುದ್ಧ 11 ಪ್ರಕರಣ ದಾಖಲಾಗಿದೆ. ಹುಡುಗರ ಗುಂಪು ಕಟ್ಟಿಕೊಂಡು 2019ರಿಂದಲೂ ಈತ ರೌಡಿಸಂ ನಡೆಸುತ್ತಿದ್ದ. ಇಸ್ಪೀಟ್ ಆಡಿಸುವ ದಂಧೆಗೂ ಇಳಿದಿದ್ದ. ಡಕ್ಕನ ಗ್ಯಾಂಗ್ ಸದಸ್ಯರಿಗೂ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ: Drowned in water : ಬಾಲಕನ ಜೀವಕ್ಕೆ ಉರುಳಾದ ಪಂಪ್ ಸೆಟ್ ಕೇಬಲ್; ಕಾಲು ಜಾರಿ ನೀರುಪಾಲಾದ ವೃದ್ಧ
ದರೋಡೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು
ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ದರೋಡೆ ಪ್ರಕರಣದ ಆರೋಪಿ ಸೋನು ನಾಯಕ್ ಮೇಲೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಹುಬ್ಬಳ್ಳಿ ಉಪನಗರದ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್. ಹೂಗಾರ್ ಅವರಿಂದ ಫೈರಿಂಗ್ ನಡೆದಿತ್ತು. ಕಳ್ಳತನ, ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಸೋನು ನಾಯಕ್ ಮೇಲೆ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ತಪ್ಪಿಸಿಕೊಂಡು ಹೋಗುತ್ತಿದ್ದ ವೇಳೆ ಆತನ ವೇಳೆ ಫೈರಿಂಗ್ ಮಾಡಲಾಗಿತ್ತು.