ಜನರಿಗೆ ಪೊಲೀಸರ ಮೇಲೆ ತುಂಬಾ ನಂಬಿಕೆನೂ ಇರುತ್ತೆ ಭಯಾನೂ ಇರುತ್ತೆ. ಕಳ್ಳತನ, ಕೊಲೆ, ದರೋಡೆ ಇಂಥ ಸಮಸ್ಯೆಗಳಾದಾಗ ಪೊಲೀಸರು ಸೂಕ್ತ ಪರಿಹಾರ ಒದಗಿಸುತ್ತಾರೆ ಎಂಬ ನಂಬಿಕೆ ಇರುತ್ತದೆ. ಆದರೆ ಇಲ್ಲೊಬ್ಬ ದಂಪತಿ ಪೊಲೀಸ್ ಅಧಿಕಾರಿಯೊಬ್ಬರ (Viral News) ಮುಖಕ್ಕೆ ಮಂಗಳಾರತಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಅಧಿಕಾರಿಯೊಬ್ಬರ ಮುಖಕ್ಕೆ ಮಂಗಳಾರತಿ ಮಾಡಿರುವ ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ದಂಪತಿ ಪೊಲೀಸ್ ಅಧಿಕಾರಿಗೆ ಆರತಿ ಬೆಳಗಿದ್ದು ಯಾವುದೋ ಘನಂದಾರಿ ಕೆಲಸ ಮಾಡಿದ್ದಕ್ಕಲ್ಲ, ಬದಲಾಗಿ ಕಳ್ಳತನದ ದೂರಿನ ಬಗ್ಗೆ ಪೊಲೀಸ್ ಅಧಿಕಾರಿ ಸರಿಯಾದ ತನಿಖೆ ನಡೆಸಿಲ್ಲ ಎಂಬ ಹತಾಶೆಯಲ್ಲಿ ಈ ರೀತಿ ವರ್ತಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಆರತಿ ಬೆಳಗಿ, ಶಾಲು ಹೊದಿಸಿದರು
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪೊಲೀಸ್ ಠಾಣೆಗೆ ಬಂದ ದಂಪತಿ ಪೊಲೀಸ್ ಅಧಿಕಾರಿಗೆ ಆರತಿ ಬೆಳಗಲು ಪ್ರಯತ್ನಿಸಿದ್ದು ಮಾತ್ರವಲ್ಲದೇ ಶಾಲು ಹೊದಿಸಿ ಮುಜುಗರವನ್ನುಂಟುಮಾಡಿದ್ದಾರೆ. ಮಾಲಾರ್ಪಣೆ ಮಾಡಲು ಕೂಡ ಮುಂದಾಗಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ತನ್ನನ್ನು ಅವಮಾನಿಸಲು ಮತ್ತು ತನ್ನ ಕೆಲಸಕ್ಕೆ ಅಡ್ಡಿಪಡಿಸುವ ಉದ್ದೇಶವಾಗಿದೆ ಎಂದು ದಂಪತಿ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ದಂಪತಿ ಮೇಲೆ ಪೊಲೀಸ್ ಕೇಸ್ ದಾಖಲಾಗಿದೆ.
ಆರೋಪಿ ದಂಪತಿಯಾದ ಅನುರಾಧ ಮತ್ತು ಕುಲದೀಪ್ ಸೋನಿ ಅವರು ರೇವಾ ಮತ್ತು ಮೌಗಂಜ್ ಜಿಲ್ಲೆಗಳಲ್ಲಿ ಆಭರಣ ಅಂಗಡಿಗಳನ್ನು ಹೊಂದಿದ್ದು, ಇತ್ತೀಚೆಗೆ ಅವರ ಅಂಗಡಿಯ ಕೆಲಸಗಾರರಾದ ಅರ್ಪಿತ್ ಮತ್ತು ಮುಖೇಶ್ ಸುಮಾರು 4 ಕಿ.ಗ್ರಾಂಗಳಷ್ಟು ಬೆಳ್ಳಿಯನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಈ ವರ್ಷದ ಜನವರಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
Video: Couple Performs Cop's 'Aarti' Over "Inaction". This Happens Nexthttps://t.co/M4wkRnSPc0
— Anurag Dwary (@Anurag_Dwary) April 13, 2024
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರೂ ಕೂಡ ಆರೋಪಿಗಳು ತಲೆಮರೆಸಿಕೊಂಡು ನಂತರ ಮಧ್ಯಪ್ರದೇಶದ ಹೈಕೋರ್ಟ್ ನಿಂದ ಜಾಮೀನು ಪಡೆದರು. ಈ ವಿಚಾರ ತಿಳಿದ ದಂಪತಿ ಆರೋಪಿ ತಪ್ಪಿಸಿಕೊಳ್ಳಲು ಪೊಲೀಸರೇ ಸಹಕರಿಸುತ್ತಿದ್ದಾರೆ ಎಂದು ಪೊಲೀಸರ ಮೇಲೆ ಅಸಮಾಧಾನಗೊಂಡು ಠಾಣೆಗೆ ಹೋಗಿ ಈ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:Voting Awareness : ಸಾಲು ಸಾಲು ರಜೆ; ಮತದಾನಕ್ಕೆ ಚಕ್ಕರ್ ಹಾಕಿ, ಔಟಿಂಗ್ ಹೋದ್ರೆ ಬರುತ್ತೆ ನೋಟಿಸ್
ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸ್
ಅಲ್ಲದೇ ಠಾಣೆಯಲ್ಲಿ ನಡೆದ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಹಾಗೇ ಯಾವುದೇ ಅನುಮತಿಯಿಲ್ಲದೇ ಫೇಸ್ ಬುಕ್ ನಲ್ಲಿ ಈ ಘಟನೆಯನ್ನು ಲೈವ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಂಪತಿಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮತ್ತು ಠಾಣೆಯೊಳಗೆ ನಡೆದ ಈ ಘಟನೆಯನ್ನು ಹೈಕೋರ್ಟ್ ಗಮನಿಸಿದ್ದು, ಇದು ಸರಿಯಾದ ವರ್ತನೆಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.