ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ನಲ್ಲಿ 2ನೇ ಆರೋಪಿ ಸತೀಶ್ ಬಾಬಣ್ಣನನ್ನು ಎಂಟು ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಸಿಟಿ ಸಿವಿಲ್ ಕೋರ್ಟ್‌ನ 17ನೇ ಎಸಿಎಂಎಂ ನ್ಯಾಯಾಲಯವು ಆದೇಶಿಸಿದೆ.
ಪ್ರಜ್ವಲ್ ರೇವಣ್ಣ ವಿಡಿಯೊ ಕೇಸ್‌ನಲ್ಲಿ ಸಂತ್ರಸ್ತೆಯಾಗಿರುವ ಮೈಸೂರಿನ ಕೆ.ಆರ್. ನಗರದ ಮಹಿಳೆಯ ಅಪಹರಣ ಕೇಸ್‌ಗೆ ಸಂಬಂಧಿ ಎಸ್‌ಐಟಿ ಈಗ ಎರಡನೇ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಸತೀಶ್ ಬಾಬಣ್ಣ ಎಂಬಾತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸಲು ಸಿಟಿ ಸಿವಿಲ್ ಕೋರ್ಟ್‌ನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಬೇಕಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು 10 ದಿನ ಕಸ್ಟಡಿಗೆ ನೀಡುವಂತೆ ಎಸ್.ಐ.ಟಿ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಆರೋಪಿ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ. ಕಟ್ಟಿಮನಿ, ಸತೀಶ್ ಬಾಬಣ್ಣನನ್ನು ಎಂಟು ದಿನದ ವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶವನ್ನು ಹೊರಡಿಸಿದ್ದಾರೆ.
ಈಗ ಸತೀಶ್ ಬಾಬಣ್ಣನನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಿರುವ ಎಸ್‌ಐಟಿ ಅಧಿಕಾರಿಗಳು, ಸಂತ್ರಸ್ತ ಮಹಿಳೆ ಅಪಹರಣದ ಹಿಂದೆ ಯಾರಿದ್ದಾರೆ? ಯಾರು ಸೂಚನೆ ನೀಡಿದ್ದಾರೆ? ಎಚ್.ಡಿ. ರೇವಣ್ಣ ಸೂಚನೆ ಕೊಟ್ಟಿದ್ದಾರಾ? ಅವರ ಪಾತ್ರವೇನು ಎಂಬ ಬಗ್ಗೆ ಪ್ರಶ್ನೆ ಕೇಳಲಿದ್ದಾರೆ. ಎಲ್ಲಿಯಾದರೂ ವಿರುದ್ಧವಾಗಿ ಹೇಳಿಕೆ ನೀಡಿದರೆ ರೇವಣ್ಣ ಅವರಿಗೆ ಸಂಕಷ್ಟ ಎದುರಾಗಲಿದೆ.
ಏನಿದು ಅಪಹರಣ ಕೇಸ್?
ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು. ಈ ಸಂಬಂಧ ಫೋಟೊಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಎ1 ಶಾಸಕ ಎಚ್.ಡಿ. ರೇವಣ್ಣ ಹಾಗೂ ಎ2 ಸತೀಶ್ ಬಾಬು ಅಪಹರಣ ಮಾಡಿಸಿದ್ದಾರೆ ಎಂದು ಸಂತ್ರಸ್ತೆಯ ಪುತ್ರ ದೂರು ನೀಡಿದ್ದರು. ಪ್ರಜ್ವಲ್ ರೇವಣ್ಣ ಮನೆಗೆಲಸದಾಕೆ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಕೇಸ್ ದಾಖಲಾಗಿತ್ತು. ಶಾಸಕ ಎಚ್.ಡಿ.ರೇವಣ್ಣ ಸಲಹೆ ಮೇರೆಗೆ ಮಹಿಳೆಯನ್ನು ಸತೀಶ್ ಬಾಬು ಅಪಹರಣ ಮಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ರೇವಣ್ಣ ಮನೆ ಕೆಲಸದ ಮಹಿಳೆಯ ಪುತ್ರ ನೀಡಿದ ದೂರಿನ ಮೇರೆಗೆ ಕಿಡ್ನ್ಯಾಪ್ ಪ್ರಕರಣ ದಾಖಲಾಗಿತ್ತು. ಈ ಕೇಸ್‌ನಲ್ಲಿ ಸತೀಶ್ ಬಾಬುನನ್ನು ಬಂಧಿಸಲಾಗಿದೆ.
ಎಚ್.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ
ಎಚ್.ಡಿ. ರೇವಣ್ಣ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಸವನಗುಡಿಯ ನಿವಾಸದಲ್ಲಿ ಮಹಜರು ಮಾಡಲಾಗಿದೆ.
ಸಿಐಡಿ ಸೈಬರ್‌ಸೆಲ್‌ನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಸ್ಥಳವನ್ನು ಎಸ್‌ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ. ಈಗಾಗಲೇ ನ್ಯಾಯಾಧೀಶರ ಎದುರು ಕಳೆದ ಶುಕ್ರವಾರ (ಮೇ 3) ಸಿಎಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಮಹಿಳೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ವೇಳೆ ತನ್ನನ್ನು ಹಾಸನದ ಎಂಪಿ ಕ್ವಾಟ್ರರ್ಸ್ ಮಾತ್ರವಲ್ಲದೆ ಬೆಂಗಳೂರಿನ ನಿವಾಸದಲ್ಲಿ ಸಹ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಅತ್ಯಾಚಾರ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿರುವ ಎಚ್.ಡಿ. ರೇವಣ್ಣ ಅವರ ಬಸವನಗುಡಿ ನಿವಾಸದೆದುರು ಮಹಜರು ಮಾಡಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ಬೆಡ್‌ರೂಮ್‌ನಲ್ಲಿ ಅಧಿಕಾರಿಗಳಿಗೆ ದೂರುದಾರೆ ಮಾಹಿತಿ ನೀಡಿದ್ದಾರೆ. ಎಲ್ಲೆಲ್ಲಿ? ಏನೇನು ನಡೆದಿತ್ತು ಎಂಬ ಬಗ್ಗೆ ಸಂತ್ರಸ್ತೆಯಿಂದ ನೇರವಾಗಿ ಮಾಹಿತಿ ಪಡೆದು ಹೇಳಿಕೆಯಂತೆ ಮಹಜರು ಪ್ರಕ್ರಿಯೆಯನ್ನು ನಡೆಸಲಾಗಿದೆ.
ನೋಟಿಸ್ ಕೊಟ್ಟು ನಮ್ಮನ್ನು ಮನೆಯ ಒಳಗೆ ಬಿಟ್ಟಿಲ್ಲ: ವಕೀಲ ಗೋಪಾಲ್
ಎಚ್.ಡಿ. ರೇವಣ್ಣ ಪರ ವಕೀಲ ಗೋಪಾಲ್ ಪ್ರತಿಕ್ರಿಯೆ ನೀಡಿ, ಈಗಾಗಲೇ ಹಲವಾರು ವಿಚಾರಗಳು ಎಲ್ಲರಿಗೂ ತಿಳಿದಿದೆ. ನಮ್ಮ ಕಕ್ಷಿದಾರ ಎಚ್.ಡಿ. ರೇವಣ್ಣ ಅವರ ಹೊಳೆನರಸೀಪುರ ಮನೆಯಲ್ಲಿ ಮಹಜರು ನಡೆದಿದೆ. ಎರಡು ಪ್ರಕರಣಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಮಹಜರು ಮಾಡುವ ಸಂದರ್ಭದಲ್ಲಿ ನೋಟಿಸ್ ಕೊಡಬೇಕು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಹಜರು ಪ್ರಕ್ರಿಯೆ ಮಾಡಲಾಗಿದೆ. ಭವಾನಿ ರೇವಣ್ಣ ಅವರು ಮಹಜರು ಪ್ರಕ್ರಿಯೆಗೆ ಅನುಮತಿ ನೀಡಿದ್ದಾರೆ. ಹೊಳೆನರಸೀಪುರದಲ್ಲಿ ಮಹಜರು ನಡೆದಾಗ ನೋಟಿಸ್ ನೀಡಿದರು. ನನ್ನ ಕಡೆಯಿಂದ ಅವರಿಗೆ ಸಹಕಾರ ನೀಡಿದ್ದೇನೆ. ಹೊಳೆನರಸೀಪುರ ಮಹಜರು ಸಂದರ್ಭದಲ್ಲಿ 4-5-2024ರಲ್ಲಿ ಬಸವನಗುಡಿ ಮನೆಯಲ್ಲಿ ಮಹಜರು ಮಾಡಲು ಸಹಕಾರ ಕೇಳಿದರು. ಈ ಬಗ್ಗೆ ಎಸ್‌ಐಟಿಯಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ಕೊಟ್ಟು, ನಮ್ಮನ್ನು ಮನೆಯ ಒಳಗೆ ಬಿಟ್ಟಿಲ್ಲ. ಬಸವನಗುಡಿಯ ಮನೆಯ ಮಹಜರು ಸಂದರ್ಭದಲ್ಲಿ ನನಗೆ ಮನೆಯೊಳಗೆ ಅನುಮತಿ ನೀಡಿಲ್ಲ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್ ತಡೆಯಾಜ್ಞೆ
ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣ ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಬಳಸದಂತೆ ತಡೆಯಾಜ್ಞೆ ನೀಡಲಾಗಿದೆ.
ಉಭಯ ನಾಯಕರು ಸೆಷನ್ಸ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಪ್ರಕರಣಗಳ ಬಗ್ಗೆ ಸುದ್ದಿ ಪ್ರಸಾರ ಮಾಡುವಾಗ ತಮ್ಮ ಹೆಸರುಗಳನ್ನು ಬಳಸದಂತೆ ತಡೆಯಾಜ್ಞೆಯನ್ನು ತಂದಿದ್ದಾರೆ. ಇಷ್ಟು ದಿನ ಪ್ರಕರಣದ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ಹೆಸರುಗಳನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೆ ತೀವ್ರ ಮುಜುಗರವಾಗಿತ್ತು. ಅಲ್ಲದೆ, ಎಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಇದರ ಬಗ್ಗೆ ಕಿಡಿಕಾರಿದ್ದರು.
ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್.ಡಿ. ರೇವಣ್ಣ!
ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಸ್ವ-ಇಚ್ಛಾ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಸ್ವ-ಇಚ್ಛಾ ಹೇಳಿಕೆಗೆ ಸಹಿ ಹಾಕಲು ಎಚ್.ಡಿ. ರೇವಣ್ಣ (HD Revanna) ನಿರಾಕರಿಸಿದ್ದಾರೆ. ನಿಮಗೆ ಬೇಕಾದಂತೆ ಬರೆದುಕೊಂಡಿದ್ದೀರಾ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ಎಚ್.ಡಿ. ರೇವಣ್ಣ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿ ಭಾನುವಾರ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಅಪಹರಣ ಕೇಸ್‌ನಲ್ಲಿ ರೇವಣ್ಣ ಅವರಿಂದ ಸ್ವ-ಇಚ್ಛಾ ಹೇಳಿಕೆ ದಾಖಲು ಮಾಡಿಕೊಳ್ಳಲು ಮುಂದಾಗಲಾಗಿದೆ. ಈ ಸಂಬಂಧ ರೇವಣ್ಣ ಅವರಿಗೆ ಭಾನುವಾರವೇ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನವನ್ನು ಅಧಿಕಾರಿಗಳೂ ಮಾಡಿದ್ದರು.
ಅಪಹರಣ ಕೇಸ್ ಬಗ್ಗೆ ಎಚ್.ಡಿ. ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸತೀಶ್ ಬಾಬು ಪರಿಚಯವಿದ್ದಾರಾ? ಅವರ ಮೂಲಕ ಕಿಡ್ನ್ಯಾಪ್ ಮಾಡಿಸಲು ನೀವೇ ತಿಳಿಸಿದ್ದಿರಾ? ಅಪಹರಣ ಮಾಡಿದ್ದರ ಹಿಂದಿನ ಉದ್ದೇಶ ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಉತ್ತರವನ್ನು ಪಡೆದುಕೊಂಡಿದ್ದರು. ಕೇಸ್‌ಗೆ ಸಂಬಂಧಿಸಿ ಕೆಲವು ಸಾಂದರ್ಭಿಕ ಪ್ರಶ್ನೆಗಳಿಗೆ ಹೇಳಿಕೆ ಪಡೆದು ಅದನ್ನು ಪೇಪರ್‌ನಲ್ಲಿ ನಮೂದಿಸಿ ಸ್ವ ಇಚ್ಛಾ ಹೇಳಿಕೆಗೆ ಸಹಿ ಮಾಡುವಂತೆ ಹೇಳಿದ್ದಾರೆ. ಆದರೆ, ಅದಕ್ಕೆ ಸಹಿ ಹಾಕುವುದಿಲ್ಲ ಎಂದ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು
ಅಪರಹಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆದರೂ ನೀವುಗಳು ಬರೆದುಕೊಂಡಿದ್ದೀರಿ. ನಾನೇ ಮಾಡಿಸಿರುವ ಹಾಗೆ ಬರೆದುಕೊಂಡಿದ್ದೀರಿ. ನಾನು ಯಾವ ಹೇಳಿಕೆಗೂ ಸಹಿ ಹಾಕಲ್ಲ ಎಂದು ರೇವಣ್ಣ ನಿರಾಕರಣೆ ಮಾಡಿದ್ದಾರೆ.