ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು (Prajwal Revanna Case) ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial custody) ಒಪ್ಪಿಸಿ ಕೋರ್ಟ್ (Court) ಆದೇಶಿಸಿದೆ. ಹಿಂದಿನ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಆದೇಶ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ, ಎಸ್‌ಐಟಿ (SIT) ಅಧಿಕಾರಿಗಳು ತನ್ನ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸಿದ್ದಾರೆ ಎಂದು ಪ್ರಜ್ವಲ್ ದೂರಿದ್ದು ಕೂಡ ವರದಿಯಾಗಿದೆ. ಪ್ರಜ್ವಲ್ ರೇವಣ್ಣ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಎಸ್‌ಐಟಿ ಕೋರ್ಟ್‌ಗೆ ಹಾಜರು ಪಡಿಸಿದಾಗ, “ಏನಾದ್ರೂ ಆರೋಗ್ಯ ಸಮಸ್ಯೆ ಇದೆಯಾ?ʼʼ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. “ಹೌದು ಸರ್” ಎಂದು ಪ್ರಜ್ವಲ್ ನುಡಿದರು.
“ಎಸ್ಐಟಿ ಅಧಿಕಾರಿಗಳು ಸರಿಯಾಗಿ ನೋಡ್ಕೋತಿಲ್ಲ” ಎಂದು ಪ್ರಜ್ವಲ್ ಹೇಳಿದ್ದಲ್ಲದೆ, “ಎಂಆರ್‌ಐ ಸ್ಕ್ಯಾನ್ ಮಾಡಿಸಿದ್ದೇನೆ. ಟ್ಯಾಬ್ಲೆಟ್ ತೆಗೆದುಕೊಳ್ತಿದ್ದೇನೆ” ಎಂದು ಹೇಳಿದಾಗ, ʼಆರೋಗ್ಯ ತಪಾಸಣೆ ಯಾಕೆ ಮಾಡಿಸಿಲ್ಲ?ʼ ಎಂದು ಅಧಿಕಾರಿಗಳನ್ನು ಜಡ್ಜ್ ಪ್ರಶ್ನಿಸಿದರು. “ಅವರು ಈಗ ಹೇಳ್ತಾ ಇದ್ದಾರೆ, ನಮಗೆ ಹೇಳಿಲ್ಲ” ಎಂದು ಎಸ್ಐಟಿ ಅಧಿಕಾರಿಗಳು ಉತ್ತರಿಸಿದರು.
ನಂತರ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದತ್ತ ಅವರನ್ನು ಕರೆದೊಯ್ಯಲಾಗಿದೆ. ನ್ಯಾಯಾಂಗ ಬಂಧನಕ್ಕೆ ಹೋದರೂ ನಾಳೆ ಮತ್ತೆ ಬಾಡಿ ವಾರಂಟ್ ಮೇಲೆ ಅವರನ್ನು ಕಸ್ಟಡಿಗೆ ಪಡೆಯಲು ಎಸ್ಐಟಿ ಮುಂದಾಗಿದೆ. ಸಿಐಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ವಶಕ್ಕೆ ಪಡೆಯಲಿದೆ.
ಭವಾನಿ ರೇವಣ್ಣಗೆ ಸಿಗ್ತು ನಿರೀಕ್ಷಣಾ ಜಾಮೀನು
ಕೆಆರ್ ನಗರದಲ್ಲಿ ಲೈಂಗಿಕ ದೌರ್ಜನ್ಯ (Physical Abuse) ಸಂತ್ರಸ್ತೆಯನ್ನು ಕಿಡ್ನಾಪ್ (kidnap case) ಮಾಡಿದ ಪ್ರಕರಣದಲ್ಲಿ ಎಸ್‌ಐಟಿ (SIT) ವಿಚಾರಣೆ ಎದುರಿಸುತ್ತಿರುವ ಭವಾನಿ ರೇವಣ್ಣ (Bhavani Revanna) ಅವರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು (Anticipatory Bail) ದೊರೆತಿದೆ.
ಕಳೆದ ವಾರ ಕಿಡ್ನಾಪ್ ಕೇಸ್‌ನಲ್ಲಿ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠದಿಂದ ಆದೇಶ ಪ್ರಕಟವಾಗಿದ್ದು, ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಭವಾನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ಇಂದು ನಿರೀಕ್ಷಣಾ ಜಾಮೀನು ಅರ್ಜಿಯ ಅಂತಿಮ ಆದೇಶವನ್ನು ಪೀಠ ಪ್ರಕಟಿಸಿದೆ.
“ಪೊಲೀಸರು ಮುಂದಿಟ್ಟ 85 ಪ್ರಶ್ನೆಗಳಿಗೆ ಭವಾನಿ ರೇವಣ್ಣ ಉತ್ತರಿಸಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂಬ ವಾದ ಒಪ್ಪಲಾಗುವುದಿಲ್ಲ. ಪೊಲೀಸರಿಗೆ ಬೇಕಾದಂತಹ ಉತ್ತರವನ್ನೇ ಕೊಡಬೇಕೆಂದಿಲ್ಲ” ಎಂದು ಕೋರ್ಟ್ ಪೀಠ ಹೇಳಿದೆ. “ಸಂತ್ರಸ್ತೆಗೆ ಭವಾನಿ ಊಟ, ಬಟ್ಟೆ ಕೊಟ್ಟಿಲ್ಲವೆಂಬ ವಾದವನ್ನೂ ಒಪ್ಪಲಾಗುವುದಿಲ್ಲ. ಅಕ್ಕ ಬಟ್ಟೆ ಊಟ ಕಳುಹಿಸಿದ್ದರೆಂದು ಸಂತ್ರಸ್ತೆ ಹೇಳಿಕೆಯಿದೆ” ಎಂದೂ ಕೋರ್ಟ್ ಗಮನಿಸಿದೆ.
ಆದರೆ, ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ಹೈಕೋರ್ಟ್ ವಿಧಿಸಿದೆ. ತನಿಖೆಗೆ ಎಸ್‌ಐಟಿಗೆ ಸಹಕರಿಸಬೇಕು ಎಂದು ಆದೇಶಿಸಿದೆ. ಮಾಜಿ ಸಚಿವ ರೇವಣ್ಣ ಅವರಿಗೂ ದೇಶ ಬಿಟ್ಟು ಹೊರಹೋಗಬಾರದು ಎಂಬ ಆದೇಶ ವಿಧಿಸಲಾಗಿತ್ತು.
ಎರಡು ವಾರದ ಹಿಂದೆ, ಹೈಕೋರ್ಟ್ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಎಸ್‌ಐಟಿ ವಿಚಾರಣೆಗೆ ಭವಾನಿ ಹಾಜರಾಗಿದ್ದರು. ಅಲ್ಲಿಯವರೆಗೂ ಭವಾನಿ ತಲೆಮರೆಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು.
ʼʼಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅವರನ್ನು ಅಪಹರಣ ಮಾಡಿಸಿಲ್ಲ. ಆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರೋ ಸಂಚು ರೂಪಿಸಿದ್ದು, ಇದರ ಭಾಗವಾಗಿ ಈ ಆರೋಪ ಹೊರಿಸಲಾಗುತ್ತಿದೆʼʼ ಎಂದು ಭವಾನಿ ರೇವಣ್ಣ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ.
ಇದನ್ನೂ ಓದಿ: Prajwal Revanna Case: ಪರಾರಿಯಾಗಲು ಸಹಾಯ; ಪ್ರಜ್ವಲ್ ರೇವಣ್ಣ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್!