ಬೆಂಗಳೂರು: ಹಾಸನ ಸಂಸದ ಪ್ರಜ್ಬಲ್ ರೇವಣ್ಣ (Prajwal Revanna Case) ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕಾಗಿದೆ. ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರೂ ಬಾರದ ಪ್ರಜ್ವಲ್ ಪತ್ತೆಗೆ ಲುಕ್ ಔಟ್ ನೋಟಿಸ್ ಅನ್ನು ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಜಾರಿ ಮಾಡಿದ್ದಾರೆ. ಅದರ ಬೆನ್ನಲ್ಲೇ ಈಗ ಮತ್ತೊಬ್ಬ ಸಂತ್ರಸ್ತೆ ದೂರು ನೀಡಿದ್ದಾರೆ. ಇದರಿಂದ ಈ ಪ್ರಕರಣವು ಪ್ರಜ್ವಲ್‌ಗೆ ಮತ್ತಷ್ಟು ಕಂಟಕವಾಗಿ ಪರಿಣಮಿಸಿದೆ. ಇತ್ತ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಂತೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಿತ್ತು. ಆದರೆ, ಇಬ್ಬರೂ ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಎಚ್.ಡಿ. ರೇವಣ್ಣ ಬೆಂಗಳೂರಿನಲ್ಲಿದ್ದರೂ ಎಸ್‌ಐಟಿಯತ್ತ ಸುಳಿಯುತ್ತಿಲ್ಲ. ಇನ್ನು ಪ್ರಜ್ವಲ್ ಸಹ ತಾವು ಬೆಂಗಳೂರಿನಲ್ಲಿ ಇಲ್ಲ. ವಿದೇಶದಲ್ಲಿರುವುದರಿಂದ ಬರಲು ಸಮಯಾವಕಾಶ ಬೇಕು. ಹೀಗಾಗಿ ಏಳು ದಿನ ಅವಕಾಶ ಕೊಡಿ ಎಂದು ತಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ್ದರು. ಆದರೆ, ಸಮಯ ನೀಡಲು ಎಸ್ಐಟಿ ನಿರಾಕರಣೆ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿದೆ. ಇದು ಪ್ರಜ್ವಲ್ ಸಂಕಷ್ಟಕ್ಕೆ ಕಾರಣವಾಗಿದೆ.
ದುಬೈಗೆ ಹಾರಿರುವ ಪ್ರಜ್ವಲ್
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು (ಗುರುವಾರ ಮೇ 2) ಎಚ್.ಡಿ. ರೇವಣ್ಣ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಐಟಿ ವಿಚಾರಣೆಗೆ ಪ್ರಶ್ನಾವಳಿಗಳನ್ನೂ ಸಿದ್ಧಪಡಿಸಿಟ್ಟುಕೊಂಡಿತ್ತು. ಆದರೆ, ಸಂಜೆವರೆಗೂ ಎಸ್ಐಟಿಯತ್ತ ಮುಖ ಮಾಡದೇ ರೇವಣ್ಣ ಟೆಂಪಲ್ ರನ್ ಮಾಡಿಕೊಂಡಿದ್ದಾರೆ. ಇದರ ಜತೆಗೆ ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನೆಯಲ್ಲಿ ಮೀಟಿಂಗ್ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಪ್ರಜ್ವಲ್ ರೇವಣ್ಣ ಮೇ 15ಕ್ಕೆ ಬರುವುದಾಗಿ ವಿಮಾನ ಟಿಕೆಟ್ ಬುಕ್ ಮಾಡಿದ್ದರು ಎಂಬ ಅವರ ಹೆಸರಿನಲ್ಲಿದ್ದ ಟಿಕೆಟ್ ವೈರಲ್ ಆಗಿತ್ತು. ಆದರೆ, ಬೆಂಗಳೂರಿಗೆ ಬರಬೇಕಾದ ಪ್ರಜ್ವಲ್ ಬುಧವಾರ ರಾತ್ರಿಯೇ ಜರ್ಮನಿಯಿಂದ ದುಬೈಗೆ ಹಾರಿದ್ದಾರೆ.
ದೂರು ದಾಖಲಿಸಿದ ಮತ್ತೊಬ್ಬ ಸಂತ್ರಸ್ತೆ!
ಈ ಎಲ್ಲ ಬೆಳವಣಿಗೆಗಳ ಎಸ್ಐಟಿ ಮುಂದೆ ಹಾಜರಾಗಿರುವ ಮತ್ತೊಬ್ಬ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಆ ಸಂಬಂಧ ಸಿಐಡಿಯಲ್ಲಿಯೇ ಎಫ್ಐಆರ್ ದಾಖಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಖಾತ್ರಿಪಡಿಸಿದ್ದಾರೆ. ಸಂಜೆ ಮ್ಯಾಜಿಸ್ಟ್ರೇಟರ್ ಮುಂದೆ ಮತ್ತೊಬ್ಬ ಸಂತ್ರಸ್ತೆಯನ್ನು ಹಾಜರುಪಡಿಸಿ 164 ಅಡಿಯಲ್ಲಿ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಈ ಸಂಬಂಧ ಮತ್ತೊಂದು ದೂರನ್ನು ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಧೀಶರ ಮುಂದೆ ಸಂತ್ರಸ್ತೆಯು ಸಿಆರ್‌ಪಿಸಿ 164 ಅಡಿಯಲ್ಲಿ ಹೇಳಿಕೆ ನೀಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನೀಡಿದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಮತ್ತೊಂದು ನೋಟಿಸ್‌ಗೆ ಸಿದ್ಧತೆ
ಮತ್ತೊಂದೆಡೆ ಸಂಜೆಯೊಳಗೆ ವಿಚಾರಣೆಗೆ ಬರುತ್ತಾರೆ ಅಂದುಕೊಂಡಿದ್ದ ಎಚ್.ಡಿ. ರೇವಣ್ಣ ಅವರು ಕೊನೇ ಕ್ಷಣದಲ್ಲಿ ವಕೀಲರ ಮೂಲಕ ಜನ್ರತಿನಿಧಿಗಳ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯು ಶುಕ್ರವಾರ (ಮೇ 3) ನಡೆಯಲಿದ್ದು, ಯಾವ ತೀರ್ಪು ಹೊರ ಬರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರ ಮಧ್ಯೆ ತನಿಖಾಧಿಕಾರಿಗಳು ಮತ್ತೊಂದು ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.