Site icon Vistara News

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case: Beware of making a statement Parameshwara warns to HD Kumaraswamy

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇದು ಸೂಕ್ಷ್ಮ ವಿಷಯವಾಗಿದೆ. ಮಾತನಾಡುವಾಗ ಈ ಬಗ್ಗೆ ಎಚ್ಚರಿಕೆ ಇರಬೇಕು. ಬಾಯಿಗೆ ಬಂದಂತೆ ಹೇಳಿಕೆ ನೀಡಿದರೆ ಕಾನೂನು ಪ್ರಕಾರ ನಿಮ್ಮನ್ನೂ ಕರೆಸಿ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರು ಯಾರೋ, ಏನೇನನ್ನೋ ಹೇಳುತ್ತಾರೆ. ಪ್ರತಿಯೊಂದು ಸಾರ್ವಜನಿಕ ಹೇಳಿಕೆಗಳಿಗೆ ನಾವು ಉತ್ತರ ಕೊಡುವುದಕ್ಕೆ ಆಗಲ್ಲ. ಇದು ಗಂಭೀರವಾದ ಪ್ರಕರಣ ಆಗಿರುವುದರಿಂದ ಇದರ ಇನ್ವೆಸ್ಟಿಗೇಶನ್ ಆಗುವವರೆಗೂ ಕೂಡ ಯಾವುದೇ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ತಿಳಿಸಲು ಆಗುವುದಿಲ್ಲ. ಈ ಕೇಸ್‌ ಬಗ್ಗೆ ಸಾರ್ವಜನಿಕರಾಗಲೀ ಅಥವಾ ರಾಜಕೀಯ ನಾಯಕರಗಾಲೀ, ಯಾವುದೇ ಹೇಳಿಕೆಗಳನ್ನು ಕೊಡುವಾಗ ಎಚ್ಚರಿಕೆಯಿಂದ ಕೊಡಬೇಕು. ಈ ವಿಚಾರದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವವರ ಮೇಲೆಯೂ ಕ್ರಮ ಆಗುತ್ತದೆ. ಯಾವುದೇ ರೀತಿಯ ಹೇಳಿಕೆ ಕೊಟ್ಟರೆ 41A ಪ್ರಕಾರ ಅವರನ್ನು ಕೂಡ ವಿಚಾರಣೆಗೆ ಕರೆಯಬೇಕಾಗುತ್ತದೆ. ಎಚ್.ಡಿ. ಕುಮಾರಸ್ವಾಮಿ ಪದೇ ಪದೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಈ ವಿಷಯವನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಪ್ರಜ್ವಲ್‌ ಬಂಧನಕ್ಕೆ ಎಸ್‌ಐಟಿ ಟೀಂ ವಿದೇಶಕ್ಕೆ ಹೋಗಲ್ಲ

ಪ್ರಜ್ವಲ್ ರೇವಣ್ಣ ಬಂಧನಕ್ಕಾಗಿ ಎಸ್‌ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗುವ ಅವಕಾಶವಿಲ್ಲ. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದೇವೆ. ಇಂಟರ್ ಪೋಲ್‌ನವರು ಅವರಿಗೆ ಇನ್ಫಾರ್ಮೇಷನ್ ಕೊಡುತ್ತಾರೆ. ಯಾವ ದೇಶದಲ್ಲಿ ಇದ್ದಾರೆ ಎಂಬುದನ್ನು ಗುರುತಿಸಿ ಸಿಬಿಐಗೆ ಮಾಹಿತಿಯನ್ನು ನೀಡಲಾಗುತ್ತದೆ. ಸಿಬಿಐನವರು ನಮಗೆ ಮಾಹಿತಿಯನ್ನು ನೀಡುತ್ತಾರೆ. ಆಮೇಲೆ ನಮ್ಮ ಏಜನ್ಸಿಗಳಿಗೂ ಈ ಬಗ್ಗೆ ಗೊತ್ತಾಗುತ್ತದೆ ಎಂದು ಡಾ. ಜಿ. ಪರಮೇಶ್ವರ್‌ ವಿವರಿಸಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ನಡೆಸಲಾಗುತ್ತದೆ. ಯಾವುದೇ ವಿಚಾರಗಳನ್ನು ಸಾರ್ವಜನಿಕ ವಲಯದಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಸದ್ಯ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಯನ್ನು ನಡೆಸುತ್ತಿದೆ. ತನಿಖೆ ನಡೆಯುತ್ತಿರುವಾಗ ನಾನು ಹೇಳಿಕೆ ಕೊಡುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಬಿಜೆಪಿಗೆ ಸೋಲಿನ ಭಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್‌, ಬಿಜೆಪಿ ನಾಯಕರಿಗೆ ಸೋಲಿನ ಭಯ ಶುರುವಾಗಿದೆ. ಅದಕ್ಕೆ ಪದೇ ಪದೆ ಈ ರೀತಿ ಹೇಳುತ್ತಿದ್ದಾರೆ. ಫಲಿತಾಂಶ ಬಂದ ಮೇಲೆ ನೋಡೋಣ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

ಮೈಸೂರಿನ ಕೆ.ಆರ್. ನಗರದ ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ (HD Revanna) ಅವರು ಕಳೆದ ಮೂರು ದಿನಗಳಿಂದಲೂ ಕುಟುಂಬಸ್ಥರನ್ನು ಭೇಟಿಯಾಗದೆ ಪರದಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾನುವಾರ (ಮೇ 12) ಬೆಳಗ್ಗೆ ವೆಜ್‌ ಪಲಾವ್‌ ಸೇವಿಸಿದ ರೇವಣ್ಣ, ಕಾಫಿ ಕುಡಿದು, ಪೇಪರ್‌ ಓದಿದ್ದಾರೆ. ಕುಟುಂಬಸ್ಥರು, ಆಪ್ತರನ್ನು ಭೇಟಿಯಾಗದ ಕಾರಣ ಪತ್ರಿಕೆಯೇ ಅವರಿಗೆ ಸಂಗಾತಿಯಾದಂತಾಗಿದೆ. ಇದರ ಮಧ್ಯೆಯೇ, ರೇವಣ್ಣ ಅವರಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಎಚ್‌.ಡಿ.ರೇವಣ್ಣ ಅವರು ಯಾರನ್ನೂ ಭೇಟಿಯಾಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಜೈಲಿನ ಬ್ಯಾರಕ್‌ನಲ್ಲಿ ಕೆಲ ಹೊತ್ತು ವಾಕ್‌ ಮಾಡಿದ ರೇವಣ್ಣ, ಬಳಿಕ ದೀರ್ಘ ಅವಧಿಗೆ ಪೇಪರ್‌ ಓದುತ್ತಲೇ ಕುಳಿತಿದ್ದರು ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ. ರೇವಣ್ಣ ಅವರು ಸೋಮವಾರ (ಮೇ 13) ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅವರು ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ.

ಲೈಂಗಿಕ ದೌರ್ಜನಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಇದಾದ ಬಳಿಕ ಅವರು ಸಲ್ಲಿಸಿದ ರೆಗ್ಯುಲರ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌, ಜಾಮೀನು ನೀಡದೆ ಮೇ 13ಕ್ಕೆ ವಿಚಾರಣೆ ಮುಂದೂಡಿತ್ತು. ಹಾಗಾಗಿ, ಸೋಮವಾರ ಮತ್ತೆ ವಿಚಾರಣೆ ನಡೆಯಲಿದ್ದು, ರೇವಣ್ಣ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

ಭವಾನಿ ರೇವಣ್ಣಗೆ 2ನೇ ನೋಟಿಸ್‌

ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೂ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡನೇ ನೋಟಿಸ್‌ ಜಾರಿ ಮಾಡಿದೆ. ಮೊದಲ ನೋಟಿಸ್ ಉತ್ತರಿಸದ ಹಿನ್ನೆಲೆಯಲ್ಲಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕೇಸ್‌ನಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಈ ಸಂಬಂಧ ಹಲವಾರು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ಸಿದ್ಧವಾಗಿದೆ. ಆದರೆ, ಭವಾನಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಭವಾನಿ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.

Exit mobile version