Site icon Vistara News

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Prajwal Revanna Case DK Shivakumar behind Prajwal video leak Devaraje Gowda demands CBI probe

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ವಿಡಿಯೊ ಲೀಕ್‌ ಮಾಡಿದ್ದು ಯಾರು ಎಂಬ ಬಗ್ಗೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮಹತ್ವದ ವಿಚಾರವನ್ನು ಹೊರಹಾಕಿದ್ದಾರೆ. ಅಲ್ಲದೆ, ಈ ಎಲ್ಲ ಪ್ರಕರಣದ ಹಿಂದೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಪಾತ್ರ ಇದೆ ಎಂಬ ಗಂಭೀರ ಆರೋಪ ಮಾಡಿರುವ ಅವರು, ಡಿಕೆಶಿಯದ್ದು ಎನ್ನಲಾದ ಆಡಿಯೊವನ್ನು ಪ್ಲೇ ಮಾಡಿದ್ದಾರೆ. ಜತೆಗೆ ತಮಗೆ ಎಸ್‌ಐಟಿ ಮೇಲೆ ಯಾವುದೇ ನಂಬಿಕೆ ಇಲ್ಲ. ಹೀಗಾಗಿ ಈ ಎಲ್ಲ ಸಾಕ್ಷಿಗಳನ್ನು ನೇರವಾಗಿ ಸಿಬಿಐಗೆ ನೀಡುವುದಾಗಿ ಹೇಳಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವರಾಜೇಗೌಡ, ಮೊದಲು ನನಗೆ ಎಲ್.ಆರ್ ಶಿವರಾಮ್ ಗೌಡ ಕರೆ ಮಾಡಿದರು. ಬಳಿಕ ಅವರು ಪಕ್ಕದಲ್ಲಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಕೈಗೆ ಕೊಡುತ್ತಾರೆ ಎಂದು ಹೇಳುತ್ತಾ ಅದರ ಆಡಿಯೊವನ್ನು ಅರ್ಧ ಪ್ಲೇ ಮಾಡಿದರು. ಡಿಕೆಶಿ ಅವರ ಧ್ವನಿಯುಳ್ಳ ಮಾತು ಆರಂಭವಾಗುತ್ತಿದ್ದಂತೆ ಅದನ್ನು ಆಫ್‌ ಮಾಡಿದರು. ಹೀಗಾಗಿ ಪೂರ್ಣ ಆಡಿಯೊವನ್ನು ಬಿಡುಗಡೆ ಮಾಡಿ ಎಂದು ಮಾಧ್ಯಮದವರು ಆಗ್ರಹಿಸಿದರು. ಆದರೆ, ಅದಕ್ಕೆ ದೇವರಾಜೇಗೌಡರು ಒಪ್ಪಲಿಲ್ಲ. ನಾನಿದನ್ನು ಸಿಬಿಐಗೆ ಸಾಕ್ಷಿಯಾಗಿ ಕೊಡುತ್ತೇನೆ ಎಂದು ಹೇಳಿದರು.

ಪೆನ್ ಡ್ರೈವ್ ಕಥಾನಾಯಕರೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಿದ್ದಾರೆ. ನನಗೆ ಬಹಳ ದೊಡ್ಡ ಮಟ್ಟದ ಆಫರ್ ಬಂತು. ಕ್ಯಾಬಿನೆಟ್ ರ‍್ಯಾಂಕ್‌ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟರು. ಪೆನ್‌ಡ್ರೈವ್‌ ಹೇಗೆ ರೆಡಿ ಆಯಿತು ಹೊಳೆನರಸೀಪುರಕ್ಕೆ ಹೇಗೆ‌‌ ಹೋಯಿತು? ಶ್ರೇಯಸ್‌ಗೆ‌ ಏನೆಲ್ಲಾ ಡೈರೆಕ್ಷನ್ ಇತ್ತು? ಎಲ್ಲವೂ ನನಗೆ ಗೊತ್ತು ಎಂದು ದೇವರಾಜೇಗೌಡ ಹೇಳಿದರು.

ದೇವರಾಜೇಗೌಡ ಅವರ ಕಚೇರಿಗೆ ಭೇಟಿ ನೀಡಿದ್ದ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌. ವಿಡಿಯೊ ಹೊರಬಿಟ್ಟ ದೇವರಾಜೇಗೌಡ.

ಸರ್ಕಾರದ ಪರ ಎಸ್‌ಐಟಿ ಕೆಲಸ

ಎಸ್‌ಐಟಿ ಟೀಂ ರಾಜ್ಯ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧವಾಗಿ ನಾನು ಎಸ್‌ಐಟಿಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಿರಿ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದು ಎಸ್‌ಐಟಿ ತನಿಖಾ ತಂಡದಲ್ಲಿರುವ ಮಹಿಳಾ ಎಸ್‌ಪಿ ಸುಮನ್ ಡಿ ಪೆನ್ನೇಕರ್ ನನಗೆ ತಾಕೀತು ಮಾಡಿದ್ದರು. ಹೀಗಾಗಿ ಎಸ್‌ಐಟಿ ಬಗ್ಗೆ ನನಗೆ ನಂಬಿಕೆಯೇ ಇಲ್ಲ ಎಂದು ದೇವರಾಜೇಗೌಡ ಕಿಡಿಕಾರಿದರು.

ಇನ್ನು ಮಾಜಿ ಸಚಿವ ಎಲ್‌.ಆರ್.‌ ಶಿವರಾಮೇಗೌಡ ಕರೆ ಮಾಡಿ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಹೆಸರನ್ನು ಹೇಳಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ಆರೋಪ ಮಾಡಿದ ದೇವರಾಜೇಗೌಡ ಅವರು, ಅದಕ್ಕೆ ಸಂಬಂಧಪಟ್ಟ ಆಡಿಯೊವನ್ನು ಬಿಡುಗಡೆ ಮಾಡಿದರು. ಈ ಪ್ರಕರಣದಲ್ಲಿ ಎಲ್‌.ಆರ್.‌ ಶಿವರಾಮೇಗೌಡ ಮಧ್ಯವರ್ತಿಯಾಗಿದ್ದಾರೆ. ಡಿ.ಕೆ. ಶಿವಕುಮಾರ್‌ ಪರವಾಗಿ ಕೆಲಸ ಮಾಡಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದರು.

ಎಲ್ಲ ಮಾಹಿತಿ ಕೊಟ್ಟರೂ ಪೆನ್‌ಡ್ರೈವ್‌ ಹಂಚಿದ ಆರೋಪಿಯನ್ನು ಹಿಡಿಯಲಿಲ್ಲ

ಪೆನ್ ಡ್ರೈವ್ ಹಂಚಿರುವವರ ಹೆಸರು, ಲೋಕೇಶನ್ ಹಾಗೂ ಫೋನ್ ನಂಬರ್‌ಗಳನ್ನು ಕೊಟ್ಟರೂ ಆರೋಪಿಗಳನ್ನು ಹಿಡಿಯಲಿಲ್ಲ. ಈಗ ದೇವರಾಜೇ ಗೌಡನನ್ನು ನನ್ನ ಫಿಟ್ ಮಾಡಬೇಕು ಅಂತ ಈ ತಂತ್ರ ಮಾಡಿದ್ದಾರೆ. ನಿನ್ನೆಯವರೆಗೂ ನನ್ನ ಜತೆ ಸಂಧಾನ ಆಯ್ತು. ಶಿವರಾಮೇಗೌಡರು ಸಂಧಾನ ಮಾಡಲು‌ ಮುಂದಾದರು. ನನಗೆ ಕ್ಯಾಬಿನೆಟ್‌ ದರ್ಜೆ ಹುದ್ದೆ ಕೊಡುವುದಾಗಿ ಆಫರ್‌ ಕೊಟ್ಟರು. ಇದಕ್ಕಾಗಿ ನನಗೆ ಸರ್ಕಾರದ, ಸಿಎಂ, ಡಿಸಿಎಂ ಹೆಸರು ತರಬೇಡ ಎಂದು ನನಗೆ ತಾಕೀತು ಮಾಡಿದರು. ಆದರೆ, ನಾನು ಅದನ್ನು ನಿರಾಕರಣೆ ಮಾಡಿದೆ ಎಂದು ದೇವರಾಜೇಗೌಡ ವಿವರಣೆ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ಸಭೆ ನಡೆದಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾರನ್ನೆಲ್ಲ ಬಂಧಿಸಬೇಕು? ತನಿಖೆ ಯಾವ ನಿಟ್ಟಿನಲ್ಲಿ ಸಾಗಬೇಕು? ಎಂಬಿತ್ಯಾದಿಗಳ ಬಗ್ಗೆ ಚರ್ಚೆ ನಡೆದಿದೆ. ನನ್ನ ಜೀವನದ ದೊಡ್ಡ ಹೋರಾಟ ಇದ್ದಿದ್ದೇ ಹಾಸನದ ನಾಯಕರ ವಿರುದ್ಧವಾಗಿ ಆಗಿದೆ. ನನ್ನ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನನ್ನ ಹೋರಾಟವನ್ನು ಕೆಲವು‌ ಕಿಡಿಗೇಡಿ ರಾಜಕಾರಣಿಗಳು ವಾಮಮಾರ್ಗದಲ್ಲಿ ಬಳಸಿದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದರು.

ಕಾರ್ತಿಕ್‌ ನನ್ನ ಕಚೇರಿಗೆ ಬಂದಿದ್ದ

ನನ್ನ ಸಾಕ್ಷಿಯನ್ನು ಪರಿಗಣಿಸಲಾಗಿದೆ. ಹೀಗಾಗಿ ಎಸ್‌ಐಟಿಯವರ ಮುಂದೆ ನಾನು ಕಹಿ ಸತ್ಯಗಳನ್ನು ಬಯಲು ಮಾಡಿದ್ದೇನೆ. ಅಶ್ಲೀಲ ವಿಡಿಯೊ ವಿಚಾರದಲ್ಲಿ ಕೆಲ ಬಂಧನ ಆಗಿದೆ. ಆದರೆ, ಯಾವ ವಿಡಿಯೊದಲ್ಲೂ ಮುಖ‌ಗಳನ್ನು ಬ್ಲರ್‌ ಮಾಡಲಾಗಿಲ್ಲ. ದೇವರಾಜೇಗೌಡನ ಪಾತ್ರ ಏನು ಅಂತ ತಿಳಿಸುತ್ತೇನೆ. ಕೊಲೆಗಾರ ಕೂಡ ಬಂದಾಗ ವಕೀಲರಾಗಿ ರಕ್ಷಣೆ ಮಾಡುವುದು ನನ್ನ ಕರ್ತವ್ಯವಾಗಿತ್ತು. ವಕೀಲ ವೃತ್ತಿಯ ಮೂಲ ಜವಾಬ್ದಾರಿ ಇದು. ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ನನ್ನ ಗೃಹ ಕಚೇರಿಗೆ ಬಂದಿದ್ದ. ಈ ಫೈಲ್ ಹಾಸನದಲ್ಲಿರುವ ನನ್ನ ಮನೆಯಲ್ಲಿರುವ ಕಚೇರಿಯಲ್ಲಿ ಕೊಟ್ಟಿದ್ದಾನೆ. ಇದರ ಜತೆ ಪೆನ್ ಡ್ರೈವ್‌ ಕೂಡ ಇತ್ತು ಎಂದು ದೇವರಾಜೇಗೌಡ ಹೇಳಿದರು.

ಎಲ್ಲ ದಾಖಲೆಗಳೂ ನನ್ನಲ್ಲಿದೆ

ಕಾರ್ತಿಕ್‌ ನನಗೆ ಪೆನ್‌ಡ್ರೈವ್ ಕೊಟ್ಟ ನಂತರ ಅದನ್ನು ನಾನು ಲಕೋಟೆಯಲ್ಲಿ ಇಟ್ಟಿದ್ದೆ. ನಾನು ಹೆಣ್ಣುಮಕ್ಕಳನ್ನು ಕಾಪಾಡಬೇಕು ಅಂತ ಬಹಿರಂಗ ಮಾಡಿಲ್ಲ. ಆತ ಮುಂದೆಯೇ ಸೀಲ್ಡ್ ಕವರ್‌ಗೆ ಹಾಕಿದೆ. ಪೆನ್ ಡ್ರೈವ್ ಹೊಳೆನರಸೀಪುರದಿಂದ ಪರಾಜಿತ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ತಲುಪಿತ್ತು. ಆತನ ಗುರು ಪುಟ್ಟಿ @ ಪುಟ್ಟರಾಜು ಅವರು ಬೆಂಗಳೂರಿಗೆ ಬಂದರು. ಅವರು ಯಾರನ್ನು ಭೇಟಿಯಾದರು? ಇದರ ದಾಖಲೆ ನನ್ನ ಬಳಿ‌ ಇದೆ ಎಂದು ದೇವರಾಜೇಗೌಡ ಹೇಳಿದರು.

ಇದನ್ನೂ ಓದಿ: Prajwal Revanna Case: ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್‌.ಡಿ. ರೇವಣ್ಣ!

ಕಾರ್ತಿಕ್‌ ಬಂದಿದ್ದ ವಿಡಿಯೊ ಪ್ರದರ್ಶನ

ಎಸ್‌ಐಟಿ ನನ್ನ ಬಳಿ ಇರುವ ದಾಖಲೆ ಏನು ಅಂತ ಕೇಳಿದರು? ಎಲ್ಲವನ್ನೂ ಅವರಿಗೆ ಕೊಟ್ಟಿದ್ದೇನೆ. ತನಿಖಾಧಿಕಾರಿ ಎಸ್‌ಪಿ ಮುಂದೆ ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಯಾವಾಗ ಬಂದಿದ್ದು? ಎಂಬ ವಿಡಿಯೊ ನನ್ನ ಬಳಿ ಇದೆ. ಈಗ ಅದನ್ನು ಸಹ ಸಿಬಿಐಗೆ ನೀಡುತ್ತೇನೆ ಎಂದು ದೇವರಾಜೇಗೌಡ ಅವರು ಮಾಧ್ಯಮದೆದುರು ಆ ವಿಡಿಯೊವನ್ನು ಪ್ರದರ್ಶನ ಮಾಡಿದರು. ಕಾರ್ತಿಕ್‌ ಪೆನ್ ಡ್ರೈವ್ ಅನ್ನು ಯಾರಿಗೆ ಕೊಟ್ಟಿದ್ದೇನೆ ಎಂದು ಆತ ಹೇಳಿದ್ದು ಕೂಡಾ ರೆಕಾರ್ಡ್ ಆಗಿದೆ ಎಂದು ದೇವರಾಜೇಗೌಡ ಹೇಳಿದರು.

Exit mobile version