ರಾಯಚೂರು: ಪ್ರಜ್ವಲ್ ರೇವಣ್ಣ (Prajwal Revanna Case) 400 ಮಹಿಳೆಯರನ್ನು ರೇಪ್ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳುತ್ತಾರೆ. ಅವರಿಗೆ ಈ ಮಾಹಿತಿ ಕೊಟ್ಟವರು ಯಾರು? ನೀವು (ಸರ್ಕಾರದವರು) ಕೊಟ್ಟಿದ್ದೀರಾ? ಈ ಕುರಿತು ಬೇಕಾಬಿಟ್ಟಿ ಹೇಳಿಕೆ ನೀಡಿರುವ ರಾಹುಲ್‌ಗೆ ನೋಟಿಸ್ ಕೊಡುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿ. ಈ ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದಿದ್ದರೆ, ಹೆಣ್ಣುಮಕ್ಕಳ ಫೋಟೊಗಳನ್ನು ಇಡೀ ದೇಶಕ್ಕೆ ಕಳುಹಿಸುತ್ತಿರಲಿಲ್ಲ. ನಿಮಗೆ ಹೆಣ್ಣು ಮಕ್ಕಳ ಮೇಲೆ ಗೌರವ ಇದೆಯಾ? ನಿಮಗೆ ಗಂಡಸ್ತನ, ತಾಕತ್ತಿದ್ದರೆ ರಾಹುಲ್ ಗಾಂಧಿಗೆ ನೋಟಿಸ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದರು.
ಈ ಕುರಿತು ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನೀವು ಬಿಟ್ಟಿರುವ ವಿಡಿಯೊಗಳಲ್ಲಿ ಪ್ರಜ್ವಲ್ ಮುಖವೇ ಇಲ್ಲ. ಹಾಗಂತ ನಾನೇನು ಆ ವಿಡಿಯೊಗಳನ್ನು ನೋಡಿಲ್ಲ. ಇಷ್ಟಾದರೂ ಸಹಿಸಿಕೊಂಡಿದ್ದೇವೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನ ಮಹಾನಾಯಕ ತೋಟದಲ್ಲಿ ಏನೇನಾಗಿದೆ? ನೀನೇನು 6 – 7 ಜನರನ್ನು ಹೋಟೆಲ್‌ನಲ್ಲಿ ತೆಗೆದುಕೊಂಡು ಹೋಗಿ ಇಟ್ಟೀದಿಯಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ನಾವೂ ಎಲ್ಲ ರೀತಿಯ ದಾಖಲೆಗಳನ್ನೂ ತರುತ್ತೇವೆ
ನಿಮಗೆ ಬೇಕಿರುವುದು ಆ ಸಂತ್ರಸ್ತರಿಗೆ ಪರಿಹಾರ ಕೊಡಿಸುವುದಲ್ಲ. ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡು ಗೆಲ್ಲಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೆಡಿಸಬೇಕು ಎಂಬುದಷ್ಟೇ ನಿಮಗೆ ಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅದರಲ್ಲಿ ಏನೂ ರಾಜೀ ಇಲ್ಲ. ನಾವೂ ಎಲ್ಲ ರೀತಿಯ ದಾಖಲೆಗಳನ್ನೂ ತರುತ್ತೇವೆ. ನಾವೇನೂ ಪಲಾಯನವಾದಿಗಳಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪಾತ್ರವಾಗಲೀ, ನನ್ನ ಪಾತ್ರವಾಗಲೀ ಈ ಪ್ರಕರಣದಲ್ಲಿ ಇಲ್ಲ. ಆದರೂ ನಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪೆನ್‌ಡ್ರೈವ್ ಲೀಕ್ ಬಗ್ಗೆ ಹೊರಜಗತ್ತಿಗೆ ಗೊತ್ತಾದ ದಿನವೇ ಹೇಳಿದ್ದೇನೆ. ಈ ನೆಲದ ಕಾನೂನಿಗೆ ತಲೆ ಬಾಗಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಹೇಳಿದ್ದೇನೆ. ಆದರೂ ಕ್ಯಾಮರಾ ಹಿಡಿದು ನನ್ನ ಮುಂದೆಯೇ ಏಕೆ ಬರುತ್ತೀರಿ? ಎಂದು ಮಾಧ್ಯಮದವರಿಗೆ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಏನೋ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ.
ಎಸ್.ಐ.ಟಿ. ಜತೆ ಚಿಂತನೆ ಮಾಡುತ್ತೇವೆ ಎಂದು ಹೇಳಿ ಏಪ್ರಿಲ್ 28ಕ್ಕೆ ಎಫ್.ಐ.ಆರ್ ಮಾಡಿಸಿದ್ದೀರಿ. ಈ ವಿಚಾರದಲ್ಲಿ ಪದೇ ಪದೆ ಪ್ರಧಾನಿ ಮೋದಿ ಹಾಗೂ ಬಿಜೆಪಿಯವರನ್ನು ಏಕೆ ಎಳೆಯುತ್ತೀರಿ? ಅದಕ್ಕೂ ಪ್ರಧಾನಿಗೂ ಸಂಬಂಧ ಏನು? ಎಂದು ಎಚ್.ಡಿ. ಕುಮಾರಸ್ವಾಮಿ ಕೇಳಿದರು.
ಸುಮ್ಮನೆ ನನ್ನನ್ನು ಕೆಣಕಿದ್ದಾರೆ
ನೋಟಿಸ್ ಕೊಟ್ಟ ನಂತರ ಒಂದು ವಾರ ಸಮಯ ಕೇಳಲಾಗಿದೆ. ರೇವಣ್ಣ ಅವರು ಎರಡು ದಿನ ಸಮಯ ಕೇಳಿದ್ದಾರೆ. 8, 10 ಹತ್ತು ಬಾರಿ ಸಮನ್ಸ್ ಕೊಟ್ಟು ಸಮನ್ಸ್‌ಗೇ ಗೌರವ ಕಳಿದಿದ್ದೀರಿ. ದೇವೇಗೌಡರನ್ನು, ಪ್ರಧಾನಿಯವರನ್ನು ಎಳೆದು ತಂದಿದ್ದೀರಿ. ನಿಮ್ಮ ಸರ್ಕಾರದಲ್ಲಿ ನೀವೇ ಈ ರೀತಿಯ ಹೇಳಿಕೆಗಳನ್ನು ಕೊಡುವುದರ ಮುಖಾಂತರ ತನಿಖೆಯ ಹಾದಿಯನ್ನು ತಪ್ಪಿಸುವುದಲ್ಲದೆ, ಪ್ರಚಾರಕ್ಕೋಸ್ಕರ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದೀರಿ. ಕೆಲವರು ಕುಮಾರಸ್ವಾಮಿಯೇ ಈ ಪೆನ್‌ಡ್ರೈವ್ ಬಿಟ್ಟಿದ್ದಾಗಿ ಹೇಳುತ್ತಾರೆ. ಇಲ್ಲಿ ನನ್ನ ಹೆಸರನ್ನು ತರಲಾಗಿದೆ. ಸುಮ್ಮನೆ ನನ್ನನ್ನು ಕೆಣಕಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ತಂದೆ – ತಾಯಿಗೆ ಆತ್ಮಸ್ಥೈರ್ಯ ತುಂಬಲು ಹೋಗಿದ್ದೆ
ರಾಜ್ಯದ ಮುಖ್ಯಮಂತ್ರಿಗೆ ತಂದೆ – ತಾಯಿ ಮೇಲೆ ಗೌರವ ಇದೆಯೇ? ಸಿದ್ದರಾಮಯ್ಯ ಅವರಿಗೆ ಮನುಷ್ಯತ್ವ ಇಲ್ಲದಿರಬಹುದು. ಆದರೆ, ನಮಗೆ ಇದೆ. ನಾನು ಬಂದಿರುವ ಸಂಸ್ಕೃತಿ ನಮಗೆ ಇದನ್ನು ಕಲಿಸಿದೆ. ನನ್ನ ತಂದೆ – ತಾಯಿ ನೋವಿನಲ್ಲಿದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬುವುದಕ್ಕೆ ನಾನು ಅವರ ಜತೆ ಎರಡು ದಿನ ಇದ್ದೆ. ನಮ್ಮ ಮನೆಗೆ ಯಾವ ವಕೀಲರು ಬಂದಿದ್ದರು? ಇವತ್ತು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದೀರಿ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.