ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ನಾಲ್ಕನೇ ಪ್ರಕರಣ ದಾಖಲಾಗಿದ್ದು, ಆರೋಪಿಯ ಕುರಿತು ಇನ್ನಷ್ಟು ವಿಕೃತಿಯ ದೂರುಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಹೆಸರು ಕೂಡ ತಳುಕು ಹಾಕಿಕೊಂಡಿದೆ.
ಸಿಐಡಿ ಸೈಬರ್ ಕ್ರೈಂ (CID Cyber Crime) ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನನ್ವಯ ಎಫ್ಐಆರ್ (FIR) ದಾಖಲಾಗಿದೆ. ಎಫ್ಐಆರ್‌ನಲ್ಲಿ ಸಂತ್ರಸ್ತೆಯಿಂದ ಉಲ್ಲೇಖವಾಗಿರುವ ಅಂಶಗಳು ಹೀಗಿವೆ: ಮಗನ ಶಾಲೆ ವಿಚಾರಕ್ಕೆ ಪ್ರಜ್ವಲ್‌ನನ್ನು ಸಂತ್ರಸ್ತ ಮಹಿಳೆ ಭೇಟಿಯಾಗಿದ್ದರು. ಭೇಟಿ ವೇಳೆ ಸಂತ್ರಸ್ತೆಯಿಂದ ಪ್ರಜ್ವಲ್ ಫೋನ್ ನಂಬರ್ ಪಡೆದಿದ್ದ. ನಂಬರ್ ಪಡೆದು ವಿಡಿಯೊ ಕಾಲ್ ಮಾಡಿ ದಿನ ನಿತ್ಯ ಮಾತಾಡುತ್ತಿದ್ದ.
ನಂತರ ಮಹಿಳೆಗೆ ವಿಡಿಯೊ ಕಾಲ್ ಮಾಡಿ ವಿವಸ್ತ್ರವಾಗುವಂತೆ ಒತ್ತಾಯಿಸುತ್ತಿದ್ದ. ವಿವಸ್ತ್ರಗೊಂಡ ಮಹಿಳೆಯನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ವಿವಸ್ತ್ರವಾಗಲು ಒಪ್ಪದಿದ್ದಾಗ ವಿಡಿಯೊ ಸೇವ್ ಮಾಡಿಕೊಂಡಿರುವುದಾಗಿಯೂ, ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ನಂತರ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ವೈರಲ್ ಆಗಿರುವ ವಿಚಾರ ಸಂತ್ರಸ್ತೆ ಗಮನಕ್ಕೆ ಬಂದಿದೆ. ಈ ಕುರಿತು ಪ್ರಜ್ವಲ್‌ನನ್ನು ಸಂತ್ರಸ್ತ ಮಹಿಳೆ ಸಂಪರ್ಕ ಮಾಡಿದ್ದಾರೆ. ಆಗ ʼಸ್ಟೇ ತಂದಿದ್ದೇನೆ, ಏನೂ ಆಗಲ್ಲʼ ಎಂದಿದ್ದರಂತೆ. ಎರಡನೇ ಬಾರಿ ಫೋಟೊ ವೈರಲ್ ಆದಾಗ ಸಂತ್ರಸ್ತೆ ದೂರು ನೀಡಲು ಮುಂದಾಗಿದ್ದರು.
ವೈರಲ್ ಆದ ಕೆಲವು ಫೋಟೊಗಳನ್ನು ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವೈರಲ್ ಮಾಡಿಸಿರುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಜನರ ಮೇಲೆ ದೂರು ನೀಡಲು ಮಹಿಳೆ ಮುಂದಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಎಸ್ಐಟಿ ಅಧಿಕಾರಿಗಳಿಂದ ತನಿಖೆ ಚುರುಕುಗತಿ ಪಡೆದುಕೊಂಡಿದೆ.
ಜಾಮೀನು ಅರ್ಜಿ ಇಂದು ವಿಚಾರಣೆ
ಇಂದು ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಈ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಪ್ರಜ್ವಲ್‌ಗೆ ಬಿಡುಗಡೆ ಇಲ್ಲ. ಎಚ್.ಡಿ ರೇವಣ್ಣ (HD Revanna) ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರೂ ಆರೋಪಿಗಳಾಗಿರುವ ಪ್ರಕರಣದಲ್ಲಿ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಎಚ್‌ಡಿ ರೇವಣ್ಣ ಈಗಾಗಲೇ ಜಾಮೀನು ಪಡೆದಿದ್ದಾರೆ. ಮೊದಲು ಲೈಂಗಿಕ ದೌರ್ಜನ್ಯ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ನಂತರ ಅತ್ಯಾಚಾರ ಆರೋಪವನ್ನು ಸೇರಿಸಲಾಗಿತ್ತು.
ಪುರುಷತ್ವ ಪರೀಕ್ಷೆಗೆ ಒಳಗಾಗಲಿರುವ ಸೂರಜ್
ಲೈಂಗಿಕ ದೌರ್ಜನ್ಯ (physical abuse) ಪ್ರಕರಣಗಳಲ್ಲಿ ತಮ್ಮ ಪ್ರಜ್ವಲ್ ರೇವಣ್ಣಗೆ (Prajwal Revanna Case) ಮಾಡಲಾಗಿದ್ದ ಪುರುಷತ್ವ ಪರೀಕ್ಷೆಯನ್ನು (Medical Test) ಇದೀಗ ಅಣ್ಣ ಸೂರಜ್ ರೇವಣ್ಣಗೂ (Suraj Revanna Case) ಮಾಡಲು ತನಿಖಾ ತಂಡ ಮುಂದಾಗಿದೆ. ಬೆದರಿಕೆಯೊಡ್ಡಿ ಸಲಿಂಗಕಾಮ, ಅಸಹಜ ಲೈಂಗಿಕ ಕ್ರಿಯೆಯ ಆರೋಪ ಸೂರಜ್ ರೇವಣ್ಣ ಮೇಲಿದೆ.
ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಸೂರಜ್ ರೇವಣ್ಣಗೆ ಇಂದು ವೈದ್ಯಕೀಯ ಪರೀಕ್ಷೆ ಮಾಡಿಸುವ ಸಾಧ್ಯತೆ ಇದೆ. ಬೌರಿಂಗ್ ಆಸ್ಪತ್ರೆಯಲ್ಲಿ ಇಂದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೂರಜ್ ಪ್ರಕರಣದಲ್ಲಿ ಈಗಾಗಲೇ ಸಂತ್ರಸ್ತನ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಪೊಲೀಸರು ನಡೆಸಿದ್ದಾರೆ. ಮುಂದುವರಿದ ಭಾಗವಾಗಿ, ಇಂದು ಸೂರಜ್ ರೇವಣ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಂತ್ರಸ್ತನ ಮೇಲೆ ಲೈಂಗಿಕ ಆಕ್ರಮಣ ನಡೆಸಿರುವ ಸಾಧ್ಯತೆಗಳನ್ನು ಶೋಧಿಸಲಾಗುತ್ತದೆ.
ಈ ಪ್ರಕರಣ ಸ್ವಲ್ಪ ಭಿನ್ನವಾಗಿದ್ದು, ಆರೋಪಿ ಪುರುಷರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬಲ್ಲನೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಸೂರಜ್ ಮೇಲೆ ಬಂದಿರುವ ಆರೋಪ ಬೆದರಿಕೆ ಹಾಕಿ ಸಲಿಂಗಕಾಮ ಎಸಗಿದ್ದಾಗಿರುವುದರಿಂದ, ಆರೋಪಿಗೆ ಸಲಿಂಗಕಾಮ ಸಹಜವಾದುದೇ ಎಂದು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೀಗಾಗಿ ಇದು ಅಣ್ಣ ಪ್ರಜ್ವಲ್‌ಗೆ ನಡೆಸಿದ ಪರೀಕ್ಷೆಗಳಿಗಿಂತ ಸ್ವಲ್ಪ ಭಿನ್ನ. ಪ್ರಜ್ವಲ್ ಪ್ರಕರಣದಲ್ಲಿ ಸಂತ್ರಸ್ತರು ಮಹಿಳೆಯರಾಗಿದ್ದರು.
ಐಪಿಸಿ ಸೆಕ್ಷನ್ 377 ಹಾಕಿರುವ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಬಹಳ ಮುಖ್ಯವಾಗಿದೆ. ಇಲ್ಲಿ ಸಂತ್ರಸ್ತ ಹಾಗೂ ಆರೋಪಿ ಇಬ್ಬರ ವೈದ್ಯಕೀಯ ಪರೀಕ್ಷೆಯೂ ಮುಖ್ಯವಾಗಿದೆ. ಸಂತ್ರಸ್ತ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾನೆ. ಆರೋಪಿ ಸೂರಜ್ ರೇವಣ್ಣ ಸದ್ಯ ಸಿಐಡಿ ಕಸ್ಟಡಿಯಲ್ಲಿ ಇದ್ದಾರೆ.
ತಮ್ಮ ಪ್ರಜ್ವಲ್ ರೇವಣ್ಣಗೆ ಮೂರು ಸಲ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮೂರು ಬೇರೆ ಬೇರೆ ಪ್ರಕರಣಗಳಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, “ಪದೇ ಪದೆ ಖಾಸಗಿ ಅಂಗವನ್ನು ತೋರಿಸಲು ಮುಜುಗರವಾಗುತ್ತದೆ” ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್ ಅಲವತ್ತುಕೊಂಡಿದ್ದರು. ಇದೀಗ ಅಣ್ಣನೂ ಈ ಪರೀಕ್ಷೆಗೆ ಗುರಿಯಾಗಬೇಕಿದೆ. ಸೂರಜ್ ಎಷ್ಟು ಬಾರಿ ಪರೀಕ್ಷೆಗೊಳಗಾಗಲಿದ್ದಾನೆ ಎಂದು ನೋಡಬೇಕಿದೆ.
ಇದನ್ನೂ ಓದಿ: Suraj Revanna Case: ಸೂರಜ್ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?