ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna Case) ಅವರದೆನ್ನಲಾದ ಅಶ್ಲೀಲ ವಿಡಿಯೋ (Obscene video) ಪ್ರಕರಣದಲ್ಲಿ ನೋಟೀಸ್ ನೀಡಿದರೂ ಎಸ್‌ಐಟಿ (SIT) ಮುಂದೆ ಹಾಜರಾಗದ, ಗಂಡ ಎಚ್‌ಡಿ ರೇವಣ್ಣ (HD Revanna) ಜೈಲಿಗೆ ಹೋದರೂ. ಜೈಲಿನಿಂದ ಬಂದ ಮೇಲೂ ನೋಡಲು ಬಾರದ, ಯಾವ ರೀತಿಯಲ್ಲೂ ಸ್ಪಂದಿಸದ ಭವಾನಿ ರೇವಣ್ಣ (Bhavani Revanna) ಮೇಲೆ ಇಡೀ ದೇವೇಗೌಡ (HD Deve Gowda) ಫ್ಯಾಮಿಲಿ ಕೋಪಿಸಿಕೊಂಡಿದೆ. ಜೊತೆಗೆ, ವಿದೇಶದಲ್ಲಿ ತಲೆಮರೆಸಿಕೊಂಡು ರೇವಣ್ಣಗೆ ಇನ್ನಷ್ಟು ಸಂಕಷ್ಟ ತಂದಿಟ್ಟಿರುವ ಪ್ರಜ್ವಲ್ ಮೇಲೂ ಅವರ ಸಿಟ್ಟು ಹೆಚ್ಚಿದೆ.
ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಪ್ರಕರಣ ದೇವೇಗೌಡರ ಕುಟುಂಬಕ್ಕೆ ರಾಷ್ಟ್ರ ಮಟ್ಟದಲ್ಲಿ ಭಾರಿ ಮುಜುಗರ ಸೃಷ್ಟಿಸಿದೆ. ರೇವಣ್ಣ ಹೊರತುಪಡಿಸಿ, ಉಳಿದ ಮೂವರ ವಿರುದ್ಧ ಅಸಮಾಧಾನ ಮಾಡಿಕೊಂಡಿರುವ ದೇವೇಗೌಡರ ಕುಟುಂಬ, ಪ್ರಜ್ವಲ್ ಹಾಗೂ ಭವಾನಿ ಮತ್ತು ಸೂರಜ್ ಈ ಮೂವರಿಂದ ಅಂತರ ಕಾಯ್ದುಕೊಂಡಿದೆ.
ಪ್ರಜ್ವಲ್ ರೇವಣ್ಣನಿಂದಲೇ ರೇವಣ್ಣಗೆ ಸಂಕಷ್ಟ ಒದಗಿದೆ ಎಂಬುದು ಸ್ಪಷ್ಟವಾಗಿದೆ. ಪ್ರಜ್ವಲ್ ಪೆನ್ ಡ್ರೈವ್‌ನಿಂದಲೇ ಶುರುವಾದ ಪ್ರಕರಣ ರೇವಣ್ಣ ವರೆಗೆ ತಲುಪಿದೆ. ಅತ್ತ ರಾಜಕೀಯದಲ್ಲೂ ಐದು ವರ್ಷಗಳ ಕಾಲ ಪೂರೈಸುವ ಬಗ್ಗೆ ಪ್ರಶ್ನೆ, ಸಂಕಷ್ಟ ಉಂಟಾಗಿದೆ. ಪ್ರಕರಣ ಸಾಬೀತಾದರೆ ಪ್ರಜ್ವಲ್ ಸಂಸದ ಸ್ಥಾನಕ್ಕೂ ಸಂಚಕಾರ ಒದಗಬಹುದು. ಅತ್ತ ಜೆಡಿಎಸ್‌ನ ಹಿರಿಯ ನಾಯಕರಿಗೂ ಪ್ರಜ್ವಲ್ ಗೌರವ ಕೊಡುತ್ತಿರಲಿಲ್ಲ. ಪ್ರಜ್ವಲ್ ನಡವಳಿಕೆ ಬಗ್ಗೆ ಪದೇ ಪದೆ ದೂರು ಕೊಡುತ್ತಿದ್ದರೂ ಆತನನ್ನು ಭವಾನಿ ರೇವಣ್ಣ ಸಮರ್ಥನೆ ಮಾಡಿಕೊಳ್ಳುತ್ತಿದ್ದರು.
ಭವಾನಿ ರೇವಣ್ಣ ಮಾತು ಕೇಳಿ ಆತನನ್ನು ರೇವಣ್ಣ ಸಮರ್ಥನೆ ಮಾಡಿಕೊಂಡಿದ್ದರು. ಹಾಸನ ಜಿಲ್ಲೆಯ ಹಿರಿಯ ನಾಯಕರು ಗೌರವ ಕೊಡಲ್ಲ ಅಂತ ದೂರು ಕೊಟ್ಟರೂ ಸಮರ್ಥನೆ ಮಾಡಿ ರೇವಣ್ಣ ವಿಲನ್ ಆಗಿದ್ದರು. ಇದೀಗ ಒಂದು ಪ್ರಕರಣದಲ್ಲಿ ರೇವಣ್ಣಗೆ ಬೇಲ್ ದೊರೆತಿದೆ. ಆದರೆ ಇನ್ನೊಂದರಲ್ಲಿ ಇನ್ನೂ ಸಿಕ್ಕಿಲ್ಲ. ಪ್ರಜ್ವಲ್ ನಾಪತ್ತೆಯಾಗಿದ್ದು, ಹೀಗಾಗಿ ರೇವಣ್ಣಗೆ ಜಾಮೀನು ಕೊಡಬೇಡಿ ಎಂದು ಎಸ್ಐಟಿ ಪರ ವಕೀಲರು ವಾದ ಮಾಡುತ್ತಿದ್ದಾರೆ. ಇಂದು ರೇವಣ್ಣ ಜಾಮೀನು ಅರ್ಜಿ ಭವಿಷ್ಯ ನಿರ್ಧಾರವಾಗಬೇಕಿದೆ. ಇದೆಲ್ಲದರಿಂದಾಗಿ ಪ್ರಜ್ವಲ್ ಮೇಲೆ ಇಡೀ ದೇವೇಗೌಡರ ಕುಟುಂಬಕ್ಕೆ ಸಿಟ್ಟು ಮೂಡಿದೆ.
ಇನ್ನು ಇದೆಲ್ಲದಕ್ಕೂ ಭವಾನಿ ಅವರ ಸಮರ್ಥನೆ, ದುರಹಂಕಾರ ಹಾಗೂ ಮೊಂಡು ಹಠವೇ ಕಾರಣ ಎಂಬುದು ಗೌಡರ ಕುಟುಂಬ ಹಾಗೂ ಜೆಡಿಎಸ್ ನಾಯಕರ ಅಭಿಪ್ರಾಯ. ಕಳೆದ ಚುನಾವಣೆಯಲ್ಲಿ ಭವಾನಿ ಹಠದಿಂದಲೇ ಪ್ರಜ್ವಲ್‌ಗೆ ಟಿಕೆಟ್ ನೀಡಲಾಗಿದೆ. ಪ್ರಜ್ವಲ್ ಹೀನ ಕೆಲಸಗಳನ್ನು ಭವಾನಿ ಸಮರ್ಥನೆ ಮಾಡಿಕೊಂಡು ಆತನ ಬೆನ್ನು ತಟ್ಟುವ ಕೆಲಸ ಮಾಡುತ್ತ ಬಂದಿದ್ದಾರೆ. ಪಕ್ಷದ ಇತರ ನಾಯಕರ ಮುಂದೆ ಕುಟುಂಬದ ಮಾನ ಹರಾಜು ಹಾಕಿದ್ದಾರೆ. ʼಕೋಟಿ ರೂಪಾಯಿ ಬೆಲೆಯ ಕಾರುʼನಂಥ ಪ್ರಕರಣಗಳಿಂದ ಸುತ್ತಮುತ್ತ ದುರಹಂಕಾರಕ್ಕೂ ಕುಖ್ಯಾತರಾಗಿದ್ದಾರೆ.
ಜೊತೆಗೆ ಭವಾನಿ ತನಿಖೆಗಾಗಿ ಎಸ್‌ಐಟಿ ನೋಟೀಸ್ ನೀಡಿ ಒಂದು ವಾರವಾದರೂ ಇನ್ನೂ ತನಿಖಾ ತಂಡದ ಮುಂದೆ ಅವರು ಹಾಜರಾಗಿಲ್ಲ. ಇದು ಕೂಡ ರೇವಣ್ಣ ಕೊರಳಿಗೆ ಉರುಳಾಗುವ ಸಾಧ್ಯತೆಗಳಿವೆ. ಪತಿ ಜೈಲಿಹೆ ಹೋದಾಗಲೂ ಅವರು ನೋಡಲು ಬಂದಿರಲಿಲ್ಲ. ಪತಿ ಜೈಲಿನಿಂದ ರಿಲೀಸ್ ಆದಾಗಲೂ ಬಂದಿರಲಿಲ್ಲ. ತಮಗೂ ರೇವಣ್ಣಗೂ ಸಂಬಂಧವೇ ಇಲ್ಲದಂತೆ ಇದ್ದುಬಿಟ್ಟಿದ್ದಾರೆ. ಇದೆಲ್ಲದರಿಂದ ಸಿಟ್ಟಿಗೆದ್ದಿರುವ ದೇವೇಗೌಡರ ಫ್ಯಾಮಿಲಿ, ರೇವಣ್ಣ ಹೊರತುಪಡಿಸಿ ಉಳಿದ ಕುಟುಂಬದ ಸದಸ್ಯರಿಂದ ಅಂತರ ಕಾಯ್ದುಕೊಂಡಿದೆ.
ರೇವಣ್ಣಗೆ ಮಧ್ಯಂತರ ಜಾಮೀನು
ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna Case) ಅವರಿಗೆ ಮಧ್ಯಂತರ ಜಾಮೀನು (Bail) ನೀಡಲಾಗಿದ್ದು, ಶುಕ್ರವಾರಕ್ಕೆ (ಮೇ 17) ವಿಚಾರಣೆಯನ್ನು ಮುಂದೂಡಲಾಗಿದೆ. ಹೀಗಾಗಿ ರೇವಣ್ಣ ಅವರು ಇನ್ನೂ ನಿಟ್ಟುಸಿರು ಬಿಡುವಂತೆ ಇಲ್ಲ. ಇಂದು ಕೋರ್ಟ್ ಯಾವ ನಿರ್ಧಾರವನ್ನು ಪ್ರಕಟಿಸಲಿದೆ ಎಂಬುದರ ಮೇಲೆ ಜೈಲಾ? ಎಸ್‌ಐಟಿ ವಶವೇ? ಅಥವಾ ಜಾಮೀನಾ ಎಂಬುದು ನಿರ್ಧಾರ ಆಗಲಿದೆ.
ಎಚ್.ಡಿ. ರೇವಣ್ಣ ಅವರು ನಿನ್ನೆ ಬೆಳಗ್ಗಿನಿಂದ ಟೆಂಪಲ್ ರನ್ ನಡೆಸಿದರು. ಬಳಿಕ ಇನ್ನೊಂದು ಪ್ರಕರಣದಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರಾದರು. ಈಗಾಗಲೇ ಮೈಸೂರಿನ ಸಂತ್ರಸ್ತೆಯ ಕಿಡ್ನ್ಯಾಪ್ (kidnap case) ಪ್ರಕರಣದಲ್ಲಿ ಅವರು ಜಾಮೀನು ಪಡೆದಿದ್ದಾರೆ. ಈಗ ಹೊಳೆನರಸೀಪುರದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕಿದ್ದು, ಶುಕ್ರವಾರದ ಆದೇಶದ ಮೇಲೆ ಎಲ್ಲವೂ ನಿಂತಿದೆ. ಈಗ ಐದು ಲಕ್ಷ ರೂಪಾಯಿ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ: HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ರೇವಣ್ಣಗೆ ಮಧ್ಯಂತರ ಜಾಮೀನು; ಆದರೂ ಮುಗಿದಿಲ್ಲ ಟೆನ್ಶನ್!