ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣ (Hassan Pen Drive Case) ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಬಳಸದಂತೆ ತಡೆಯಾಜ್ಞೆ ನೀಡಲಾಗಿದೆ.
ಉಭಯ ನಾಯಕರು ಸೆಷನ್ಸ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಪ್ರಕರಣಗಳ ಬಗ್ಗೆ ಸುದ್ದಿ ಪ್ರಸಾರ ಮಾಡುವಾಗ ತಮ್ಮ ಹೆಸರುಗಳನ್ನು ಬಳಸದಂತೆ ತಡೆಯಾಜ್ಞೆಯನ್ನು ತಂದಿದ್ದಾರೆ. ಇಷ್ಟು ದಿನ ಪ್ರಕರಣದ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ಹೆಸರುಗಳನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೆ ತೀವ್ರ ಮುಜುಗರವಾಗಿತ್ತು. ಅಲ್ಲದೆ, ಎಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಇದರ ಬಗ್ಗೆ ಕಿಡಿಕಾರಿದ್ದರು.
ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್.ಡಿ. ರೇವಣ್ಣ!
ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಸ್ವ-ಇಚ್ಛಾ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಸ್ವ-ಇಚ್ಛಾ ಹೇಳಿಕೆಗೆ ಸಹಿ ಹಾಕಲು ಎಚ್.ಡಿ. ರೇವಣ್ಣ (HD Revanna) ನಿರಾಕರಿಸಿದ್ದಾರೆ. ನಿಮಗೆ ಬೇಕಾದಂತೆ ಬರೆದುಕೊಂಡಿದ್ದೀರಾ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ಎಚ್.ಡಿ. ರೇವಣ್ಣ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿ ಭಾನುವಾರ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಅಪಹರಣ ಕೇಸ್‌ನಲ್ಲಿ ರೇವಣ್ಣ ಅವರಿಂದ ಸ್ವ-ಇಚ್ಛಾ ಹೇಳಿಕೆ ದಾಖಲು ಮಾಡಿಕೊಳ್ಳಲು ಮುಂದಾಗಲಾಗಿದೆ. ಈ ಸಂಬಂಧ ರೇವಣ್ಣ ಅವರಿಗೆ ಭಾನುವಾರವೇ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನವನ್ನು ಅಧಿಕಾರಿಗಳೂ ಮಾಡಿದ್ದರು.
ಅಪಹರಣ ಕೇಸ್ ಬಗ್ಗೆ ಎಚ್.ಡಿ. ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸತೀಶ್ ಬಾಬು ಪರಿಚಯವಿದ್ದಾರಾ? ಅವರ ಮೂಲಕ ಕಿಡ್ನ್ಯಾಪ್ ಮಾಡಿಸಲು ನೀವೇ ತಿಳಿಸಿದ್ದಿರಾ? ಅಪಹರಣ ಮಾಡಿದ್ದರ ಹಿಂದಿನ ಉದ್ದೇಶ ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಉತ್ತರವನ್ನು ಪಡೆದುಕೊಂಡಿದ್ದರು. ಕೇಸ್‌ಗೆ ಸಂಬಂಧಿಸಿ ಕೆಲವು ಸಾಂದರ್ಭಿಕ ಪ್ರಶ್ನೆಗಳಿಗೆ ಹೇಳಿಕೆ ಪಡೆದು ಅದನ್ನು ಪೇಪರ್‌ನಲ್ಲಿ ನಮೂದಿಸಿ ಸ್ವ ಇಚ್ಛಾ ಹೇಳಿಕೆಗೆ ಸಹಿ ಮಾಡುವಂತೆ ಹೇಳಿದ್ದಾರೆ. ಆದರೆ, ಅದಕ್ಕೆ ಸಹಿ ಹಾಕುವುದಿಲ್ಲ ಎಂದ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಅಪರಹಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆದರೂ ನೀವುಗಳು ಬರೆದುಕೊಂಡಿದ್ದೀರಿ. ನಾನೇ ಮಾಡಿಸಿರುವ ಹಾಗೆ ಬರೆದುಕೊಂಡಿದ್ದೀರಿ. ನಾನು ಯಾವ ಹೇಳಿಕೆಗೂ ಸಹಿ ಹಾಕಲ್ಲ ಎಂದು ರೇವಣ್ಣ ನಿರಾಕರಣೆ ಮಾಡಿದ್ದಾರೆ.
ಎಚ್.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?
ಈ ಮಧ್ಯೆ ಇಂದು (ಮೇ 6) ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ಹಿಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದರಿಂದ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ ಇಂದು ಕೂಡ ಜಾಮೀನು ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಇನ್ನೂ ನಾಲ್ಕು ದಿನ ರೇವಣ್ಣ ಅವರು ಎಸ್‌ಐಟಿ ವಶದಲ್ಲಿರುವುದು ಅನಿವಾರ್ಯವಾಗಲಿದೆ.
ಭಾನುವಾರ ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಆ ವೇಳೆ ರೇವಣ್ಣ ಅವರನ್ನು ನ್ಯಾಯಾಧೀಶರು ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿದ್ದರು. ಹೀಗಾಗಿ ತನಿಖಾ ಭಾಗವಾಗಿ ನಾಲ್ಕು ದಿನಗಳ ಕಾಲ ರೇವಣ್ಣ ಎಸ್‌ಐಟಿ ವಶದಲ್ಲಿ ಇರಲಿದ್ದಾರೆ.
ಇಂದು ರೇವಣ್ಣ ಪರ ವಕೀಲರು ಬೇಲ್ ಅರ್ಜಿ ಸಲ್ಲಿಸಿದರೆ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಕಸ್ಟಡಿಯಲ್ಲಿರುವ ಅವರಿಗೆ ಹಿನ್ನೆಲೆ ಜಾಮೀನು ಕೊಟ್ಟರೆ ತನಿಖೆಗೆ ಹಿನ್ನಡೆಯಾಗಬಹುದು ಎಂದು ಎಸ್‌ಐಟಿ ವಾದ ಮಂಡಿಸಲಿದೆ. ಇದೇ ಕಾರಣಕ್ಕೆ ರೇವಣ್ಣ ಅವರಿಗೆ ಇಂದು ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕಸ್ಟಡಿ ಅವಧಿ ನಂತರವೇ ಜಾಮೀನು ಭಾಗ್ಯ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಒತ್ತಡದಲ್ಲಿರುವ ರೇವಣ್ಣ
ಇನ್ನು ಎಸ್‌ಐಟಿ ವಶದಲ್ಲಿರುವ ರೇವಣ್ಣ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಸುಸ್ತಾಗಿರುವಂತೆ ಅವರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಎಸ್ಐಟಿ ಅಧಿಕಾರಿಗಳು ಯಾವುದೇ ವಿಚಾರಣೆ ನಡೆಸಲಿಲ್ಲ. ಇಂದು ಬೆಳಗ್ಗೆ ಮತ್ತೆ ಪ್ರಕರಣದ ಬಗ್ಗೆ ಪ್ರಶ್ನಿಸಲಿದ್ದಾರೆ.
ರೇವಣ್ಣ ಬಂಧನವಾಗಿ 24 ಗಂಟೆ ಕಳೆದರೂ ಅವರನ್ನು ಭೇಟಿಯಾಗಲು ಅವರ ಕುಟುಂಬಸ್ಥರು ಆಗಮಿಸಿಲ್ಲ. ಯಾವಾಗಲೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೇವಣ್ಣ ಸದ್ಯ ಒಬ್ಬಂಟಿಯಾಗಿದ್ದಾರೆ. ಶನಿವಾರ ಬಂಧನವಾದಾಗಿನಿಂದ ಸರಿಯಾಗಿ ನಿದ್ದೆ ಮಾಡದೇ ತಲೆ ಕೆಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳ ಮಹಜರು
ಇಂದು (ಮೇ 6) ಸ್ಥಳ ಮಹಜರಿಗೆ ರೇವಣ್ಣ ಅವರನ್ನು ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ. ಇದೇ ವೇಳೆ ಸಂತ್ರಸ್ತೆಯನ್ನು ಅಕ್ರಮವಾಗಿ ಕೂಡಿಟ್ಟಿ ಸ್ಥಳ ತೋಟದ ಮನೆಯಲ್ಲಿಯೂ ಮಹಜರು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಸಂತ್ರಸ್ತೆಯರಿಗಾಗಿ ಹೆಲ್ಪ್‌ಲೈನ್ ಆರಂಭಿಸಿರುವ ಎಸ್‌ಐಟಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಈ ಮಧ್ಯೆ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೊಗಳನ್ನು ಯಾರೇ ಆಗಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು
ರೇವಣ್ಣ ಜತೆ ಚರ್ಚೆ ನಡೆಸಿದ ವಕೀಲರು
ಎಚ್.ಡಿ. ರೇವಣ್ಣ ಅವರು ಎಸ್‌ಐಟಿ ವಶದಲ್ಲಿರುವ ಕಾರಣ ಅವರನ್ನು ವಕೀಲ ಮೂರ್ತಿ ಡಿ ನಾಯಕ್ ಭೇಟಿ ಮಾಡಿ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಪ್ರಕರಣ ಸಂಬಂಧ ವಕೀಲರ ಜತೆ ರೇವಣ್ಣ ಚರ್ಚೆ ನಡೆಸಿದ್ದಾರೆ. ಜಾಮೀನು ಸಲ್ಲಿಕೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ.