ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್. ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna) ಅವರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆದಿದೆ. ಈ ವೇಳೆ ರೇವಣ್ಣ ಪರ ಹಾಗೂ ಸರ್ಕಾರಿ ವಕೀಲರ ನಡುವೆ ವಾದ – ಪ್ರತಿವಾದಗಳು ನಡೆದಿವೆ. ಇಂಥ ಕಾರಣಗಳಿಗೆ ಜಾಮೀನು ಕೊಡಲೇ ಬೇಕು ಎಂದು ರೇವಣ್ಣ ಪರ ವಕೀಲರಾದ ನಾಗೇಶ್ ವಾದ ಮಂಡಿಸಿದರೆ, ಜಾಮೀನನ್ನು ಏಕೆ ಕೊಡಬಾರದು? ಕೊಟ್ಟರೆ ಮುಂದೇನಾಗುತ್ತದೆ ಎಂದು ಎಸ್‌ಐಟಿ ಪರ ವಕೀಲರಾದ (ಎಸ್‌ಪಿಪಿ) ಜಯ್ನಾ ಕೊಠಾರಿ ಹಾಗೂ ಅಶೋಕ್ ನಾಯ್ಕ್ ವಾದಿಸಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರಕರಣ ಸಂಬಂಧ ವಾದ ಮಂಡಿಸಿದ ಎಸ್‌ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, 2 ವಿಚಾರಗಳಿಗೆ ಸಂಬಂಧಿಸಿ ಆರೋಪಿಗೆ ಜಾಮೀನು ಕೊಡಬೇಡಿ. ಒಂದು ಪ್ರಕರಣದ ಗಂಭೀರತೆಯನ್ನು ನೋಡಬೇಕಿದ್ದು, ಇದರಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಕಿಡ್ನ್ಯಾಪ್ ಕೇಸಲ್ಲೂ ಈಗಾಗಲೇ 2ನೇ ಆರೋಪಿ ಹೇಳಿಕೆಯನ್ನು ಪಡೆಯಲಾಗಿದೆ. ಈ ನಡುವೆ ಸಂತ್ರಸ್ತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ವಿಡಿಯೋ ವೈರಲ್ ಬಗ್ಗೆ ಕೋರ್ಟ್‌ಗೆ ಮಾಹಿತಿಯನ್ನು ನೀಡಿದರು.
ಮೊದಲು ತನಿಖಾ ವರದಿ ಕೊಡಿ ಎಂದ ನ್ಯಾಯಾಧೀಶರು
ಈ ವೇಳೆ ಮಧ್ಯಪ್ರವೇಶ ಮಾಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖಾಧಿಕಾರಿಯ ಇನ್‌ವೆಸ್ಟಿಗೇಷನ್ ರಿಪೋರ್ಟ್ ಅನ್ನು ಮೊದಲು ಸಲ್ಲಿಸಿ. ಕಿಡ್ನ್ಯಾಪ್ ಕೇಸ್ ಸಂಬಂಧ ಏನೇನು ವಿಚಾರಗಳು ನಡೆದಿವೆ ಎಂಬುದನ್ನು ತಿಳಿಯಬೇಕು ಎಂದು ಎಸ್‌ಪಿಪಿಗೆ ಸೂಚಿಸಿದರು. ಆಗ ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್, ತನಿಖಾ ವರದಿಯನ್ನು ನಮಗೂ ಕೊಟ್ಟಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ಇನ್‌ವೆಸ್ಟಿಗೇಷನ್ ರಿಪೋರ್ಟ್ ಅನ್ನು ಸಲ್ಲಿಸಲಾಯಿತು. ಇದಕ್ಕೆ ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ರಿಂದ ಆಕ್ಷೇಪ ವ್ಯಕ್ತವಾಯಿತು. ಬಳಿಕ ತಮಗೂ ಒಂದು ಕಾಪಿ ನೀಡಲು ಕೇಳಿದ್ದು, ಅವರಿಗೂ ಒಂದು ಪ್ರತಿಯನ್ನು ನೀಡಲಾಯಿತು.
ಇದನ್ನೂ ಓದಿ: Karnataka Politics: ಆಪರೇಶನ್ ಕಮಲ ಆಗೋಕೆ ಸಾಧ್ಯಾನೇ ಇಲ್ಲ; ಇದು ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ
ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಎಸ್‌ಪಿಪಿ
ಈ ವೇಳೆ ವಾದ ಮುಂದುವರಿಸಿದ ಜಯ್ನಾ ಕೊಠಾರಿ ಅವರು ಸುಪ್ರೀಂಕೋರ್ಟ್ ಕೇಸ್ ಸ್ಟಡಿಗಳನ್ನು ಉಲ್ಲೇಖಿಸಿದರು. ಕೆಲವು ತೀರ್ಪುಗಳನ್ನು ಓದಿ ಹೇಳಿದರು. ಕಿಡ್ನ್ಯಾಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ತೀರ್ಪುಗಳನ್ನು ಕೋರ್ಟ್ ಗಮನಕ್ಕೆ ತಂದರು. ಕಿಡ್ನ್ಯಾಪ್ ಪ್ರಕರಣದಲ್ಲಿ ಸೆಕ್ಷನ್ 364ಎ ಅಂದ್ರೆ ಜೀವಾವಧಿ ಶಿಕ್ಷೆ ಇದೆ. ಐಪಿಸಿ ಸೆಕ್ಷನ್ 364ಎ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಹೀಗಾಗಿ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು. ಶಿಕ್ಷೆಯ ಪ್ರಮಾಣದ ಗಂಭೀರತೆಯನ್ನು ಪರಿಗಣಿಸಿ ಬೇಲ್ ಅನ್ನು ಕೊಡಲೇಬಾರದು ಎಂದು ಮನವಿ ಮಾಡಿದರು.
ದೆಹಲಿ ಕೋರ್ಟ್‌ನ ಗುರುಚರಣ್ ಸಿಂಗ್ ಪ್ರಕರಣದ ಬಗ್ಗೆ ಉಲ್ಲೇಖ
ಗುರುಚರಣ್ ಸಿಂಗ್ ಪ್ರಕರಣದಲ್ಲಿ ಕೋರ್ಟ್ ಬೇಲ್ ತಿರಸ್ಕರಿಸಿತ್ತು. ಈಗ ರೇವಣ್ಣ ಪರ ದಾಖಲಾಗಿರುವ ಕೆ.ಆರ್.ನಗರ ಅಪಹರಣ ಪ್ರಕರಣವು ಒಂದು ಸೀರಿಯಸ್ ಕ್ರಿಮಿನಲ್ ಕೇಸ್ ಆಗಿದೆ ಎಂದು ವಾದ ಮಂಡಿಸಿ ಕೆಲವು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು.
ಆರೋಪಿ ಎಚ್.ಡಿ. ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಕೂಡ ಬೇರೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಮಾಹಿತಿಯನ್ನು ಗೌಪ್ಯವಾಗಿಡಬೇಕು. ಕೆಲವು ಪ್ರಕರಣದಲ್ಲಿ ಮಾತ್ರ ಅಲ್ಲ, ಬೇರೆ ಪ್ರಕರಣಗಳಲ್ಲಿಯೂ ಈ ರೀತಿ ಸಂದರ್ಭದಲ್ಲಿ ಜಾಮೀನು ಕೊಟ್ಟರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಗಂಭೀರತೆ ಹೆಚ್ಚಿರುವ ಪ್ರಕರಣಗಳಲ್ಲಿ ಜಾಮೀನು ಕೊಡಬಾರದು. ಜಾಮೀನು ಕೊಡಬಾರದೆಂದು ಹಲವು ಕೋರ್ಟ್‌ಗಳ ತೀರ್ಪಿದೆ. ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಕೊಠಾರಿ ಉಲ್ಲೇಖಿಸಿದರು.
ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುತ್ತದೆ. ಸಂತ್ರಸ್ತೆ ಮತ್ತು ಆಕೆಯ ಪುತ್ರನಿಗೆ ಜೀವ ಬೆದರಿಕೆಯೂ ಇದೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ ಮಾಹಿತಿ ಗೌಪ್ಯವಾಗಿ ಇಡಬೇಕು. ಈ ಸಂದರ್ಭದಲ್ಲಿ ಸಂತ್ರಸ್ತೆ ಮಾಹಿತಿ ಗೌಪ್ಯವಾಗಿ ಇಡಲಿಲ್ಲ ಅಂದರೆ ಬೇರೆ ಯಾವ ಸಂತ್ರಸ್ತೆಯರು ಮುಂದೆ ಬಂದು ದೂರು ನೀಡುತ್ತಾರೆ? ರೇವಣ್ಣಗೆ ಜಾಮೀನು ನೀಡಲೇಬಾರದು. ಈ ಪರಿಸ್ಥಿತಿಯಲ್ಲಿ ರೇವಣ್ಣಗೆ ಜಾಮೀನು ನೀಡಿದರೆ ನ್ಯಾಯಾಂಗ ಹಾದಿಗೇ ಅಡಚಣೆಯಾಗುತ್ತದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.
ಈ ಕಾರಣಕ್ಕಾಗಿ ಜಾಮೀನು ನೀಡಬಾರದು
ರೇವಣ್ಣ ಪ್ರಭಾವಿಯಾಗಿದ್ದು, ಅವರ ಪುತ್ರ ಸಂಸದ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ಇದು ಕೇವಲ ಅಪಹರಣ ಪ್ರಕರಣ ಅಲ್ಲ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕಿಡ್ನ್ಯಾಪ್ ಆಗಿದೆ. ಪ್ರಕರಣದಲ್ಲಿ ಯಾವುದೇ ಮಹಿಳೆಯರು ದೂರು ನೀಡದಂತೆ ತಡೆಯುವ ಯತ್ನ ಇದಾಗಿದೆ. ಎಚ್.ಡಿ. ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಕಿಡ್ನ್ಯಾಪ್ ಪ್ರಕರಣದಲ್ಲಿ ಕೆಲವರ ಹೇಳಿಕೆ ಸಿಆರ್‌ಪಿಸಿ 164 ಅಡಿಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಹೇಳಿಕೆ ದಾಖಲಿಸಬೇಕು ಎಂದು ಜಯ್ನಾ ಕೊಠಾರಿ ವಾದ ಮಂಡನೆ ಮಾಡಿ ಮುಗಿಸಿದರು.
ಜಯ್ನಾ ಕೊಠಾರಿ ಬಳಿಕ ಹೆಚ್ಚುವರಿ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡನೆಯನ್ನು ಪ್ರಾರಂಭಿಸಿದರು. ಒಬ್ಬರು ವಾದ ಮಂಡಿಸಿದರೆ ಸಾಕು ಎಂದು ವಕೀಲ ಸಿ.ವಿ.ನಾಗೇಶ್ ಆಕ್ಷೇಪಣೆ ವ್ಯಕ್ತಪಡಿಸಿದರು. ಒಂದೇ ಕೇಸ್‌ಗೆ ಇಬ್ಬರು ಎಸ್‌ಪಿಪಿಗಳ ವಾದದ ಬಗ್ಗೆ ಜಡ್ಜ್ ನಿರ್ಧಾರ ಮಾಡಬೇಕು ಎಂದು ನ್ಯಾಯಾಧೀಶರನ್ನು ಇದೇ ವೇಳೆ ಸಿ.ವಿ. ನಾಗೇಶ್ ಕೇಳಿದರು. ಅದಕ್ಕೆ ಅಶೋಕ್ ನಾಯ್ಕ್, ಎಷ್ಟು ಜನ ಬೇಕಾದರೂ ವಾದ ಮಾಡಿ ಅಂತಾ ನೀವೇ ಹೇಳಿದ್ದಿರಲ್ಲವೇ ಎಂದು ಸಿ.ಪಿ. ನಾಗೇಶ್‌ಗೆ ಪ್ರಶ್ನೆ ಮಾಡಿದರು.
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂತ್ರಸ್ತೆಯರು ಇದ್ದಾರೆ. ಆದ್ದರಿಂದಲೇ ಎಸ್‌ಐಟಿ ಪರವಾಗಿ ಇಬ್ಬರು ಎಸ್‌ಪಿಪಿಗಳನ್ನು ನೇಮಿಸಲಾಗಿದೆ. ನಾನು ವಾದ ಮಾಡಿದರೆ ನಿಮಗೇನು ತೊಂದರೆ? ಎಂದು ಕೇಳಿ ಅಶೋಕ್ ನಾಯ್ಕ್ ವಾದ ಮುಂದುವರಿಸಿದರು.
ಇದನ್ನೂ ಓದಿ: Prajwal Revanna Case: ಪೆನ್ ಡ್ರೈವ್ ಹಂಚಿಕೆ ಆರೋಪ ಮಾಡಿದ್ದ ನವೀನ್ ಗೌಡ ಮೇಲೆ ಶಾಸಕ ಮಂಜು ದೂರು
ರೇವಣ್ಣಗೆ ಜಾಮೀನು ಕೊಡಬಾರದು. ಕಿಡ್ನ್ಯಾಪ್ ಪ್ರಕರಣದ ಸಂತ್ರಸ್ತೆಯ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಆ ವೇಳೆ ಬರಲು ಆಗಲ್ಲ ಅಂದರೂ ಬಲವಂತವಾಗಿ ಕರೆದೊಯ್ದಿದ್ದಾರೆ. ಸಂತ್ರಸ್ತೆ ಅಪಹರಿಸಿ ರೇವಣ್ಣ ಆಪ್ತರ ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಚುನಾವಣೆಗೆ ನಾಲ್ಕೈದು ದಿನ ಮುಂಚೆಯೇ ಸಂತ್ರಸ್ತೆಯನ್ನು ಕರೆದೊಯ್ದಿದ್ದಾರೆ. ಆನಂತರ ಕರೆದುಕೊಂಡು ಬಂದಿದ್ದಾರೆ ಎಂದು ಅಶೋಕ್ ನಾಯ್ಕ್ ವಾದಿಸಿದರು.
ರೇವಣ್ಣ ಪುತ್ರ ಪ್ರಜ್ವಲ್ ಯಾವ ಕಾರಣಕ್ಕಾಗಿ ದೇಶ ಬಿಟ್ಟು ಹೋಗಿದ್ದಾನೆ? ಇಲ್ಲಿ ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಹೊಂದಿದ್ದಾರೆ. ಅವರ ತಂದೆ – ತಾಯಿಗೆ ಯಾವ ಕಾರಣ ಹೇಳಿ ಹೋಗಿದ್ದಾರೆ? ದೇಶದ ಬಗ್ಗೆ ಚರ್ಚೆ ಮಾಡುವುದಕ್ಕೆ ಏನಾದರೂ ಹೋಗಿದ್ದಾರಾ? ಎಂದು ಅಶೋಕ್ ನಾಯ್ಕ್ ಪ್ರಶ್ನೆ ಮಾಡಿದರು.
ತಾಯಿಯ ಮೇಲೆ ನಡೆದ ಅತ್ಯಾಚಾರ ದೃಶ್ಯವನ್ನು ದೂರುದಾರ ನೋಡಿದ್ದಾರೆ. ತನ್ನ ಸ್ನೇಹಿತರ ಮೊಬೈಲ್‌ನಲ್ಲಿ ತಾಯಿ ಮೇಲಿನ ದೌರ್ಜನ್ಯದ ವಿಡಿಯೊವನ್ನು ನೋಡಿದ್ದಾರೆ. ಅದಕ್ಕಿಂತ ದುರ್ದೈವದ ಸಂಗತಿ ಇನ್ನೇನಿದೆ ಹೇಳಿ? ನಾಲ್ಕು ದಿನಗಳ ಕಾಲ ಅನುಭವಿಸಿದ್ದ ಯಾತನೆಯನ್ನು ಸಂತ್ರಸ್ತೆ ಹೇಳಿಕೊಂಡಿದ್ದಾರೆ ಎಂದು ಅಶೋಕ್ ನಾಯ್ಕ್ ಹೇಳಿದರು.
ಭಾನುವಾರ ವೈರಲ್ ಆಗಿರುವ ಸಂತ್ರಸ್ತೆಯ ಸ್ಪಷ್ಟನೆಯುಳ್ಳ ವಿಡಿಯೊ ಬಗ್ಗೆ ಪ್ರಸ್ತಾಪಿಸಿದ ಎಸ್‌ಪಿಪಿ ಅಶೋಕ್ ನಾಯ್ಕ್, ವೈರಲ್ ಆಗಿರುವ ವಿಡಿಯೊದಲ್ಲಿ ರೇವಣ್ಣ ಕಿಡ್ನ್ಯಾಪ್ ಮಾಡಿಲ್ಲ ಅಂದಿದ್ದಾರೆ. ಈ ಮೂಲಕ ನ್ಯಾಯಾಲಯದ ದಾರಿಯನ್ನೇ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆ ವಿಡಿಯೊದಲ್ಲಿ ಸಂತ್ರಸ್ತೆಯೇ ಕೆಲವು ವಿಚಾರವನ್ನು ಹೇಳಿಕೊಂಡಿದ್ದಾರೆ. ಯಾವ ರೀತಿ ಕಿಡ್ನ್ಯಾಪ್ ಮಾಡಲಾಗಿದೆ ಅಂತಾ ಎಸ್‌ಐಟಿ ಅವರಿಂದ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ನ್ಯಾಯಾಲಯಕ್ಕೆ ಎಸ್‌ಐಟಿ ತನಿಖೆ ಬಗ್ಗೆ ಮಾಹಿತಿ ನೀಡಿದ ಅಶೋಕ್ ನಾಯ್ಕ್, ಎಷ್ಟು ಜನ ಕಿಡ್ನ್ಯಾಪ್ ಮಾಡಿದರು? ಎಷ್ಟು ವಾಹನಗಳಲ್ಲಿ ಅಪಹರಣ ಮಾಡಿದರು? ಮಾರ್ಗ ಮಧ್ಯೆ ವಾಹನಗಳ ಬದಲಾವಣೆ ಮಾಡಲಾಗಿದೆಯಾ ಅಂತಲೂ ತನಿಖೆ ನಡೆದಿದೆ. ಕಿಡ್ನ್ಯಾಪ್ ಹೇಗೆ ಮಾಡಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.
ಕಸ್ಟಡಿ ಹಾಗೂ ಜಾಮೀನು ಸಂಬಂಧ ರೇವಣ್ಣ ಪರ ವಕೀಲರು ವಾದ ಮಾಡಿದ್ದಾರೆ. ಆದರೆ ಇಲ್ಲಿ ಜಾಮೀನು ಕೊಟ್ಟರೆ ಏನು ಆಗುತ್ತೆ ಅಂತಾ, ಮುಂದೆ ಏನು ಆಗುತ್ತದೆ..? ಎರಡು ರೀತಿಯಲ್ಲಿ ನಾನು ವಾದ ಮಂಡಿಸುತ್ತೇನೆ. ಜಾಮೀನು ಕೊಟ್ಟರೆ ಏನಾಗುತ್ತದೆ? ಜಾಮೀನು ಕೊಡದಿದ್ದರೆ ಏನಾಗುತ್ತೆ ಎಂಬುದನ್ನು ಹೇಳುತ್ತೇನೆ. ನಿಮ್ಮ ವಾದದ ಅಂಶಗಳ ಕಾಪಿಯನ್ನು ಕೊಟ್ಟು ವಾದವನ್ನು ಮುಂದುವರಿಸಿ ಎಂದು ಈ ವೇಳೆ ನ್ಯಾಯಾಧೀಶರು ಹೇಳಿದರು.
ಎಚ್.ಡಿ.ರೇವಣ್ಣ ಸಲ್ಲಿಸಿರುವ ಜಾಮೀನಿಗೆ ಮಾನ್ಯತೆಯೇ ಕೊಡಬಾರದು ಎಂದು ಎಸ್‌ಐಟಿ ಪರ ಹೆಚ್ಚುವರಿ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದಾಗ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು, ಬೇಲ್ ಅರ್ಜಿ ಮಾನ್ಯತೆ ವಿಚಾರ ಏಕೆ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಅಶೋಕ್ ನಾಯ್ಕ್, ಬೇಲ್ ಅರ್ಜಿ ಮಾನ್ಯತೆ ಕುರಿತು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು. ಆಗ ಅಸಮಾಧಾನಗೊಂಡ ನ್ಯಾಯಾಧೀಶರು, ಈಗ ನಡೆಯುತ್ತಿರುವುದು ಬೇಲ್ ಅರ್ಜಿ ವಿಚಾರಣೆಯಾಗಿದೆ. ಅದರ ಸಂಬಂಧ ವಾದ ಮಾಡಿ ಎಂದು ಅಶೋಕ್ ನಾಯ್ಕ್‌ಗೆ ನ್ಯಾಯಾಧೀಶರು ಸೂಚನೆ ನೀಡಿದರು. ಅದು ಬಿಟ್ಟು ಪೊಲೀಸ್ ಕಸ್ಟಡಿ, ಜ್ಯುಡಿಷಿಯಲ್ ಕಸ್ಟಡಿ ಬಗ್ಗೆ ವಾದ ಏಕೆ? ಎಂದು ಕೇಳಿದರು.
ಆದರೆ, ಆಗ ವಾದ ಮಂಡಿಸಿದ ಅಶೋಕ್ ನಾಯ್ಕ್, ಹೀಗೆಯೇ ಆದರೆ ಈ ಕಿಡ್ನ್ಯಾಪ್ ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎಂದು ಹೇಳಿದರು. ಇದಕ್ಕೆ ಸಿ.ವಿ.ನಾಗೇಶ್ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಾಲಯಕ್ಕೇ ನೀವು ಬೆದರಿಕೆ ಹಾಕುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್ ನಾಯ್ಕ್, ಈ ವಿಚಾರಗಳನ್ನು ಮಾತ್ರ ನಾನು ಹೇಳುತ್ತಿದ್ದೇನೆಯೇ ಹೊರತು, ಬೆದರಿಕೆಯ ಪ್ರಶ್ನೆಯೇ ಇಲ್ಲ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಬೇಡಿ ಎಂದು ಸಿ.ವಿ. ನಾಗೇಶ್‌ಗೆ ಹೇಳಿದರು.
ಯಾವ ಕಾರಣಕ್ಕೆ ರೇವಣ್ಣಗೆ ಜಾಮೀನು ನೀಡಬಾರದು?
ಯಾವ ಕಾರಣಕ್ಕೆ ರೇವಣ್ಣಗೆ ಜಾಮೀನು ನೀಡಬಾರದು ಅಂತಾ ಹೇಳುತ್ತೇನೆ ಎಂದು ವಾದವನ್ನು ಮುಂದುವರಿಸಿದ ಎಸ್‌ಪಿಪಿ ಅಶೋಕ್ ನಾಯ್ಕ್, ವೋಟ್ ಹಾಕಿ.. ವೋಟ್ ಹಾಕಿ.. ಅಂತಾ ಜನರನ್ನೇ ಬೆದರಿಸುತ್ತಾರೆ. ಈ ರೇವಣ್ಣ ಅವರಿಗೆ ಜಾಮೀನು ಕೊಟ್ಟರೆ ಕಥೆ ಏನು ಸ್ವಾಮಿ? ವೋಟ್ ಹಾಕಲು ಸರತಿ ಸಾಲಲ್ಲಿ ನಿಂತಿದ್ದಾಗ ಮತದಾರರಿಗೆ ಬೆದರಿಕೆ ಹಾಕುತ್ತಾರೆ. 2019ರ ಚುನಾವಣೆ ವೇಳೆ ಮತ ಹಾಕುವ ವೇಳೆ ರೇವಣ್ಣ ಅವರೇ ಬೆದರಿಕೆ ಹಾಕಿದ್ದಾರೆ. ಅಲ್ಲಿ ಯಾರೂ ರೇವಣ್ಣ ಅವರನ್ನು ಕೇಳುವಂತಿಲ್ಲ. ಈಗ ಜಾಮೀನು ಕೊಟ್ಟರೆ ಕಥೆ ಏನ್ ಸ್ವಾಮಿ? ಅಧಿಕಾರಿಗಳು ಹಾಗೂ ಸರ್ಕಾರಿ ವಾಹನಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಎಲೆಕ್ಷನ್ ಟೈಮ್‌ನಲ್ಲಿ ಇವರು ಸರ್ಕಾರಿ ವಾಹನಗಳಲ್ಲಿಯೇ ಹಣ ಸಾಗಿಸುತ್ತಿದ್ದರು. ಈ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಬೇಕಾದ ಎಲ್ಲ ದಾಖಲೆಗಳು ಇವೆ. ಆದ್ದರಿಂದ ರೇವಣ್ಣ ಅವರಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂದು ಅಶೋಕ್ ನಾಯ್ಕ್ ವಾದ ಮಂಡಿಸಿದರು.
ಎಲೆಕ್ಷನ್ ಮುಗಿಯುವ ವಾರಕ್ಕೆ ಮುಂಚೆಯೇ ಫ್ಲೈಟ್ ಟಿಕೆಟ್ ಬುಕ್
ಒಂದು ಕಡೆ ಸಂತ್ರಸ್ತೆಯನ್ನು ಚುನಾವಣೆಗೆ ಮುಂಚೆಯೇ ಕರೆದೊಯ್ದಿರುತ್ತಾರೆ. ಇನ್ನೊಂದೆಡೆ ಎಲೆಕ್ಷನ್ ಮುಗಿಯೋದಕ್ಕೆ ಮುಂಚೆಯೇ ಫ್ಲೈಟ್ ಟಿಕೆಟ್ ಬುಕ್ ಆಗಿರುತ್ತದೆ. ಎಲೆಕ್ಷನ್ ಮುಗಿಯುವ ಒಂದು ವಾರ ಮೊದಲೇ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ದೆಹಲಿಯ ಕಂಪನಿ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಆಗಿದೆ ಎಂದು ಅಶೋಕ್ ನಾಯ್ಕ್ ಹೇಳಿದರು.
ಕಿಡ್ನ್ಯಾಪ್ ಮಾಡಿದ ಬಳಿಕ ಸಂತ್ರಸ್ತೆಯನ್ನು ಅನೇಕ ಕಡೆಗೆ ಕರೆದೊಯ್ದಿದ್ದಾರೆ. ಈಗ ಆಕೆಯಿಂದ ಬಲವಂತವಾಗಿ ವಿಡಿಯೊ ಮೂಲಕ ಸ್ಪಷ್ಟನೆ ನೀಡಲಾಗಿದೆ. ಯಾರೂ ಕಿಡ್ನ್ಯಾಪ್ ಮಾಡಿಲ್ಲ ಅಂತ ಹೇಳಿಕೆಯ ಕೊಡಿಸಲು ಯತ್ನಿಸಿದ್ದಾರೆ. ಸಂತ್ರಸ್ತೆ ಮಹಿಳೆಯ ವಿಡಿಯೊ ಸ್ಪಷ್ಟನೆಯ ಸತ್ಯಾಸತ್ಯತೆ ಕುರಿತು ಪತ್ತೆ ಆಗಬೇಕು. ಕಿಡ್ನ್ಯಾಪ್ ಪ್ರಕರಣ ಸೇರಿದಂತೆ ಈ ಹಗರಣದಲ್ಲಿ ಹಲವು ಜನರು ಇದ್ದಾರೆ. ಎರಡು ದಿನಗಳಿಂದ ಕೆಲವರ ಬಂಧನ ಆಗಿದೆ. ಎಲ್ಲರೂ ಪ್ರಜ್ವಲ್ ರೇವಣ್ಣಗೆ ಗೊತ್ತಿರಬೇಕು ಅಂತ ಏನಿಲ್ಲ. ಬಂಧಿತ ಆರೋಪಿಗಳಿಂದ ಸಮಗ್ರ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕುತ್ತಿದೆ ಎಂದು ಅಶೋಕ್ ನಾಯ್ಕ್ ಹೇಳಿದರು.
ಸಮನ್ಸ್ ನೀಡಿದವರಿಗೆ ರೇವಣ್ಣರಿಂದ ಬೆದರಿಕೆ
ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬಸ್ಥರು ಪ್ರಭಾವಸ್ಥರು, ಸಮನ್ಸ್ ನೀಡಿರುವ ತನಿಖಾಧಿಕಾರಿಗಳಿಗೇ ಎಚ್.ಡಿ. ರೇವಣ್ಣ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೇಲ್ ಕೊಡಬಾರದು ಎಂದು ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದರು.
ಸಂತ್ರಸ್ತೆ ಹೇಳಿಕೆಯ ವಿಡಿಯೊ ವೈರಲ್ ಪ್ರಸ್ತಾಪ
ಸಂತ್ರಸ್ತೆ ವಿಡಿಯೊ ಹೇಳಿಕೆ ಭಾನುವಾರದಿಂದ ವೈರಲ್ ಆಗಿದೆ. ಈ ವಿಡಿಯೊವನ್ನು ಸಂತ್ರಸ್ತೆಗೆ ಹೆದರಿಸಿ ಮಾಡಲಾಗಿದೆ. ಈ ಬಗ್ಗೆ ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ತೆ ಹೇಳಿದ್ದಾರೆ. ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾಗ ಸಂತ್ರಸ್ತೆಯ ವಿಡಿಯೊ ರೆಕಾರ್ಡ್ ಮಾಡಲಾಗಿದೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದು ಅವರಿಂದ ಹೇಳಿಸಿದ್ದಾರೆ ಎಂದು ಅಶೋಕ್ ನಾಯ್ಕ್ ಹೇಳಿದರು.
ಸಿ.ವಿ.ನಾಗೇಶ್ ವಾದ
ಇಬ್ಬರೂ ಎಸ್‌ಪಿಪಿಗಳ ವಾದ ಮಂಡನೆ ನಂತರ ಮತ್ತೆ ಸಿ.ವಿ. ನಾಗೇಶ್ ವಾದವನ್ನು ಆರಂಭಿಸಿದರು. ಏಪ್ರಿಲ್ 29ಕ್ಕೆ ಕಿಡ್ನ್ಯಾಪ್ ಮಾಡಿದರೆ, ದೂರು ಕೊಡಲು ತಡ ಯಾಕೆ ಮಾಡಿದರು? ಸಂತ್ರಸ್ತ ಮಹಿಳೆ ಎಚ್.ಡಿ.ರೇವಣ್ಣ ಅವರ ಸಂಬಂಧಿಯಾಗಿದ್ದಾರೆ. ಸುಮಾರು ವರ್ಷ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಕೆಲಸ ಮಾಡಿದ್ದವರನ್ನು ಯಾಕೆ ಕಿಡ್ನ್ಯಾಪ್ ಮಾಡಬೇಕು? ಮನೆ ಕೆಲಸ ಮಾಡುತ್ತಿದ್ದರಲ್ಲ, ಕರೆದುಕೊಂಡು ಬನ್ನಿ ಅಂದಿರಬಹುದು. ಇಲ್ಲಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ರೇವಣ್ಣ ಅರೆಸ್ಟ್ ಆದ ದಿನವೇ ಸಂತ್ರಸ್ತೆ ಮಹಿಳೆ ಹುಣಸೂರಿನಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನ ಹುಣಸೂರು ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಪತ್ತೆ ಆಗಿದ್ದರು. ಸಂತ್ರಸ್ತ ಮಹಿಳೆ ಪ್ರಜ್ವಲ್ ರೇವಣ್ಣ ವಿರುದ್ಧ ಮಾತ್ರ ಆರೋಪಿಸಿದ್ದಾರೆ. ರೇವಣ್ಣ ವಿರುದ್ಧ ಸಂತ್ರಸ್ತೆ ಮಹಿಳೆ ಯಾವುದೇ ಆರೋಪವನ್ನು ಮಾಡಿಲ್ಲ ಎಂದು ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.
ಸಂತ್ರಸ್ತ ಮಹಿಳೆಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಆರೋಪದ ಬಗ್ಗೆ ವಾದ ಮಂಡಿಸಿದ ಸಿ.ವಿ. ನಾಗೇಶ್, ಸಂತ್ರಸ್ತೆಯು ಸಿಆರ್‌ಪಿಸಿ 161 ಅಡಿಯಲ್ಲಿ ಹೇಳಿಕೆ ನೀಡುವಾಗ, ಕೇವಲ ಪ್ರಜ್ವಲ್ ವಿರುದ್ಧ ಅತ್ಯಾಚಾರ ಅಂತಾ ಆರೋಪ ಮಾಡಿದ್ದಾಳೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಎರಡು ರಿಮ್ಯಾಂಡ್ ಅರ್ಜಿ ಸಲ್ಲಿಕೆಯಾಗಿದೆ. ಕಿಡ್ನ್ಯಾಪ್ ಮಾಡಿದ್ದಾರೆ ಅಂತಾ ಮಹಿಳೆಯ ಮಗನಿಗೆ ಹೇಗೆ ಗೊತ್ತಾಯ್ತು? ಅದು ಊಹೆಯಷ್ಟೇ. ಸಂತ್ರಸ್ತೆಯ ಮಗನಿಗೆ ಯಾರೂ ಕಾಲ್ ಮಾಡಿ ಡಿಮ್ಯಾಂಡ್ ಮಾಡಿಲ್ಲ. ಇನ್ನು ಸಂತ್ರಸ್ತ ಮಹಿಳೆಯನ್ನು ಅಂದು ಹುಣಸೂರಿನ ಬಳಿ ರಕ್ಷಣೆ ಮಾಡಲಾಗಿದೆ. ಆಪ್ತ ಸಮಾಲೋಚನೆ ಮಾಡಿ, ಆಕೆಯನ್ನು ಸುರಕ್ಷಿತ ಕೊಠಡಿಯಲ್ಲಿಡಲಾಗಿದೆ. ಈ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಲ್ಲ ಏಕೆ? ಇಲ್ಲಿಯ ತನಕ ರೇವಣ್ಣ ವಿರುದ್ಧ ಯಾವುದೇ ಸಾಕ್ಷಿಯನ್ನೂ ಸಂಗ್ರಹಿಸಿಲ್ಲ, ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಸಿಲ್ಲ. ಸಂತ್ರಸ್ತ ಮಹಿಳೆಯನ್ನು ಕೇವಲ ಆಪ್ತ ಸಮಾಲೋಚನೆಯಲ್ಲಿ ಇರಿಸಿದ್ದಾರೆ ಎಂದು ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಸಂತ್ರಸ್ತ ಮಹಿಳೆಯನ್ನು ಹುಣಸೂರಿನ ತೋಟದಿಂದ ರಕ್ಷಣೆ ಮಾಡಿದರಾ? ಎಸ್‌ಐಟಿ ಎಲ್ಲಿಂದ ಮಹಿಳೆಯನ್ನು ಕರೆತಂದರು? ಅವರ ಸಂಬಂಧಿಕರ ಮನೆಯಿಂದ ಸಂತ್ರಸ್ತೆಯನ್ನು ಕರೆ ತಂದಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಎರಡು ಕಡೆ ರೆಕಾರ್ಡ್ ಆಗಿದೆ. ಒಂದು ಕಡೆ ಫೋಟೋ ಶಾಪ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದು ಕಡೆ ತರಕಾರಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ. ಅನುಮತಿ ನೀಡಿದರೆ ಸೆರೆಯಾಗಿರುವ ದೃಶ್ಯವನ್ನು ತೋರಿಸಲು ನಾವು ಸಿದ್ಧ. ಈಗ ನ್ಯಾಯಾಲಯದಲ್ಲಿಯೇ ಪ್ಲೇ ಮಾಡುತ್ತೇವೆ. ಸ್ಪೆಷಲ್ ಇನ್‌ವೆಸ್ಟಿಗೇಷನ್ ಟೀಮ್ ವಿರುದ್ಧವೇ ಸಿ.ವಿ. ನಾಗೇಶ್ ಆರೋಪಿಸಿದರು.
ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್‌ಐಟಿಯವರೇ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಆದರೆ, ಎಸ್‌ಪಿಪಿಯವರು ಸಂತ್ರಸ್ತೆ ಹೇಳಿಕೆಯನ್ನು ಟ್ಯಾಂಪರಿಂಗ್ ಆಗಿದೆ ಎಂದು ಹೇಳಿದ್ದಾರೆ. ವೈರಲ್ ಆದ ಸ್ಪಷ್ಟನೆ ವಿಡಿಯೊದಲ್ಲಿ ಸಂತ್ರಸ್ತೆಯೇ ಹೇಳಿಕೊಂಡಿದ್ದಾರೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದಿದ್ದಾರೆ. ನಮ್ಮ ಕುಟುಂಬಕ್ಕೆ ತೊಂದರೆಯಾದರೆ ಅವರೇ ಹೊಣೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಬಂಧಿಕರ ಮನೆಯಲ್ಲಿದ್ದೇನೆ. ಬೇಗ ಬರುತ್ತೇನೆ ಎಂದೂ ಹೇಳಿದ್ದಾರೆ. ಯಾರೂ ಬೆದರಿಕೆ ಹಾಕಿಲ್ಲ, ಬಲವಂತವಾಗಿಯೂ ಕರೆದೊಯ್ದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗೆಲ್ಲಾ ಸಂತ್ರಸ್ತೆಯೇ ವಿಡಿಯೊ ಮೂಲಕ ಹೇಳಿದ್ದಾರೆ. ಹಾಗಾಗಿ ಕಿಡ್ನ್ಯಾಪ್ ಹೇಗೆ ಆಗುತ್ತದೆ. ಈ ಕಾರಣಕ್ಕಾಗಿ ರೇವಣ್ಣ ಅವರಿಗೆ ಜಾಮೀನು ನೀಡಬೇಕು ಎಂದು ಸಿ.ವಿ. ನಾಗೇಶ್ ಕೋರಿದರು.
ಕಿಡ್ನ್ಯಾಪ್ ಪ್ರಕರಣದಲ್ಲಿ ಚುನಾವಣಾ ತಕರಾರು ಅರ್ಜಿ ತರುವುದು ಬೇಡ. ಎಸ್‌ಪಿಪಿ ವಾದದ ಅಂಶಗಳನ್ನು ಆಕ್ಷೇಪಿಸಿ ರೇವಣ್ಣ ಪರ ವಕೀಲರು ವಾದ ಮಂಡಿಸಿದರು. ಎಚ್.ಡಿ.ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾಗಿಲ್ಲ. ಹಿಂದಿನ ಕೇಸ್‌ಗಳು ಸಾಬೀತಾಗಿದ್ದರೆ ಯಾಕೆ ಎಲ್ಲವೂ ಬಿ ರಿಪೋರ್ಟ್ ಆಗುತ್ತಿತ್ತು? ಎಂದು ಪ್ರಶ್ನೆ ಮಾಡಿದರು.
ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಎಸ್‌ಐಟಿ ಲೋಪವೆಸಗಿದೆ. ಅದರಲ್ಲಿ ಸಂತ್ರಸ್ತೆಯ ಹೇಳಿಕೆ ಒಂದು ಪ್ಯಾರಾ ಇದೆ. ಅದು ಬಿಟ್ಟು ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಆರೋಪಿ ಹೇಳಿಕೆಯೇ ಇದೆ. ಸಂತ್ರಸ್ತ ಮಹಿಳೆಯ ಹೇಳಿಕೆ ಒಂದು ಪ್ಯಾರಾ ಬಿಟ್ಟರೆ ಬೇರೆ ಇಲ್ಲವೇ ಇಲ್ಲ. ಯಾವಾಗಲೂ ಹೇಳಿಕೆ ದಾಖಲು ಮಾಡಿಕೊಳ್ಳುವುದೇ ಎಸ್‌ಐಟಿ ಕೆಲಸನಾ? ಸಂತ್ರಸ್ತೆ ಏನು ಹೇಳ್ತಾರೆ? ಏನು ಹೇಳಲ್ಲ ಅಂತಾ ಹೇಳಿಕೆ ದಾಖಲಾಗಬೇಕು. ಆಕೆ ಎಸ್‌ಐಟಿ ಸುಪರ್ದಿಯಲ್ಲಿರುವಾಗ ಏನನ್ನೂ ಮಾಡಿಲ್ಲ. ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿರುವಂತೆ ಯಾವುದೇ ಸಾಕ್ಷಿ ಸಂಗ್ರಹಿಸಿಲ್ಲ. ಆದರೆ, ನ್ಯಾಯಾಲಯಕ್ಕೆ ಎಸ್ಐಟಿ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ ಎಂದು ನಾಗೇಶ್ ಹೇಳಿದರು.
ಕಾಯ್ದೆ ಬಗ್ಗೆ ವಕೀಲರ ಆಕ್ಷೇಪ
ಸಂತ್ರಸ್ತೆ ಮೇಲೆ ಯಾವುದಾದರೂ ರೀತಿ ಹಲ್ಲೆ, ಬೆದರಿಕೆ ಇರಬೇಕು. ಆಗ ಮಾತ್ರ ಐಪಿಸಿ ಸೆಕ್ಷನ್ 364ಎ ಕಾಯ್ದೆ ಅನ್ವಯ ಆಗುತ್ತದಲ್ಲವೇ? ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಹಾಗಾದರೆ ರೇವಣ್ಣ ವಿರುದ್ಧ ಸೆಕ್ಷನ್ 364ಎ ಹೇಗೆ ಅನ್ವಯ ಆಗುತ್ತದೆ? ಎಂದು ಸರ್ಕಾರದ ವಿಶೇಷ ಅಭಿಯೋಜಕರ (SPP) ವಾದಕ್ಕೆ ವಕೀಲ ಸಿ.ವಿ. ನಾಗೇಶ್ ಪ್ರತಿವಾದವನ್ನು ಮಂಡಿಸಿದರು.
ಕೊನೇ ಪಕ್ಷ ಸಂತ್ರಸ್ತೆಯ ಕುಟುಂಬದವರ ಮೇಲೂ ಹಲ್ಲೆ ನಡೆದಿಲ್ಲ. ಆರೋಪಿ ಸ್ಥಾನದಲ್ಲಿರುವ ರೇವಣ್ಣ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಆದರೂ ಕಿಡ್ನ್ಯಾಪ್ ಪ್ರಕರಣದಲ್ಲಿ ಸೆಕ್ಷನ್ 364ಎ ಹಾಕಿದ್ದು ಯಾಕೆ? ಈ ಸೆಕ್ಷನ್ ಹಾಕುವ ಪ್ರಮೇಯವೇ ಕಾಣುತ್ತಿಲ್ಲ. ಘಟನೆ ನಡೆದ ದಿನಕ್ಕೂ ಕೇಸ್ ದಾಖಲಾದ ದಿನಕ್ಕೂ ಅಂತರ ಇದೆ. ನಿಜವಾಗಿಯೂ ಕಿಡ್ನ್ಯಾಪ್ ಆಗಿದ್ದರೆ ಅಲ್ಲಿ ಡಿಮ್ಯಾಂಡ್ ಇರಬೇಕು. ಆದರೆ, ಬಲವಂತದ ಕಿಡ್ನ್ಯಾಪ್ ಆಗಿಲ್ಲ, ಯಾವುದೇ ಬೇಡಿಕೆ ಇಲ್ಲ ಎಂದು ವಾದಿಸಿದ ನಾಗೇಶ್, 364 ಎ ಸಂಬಂಧ ಹಲವು ಕೇಸ್ ಸ್ಟಡಿಗಳನ್ನು ಉಲ್ಲೇಖಿಸಿದರು. ಜಾರ್ಖಂಡ್ ಹೈಕೋರ್ಟ್‌ನ ರೋಹಿಣಿ ದೇವಿ ಪ್ರಕರಣವನ್ನು ಉಲ್ಲೇಖಿಸಿದರು.
ಈ ವೇಳೆ ತಮ್ಮ ಹಿಂದಿನ ವಾದಕ್ಕೆ ಕರೆಕ್ಷನ್ ಮಾಡಿಕೊಂಡ ವಕೀಲ ನಾಗೇಶ್, ಕಿಡ್ನ್ಯಾಪ್ ಸಂತ್ರಸ್ತೆ ರೇವಣ್ಣ ಅವರ ಸಂಬಂಧಿ ಅಲ್ಲ. ಮೊದಲು ಕೇಸ್ ದಾಖಲಿಸಿದ್ದ ಮಹಿಳೆ ಮಾತ್ರ ರೇವಣ್ಣರ ಸಂಬಂಧಿ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ನಲ್ಲಿನ ಸಂತ್ರಸ್ತೆ ಅಲ್ಲ. ಯಾರನ್ನಾದರೂ ಅಪಹರಿಸಿ, ಒತ್ತೆಯಾಳಾಗಿಟ್ಟುಕೊಂಡಲ್ಲಿ ಮಾತ್ರ ಸೆಕ್ಷನ್ 364ಎ ಆಗಬೇಕು. ಇಲ್ಲವಾದಲ್ಲಿ ಈ ರೀತಿ ಪ್ರಕರಣದಲ್ಲಿ ಸೆಕ್ಷನ್ 364ಎ ಸೆಕ್ಷನ್ ಹಾಕುವ ಅಗತ್ಯ ಇರಲ್ಲ. ಒತ್ತೆಯಾಳಾಗಿ ಇರಿಸಿಕೊಂಡು ದೌರ್ಜನ್ಯ ನಡೆಸಿ, ಕಿರುಕುಳ ನೀಡಿದರೆ ಅಪರಾಧ. ಪ್ರಾಣ ಹಾನಿ ಆಗುವಂತೆ ಹಲ್ಲೆ ಮಾಡುವುದು ಮಾತ್ರ ಅಪರಾಧ. ಇನ್ನು ವಿದೇಶದಲ್ಲಿರುವ ವ್ಯಕ್ತಿ ಕಿಡ್ನ್ಯಾಪ್ ಮಾಡಿಸಿದರೆ ಆಗ ಸೆಕ್ಷನ್ 365ಎ ಅನ್ವಯ ಆಗುತ್ತದೆ.
ಆದರೆ, ಈ ಕೆ.ಆರ್.ನಗರ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ 365ಎ ಅನ್ವಯ ಆಗಲ್ಲ. ಸಂತ್ರಸ್ತ ಮಹಿಳೆ ಎಚ್.ಡಿ. ರೇವಣ್ಣ ಅವರ ಮನೆಯಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಈ ಪ್ರಕರಣದಲ್ಲಿ ಕಿಡ್ನ್ಯಾಪ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ
ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ. ಆದರೂ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯಾಗುವ ಸೆಕ್ಷನ್‌ಗಳನ್ನು ಹಾಕಲಾಗಿದೆ. ಏನೇ ಆದರೂ ಈ ರೀತಿ ಪ್ರಕರಣದಲ್ಲಿ ಬೇಲ್ ಯಾಕೆ ನೀಡಬಾರದು? ಎಂದು ಕೆಲವು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೇಸ್ ಸ್ಟಡಿಗಳನ್ನು ಉಲ್ಲೇಖಿಸಿದರು. ಇನ್ನು ರೇವಣ್ಣ ವಿರುದ್ಧ ಪ್ರೈಮಾಫೇಸಿ ಸಾಬೀತಾಗುವ ಯಾವುದೇ ಆರೋಪವೂ ಇಲ್ಲ. ತಮಗೆ ಗೊತ್ತಿರುವವರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡರೆ ತಪ್ಪೇನು? ಸಂತ್ರಸ್ತೆಯನ್ನು ಭವಾನಿ ರೇವಣ್ಣ ಮನೆಗೆ ಕರೆಸಿಕೊಂಡ ಕ್ರಮಕ್ಕೆ ಸಮರ್ಥನೆ ಮಾಡಿದರು.
ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ 6 ದಿನವಾದರೂ ಸೂಕ್ತ ರೀತಿ ಹೇಳಿಕೆ ಪಡೆದಿಲ್ಲ. ಟ್ಯೂಷನ್‌ಗೆ ಹೋಗಿದ್ದ ಬಾಲಕನ ಕಿಡ್ನ್ಯಾಪ್ ಪ್ರಕರಣವನ್ನು ಇದೇ ವೇಳೆ ಉಲ್ಲೇಖಿಸಿದರು. ನಿಮ್ಮ ತಂದೆಗೆ ಅಪಘಾತವಾಗಿದೆ, ಆಸ್ಪತ್ರೆಯಲ್ಲಿದ್ದಾರೆಂದು ಹೇಳಿ ಅಪಹರಿಸಿದ್ದಾರೆ. ಬಾಲಕನನ್ನು ಅಪಹರಿಸಿದ ಬಳಿಕ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ಎಲ್ಲಿಯೂ ಹೇಳದಂತೆ ಬೆದರಿಕೆಯನ್ನು ಹಾಕಿದ್ದರು. ಆದರೆ, ಎಚ್.ಡಿ.ರೇವಣ್ಣ ಪ್ರಕರಣದಲ್ಲಿ ಯಾವುದೇ ರೀತಿ ಬೆದರಿಕೆ, ಬೇಡಿಕೆ ಇಲ್ಲ. ಹಾಗಾಗಿ ಎಚ್.ಡಿ.ರೇವಣ್ಣ ಅವರಿಗೆ ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದು ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು.
ತುಮಕೂರು ಕಿಡ್ನ್ಯಾಪ್ ಕೇಸ್ ಉಲ್ಲೇಖ
ಇದೇ ವೇಳೆ ತುಮಕೂರಿನ ಕಿಡ್ನ್ಯಾಪ್ ಪ್ರಕರಣವೊಂದನ್ನು ಉಲ್ಲೇಖಿಸಿ ನಾಗೇಶ್ ವಾದ ಮಾಡಿದ್ದಾರೆ. ಎಸ್. ರಮೇಶ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದ ತೀರ್ಪು ಉಲ್ಲೇಖ ಮಾಡಿದ ನಾಗೇಶ್, ಕಾನೂನುಬಾಹಿರವಾಗಿ ಒತ್ತೆಯಾಳಾಗಿ ಇರಿಸಿಕೊಂಡರೇ ಮಾತ್ರ ಅಪರಾಧ. ಆದರೆ, ಕೆ.ಆರ್.ನಗರ ಕಿಡ್ನ್ಯಾಪ್ ಪ್ರಕರಣದಲ್ಲಿ ಈ ರೀತಿ ಬೆದರಿಕೆ ಪ್ರಶ್ನೆ ಇಲ್ಲ. ಆರೋಪಿ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಬೇಲ್ ಬೇಡ. ಆಗ ಮಾತ್ರ ನ್ಯಾಯಾಲಯ ರೇವಣ್ಣರಿಗೆ ಜಾಮೀನು ತಿರಸ್ಕರಿಸುವ ಅವಕಾಶ ಇದೆ. ಆದರೆ, ಇಲ್ಲಿ ರೇವಣ್ಣ ವಿರುದ್ಧ ಯಾವುದೇ ರೀತಿಯ ಸಾಕ್ಷಿಗಳೇ ಕಾಣುತ್ತಿಲ್ಲ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಕಾಣುತ್ತಿಲ್ಲ. ಎಸ್‌ಐಟಿ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಸಿಆರ್‌ಪಿಸಿ 164 ಹೇಳಿಕೆ ದಾಖಲಿಸಿಲ್ಲ. ಆದರೂ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಇರುವ ಸೆಕ್ಷನ್ 364ಎ ಹಾಕಿದ್ದಾರೆ. ಆರೋಪಿತ ರೇವಣ್ಣ ವಿರುದ್ಧ ಸಾಕ್ಷಿಗಳೂ ಇಲ್ಲ, ಸಾಂದರ್ಭಿಕ ಸಾಕ್ಷ್ಯವೂ ಇಲ್ಲ ಎಂದು ನಾಗೇಶ್ ಮಾಹಿತಿ ನೀಡಿದರು.
ತೀರ್ಪಿನ ಪ್ರತಿಗಾಗಿ ವಾದ – ಪ್ರತಿವಾದ
ಎಸ್‌ಐಟಿ ಉಲ್ಲೇಖಿಸಿದ ತೀರ್ಪುಗಳಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಲಾಗಿತ್ತು ಆದರೆ ರೇವಣ್ಣ ಪ್ರಕರಣದಲ್ಲಿ ಬೆದರಿಕೆ ಎಲ್ಲಿ ಹಾಕಿದ್ದಾರೆ? ಯಾವ ಬೇಡಿಕೆ ಇದೆ..? ಎಸ್‌ಐಟಿ ಕೇಸ್ ಸ್ಟಡಿಗೆ ಕೌಂಟರ್ ಕೊಟ್ಟು ರೇವಣ್ಣ ಪರ ವಕೀಲ ನಾಗೇಶ್ ವಾದ ಮಂಡಿಸುತ್ತಾ, ಕೆ.ಆರ್.ನಗರ ಕಿಡ್ನ್ಯಾಪ್ ಕೇಸಲ್ಲಿ 364ಎ ಹಾಕಲು ಬೇಕಾದ ಬೇಸಿಕ್ ಅಂಶಗಳಿಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದರು. ಆದರೆ ಆ ಎಲ್ಲಾ ಪ್ರಕರಣಗಳಲ್ಲಿ ಬೆದರಿಕೆವೊಡ್ಡಿ ಹಣಕ್ಕಾಗಿ ಬೇಡಿಕೆ ಇರಿಸಲಾಗಿತ್ತು. ಇಲ್ಲಿ ದಾಖಲಾದ ಕಿಡ್ನ್ಯಾಪ್ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಆ ಆರೋಪಗಳಿಲ್ಲ ಎಂದು ವಾದಿಸಿದರು.
ಆಗ ಮಧ್ಯ ಪ್ರವೇಶ ಮಾಡಿದ ಜಯ್ನಾ ಕೊಠಾರಿ, ನೀವು ಉಲ್ಲೇಖಿಸುತ್ತಿರುವ ಪ್ರಕರಣಗಳ ತೀರ್ಪಿನ ಪ್ರತಿ ಕೊಡಿ ಎಂದು ಕೋರಿದರು. ಈ ನಡುವೆ ಎಸ್‌ಪಿಪಿ ಜಯ್ನಾ ಕೊಠಾರಿ ಹಾಗೂ ರೇವಣ್ಣ ವಕೀಲರ ಮಧ್ಯೆ ವಾದ ಪ್ರತಿವಾದ ನಡೆಯಿತು. ನೀವು ಕೇಳಿದ ಕೂಡಲೇ ಕೊಡಬೇಕು ಅಂತೇನಿಲ್ಲ ಎಂದು ಸಿ.ವಿ.ನಾಗೇಶ್ ಹೇಳಿದರು. ವರದಿಯಾಗಿರುವ ಪ್ರಕರಣಗಳನ್ನು ನೀವು ಓದಿಕೊಂಡಿರಬೇಕು ಎಂದು ನಾಗೇಶ್ ಕುಟುಕಿದರು. ಆದರೆ, ಯಾವ ಕೇಸ್ ಸ್ಟಡಿ ಉಲ್ಲೇಖಿಸುತ್ತೀರೋ ಅದರ ಪ್ರತಿಯನ್ನು ಕೊಡಿ ಎಂದು ಒತ್ತಾಯಿಸಿದರು.
ರೇವಣ್ಣ ವಿರುದ್ಧ ಆರೋಪಗಳೆಲ್ಲಾ ಊಹಾಪೋಹ, ರಾಜಕೀಯ ಪ್ರೇರಿತ. ಈ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಪರಿಗಣಿಸಬಾರದು. ರೇವಣ್ಣ 6 ಸಲ ಎಂಎಲ್‌ಎ ಆಗಿದ್ದವರು, ಕಾನೂನಿಗೆ ಸದಾ ತಲೆಬಾಗುತ್ತಾರೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ವಾದವನ್ನು ನಾಗೇಶ್ ಮುಕ್ತಾಯಗೊಳಿಸಿದರು.
ಮತ್ತೆ ಎಸ್‌ಪಿಪಿ ವಾದಕ್ಕೆ ಜಡ್ಜ್ ಅವಕಾಶ
ಸಿ.ವಿ.ನಾಗೇಶ್ ಪ್ರತಿವಾದಕ್ಕೆ ಮತ್ತೆ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಪ್ರಾರಂಭ ಮಾಡಿದರು. ಆಗ ಮಧ್ಯ ಪ್ರವೇಶ ಮಾಡಿದ ನ್ಯಾಯಾಧೀಶರು, ಮತ್ತೆ ಪ್ರತಿವಾದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದರು. ಆಗ ಜಯ್ನಾ ಕೊಠಾರಿ, ಅವಕಾಶ ಇಲ್ಲ. ಆದರೆ, 5 ನಿಮಿಷ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡರು. ಜಯ್ನಾ ಕೊಠಾರಿ ಮತ್ತೆ ವಾದ ಮಾಡಲು ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಮತ್ತೆ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಜಡ್ಜ್ ಅವಕಾಶ ನೀಡಿದರು. ಅಲ್ಲದೆ, ಎರಡೂ ರಿಮ್ಯಾಂಡ್ ಅಪ್ಲಿಕೇಷನ್ ಓದಲು ಹೇಳಿದರು.
ಮೇ 4ರಂದು ಸಂತ್ರಸ್ತೆ ರಕ್ಷಣೆ ಹಾಗೂ ಮೇ 5ರಂದೇ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಮೇ 5ರಂದೇ ಸಿಆರ್‌ಪಿಸಿ 161 ಅಡಿಯಲ್ಲಿ ಎಸ್‌ಐಟಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಯ್ನಾ ಕೊಠಾರಿ ಹೇಳಿದರು. ಆಗ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು, ಹೇಳಿಕೆ ದಾಖಲಿಸಿಕೊಂಡ ಬಗ್ಗೆ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಇದೆಯಾ? ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಎಲ್ಲಿ ಇದೆ ಓದಿ ಹೇಳಿ ಎಂದು ಕೇಳಿದರು. ಈ ವೇಳೆ ಎಸ್‌ಪಿಪಿಗೆ ಮಾಹಿತಿ ನೀಡುತ್ತಿದ್ದ ಎಸ್‌ಐಟಿ ಪೊಲೀಸರ ವಿರುದ್ಧ ಜಡ್ಜ್ ಗರಂ ಆದರು. ನಿಮಗೆ ಎಲ್ಲಿ ಬಂದು ಇನ್ಸ್‌ಟ್ರಕ್ಷನ್ ಕೊಡಬೇಕು ಅಂತಾ ಗೊತ್ತಾಗಲ್ವಾ? ಕೋರ್ಟ್‌ನಲ್ಲಾ ಬಂದು ಇನ್ಸ್‌ಟ್ರಕ್ಷನ್ ಕೊಡೋದು? ಎಂದು ಕೇಳಿದರು.
ಮತ್ತೆ ಲಿಖಿತ ವಾದ ಮಂಡಿಸಲು ಎಸ್‌ಪಿಪಿ ಜಯ್ನಾ ಕೊಠಾರಿ ಮನವಿ ಮಾಡಿದರು. ಆದಕ್ಕೆ ಪ್ರತಿಕ್ರಿಯಿಸಿದ ಜಡ್ಜ್ ಲಿಖಿತ ವಾದ ಇನ್ಯಾವಾಗ ಮಾಡ್ತೀರಾ? ನಾನು ಆದೇಶ ಪ್ರಕಟಿಸಲಿದ್ದೇನೆ ಎಂದು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಹೇಳಿದರು.