ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣದಲ್ಲಿ (Hassan Pen Drive Case) ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರಿಗೆ ಮಂಗಳವಾರ (ಮೇ 7) ಕೋರ್ಟ್‌ನಲ್ಲಿ ಸಣ್ಣ ಮಟ್ಟದ ಹಿನ್ನಡೆಯಾಗಿದೆ. ಆರೋಪಿ ಕಸ್ಟಡಿಯಲ್ಲಿರುವಾಗ ಜಾಮೀನು ಅರ್ಜಿ ವಿಚಾರಣೆ ಮಾಡಬಹುದೇ? ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಎಚ್.ಡಿ. ರೇವಣ್ಣ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದ – ಪ್ರತಿವಾದವನ್ನು ಆಲಿಸಿತು.
ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದ್ದು, ಈ ಪ್ರಕರಣದಲ್ಲಿ ಸುಖಾಸುಮ್ಮನೆ ತಮ್ಮ ಕಕ್ಷಿದಾರರನ್ನು ಸಿಲುಕಿಸಲಾಗಿದ್ದು, ಜಾಮೀನು ನೀಡಬೇಕು ಎಂದು ಕೋರಿದರು. ಇದಕ್ಕೆ ಮಧ್ಯಪ್ರವೇಶದ ಮಾಡಿದ ನ್ಯಾಯಾಧೀಶರು, ಆರೋಪಿ ಪೊಲೀಸ್ ವಶದಲ್ಲಿದ್ದಾಗ ಜಾಮೀನು ಅರ್ಜಿ ವಿಚಾರಣೆ ಮಾಡಲು ಹೇಗೆ ಸಾಧ್ಯ? ಎಂದು ನಾಗೇಶ್‌ಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಒಂದು ವೇಳೆ ಬೇಲ್ ನೀಡಿದರೆ ಪೊಲೀಸ್ ಕಸ್ಟಡಿಯನ್ನು ಹೇಗೆ ಮುಂದುವರಿಸಲು ಸಾಧ್ಯ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು.
ಅದಕ್ಕೆ ವಾದ ಮಂಡಿಸಿದ ಸಿ.ವಿ. ನಾಗೇಶ್, ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ಜಾಮೀನು ನೀಡಬಹುದು. ಈ ಬಗ್ಗೆ ಇರುವ ಕಾನೂನಿನ ಬಗ್ಗೆ ಹಾಗೂ ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಾಲಯದ ಗಮನಕ್ಕೆ ತಂದರು. ಈ ವೇಳೆ ಎಸ್‌ಐಟಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಎಸ್ಐಟಿಯ ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ನೋಟಿಸ್ ಜಾರಿ ಮಾಡಿದ್ದು, ಪೊಲೀಸ್ ಕಸ್ಟಡಿಯಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದೇ ಎಂಬ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಹೀಗಾಗಿ ವಿಚಾರಣೆಯನ್ನು ನಾಳೆಗೆ (ಮೇ 8) ಮುಂದೂಡಿಕೆ ಮಾಡಲಾಗಿದೆ.
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಇದ್ದರೆ ಡಿಲೀಟ್ ಮಾಡಿ
ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿದೆಯೇ? ಇದ್ದರೆ ಅದು ದೊಡ್ಡ ಅಪರಾಧವಾಗಿದೆ. ಈಗಲೇ ಅದನ್ನು ಡಿಲೀಟ್ ಮಾಡಿಬಿಡಿ. ಒಂದು ವೇಳೆ ನೀವು ಡಿಲೀಟ್ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಅಧಿಕೃತ ಪ್ರಕಟಣೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಈಗ ದೇಶಾದ್ಯಂತ ವೈರಲ್ ಆಗಿದೆ. ಈಗಾಗಲೇ ಈ ಪ್ರಕರಣ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚನೆ ಮಾಡಿದೆ. ಇನ್ನು ವಿಡಿಯೊದಲ್ಲಿ ಹಾಸನ ಸೇರಿದಂತೆ ಹಲವು ಕಡೆಯ ಮಹಿಳೆಯರು ಇದ್ದಾರೆನ್ನಲಾಗಿದ್ದು, ಅವರ ಮುಖವನ್ನು ಬ್ಲರ್ ಮಾಡಲಾಗಿಲ್ಲ. ಹೀಗಾಗಿ ಈ ಕೇಸ್ ಮತ್ತಷ್ಟು ಜಟಿಲವಾಗಿದೆ.
ಈ ಸಂಬಂಧ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದು, ಅಶ್ಲೀಲ ವಿಡಿಯೊವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೆ, ಅಂಥ ವ್ಯಕ್ತಿಗಳನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Prajwal Revanna Case: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪೋಸ್ಟರ್ ವಾರ್
ಡಿಲೀಟ್ ಮಾಡಿ ಕಾನೂನು ಕ್ರಮದಿಂದ ಪಾರಾಗಿ
ಅಶ್ಲೀಲ ವಿಡಿಯೊ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.