ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ಸಂತ್ರಸ್ತೆಯನ್ನು ಕಿಡ್ನ್ಯಾಪ್ ಮಾಡಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮೂರನೇ ದಿನವೂ ಎಸ್ಐಟಿ ವಿಚಾರಣೆಯನ್ನು ಎದುರಿಸಿದ್ದಾರೆ. ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯೊಂದಿಗೆ ಮುಖಾಮುಖಿಯಾಗಿ ವಿಚಾರಣೆ ಎದುರಿಸಲು ಇಂದು (ಮಂಗಳವಾರ – ಮೇ 7) ಎಸ್ಐಟಿ ಪ್ಲ್ಯಾನ್ ಮಾಡಿತ್ತು. ಆದರೆ, ಇದಕ್ಕೆ ಎಚ್.ಡಿ. ರೇವಣ್ಣ ನಿರಾಕರಣೆ ಮಾಡಿದ್ದಾರೆನ್ನಲಾಗಿದೆ.
ಮುಖಾಮುಖಿ ವಿಚಾರಣೆಗೆ ಎಚ್.ಡಿ. ರೇವಣ್ಣ ಅವರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಎರಡನೇ ಆರೋಪಿ ಸತೀಶ್ ಬಾಬುವನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.
ಮೂರನೇ ದಿನವೂ ರೇವಣ್ಣಗೆ ಡ್ರಿಲ್
ಕಿಡ್ನ್ಯಾಪ್ ಕೇಸಲ್ಲಿ ಬಂಧಿತರಾಗಿ ಎಸ್ಐಟಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮೂರನೇ ದಿನವೂ ಎಸ್ಐಟಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ಎರಡು ದಿನಗಳಿಂದ ಸಹ ರೇವಣ್ಣ ಒಂದೇ ಮಾತನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಅಪಹರಣ ಬಗ್ಗೆ ನನಗೇನೂ ಗೊತ್ತಿಲ್ಲ, ನಾನು ಕಿಡ್ನ್ಯಾಪ್ ಮಾಡಿಸಿಲ್ಲ ಎಂಬ ಹೇಳಿಕೆಯನ್ನಷ್ಟೇ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮಂಗಳವಾರ ಎರಡನೇ ಆರೋಪಿಯಾದ ಸತೀಶ್ ಬಾಬುವನ್ನು ರೇವಣ್ಣ ಎದುರು ಹಾಜರುಪಡಿಸಿ ಮುಖಾಮುಖಿ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನ ಮಾಡಿದ್ದರು.
ಆದರೆ, ಎರಡನೇ ಆರೋಪಿಯ ಮುಂದೆ ಮುಖಾಮುಖಿ ವಿಚಾರಣೆಗೆ A1 ಆರೋಪಿಯಾದ ಎಚ್.ಡಿ. ರೇವಣ್ಣ ಅವರು ಒಪ್ಪಲೇ ಇಲ್ಲ ಎನ್ನಲಾಗಿದೆ. ಹೀಗಾಗಿ ಎರಡನೇ ಆರೋಪಿಯನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಈ ವೇಳೆ ಎಸ್ಐಟಿ ಹಲವು ಪ್ರಶ್ನೆಗಳನ್ನು ಸತೀಶ್ ಮುಂದಿಟ್ಟಿದೆ. ಸಂತ್ರಸ್ತ ಮಹಿಳೆಯನ್ನು ಯಾರ ಸೂಚನೆ ಮೇರೆಗೆ ಕರೆದುಕೊಂಡು ಹೋಗಿದ್ದಿರಿ? ಕಿಡ್ನ್ಯಾಪ್ ಮಾಡುವ ಉದ್ದೇಶದಿಂದಲೇ ಸಂತ್ರಸ್ತೆಯನ್ನು ಕರೆದೊಯ್ದಿದ್ದಾ? ಕಿಡ್ನ್ಯಾಪ್ ಮಾಡಿ ಕಾಳೇನಹಳ್ಳಿಯ ತೋಟದ ಮನೆಯಲ್ಲಿಡಲು ಯಾರು ಸೂಚನೆ ನೀಡಿದ್ದರು? ಹೀಗೆ ಹಲವು ಪ್ರಶ್ನೆಗಳನ್ನು ಸತೀಶ್ ಬಾಬುಗೆ ಎಸ್ಐಟಿ ಅಧಿಕಾರಿಗಳು ಕೇಳಿದ್ದಾರೆ. ಈ ವೇಳೆ ಆರೋಪಿ ನೀಡಿದ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಹಾಗೂ ವಿಡಿಯೋಗ್ರಫಿ ಮೂಲಕ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸತೀಶ್ ಹೇಳಿಕೆ ಮೇಲೆ ರೇವಣ್ಣ ವಿಚಾರಣೆ
ಈಗ ಸತೀಶ್ ಬಾಬು ನೀಡುವ ಹೇಳಿಕೆಯನ್ನು ಆಧರಿಸಿ ಎಚ್.ಡಿ. ರೇವಣ್ಣ ಅವರನ್ನು ವಿಚಾರಣೆ ನಡೆಸಲು ಎಸ್‌ಐಟಿ ತೀರ್ಮಾನ ಮಾಡಿದೆ. ಸತೀಶ್ ಬಾಬು ನಿಮ್ಮ ವಿರುದ್ಧವಾಗಿ ಇಂಥ ಹೇಳಿಕೆಯನ್ನು ಕೊಟ್ಟಿದ್ದಾನೆ. ಈ ಪ್ರಕರಣದ ಬಗ್ಗೆ ಏನೆಲ್ಲ ಹೇಳಿದ್ದಾನೆ ಎಂಬುದಾಗಿ ಪ್ರಶ್ನೆಗಳನ್ನು ಸಿದ್ಧಪಡಿಸಿ ರೇವಣ್ಣ ಅವರಿಗೆ ಕೇಳುವ ಸಾಧ್ಯತೆ ಇದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್ ನೋಟೀಸ್! ಏನಿದರ ಅಗತ್ಯ?
ರೇವಣ್ಣಗೆ ಹರ್ನಿಯಾ?
ಇದರ ಮಧ್ಯೆ ಎದೆ ಉರಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವ ಎಚ್.ಡಿ. ರೇವಣ್ಣ ಅವರನ್ನು ಮೊದಲಿಗೆಬೌರಿಂಗ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರೇವಣ್ಣ ಅವರಲ್ಲಿ ಮೊದಲು ಹರ್ನಿಯಾ ಲಕ್ಷಣ ಕಂಡುಬಂದಿತ್ತು ಎನ್ನಲಾಗಿದ್ದು, ಈ ಬಗ್ಗೆಯೂ ತಪಾಸಣೆಯನ್ನು ನಡೆಸಲಾಗಿದೆ. ಅಲ್ಲಿಯೂ ಸಹ ವೈದ್ಯರು ತಪಾಸಣೆ ನಡೆಸಿ ರೇವಣ್ಣ ಆರೋಗ್ಯವಂತರಾಗಿದ್ದಾರೆ ಎಂದು ಹೇಳಿದ್ದಾರೆ. ರೇವಣ್ಣರನ್ನ ಮೆಡಿಕಲ್‌ಟೆಸ್ಟ್ ಗೆ ಒಳಪಡಿಸಿದ್ದು, ವೈದ್ಯಕೀಯ ತಪಾಸಣೆ ವೇಳೆ ಹಾರ್ನಿಯ ಲಕ್ಷಣ ಪತ್ತೆಯಾಗಿದ್ದು, ರೇವಣ್ಣ ಎದೆ ನೋವು ಇದೆ ಎಂದು ಹೇಳಿದ ಹಿನ್ನೆಲೆ ಬೌರಿಂಗ್ ಆಸ್ಪತ್ರೆ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲುಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಎಸ್ಐಟಿಅಧಿಕಾರಿಗಳು ರೇವಣ್ಣನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.