Site icon Vistara News

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ

prajwalrevanna case hassan protest

ಹಾಸನ: ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣರನ್ನು (Hassn MP Prajwal Revanna Case) ವಿಮಾನ ನಿಲ್ದಾಣದಲ್ಲೇ ಬಂಧಿಸಬೇಕು ಹಾಗೂ ವಿಡಿಯೋ ಹಂಚಿದವರನ್ನೂ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದ ಕಾರ್ಯಕರ್ತರು ಇಂದು ಹಾಸನದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ಹೋರಾಟಗಾರ ಎಸ್.ಆರ್ ಹಿರೇಮಠ. “ಹಾಸನದ ಈ ಹೋರಾಟ ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಮಹಿಳೆಯರ ಘನತೆ ಕಡೆಗೆ ಗೌರವದ ಕಡೆಗಿನ ನಡಿಗೆಯಾಗಿದೆ” ಎಂದರು. “ದೇವೇಗೌಡರ ಕುಟುಂಬದ ಪಾಳೆಗಾರಿ ಮನಸ್ಥಿತಿಯ ವಿರುದ್ಧದ ಹೋರಾಟ ಇದು. ಅವರ ದರ್ಪದಿಂದ ಆಗುವ ಇಂತಹ ಕೃತ್ಯ ಕೊನೆಗಾಣಿಸೊ ಹೋರಾಟ ಇದಾಗಲಿ. ಇದಕ್ಕೆ ನ್ಯಾಯ ಪಡೆಯಲು ನಿರಂತರ ಹೋರಾಟ ಬೇಕಿದೆ. ಈ ಹೋರಾಟದಲ್ಲಿ ನಾವು ನಿಮ್ಮೊಟ್ಟಿಗೆ ಇದ್ದೇವೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪಾಳೆಗಾರಿಕೆ ವಿರುದ್ಧ ಹೋರಾಟ ನಡೆಯಿತು. ಈಗ ಹಾಸನದಲ್ಲಿ ಈ ದಬ್ಬಾಳಿಕೆ ಕೊನೆಗಾಣಿಸಲು ಹೋರಾಟ ಆರಂಭ ಆಗಿದೆ. ನೊಂದವರು ಧೈರ್ಯದಿಂದ ಹೊರ ಬಂದು ಮಾತನಾಡುವಂತೆ ಆಗಲಿ. ಸಿಎಂ, ಡಿಸಿಎಂ, ಗೃಹ ಸಚಿವರೇ ಈಗಲಾದರೂ ಹಾಸನಕ್ಕೆ ಬನ್ನಿ” ಎಂದು ಆಗ್ರಹಿಸಿದರು.

“ನಾವೆಲ್ಲಾ ಇಂದು‌ ಇಲ್ಲಿ ಸೇರಿರುವದು ಲೈಂಗಿಕ ದಬ್ಬಾಳಿಕೆಯನ್ನು ಖಂಡಿಸಿ, ನೊಂದ ಮಹಿಳೆಯರಿಗೆ ಧೈರ್ಯ ಕೊಡುವುದಕ್ಕೆ ಅಂತ ಬಂದಿದ್ದೇವೆ. ಹಣಬಲ, ಅಧಿಕಾರ ಮದದಿಂದ ನಡೆಸಿರುವ ದೌರ್ಜನ್ಯ ಇನ್ಮುಂದೆ ನಡೆಯೋದಿಲ್ಲ. ನಾನು ದೂರದ ಉತ್ತರಪ್ರದೇಶದಿಂದ ಬಂದಿದ್ದೇನೆ. ಈ ದೌರ್ಜನ್ಯದ ವಿರುದ್ಧ ದೇಶದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂತಹ ಪ್ರಕರಣಗಳ ಆರೋಪಿಗಳಿಗೆ ರಕ್ಷಣೆ ನೀಡುತ್ತಿರೋ ಕೇಂದ್ರದ ಸರ್ಕಾರವನ್ನು ಕಿತ್ತೊಗೆಯುತ್ತೇವೆ” ಎಂದು ಹೋರಾಟಗಾರ್ತಿ ಸುಭಾಷಿಣಿ ಅಲಿ ಕಿಡಿ ಕಾರಿದರು.

“ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳಾದರೂ ಮಹಿಳೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಬಂದಿದೆ. ಪ್ರಜ್ವಲ್ ರೇವಣ್ಣ, ರೇವಣ್ಣ ಸೇರಿ ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರನ್ನೂ ಬಂಧಿಸಬೇಕು. ಅವರಿಗೆ ಯಾವುದೇ ಕಾರಣಕ್ಕೂ ಬೇಲ್ ಕೊಡಬಾರದು. ಉಳ್ಳವರು ಅಂತ ಅವರನ್ನು ಸರ್ಕಾರ ಯಾವುದೇ ಕಾರಣಕ್ಕೂ ರಕ್ಷಣೆ ಮಾಡೋದಕ್ಕೆ ಮುಂದಾಗಬಾರದು. ಅಸಹಾಯಕ ಮಹಿಳೆಯರ ಪರ‌ವಾಗಿ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ. ಚುನಾವಣೆಯಲ್ಲಿ ಮತ ಕೊಟ್ಟು ಜನಸೇವೆಯನ್ನು ಮಾಡೋದಕ್ಕೆ ಕಳುಹಿಸಿದ್ದೇವೆ. ಆದ್ರೆ ನೀವು ಮಾಡಿದ್ದು ಏನು? ಅಧಿಕಾರಿಗಳನ್ನೂ ಬಿಡಲಿಲ್ಲ, ಕಾರ್ಯಕರ್ತರನ್ನೂ ಬಿಡಲಿಲ್ಲ, ಸಹಾಯ ಕೇಳಿ ಬಂದವರನ್ನೂ ಬಿಡಲಿಲ್ಲ. ಕೊನೆಗೆ ನಿಮ್ಮ ತಾಯಿಯಷ್ಟು ವಯಸ್ಸಾದವರನ್ನೂ ಬಿಡಲಿಲ್ಲ” ಎಂದು ಅವರು ಸುಭಾಷಿಣಿ ಗುಡುಗಿದರು.

ಹಾಸನದಲ್ಲಿ ನಡೆದ ಬೃಹತ್‌ ʼಹಾಸನ ಚಲೋʼ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯದ ಹಲವೆಡೆಗಳಿಂದ ಬಂದ 113 ಸಂಘಟನೆಗಳ ಸುಮಾರು 10 ಸಾವಿರ ಪ್ರತಿನಿಧಿಗಳು ಭಾಗವಹಿದರು. ಹಾಸನದ ಹೇಮಾವತಿ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿಯ ಹೊಸ ಬಸ್‌ನಿಲ್ದಾಣ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿದ್ದಾರೆ. ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಲೇಖಕಿಯರಾದ ಬಾನು ಮುಷ್ತಾಕ್‌, ರೂಪ ಹಾಸನ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಮಹಿಳೆಯರು, ವಿದ್ಯಾರ್ಥಿಗಳು, ಸಾಹಿತಿಗಳು, ಬುದ್ಧಿಜೀವಿಗಳು, ಕಲಾವಿದರನ್ನು ಒಳಗೊಂಡ ಹಲವಾರು ಸಂಘಟನೆಗಳು ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆಗೆ ಆಗಮಿಸಿದ್ದಾರೆ. ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಮಂಡ್ಯ ಮತ್ತು ಚಿಕ್ಕಮಗಳೂರುಗಳಿಂದ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯನ್ನು ವಿರೋಧಿಸಿ ಹಾಸನ ​​ಚಲೋ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ಹೇಗಿರುತ್ತೆ ಇಂದು ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ʼಸ್ವಾಗತʼ?

Exit mobile version