ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ ಎನ್ನಲಾದ ಮೈಸೂರಿನ ಕೆ.ಆರ್. ನಗರದ ಮಹಿಳೆಯೊಬ್ಬರನ್ನು ಕಿಡ್ನ್ಯಾಪ್ ಮಾಡಿದ್ದಾರೆಂಬ ದೂರಿನ ಮೇಲೆ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಬಂಧಿತರಾಗಿದ್ದಾರೆ. ಅವರು ಜಾಮೀನು ಸಿಗದೆ ಪರದಾಟ ನಡೆಸುತ್ತಿರುವ ಈ ಹೊತ್ತಿನಲ್ಲಿ ಅಪಹರಣ ನಡೆದಿದೆ ಎನ್ನಲಾದ ಸಂತ್ರಸ್ತ ಮಹಿಳೆಯ ವಿಡಿಯೊ ವೈರಲ್ ಆಗಿದೆ. ಆಕೆ, ನನ್ನನ್ನು ಯಾರು ಅಪಹರಣ ಮಾಡಿಲ್ಲ. ನನ್ನ ಮಗ ತಪ್ಪು ತಿಳಿದು ದೂರು ಕೊಟ್ಟಿದ್ದಾನೆ ಎಂಬ ಹೇಳಿಕೆಯು ವಿಡಿಯೊದಲ್ಲಿದೆ.
ಈಗಾಗಲೇ ಕಿಡ್ನ್ಯಾಪ್ ಪ್ರಕರಣದಲ್ಲಿ ಬಂಧಿತರಾಗಿರುವ ಎಚ್.ಡಿ. ರೇವಣ್ಣ ಅವರು ತಾವು ಕಿಡ್ನ್ಯಾಪ್ ಮಾಡಿಲ್ಲ ಎಂದೇ ಹೇಳಿಕೊಂಡು ಬಂದಿದ್ದಾರೆ. ಈಗ ಸಂತ್ರಸ್ತೆಯ ವಿಡಿಯೊ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರೇವಣ್ಣ ಪರ ವಕೀಲರು ತಮ್ಮ ಕಕ್ಷಿದಾರರನ್ನು ವಿನಾಕಾರಣ ಟಾರ್ಗೆಟ್ ಮಾಡಿದ್ದು, ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೆ, ಎಸ್‌ಐಟಿ ತನಿಖಾ ಪ್ರಕ್ರಿಯೆಯೇ ಅನುಮಾನ ಮೂಡಿಸುವಂತಿದೆ ಎಂದು ವಾದ ಮಂಡಿಸಿದ್ದರು. ಈಗ ಈ ವಿಡಿಯೊವನ್ನೇ ಆಧಾರವಾಗಿಟ್ಟುಕೊಂಡು ಕೋರ್ಟ್ ಮುಂದೆ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ.
ಏನಿದು ಕೇಸ್?
ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ನಡೆಸಿದ್ದಾರೆನ್ನಲಾದ ಮಹಿಳೆ ಮೈಸೂರಿನ ಕೆ.ಆರ್. ನಗರ ನಿವಾಸಿಯಾಗಿದ್ದಾರೆ. ಆದರೆ, ಇವರನ್ನು ಸಾಕ್ಷಿ ನಾಶಕ್ಕಾಗಿ ಎಚ್.ಡಿ. ರೇವಣ್ಣ ಹಾಗೂ ಅವರ ಆಪ್ತ ಸತೀಶ್ ಬಾಬಣ್ಣ ಅಪಹರಣ ಮಾಡಿದ್ದಾರೆ ಎಂದು ಕೆ.ಆರ್. ನಗರದಲ್ಲಿ ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಂತ್ರಸ್ತೆಯ ವಿಡಿಯೊ ರಿಲೀಸ್ ಆಗಿದೆ. ಇದರಲ್ಲಿ ಮಹಿಳೆಯು ಅಪಹರಣ ಪ್ರಕರಣಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.
ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ ಎಂದ ಮಹಿಳೆ!
“ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ, ನಾನು ಎಲ್ಲಿಯೂ ಹೋಗಿಲ್ಲ. ನನ್ನ ಸಂಬಂಧಿಕರ ಮನೆಯಲ್ಲಿದ್ದೇನೆ. ರೇವಣ್ಣ ಆಗಲಿ, ಪ್ರಜ್ವಲ್ ರೇವಣ್ಣ ಆಗಲಿ, ಭವಾನಿ ಅಕ್ಕಾ ಆಗಲಿ, ಸತೀಶ್ ಬಾಬಾಣ್ಣ ಆಗಲಿ ಯಾರಿಂದಲೂ ತೊಂದರೆ ಆಗಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಂಡು ಕಳಿಸಿಕೊಟ್ಟಿದ್ದಾರೆ. ನಾನು ಆರಾಮಾಗಿದ್ದೇನೆ. ಸಂಬಂಧಿಕರ ಮನೆಯಲ್ಲಿ ಟಿವಿ ನೋಡುವಾಗ ವಿಚಾರ ಗೊತ್ತಾಯಿತು. ಮೊಬೈಲ್‌ನಲ್ಲಿ ಬಂದ ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ. ಮನೆಯ ಬಳಿ ಯಾರು ಗಾಬರಿ ಆಗೋದು ಬೇಡ. ನಾನು ಸುರಕ್ಷಿವಾಗಿದ್ದೇನೆ. ಎಲ್ಲರೂ ಆರಾಮಾಗಿರಿ. ನಾಲ್ಕು ದಿನ ಸಂಬಂಧಿಕರ ಮನೆಗೆ ಹೋಗಿದ್ದೆ. ವಾಪಸ್ ಬರುತ್ತೇನೆ. ಎಲ್ಲಿ ಯಾರಿಗೆ ಮಾಹಿತಿ ಕೊಡಬೇಕೋ ಕೊಡುತ್ತೇನೆ. ಯಾರು ಮನೆ ಹತ್ತಿರ ಹೋಗಬೇಡಿ, ಪೊಲೀಸ್‌ನವರು ಟಾರ್ಚರ್ ಕೊಡಬೇಡಿ. ಎಲ್ಲರೂ ಗಾಬರಿಯಾಗುತ್ತಾರೆ. ನಾವು ಕೂಲಿ ಮಾಡಿಕೊಂಡು ಇರುವವರು ಹೊಟ್ಟೆ ಮೇಲೆ ಹೊಡಿಯಬೇಡಿ. ಪೊಲೀಸಿನವರು ಮನೆ ಬಳಿ ಬಂದರೆ ಅಕ್ಕಪಕ್ಕದವರು ಏನೆಂದು ಕೊಳ್ಳುವುದಿಲ್ಲ. ಏನಾದರೂ ತೊಂದರೆಯಾದರೆ ನಾನೇ ಬಂದು ಹೇಳಿಕೆ ಕೊಡ್ತೇನೆ. ನನಗಾಗಲಿ, ಕುಟುಂಬದವರಿಗೆ ಆಗಲಿ, ಗಂಡನಿಗಾಗಲೀ ಏನಾದರೂ ತೊಂದರೆಯಾದರೆ ನೀವೇ ಜವಾಬ್ದಾರರು. ನನ್ನ ಮಗ ಗೊತ್ತಿಲ್ಲದೆ ಹೀಗೆ ಮಾಡಿಬಿಟ್ಟಿದ್ದಾನೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನಾನಾಗಿಯೇ ಸಂಬಂಧಿಕರ ಮನೆಗೆ ಬಂದಿದ್ದೇನೆ” ಎಂದು ಸಂತ್ರಸ್ತೆ ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ವಿಡಿಯೊ ಮಾಡಿದ್ದು ಯಾರು?
ಸದ್ಯ ಎಸ್‌ಐಟಿ ವಶದಲ್ಲಿರುವ ಸಂತ್ರಸ್ತ ಮಹಿಳೆಯ ಈ ವಿಡಿಯೊವನ್ನು ಮಾಡಿದ್ದು ಯಾರು? ರಿಲೀಸ್ ಮಾಡಿದ್ದು ಯಾರು? ಎಂಬ ಪ್ರಶ್ನೆ ಈಗ ಎಸ್‌ಐಟಿಗೆ ತಲೆನೋವಾಗಿ ಕಾಡುತ್ತಿದೆ. ಹಾಗಾದರೆ, ತಾವು ವಶಕ್ಕೆ ಪಡೆಯುವ ಮೊದಲೇ ಈ ವಿಡಿಯೊವನ್ನು ಮಾಡಲಾಗಿತ್ತಾ? ಆದರೆ, ಮಹಿಳೆಯನ್ನ ಎಲ್ಲಿ ಇರಿಸಿ ಈ ವಿಡಿಯೊ ಮಾಡಲಾಗಿದೆ? ಈ ವಿಡಿಯೊವನ್ನು ಯಾವ? ಯಾರ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ. ಈಕೆಯೇ ಆ್ಯಂಡ್ರಾಯ್ಡ್ ಮೊಬೈಲ್ ಅನ್ನು ಬಳಕೆ ಮಾಡುತ್ತಿದ್ದರೇ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ತನಿಖೆ ನಡೆಸಬೇಕಿದೆ.