Site icon Vistara News

Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ 196 ದೇಶಗಳಿಗೆ ಇಂಟರ್‌ಪೋಲ್‌ ಮೆಸೇಜ್‌; ಎಲ್ಲೇ ಕಂಡರೂ ಸಿಗುತ್ತೆ ಮಾಹಿತಿ!

Prajwal Revanna Case

ಬೆಂಗಳೂರು: ಲೈಂಗಿಕ ಹಗರಣದ (Pen Drive Case) ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna case) ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್‌ (Blue Corner Notice) ಜಾರಿ ಮಾಡಲು ಎಸ್ಐಟಿ (SIT) ಅಧಿಕಾರಿಗಳು ಮಾಡಿದ್ದ ಮನವಿಗೆ ಸ್ಪಂದಿಸಿರುವ ಸಿಬಿಐ (CBI), ಈ ಕುರಿತು ಇಂಟರ್‌ಪೋಲ್‌ನಿಂದ (Interpol) ಮೂಲಕ 196 ದೇಶಗಳಿಗೆ ಮೆಸೇಜ್‌ ರವಾನೆ ಮಾಡಲಾಗಿದೆ. ಹೀಗಾಗಿ ಪ್ರಜ್ವಲ್‌ ಎಲ್ಲಿಯೇ ಕಂಡರೂ, ಯಾವ ದೇಶದಿಂದ ಯಾವ ದೇಶಕ್ಕೆ ಹೋದರೂ ಎಸ್‌ಐಟಿಗೆ ಮಾಹಿತಿ ಸಿಗಲಿದೆ.

ಈ ಸಂಬಂಧ ಎಸ್‌ಐಟಿ ಅಧಿಕಾರಿಗಳಿಗೆ ಇಂಟರ್‌ಪೋಲ್‌ನಿಂದ ಮಾಹಿತಿ ಬಂದಿದೆ. ಹೀಗಾಗಿ ಇನ್ನು ಮುಂದೆ ಎಸ್‌ಐಟಿ ಸಹ ಪ್ರಜ್ವಲ್‌ ವಿರುದ್ಧ ಕಾನೂನು ಸಮರ ಸಾರಲು ಹೆಚ್ಚಿನ ಅನುಕೂಲವಾದಂತೆ ಆಗಲಿದೆ. ಅಲ್ಲದೆ, ಅವರ ಪ್ರತಿ ಚಲನವಲನಗಳು, ಸಂಚಾರದ ಮಾಹಿತಿಗಳು ಲಭ್ಯವಾಗಲಿವೆ.

ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಬ್ಲ್ಯೂ ಕಾರ್ನರ್ ನೋಟಿಸ್‌ ಅನ್ನು ಜಾರಿಗೊಳಿಸಲಾಗುತ್ತದೆ. ಆರೋಪಿ ಬಗ್ಗೆ ಸುಳಿವು ಸಿಕ್ಕ ಬಳಿಕ ಆ ಮಾಹಿತಿಯನ್ನು ಸಿಐಡಿಗೆ ಸಿಬಿಐ ನೀಡಲಿದೆ. ಮತ್ತೆ ಇದನ್ನು ಆಧರಿಸಿ ಕೋರ್ಟ್‌ಗೆ ಮಾಹಿತಿ ‌ನೀಡಿ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್ಐಟಿ ಮನವಿ ಮಾಡಬೇಕಿದೆ. ಸಿಬಿಐ, ಇಂಟರ್‌ಫೋಲ್‌ಗೆ ಮನವಿ ಮಾಡಿ ರೆಡ್ ಕಾರ್ನರ್ ನೋಟಿಸ್ ಪಡೆಯಲಿದೆ.

ಸದ್ಯ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿಯ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಯಾವ ದೇಶದಲ್ಲಿ ಇದ್ದಾರೆ ಎನ್ನುವುದು ಪತ್ತೆಯಾಗಬೇಕಿದೆ. ಈ ಬಗ್ಗೆ ಸಿಬಿಐಗೆ ಈಗಾಗಲೇ ಮನವಿ ಮಾಡಲಾಗಿದೆ. ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಸಿಬಿಐಗೆ ಮನವಿ ಮಾಡಲಾಗಿದೆ. ನಿನ್ನೆಯವರೆಗೂ ಪ್ರಜ್ವಲ್‌ ಜರ್ಮನಿಯಲ್ಲಿ ಇದ್ದರು ಎಂಬ ಮಾಹಿತಿ ಇತ್ತು. ನಿನ್ನೆ ದುಬೈಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಪ್ರಜ್ವಲ್‌ ತಮ್ಮಲ್ಲಿರುವ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಬಳಸಿ ವಿದೇಶಯಾನ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

ಬ್ಲೂ ಕಾರ್ನರ್ ನೊಟೀಸ್ ಜಾರಿಯಾದ ಬಳಿಕ ಇಂಟರ್‌ಪೋಲ್ ಇತರ ಕಡೆಗಳಿಗೂ ಆರೋಪಿಯ ಮಾಹಿತಿಯನ್ನು ಕಳಿಸಿ, ಆರೋಪಿಯ ನೆಲೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಯಾವ ದೇಶದಲ್ಲಿ ಇದ್ದಾರೆ, ಎಲ್ಲಿ ಲೊಕೇಟ್ ಆಗಿದ್ದಾರೆ ಅನ್ನುವ ಚಲನವಲನ ಪತ್ತೆ ಮಾಡುತ್ತಾರೆ. ಬಳಿಕ ಸಿಬಿಐಗೆ ಆರೋಪಿಯ ಚಲನವಲನ ಬಗ್ಗೆ ಮಾಹಿತಿ ನೀಡುತ್ತಾರೆ. ಸಿಬಿಐ ಮೂಲಕ ಎಸ್ಐಟಿಗೆ ಪ್ರಜ್ವಲ್ ಎಲ್ಲಿದ್ದಾರೆ ಅನ್ನುವ ಮಾಹಿತಿ ಸಿಗುತ್ತದೆ. ಹೀಗಾಗಿ ಸುಳಿವು ಪಡೆಯಲು ಈ ನೋಟಿಸ್‌ ಮುಖ್ಯವಾಗಿದೆ.

ಇನ್ನಷ್ಟು ಸಿಬ್ಬಂದಿ

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಇನ್ನಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತ್ತೆ ಎಂಟು ಮಂದಿ ಅಧಿಕಾರಿ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಮೂವರು ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಸಿಬ್ಬಂದಿ ಸೇರಿದಂತೆ ಐವರು ಸಿಬ್ಬಂದಿ ನಿಯೋಜಿಸಲಾಗಿದ್ದು, ಕೂಡಲೇ ಸಿಐಡಿ ಕಚೇರಿಯ ಎಸ್ಐಟಿಯಲ್ಲಿ ವರದಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಓರ್ವ ಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ ಗಳು, ಒರ್ವ ಸಬ್ ಇನ್ಸ್ಪೆಕ್ಟರ್ ಹಾಗೂ ನಾಲ್ವರು ಸಿಬ್ಬಂದಿ ಸೇರಿ ಎಂಟು ಜನರ ನೇಮಕ ಮಾಡಲಾಗಿದೆ.

ರೇವಣ್ಣ ಮೇಲೂ ಲುಕೌಟ್‌ ನೋಟಿಸ್‌

ಎಚ್‌.ಡಿ. ರೇವಣ್ಣ (HD Revanna) ವಿರುದ್ಧವೂ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ದೇಶ ಬಿಟ್ಟು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ (Lookout Notice) ಜಾರಿ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಎಚ್.ಡಿ. ರೇವಣ್ಣ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್‌ ಅನ್ನು ಜಾರಿ ಮಾಡಿದ್ದಾರೆ.

ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್‌ ಕೇಸ್‌ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Prajwal Revanna Case: ನಾಳೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಜೈಲಾ? ಬೇಲಾ?

ಇದರ ಜತೆಗೆ ರೇವಣ್ಣ ಅವರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್‌ ನೀಡುತ್ತಲೇ ಬರಲಾಗಿದೆ. ಇಷ್ಟಾದರೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದೆ.

Exit mobile version