ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಆರ್. ನಗರದ ಸಂತ್ರಸ್ತೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪ ಮೇಲೆ ಬಂಧಿತನಾಗಿರುವ 2ನೇ ಆರೋಪಿ ಸತೀಶ್ ಬಾಬುಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ. ಇನ್ನೊಬ್ಬ A6 ಆರೋಪಿ ಕೀರ್ತಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
42ನೇ ಎಸಿಎಂಎಂ ಕೋರ್ಟ್‌ನಲ್ಲಿ ಗುರುವಾರ ಮಧ್ಯಾಹ್ನ ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna Case) ಅವರಿಗೆ ಜಾಮೀನು (Bail) ವಿಚಾರಣೆ ನಡೆಯುತ್ತಿದ್ದ ವೇಳೆಯೇ ಇಬ್ಬರು ಆರೋಪಿಗಳನ್ನು ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು.
ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯವು A2 ಸತೀಶ್ ಬಾಬುಗೆ ನ್ಯಾಯಾಂಗ ಬಂಧನ ವಿಧಿಸಿದರೆ, ಮತ್ತೊಬ್ಬ ಆರೋಪಿ ಹೊಸೂರು ಕೀರ್ತಿಯನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ.
ಏನಿದು ಕೇಸ್?
ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ನಡೆಸಿದ್ದಾರೆನ್ನಲಾದ ಮಹಿಳೆ ಮೈಸೂರಿನ ಕೆ.ಆರ್. ನಗರ ನಿವಾಸಿಯಾಗಿದ್ದಾರೆ. ಆದರೆ, ಇವರನ್ನು ಸಾಕ್ಷಿ ನಾಶಕ್ಕಾಗಿ ಎಚ್.ಡಿ. ರೇವಣ್ಣ ಹಾಗೂ ಅವರ ಆಪ್ತ ಸತೀಶ್ ಬಾಬು ಅಪಹರಣ ಮಾಡಿದ್ದಾರೆ ಎಂದು ಕೆ.ಆರ್. ನಗರದಲ್ಲಿ ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಂತ್ರಸ್ತೆಯ ವಿಡಿಯೊ ರಿಲೀಸ್ ಆಗಿದೆ. ಇದರಲ್ಲಿ ಮಹಿಳೆಯು ಅಪಹರಣ ಪ್ರಕರಣಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.
ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ರೇವಣ್ಣಗೆ ಮಧ್ಯಂತರ ಜಾಮೀನು; ಮುಗಿದಿಲ್ಲ ಟೆನ್ಶನ್!
ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna Case) ಅವರಿಗೆ ಮಧ್ಯಂತರ ಜಾಮೀನು (Bail) ನೀಡಲಾಗಿದ್ದು, ಶುಕ್ರವಾರಕ್ಕೆ (ಮೇ 17) ವಿಚಾರಣೆಯನ್ನು ಮುಂದೂಡಲಾಗಿದೆ. ಹೀಗಾಗಿ ರೇವಣ್ಣ ಅವರು ಇನ್ನೂ ನಿಟ್ಟುಸಿರು ಬಿಡುವಂತೆ ಇಲ್ಲ. ನಾಳೆ ಕೋರ್ಟ್ ಯಾವ ನಿರ್ಧಾರವನ್ನು ಪ್ರಕಟಿಸಲಿದೆ ಎಂಬುದರ ಮೇಲೆ ಜೈಲಾ? ಎಸ್‌ಐಟಿ ವಶವೇ? ಅಥವಾ ಜಾಮೀನಾ ಎಂಬುದು ನಿರ್ಧಾರ ಆಗಲಿದೆ.
ಎಚ್.ಡಿ. ರೇವಣ್ಣ ಅವರು ಇಂದು ಬೆಳಗ್ಗಿನಿಂದ ಟೆಂಪಲ್ ರನ್ ನಡೆಸಿದರು. ಬಳಿಕ ಇನ್ನೊಂದು ಪ್ರಕರಣದಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರಾದರು. ಈಗಾಗಲೇ ಮೈಸೂರಿನ ಸಂತ್ರಸ್ತೆಯ ಕಿಡ್ನ್ಯಾಪ್ (kidnap case) ಪ್ರಕರಣದಲ್ಲಿ ಅವರು ಜಾಮೀನು ಪಡೆದಿದ್ದಾರೆ. ಈಗ ಹೊಳೆನರಸೀಪುರದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕಿದ್ದು, ಶುಕ್ರವಾರದ ಆದೇಶದ ಮೇಲೆ ಎಲ್ಲವೂ ನಿಂತಿದೆ. ಈಗ ಐದು ಲಕ್ಷ ರೂಪಾಯಿ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.
ವಾದ – ಪ್ರತಿವಾದ
ಗುರುವಾರ (ಮೇ 16) ಬೆಳಗ್ಗೆ 42ನೇ ಎಸಿಎಂಎಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಎಚ್.ಡಿ. ರೇವಣ್ಣ ಪರ ವಕೀಲರ ವಾದವನ್ನು ಆಲಿಸಿದರು. ಬಳಿಕ ಎಸ್ಐಟಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ ನ್ಯಾಯಾಧೀಶೆ ಪ್ರೀತ್ ಜೆ. ವಿಚಾರಣೆಯನ್ನು ಕೆಲ ಕಾಲ ಮುಂದೂಡಿದ್ದರು.
ಜಾಮೀನು ನೀಡದಂತೆ ಜಯ್ನಾ ಕೊಠಾರಿ ಮನವಿ
ಈ ವೇಳೆ ಎಸ್‌ಐಟಿ ಪರ ವಾದ ಮಂಡಿಸಿದ ಎಸ್‌ಪಿಪಿ ಜಯ್ನಾ ಕೊಠಾರಿ, ಎಚ್. ಡಿ. ರೇವಣ್ಣ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ ಪರ ವಕೀಲ, ಈ ಕೇಸ್‌ನಲ್ಲಿ ನಾನ್ ಬೇಲಬಲ್ ಸೆಕ್ಷನ್ ಇಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಆಗ ಮಧ್ಯಪ್ರವೇಶ ಮಾಡಿದ ಜಡ್ಜ್, ಎಸ್ಐಟಿ ವಾದಕ್ಕೂ ಅವಕಾಶ ನೀಡೋಣ ಎಂದು ಹೇಳಿ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿ ಪರ ವಕೀಲರಿಗೆ ಸೂಚಿಸಿದರು.
ಮಧ್ಯಾಹ್ನದ ಬಳಿಕ ವಿಚಾರಣೆ ಆರಂಭವಾಗುತ್ತಿದ್ದಂತೆ, ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆ ಆರಂಭಿಸಿದರು. ಈ ವೇಲೆ ಎಚ್.ಡಿ. ರೇವಣ್ಣ ಪರ ವಕೀಲರು ಮಧ್ಯ ಪ್ರವೇಶ ಮಾಡಿ, ಸೀನಿಯರ್ ವಕೀಲರು ಬರ್ತಾರೆ. ಹೀಗಾಗಿ ನಾಳೆಯವರೆಗೂ (ಮೇ 17) ಸಮಯ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಜಯ್ನಾ ಕೊಠಾರಿ ಆಕ್ಷೇಪ ವ್ಯಕ್ತಪಡಿಸಿ, ಹೊಳೆನರಸೀಪುರ ಕೇಸಲ್ಲಿ ವಿಚಾರಣೆಗೆ ಬರುವುದಾಗಿ ಹೇಳಿದ್ದಾರೆ. ಇನ್ನೂ ವಿಚಾರಣೆಗೆ ಬಂದಿಲ್ಲ. ಈಗಲೇ ವಿಚಾರಣೆ ನಡೆಯಲಿ. ಅಥವಾ ಆರೋಪಿ ರೇವಣ್ಣ ಅವರನ್ನು ಪೊಲೀಸರ ವಶಕ್ಕೆ ನೀಡಬೇಕು. ಇದೇ ಪ್ರಕರಣ ಆರೋಪಿ ವಿಚಾರಣೆಗೆ ಹಾಜರಾಗಿಲ್ಲ. ಮತ್ತೊಬ್ಬ ಆರೋಪಿ ದೇಶ ಬಿಟ್ಟು ಹೋಗಿದ್ದಾರೆ. ಹೀಗಾಗಿ ಸಮಯ ನೀಡಬಾರದು. ಇಂದೇ ವಿಚಾರಣೆ ನಡೆಸಿ ಆದೇಶ ನೀಡಿ ಅಥವಾ ಪೊಲೀಸರ ವಶಕ್ಕೆ ನೀಡಬೇಕು ಎಂದು ವಾದಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ರೇವಣ್ಣ ಪರ ವಕೀಲ ಅರುಣ್, ಎಚ್.ಡಿ. ರೇವಣ್ಣ ವಿರುದ್ಧ ಯಾವುದೇ ನಾನ್ ಬೇಲೆಬಲ್ ಸೆಕ್ಷನ್ ಇಲ್ಲ. ಜಾಮೀನು ನೀಡುವಂತಹ ಸೆಕ್ಷನ್‌ಗಳು ಇವೆ ಎಂದು ಹೇಳಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಜಯ್ನಾ ಕೋಠಾರಿ, ಆರೋಪಿಯು ಪೊಲೀಸರ ಮುಂದೆ ಶರಣಾಗಲಿ ಅಥವಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿ. ಆರೋಪಿ ತುಂಬಾ ಪ್ರಭಾವಿ ಆಗಿದ್ದಾರೆ. ಹೀಗಾಗಿ ಆರೋಪಿಯೇ ಸ್ವ – ಇಚ್ಛೆಯಿಂದ ಬಂದು ಶರಣಾಗಲಿ ಎಂದು ವಾದಿಸಿದರು.
ಆಗ ಪ್ರತಿವಾದ ಮಂಡಿಸಿದ ರೇವಣ್ಣ ಪರ ವಕೀಲ ಅರುಣ್, ನಾನ್ ಬೇಲೆಬಲ್ ಸೆಕ್ಷನ್ ಪ್ರಕರಣದಲ್ಲಿ ಸರ್ಕಾರದ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವ ಅಧಿಕಾರವೇ ಇಲ್ಲ. ಎಸ್‌ಪಿಪಿಗೆ ಆಕ್ಷೇಪಣೆ ಸಲ್ಲಿಸುವ ಅಧಿಕಾರ ಇದೆಯೇ ಎಂಬುದು ಮೊದಲು ನಿರ್ಧಾರ ಆಗಲಿ. ಇನ್ನು ಈಗಾಗಲೇ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆಗಲೇ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಬಹುದಿತ್ತು. ಈಗ ಎಸ್ಐಟಿ ಕಸ್ಟಡಿಗೆ ಕೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ರೇವಣ್ಣ ಹಾಜರಾಗಲು ಜಡ್ಜ್ ಸೂಚನೆ
ಪುನಃ ವಾದ ಮಂಡಿಸಿದ ಜಯ್ನಾ ಕೊಠಾರಿ, ಆರೋಪಿ ಬೆಳಗ್ಗೆ ಶರಣಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈಗ ಕೋರ್ಟ್‌ಗೆ ಶರಣಾಗಲು ಸಿದ್ಧರಿಲ್ಲ. ಸದ್ಯ ಇಲ್ಲೇ ಎಲ್ಲಿಯೋ ಕಾರಿನಲ್ಲಿ ಕುಳಿತಿರಬಹುದು ಎಂದು ಹೇಳಿದರು. ಈ ವೇಳೆ ರೇವಣ್ಣ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದರು. ಬಳಿಕ ವಿಚಾರಣೆ ಆರಂಭವಾಗುತ್ತಿದ್ದಂತೆ ಎಚ್.ಡಿ. ರೇವಣ್ಣ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ರೇವಣ್ಣ ಟೆಂಪಲ್ ರನ್ ಹೀಗಿತ್ತು
ಇಂದು ಮುಂಜಾನೆ ತಾವು ಉಳಿದುಕೊಂಡಿದ್ದ ದೇವೇಗೌಡರ ಮನೆಯಿಂದ ಹೊರಟ ರೇವಣ್ಣ ಅವರು ವೈದ್ಯ ಸಿಎನ್ ಮಂಜುನಾಥ್ ಅವರ ನಿವಾಸಕ್ಕೆ ಬಂದು, ಅಲ್ಲಿಂದ ಟೆಂಪಲ್ ರನ್ ಶುರು ಮಾಡಿದರು. ಬೆಳಗ್ಗೆ 8:26ಕ್ಕೆ ಜಯನಗರ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ, 8:50ಕ್ಕೆ ಗವಿಗಂಗಾಧರೇಶ್ವರ ದೇವಸ್ಥಾನ, 9:10ಕ್ಕೆ ಶ್ರೀ ಶೃಂಗೇರಿ ಶಂಕರ ಮಠ, 10:31ಕ್ಕೆ ಬಸವನಗುಡಿಯ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ನಂತರ ಕೋರ್ಟ್‌ಗೆ ಹಾಜರಾದರು.