Site icon Vistara News

Prajwal Revanna Case: ಪೆನ್‌ ಡ್ರೈವ್‌ ಹಂಚಿಕೆ ಆರೋಪ ಮಾಡಿದ್ದ ನವೀನ್‌ ಗೌಡ ಮೇಲೆ ಶಾಸಕ ಮಂಜು ದೂರು

A Manju and Naveen Gowda

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು (A Manju) ಎಂದು ಕಾಂಗ್ರೆಸ್‌ ಕಾರ್ಯಕರ್ತ ನವೀನ್‌ ಗೌಡ (Naveen Gowda) ಆರೋಪಿಸಿ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದರ ವಿರುದ್ಧ ಎಸ್‌ಐಟಿಗೆ ದೂರು ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಂಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸೋಮವಾರ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು, ನವೀನ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಪೆನ್ ಡ್ರೈವ್ ಅನ್ನು ಶಾಸಕ ಎ. ಮಂಜು ಅವರಿಗೆ ಕೊಟ್ಟಿದ್ದಾಗಿ ಭಾನುವಾರ ನವೀನ್‌ ಗೌಡ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ. ಈ ಆರೋಪಕ್ಕೆ ಸಿಟ್ಟಾಗಿರುವ ಮಂಜು ಈಗ ದೂರು ನೀಡಿದ್ದಾರೆ.

ನನಗೆ ಏಪ್ರಿಲ್ 20 ರಂದು ಪೆನ್ ಡ್ರೈವ್ ಸಿಕ್ಕಿತ್ತು. ನಾನದನ್ನು ಏಪ್ರಿಲ್‌ 21ರಂದು ಅರಕಲಗೂಡು ಶಾಸಕ ಮಂಜು ಅವರಿಗೆ ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಹೇಳಿದ್ದರು. ಆ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದ. ನವೀನ್ ಗೌಡ ಪೋಸ್ಟ್ ಎಲ್ಲೆಡೆ ವೈರಲ್ ಆಗಿತ್ತು. ಆದರೆ, ಪೋಸ್ಟ್ ಮಾಡಿ‌ ಸ್ವಲ್ಪ ಸಮಯದ ಬಳಿಕ ನವೀನ್ ಗೌಡ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದ.

ನವೀನ್‌ ಗೌಡ ಯಾರು?

ನವೀನ್‌ ಗೌಡ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದು, ಶಾಸಕ ಜಮೀರ್‌ ಅಹಮ್ಮದ್‌ ಆಪ್ತರಲ್ಲೊಬ್ಬನಾಗಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ, ಈತ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೀಲ್‌ಗೂ ಆಪ್ತನಾಗಿದ್ದ. ಚುನಾವಣೆ ವೇಳೆ ಶ್ರೇಯಸ್‌ ಪರವಾಗಿ ಪ್ರಚಾರವನ್ನೂ ಮಾಡಿದ್ದ. ಈತನೇ ಹಾಸನ ಜಿಲ್ಲಾದ್ಯಂತ ಪೆನ್‌ಡ್ರೈವ್‌ ಅನ್ನು ಹಂಚಿಕೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ನವೀನ್ ಗೌಡನ ಮೇಲೆ ಈಗಾಗಲೇ ಹಾಸನ ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ಬಳಿಕ ನವೀನ್ ಗೌಡ ನಾಪತ್ತೆಯಾಗಿದ್ದ. ಆದರೆ, ಭಾನುವಾರ ಫೇಸ್‌ಬುಕ್‌ನಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಶಾಸಕ ಎ. ಮಂಜು ವಿರುದ್ಧ ಪೋಸ್ಟ್ ಹಾಕಿ ಕೆಲವೇ ಸಮಯದ ಬಳಿಕ ಡಿಲೀಟ್‌ ಮಾಡಿದ್ದ.

ದೂರು ನೀಡಿದ ಎ. ಮಂಜು

ಈ ಸಂಬಂಧ ಎಸ್‌ಐಟಿಗೆ ಬಂದ ಶಾಸಕ ಎ. ಮಂಜು ಅವರು ನವೀನ್‌ ಗೌಡನ ಮೇಲೆ ದೂರು ದಾಖಲು ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೀನ್ ಗೌಡನಿಗೆ ಏಪ್ರಿಲ್‌ 20ರಂದು ಅಶ್ಲೀಲ ವಿಡಿಯೊದ ಪೆನ್‌ಡ್ರೈವ್‌ ಸಿಗುತ್ತದೆ. ಅದನ್ನು ಏಪ್ರಿಲ್‌ 21ರಂದು ನನಗೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ನನಗೆ ಪೆನ್ ಡ್ರೈವ್ ಅನ್ನು ಯಾಕೆ ಕೊಡಬೇಕು ಎಂಬುದನ್ನು ಮನಸ್ಸು ಮುಟ್ಟಿ ಹೇಳಿಕೊಳ್ಳಲಿ. ನವೀನ್ ಗೌಡ ನನಗೆ ಪರಿಚಯವೇ ಇಲ್ಲ. ನವೀನ್ ಗೌಡ ತಪ್ಪಿಸಿಕೊಳ್ಳಲು ಹಾಗೂ ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸಲು ಈ ಹೇಳಿಕೆ ಕೊಟ್ಟಿದ್ದಾರೆ. ನನಗೆ ಗೊತ್ತಿಲ್ಲದೆಯೇ ಈ ಪ್ರಕರಣದ ಹಿಂದೆ ಯಾರಿದ್ದಾರೆಂದು ಹೇಳಲ್ಲ ಎಂದು ಹೇಳಿದರು.

ಫೇಸ್‌ಬುಕ್‌ ಹ್ಯಾಕ್‌ ಆಗಿದೆ ಎಂದು ನವೀನ್‌ ಈಗ ಹೇಳುತ್ತಿದ್ದಾನೆ. ಅಂದು ನಾನು ಮದುವೆಗಾಗಿ ಕಲ್ಯಾಣ ಮಂಟಪಕ್ಕೆ ಹೋಗಿದ್ದು ನಿಜ. ಆದರೆ, ನವೀನ್ ಗೌಡ ಭೇಟಿ ಆಗಲೇ ಇಲ್ಲ. ಸತ್ಯ ಹೊರಗೆ ಬರಲಿ ಅಂತಾ ಇವತ್ತು ದೂರು ಕೊಟ್ಟಿದ್ದೇನೆ. ದೇವೇಗೌಡ ಕುಟುಂಬದಿಂದ ನನ್ನನ್ನು ದೂರ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಹಾಗಾಗಿ ಈ ರೀತಿ ಕೃತ್ಯ ಮಾಡಿದ್ದಾರೆ. ದೇವೇಗೌಡರು ನನಗೆ ಕೊನೆಯ ಅವಕಾಶವನ್ನು ನೀಡಿದ್ದರು. ನಾನು ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಶಾಸಕನಾಗಿದ್ದೇನೆ. ಆದರೆ, ಈಗ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಎಸ್ಐಟಿಯವರು ನವೀನ್‌ನನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಿದ್ದೇನೆ ಎಂದು ಎ. ಮಂಜು ಹೇಳಿದರು.

ಇದನ್ನೂ ಓದಿ: Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

ಈ ಪ್ರಕರಣದ ಹಿಂದೆ ಯಾರೇ ಇದ್ದರೂ ಶಿಕ್ಷೆಯಾಗಲೇಬೇಕು. ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಘಟನೆ ಬಳಿಕ ದೇವೇಗೌಡರ ನಿವಾಸಕ್ಕೆ ಹೋಗಿದ್ದೆ. ಧೈರ್ಯವಾಗಿ ಇರಿ ಅಂತಾ ಹೇಳಿ ಬಂದಿದ್ದೇನೆ. ಎಚ್.ಡಿ. ರೇವಣ್ಣ ಅವರನ್ನು ಭೇಟಿ ಮಾಡಿ ಬಂದಿದ್ದೆ. ಬೇಲ್ ವಿಚಾರಣೆ ನಡೆಯುತ್ತಿದೆ. ಏನಾಗುತ್ತದೆ ಎಂದು ನೋಡಬೇಕು ಎಂದು ಹೇಳಿದರು.

Exit mobile version