Site icon Vistara News

Prajwal Revanna Case: ಅಶ್ಲೀಲ ವಿಡಿಯೋ ಹಂಚಿದ ಆರೋಪಿಗಳಾದ ಚೇತನ್‌, ಲಿಖಿತ್‌ಗೆ ಜಾಮೀನು

Prajwal Revanna Case

ಹಾಸನ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal Revanna Case) ಅಶ್ಲೀಲ ವಿಡಿಯೋಗಳನ್ನು (obscene video) ಹಂಚಿಕೊಂಡ ಪ್ರಕರಣದಲ್ಲಿ ಆರೋಪಿಗಳಾಗಿರುವ ಚೇತನ್ ಹಾಗೂ ಲಿಖಿತ್‌ ಗೌಡ ಎಂಬವರಿಗೆ ಜಾಮೀನು (bail) ಮಂಜೂರಾಗಿದೆ. ಹಾಸನದ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಬ್ಬರಿಗೂ ಜಾಮೀನು ಮಂಜೂರು ದೊರೆತಿದೆ.

ಪೆನ್‌ಡ್ರೈವ್ ಹಂಚಿಕೆ (pen drive case) ಪ್ರಕರಣದಲ್ಲಿ ಇವರಿಬ್ಬರೂ ಆರನೇ ಮತ್ತು ಏಳನೇ ಆರೋಪಿಗಳಾಗಿದ್ದಾರೆ. ಯಲಗುಂದ ಚೇತನ್ ಹಾಗೂ ಲಿಖಿತ್‌ ಗೌಡ ಇವರಿಬ್ಬರೂ ಶಾಸಕ ಪ್ರೀತಂ ಗೌಡ ಅವರ ಆಪ್ತರು. ವಿಡಿಯೋದಲ್ಲಿರುವ ಮಹಿಳೆಯರ ಗುರುತು ಮರೆಮಾಚದೆ ಹಂಚಿದ ಆರೋಪ ಇವರ ಮೇಲಿದೆ. ಪ್ರಜ್ವಲ್‌ ರೇವಣ್ಣ ಜೊತೆಗೆ ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದವರನ್ನೂ ಬಂಧನದಲ್ಲಿಡಬೇಕು ಎಂದು ಮಹಿಳಾ ಹೋರಾಟಗಾರರು ಆಗ್ರಹಿಸಿ ಇಂದು ಹಾಸನದಲ್ಲಿ ಪ್ರತಿಭಟನೆ ನಡೆಸಿದ್ದರು.

ಚೇತನ್‌, ನವೀನ್ ಗೌಡಗೆ ಮೂರು ದಿನ ಎಸ್‌ಐಟಿ ಕಸ್ಟಡಿ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಅಶ್ಲೀಲ ವಿಡಿಯೊ ವೈರಲ್‌ ಮಾಡಿದ ಆರೋಪದಲ್ಲಿ ಬಂಧನವಾಗಿರುವ ನವೀನ್ ಗೌಡ ಹಾಗೂ ಚೇತನ್‌ನನ್ನು ಮೂರು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಜೂನ್ 1 ರಂದು ಶನಿವಾರ ಸಂಜೆ 4.30ಕ್ಕೆ ಆರೋಪಗಳನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲು ಸೂಚಿಸಲಾಗಿದೆ. ಇಂದಿನಿಂದ ಜೂನ್ 1 ರವರೆಗೆ ನವೀನ್ ಹಾಗೂ ಚೇತನ್ ಎಸ್ಐಟಿ ಕಸ್ಟಡಿಗೆ ನೀಡಿ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ.

ಪೆನ್ ಡ್ರೈವ್ ಹಂಚಿಕೆ ಪ್ರಕರಣದ (Prajwal Revanna Case) ಆರೋಪಿಗಳಾದ ಚೇತನ್, ನವೀನ್ ಗೌಡನನ್ನು ಎಸ್ಐಟಿ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇದ್ದ ಕಾರಣ ಹೈಕೋರ್ಟ್‌ಗೆ ಬಂದಿದ್ದ ಇಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು. ಹೈಕೋರ್ಟ್‌ನಿಂದ ಹೊರಗೆ ಬರುತ್ತಿದ್ದಂತೆ ಪಾರ್ಕಿಂಗ್‌ ಲಾಟ್‌ ಬಳಿ ಚೇತನ್, ನವೀನ್ ಗೌಡ ಸಿಕ್ಕಿಬಿದ್ದಿದ್ದರು.

ಭವಾನಿ ರೇವಣ್ಣ ‘ಜಾಮೀನು’ ತೀರ್ಪು ಕಾಯ್ದಿರಿಸಿದ ಕೋರ್ಟ್;‌ ಮೇ 31 ಅಮ್ಮ-ಮಗನಿಗೆ ಬಿಗ್‌ ಡೇ!

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 31ರವರೆಗೆ ತೀರ್ಪು ಕಾಯ್ದಿರಿಸಿದೆ. ಮೇ 31ರಂದು ನ್ಯಾಯಾಲಯವು ಆದೇಶ ಹೊರಡಿಸಿದ್ದು, ಅಲ್ಲಿಯವರೆಗೆ ಭವಾನಿ ರೇವಣ್ಣ ಕಾಯಬೇಕಿದೆ. ಇನ್ನು, ಮೇ 31ರಂದು ಆಗಮಿಸಲಿರುವ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನೂ ಮೇ 31ಕ್ಕೆ ನಡೆಸುವುದಾಗಿ ಕೋರ್ಟ್‌ ತಿಳಿಸಿದೆ. ಹಾಗಾಗಿ, ಮೇ 31 ತಾಯಿ-ಮಗನಿಗೆ ಪ್ರಮುಖ ದಿನವಾಗಿದೆ.

ಇದನ್ನೂ ಓದಿ | Assault Case: ಬೆಳ್ಳೂರು ಹಿಂದೂ ಯುವಕನ ಮೇಲೆ ಹಲ್ಲೆ; ದೂರು ಸ್ವೀಕರಿಸದ ಪಿಎಸ್‌ಐ ಸಸ್ಪೆಂಡ್‌

ಮೇ 31ರಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಈಗಾಗಲೇ ಪ್ರಜ್ವಲ್‌ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ, ಪ್ರಜ್ವಲ್‌ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ವಕೀಲ ಅರುಣ್‌ ಅವರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 31ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್‌ ತಿಳಿಸಿದೆ. ಇನ್ನು ಮೇ 31ರಂದೇ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತ ಆದೇಶವನ್ನು ಹೊರಡಿಸುವುದಾಗಿ ಕೋರ್ಟ್‌ ತಿಳಿಸಿದೆ. ಅತ್ತ, ತಮ್ಮ ವಿರುದ್ಧ ದಾಖಲಾದ ಎರಡೂ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಎಚ್‌.ಡಿ.ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದಾರೆ. ಮೂರೂ ಅರ್ಜಿಗಳ ಕುರಿತು ಕೋರ್ಟ್‌ ನೀಡುವ ತೀರ್ಪಿನ ಎಚ್‌.ಡಿ.ರೇವಣ್ಣ ಕುಟುಂಬದ ಭವಿಷ್ಯ ನಿಂತಿದೆ.

ಇದಕ್ಕೂ ಮೊದಲು ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಂದೇಶ ಚೌಟ, “ಎಫ್ಐಆರ್ ದಾಖಲಿಸಿ 27 ದಿನಗಳಾದರೂ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಇದುವರೆಗೂ ಏಕೆ ವಿಚಾರಣೆಗೆ ಕರೆಯಲಿಲ್ಲ? ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು” ಎಂದರು.

ಎಸ್‌ಪಿಪಿ ವಾದವೇನಿತ್ತು?

ಮಗನ ರಕ್ಷಣೆಗಾಗಿ ಭವಾನಿ ರೇವಣ್ಣ ಒಳಸಂಚು ರೂಪಿಸಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣದ ಹಿಂದೆ ಇವರ ಕೈವಾಡವಿದೆ. ಸಂತ್ರಸ್ತ ಮಹಿಳೆಗೆ ಊಟ ನೀರು, ಸರಿಯಾಗಿ ಕೊಟ್ಟಿಲ್ಲ‌. ಆಕೆಗೆ ಬಟ್ಟೆ ಸೀರೆಯನ್ನು ಕೊಟ್ಟಿಲ್ಲ. ಆರೋಪಿ ಸತೀಶ್ ಬಾಬಣ್ಣ ಜತೆ ಭವಾನಿ ಮಾತನಾಡಿದ್ದಾರೆ. ಆರೋಪಿ ಸತೀಶ್ ಬಾಬಣ್ಣ ಕೇಳಿದಾಗ ಭವಾನಿಯವರು ಆಯ್ತು 150 ರೂಪಾಯಿ ಅಥವಾ 200 ರೂಪಾಯಿ ಸೀರೆ ಕೊಡ್ಸು ಎಂಬುದಾಗಿ ಸೂಚಿಸಿದ್ದಾರೆ” ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು. ಕೊನೆಗೆ ನ್ಯಾಯಾಲಯವು ತೀರ್ಪನ್ನು ಮೇ 31ರವರೆಗೆ ಕಾಯ್ದಿರಿಸಿತು.

ನಾಳೆಯೇ ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್‌

ಪ್ರಜ್ವಲ್‌ ರೇವಣ್ಣ ಅವರು ಮೇ 31ರಂದು ಭಾರತಕ್ಕೆ ಆಗಮಿಸಲಿದ್ದು, ನಾಳೆ ಅಂದರೆ ಮೇ 30ರಂದೇ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು ಎಂದು ವಕೀಲ ಅರುಣ್‌ ಮನವಿ ಮಾಡಿದ್ದಾರೆ. ಆದರೆ, ನಾಳೆಯೇ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್‌, ಈ ಕುರಿತು ಪ್ರತಿಕ್ರಿಯಿಸುವಂತೆ ಎಸ್‌ಐಟಿಗೆ ನೋಟಿಸ್‌ ಜಾರಿಗೊಳಿಸಿದೆ. ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಮೂರೂ ಪ್ರಕರಣಗಳಲ್ಲಿ ಎಸ್‌ಐಟಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಬೇಕು. ಹಾಗಾಗಿ, ಮೇ 31ರಂದು ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿತು.

Exit mobile version