Site icon Vistara News

Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ ರೆಡ್‌ ಕಾರ್ನರ್ ಬ್ರಹ್ಮಾಸ್ತ್ರ; ಯಾವ ದೇಶದಲ್ಲಿದ್ದರೂ ಅರೆಸ್ಟ್‌ ಮಾಡಲು ಸಿದ್ಧತೆ?

Prajwal Revanna case SIT to issue Red Corner Notice against Prajwal

ಬೆಂಗಳೂರು: ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ, ಅವರು ವಿದೇಶದಲ್ಲಿ ತಲೆಮರೆಸಿಕೊಂಡು ಇರುವ ಕಾರಣ ಈಗಾಗಲೇ ಬ್ಲೂಕಾರ್ನರ್ ನೋಟಿಸ್ ನೀಡಲಾಗಿತ್ತು. ಆದರೆ, ಶತಾಯಗತಾಯ ಅವರನ್ನು ಬಂಧಿಸಿ ಕರೆತರಲೇಬೇಕು ಎಂದು ತೀರ್ಮಾನಿಸಿರುವ ಎಸ್‌ಐಟಿ ಈಗ ರೆಡ್‌ ಕಾರ್ನರ್ ಬ್ರಹ್ಮಾಸ್ತ್ರ ಬಿಡಲು ಮುಂದಾಗಿದೆ.

ಮೂರು ಕೇಸ್ ದಾಖಲಾಗಿದ್ದರೂ ಪ್ರಜ್ವಲ್‌ ರೇವಣ್ಣ ಇನ್ನೂ ಪತ್ತೆಯಾಗಿಲ್ಲ. ಈಗ ಇನ್ನೂ ಕೆಲ ಸಂತ್ರಸ್ತೆಯರು ಪ್ರಜ್ವಲ್ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪೆನ್‌ಡ್ರೈವ್‌ ಕೇಸ್ ಸಂತ್ರಸ್ತರಿದ್ದರೆ ಹೆಲ್ಪ್‌ಲೈನ್‌ಗೂ ಕಾಲ್‌ ಮಾಡಿ ಎಂದು ಎಸ್‌ಐಟಿ ಹೇಳಿದೆ. ಅದಕ್ಕೆ ಹಲವು ಕರೆಗಳು ಬರುತ್ತಿವೆ ಎನ್ನಲಾಗಿದೆ. ಇನ್ನೊಂದೆಡೆ ಈಗಾಗಲೇ ಪ್ರಜ್ವಲ್ ಬಂಧನಕ್ಕೆ ಬ್ಲೂಕಾರ್ನರ್ ನೋಟಿಸ್ ಅನ್ನು ಜಾರಿ ಮಾಡಲಾಗಿತ್ತು. ಆದರೆ, 15 ದಿನವಾದರೂ ಪ್ರಜ್ವಲ್‌ ಸುಳಿವು ಇಲ್ಲದೇ ಇರುವ ಕಾರಣ ರೆಡ್‌ ಕಾರ್ನರ್‌ ನೋಟಿಸ್‌ ನೀಡಿ ಅರೆಸ್ಟ್‌ ಮಾಡಲು ಎಸ್‌ಐಟಿ ಸಿದ್ಧತೆಯನ್ನು ನಡೆಸಿದೆ ಎಂದು ಹೇಳಲಾಗಿದೆ.

ರೆಡ್‌ ಕಾರ್ನರ್‌ ಜಾರಿಯಾದರೆ ಏನಾಗುತ್ತೆ?

ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಮನವಿ ಮಾಡಲು ಎಸ್‌ಐಟಿ ಚಿಂತನೆ ನಡೆಸಿದೆ. ಇದಕ್ಕೆ ಮೊದಲು ಸಿಬಿಐ ಸಂಸ್ಥೆಯು ಇಂಟರ್‌ಪೋಲ್‌ ಅನ್ನು ಸಂಪರ್ಕಿಸಿ ರೆಡ್ ಕಾರ್ನರ್ ನೋಟಿಸ್‌ಗೆ ಬೇಡಿಕೆ ಸಲ್ಲಿಸಬೇಕು. ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ, ಯಾವ ದೇಶದಲ್ಲಿದ್ದರೂ ಆ ದೇಶದ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ದೇಶಕ್ಕೆ ಮಾಹಿತಿ ನೀಡುತ್ತಾರೆ. ನಂತರ ಇಲ್ಲಿನ ಪೊಲೀಸರು ಹೋಗಿ ಆತನನ್ನು ಕರೆತರುತ್ತಾರೆ. ಹೀಗಾಗಿ ಪ್ರಜ್ವಲ್‌ ವಿರುದ್ಧ ಈ ಕ್ರಮಕ್ಕೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಬ್ಲ್ಯೂ ಕಾರ್ನರ್‌ ನೋಟಿಸ್‌ ಏಕೆ?

ಬ್ಲೂ ಕಾರ್ನರ್ ನೋಟಿಸ್‌ ಜಾರಿಯಾದ ಬಳಿಕ ಇಂಟರ್‌ಪೋಲ್ ಇತರ ಕಡೆಗಳಿಗೂ ಆರೋಪಿಯ ಮಾಹಿತಿಯನ್ನು ಕಳಿಸಿ, ಆರೋಪಿಯ ನೆಲೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಆರೋಪಿ ಯಾವ ದೇಶದಲ್ಲಿ ಇದ್ದಾರೆ? ಎಲ್ಲಿ ಲೊಕೇಟ್ ಆಗಿದ್ದಾರೆ ಅನ್ನುವ ಚಲನವಲನಗಳನ್ನು ಈ ಮೂಲಕ ಪತ್ತೆ ಮಾಡುತ್ತಾರೆ. ಬಳಿಕ ಸಿಬಿಐಗೆ ಆರೋಪಿಯ ಚಲನವಲನ ಬಗ್ಗೆ ಮಾಹಿತಿ ನೀಡುತ್ತಾರೆ. ಸಿಬಿಐ ಮೂಲಕ ಎಸ್ಐಟಿಗೆ ಪ್ರಜ್ವಲ್ ಎಲ್ಲಿದ್ದಾರೆ ಅನ್ನುವ ಮಾಹಿತಿ ಸಿಗುತ್ತದೆ. ಹೀಗಾಗಿ ಈ ನೋಟಿಸ್‌ ನೀಡಲಾಗಿದ್ದು, ಇದು ಸುಳಿವು ಪಡೆಯಲು ಮುಖ್ಯವಾಗಿದೆ. ಆದರೆ, ಇದರಿಂದ ಪ್ರಜ್ವಲ್‌ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ.

ಕಠಿಣ ಸೆಕ್ಷನ್‌ ಜಡಿದ SIT! ಯಾವುದಕ್ಕೆ ಎಷ್ಟು ವರ್ಷ ಜೈಲು?

ಎರಡು ದಿನದ ಹಿಂದಷ್ಟೇ ಪ್ರಜ್ವಲ್‌ ರೇವಣ್ಣ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಮೂರನೇ ಎಫ್ಐಆರ್‌ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್‌ಗಳನ್ನು ಹಾಕಲಾಗಿದೆ. ಹೀಗಾಗಿ ಪ್ರಜ್ವಲ್‌ ಒಂದು ವೇಳೆ ಅರೆಸ್ಟ್‌ ಆಗಿ ಅಪರಾಧ ಸಾಬೀತಾದರೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.

ಸಿಐಡಿಯ ಸೈಬರ್ ಕ್ರೈಂನಲ್ಲಿ ದಾಖಲಾಗಿರುವ ಈ ಪ್ರಕರಣದಲ್ಲೂ ಸಾಕಷ್ಟು ಗಂಭೀರವಾದ ಸೆಕ್ಷನ್‌ಗಳನ್ನು ಹಾಕಲಾಗಿದೆ. ಇದೇ ಮೇ 8ರಂದು ದಾಖಲಾಗಿರುವ ಎಫ್ಐಆರ್ ಇದಾಗಿದ್ದು, ಐಪಿಸಿ 376(2)(N), 376(2)(K), 354(A) 354(B), 354(C) ಹಾಗೂ 506 ಸೆಕ್ಷನ್‌ಗಳನ್ನು ಹಾಕಲಾಗಿದೆ. ಅದರಲ್ಲಿ 376(2)(n) ಅನ್ನು ಸೆಕ್ಷನ್ ನಿರಂತರವಾಗಿ ಅತ್ಯಾಚಾರವನ್ನು ನಡೆಸಲಾಗಿದೆ ಎಂದು ದಾಖಲು ಮಾಡಲಾಗಿದೆ.

ಇನ್ನು ಇತ್ತ ಇದೇ ವಿಚಾರವಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳನ್ನೂ ಕೂಡ ಎಸ್‌ಐಟಿ ತನಿಖೆ ವೇಳೆ ವಿಚಾರಣೆ ನಡೆಸಿದೆ.‌ ವರ್ಗಾವಣೆ ಮಾಡಿಸುತ್ತೇನೆ ಎಂದು ಹೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ಸಂತ್ರಸ್ತೆಯಾದ ಸರ್ಕಾರಿ ಅಧಿಕಾರಿಯ ಆರೋಪವಾಗಿದೆ. ಮೊದಲಿಗೆ ಈ ವಿಚಾರದಲ್ಲಿ ನಮ್ಮನ್ನು ಎಳಿಯಬೇಡಿ ಎಂದಿದ್ದ ಸಂತ್ರಸ್ತೆಯರು ಕೊನೆಗೂ ಎಸ್‌ಐಟಿ ಮುಂದೆ ಹಾಜರಾಗಿ ಕೆಲವು ವಿಷಯಗಳನ್ನು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ಇತ್ತ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಕಿಡ್ನ್ಯಾಪ್ ಮಾಡಿದ್ದು ಮೂರು ಜನರಲ್ಲ ಏಳು ಜನ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಕರೆದೊಯ್ಯಲು ಒಬ್ಬರು, ಕೂಡಿ ಹಾಕಲು ಒಬ್ಬರು ಎಂಬಂತೆ ಒಟ್ಟಾರೆಯಾಗಿ ಏಳು ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ ಹೇಳುತ್ತಿದೆ. ಈ ವಿಚಾರವಾಗಿ ತನಿಖೆ ನಡೆಯುತ್ತಿದೆ.

ಯಾವ ಯಾವ ಸೆಕ್ಷನ್‌ ಏನು ಹೇಳುತ್ತದೆ?

ಹೀಗೆ ಮೂರನೇ ಎಫ್ಐಆರ್‌ನಲ್ಲಿ ಕಠಿಣ ಸೆಕ್ಷನ್‌ಗಳನ್ನು ಎಸ್ಐಟಿ ಹಾಕಿದ್ದು, ಪ್ರಜ್ವಲ್‌ಗೆ ಭಾರಿ ಉರುಳಾಗಲಿದೆ.

ಸುಳ್ಳು ಕೇಸ್‌ ಹಾಕಲು ಮಹಿಳೆಯನ್ನು SIT ಸಂಪರ್ಕ ಮಾಡಿಲ್ಲ; ಕಾಟ ಕೊಟ್ಟವನನ್ನು ಬಿಡಲ್ಲ!

ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಸುಳ್ಳು ಕೇಸ್ (Fake case) ಹಾಕಲು ತನಗೆ ಒತ್ತಾಯಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (National Commission for Women) ಮಹಿಳೆಯೊಬ್ಬರು ನೀಡಿರುವ ದೂರು ಹೊಸ ತಿರುವನ್ನು ಪಡೆದುಕೊಂಡಿದೆ. ಎಸ್‌ಐಟಿಯಿಂದ ಯಾರೂ ಆಕೆಯನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ, ಸಂಪರ್ಕ ಮಾಡಿದವರ ಬಗ್ಗೆ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

ಸಂತ್ರಸ್ತ ಮಹಿಳೆಗೆ ಎಸ್ಐಟಿ ಅಧಿಕಾರಿ ಎಂದು ಕರೆ ಮಾಡಿ ತೊಂದರೆ ಮಾಡಿರುವ ಆರೋಪ ವಿಚಾರವಾಗಿ ಎಸ್ಐಟಿ ಉನ್ನತ ಮೂಲಗಳು ಸ್ಪಷ್ಟನೆ ನೀಡಿದೆ. ಅಲ್ಲದೆ, ಎನ್‌ಸಿಡಬ್ಲ್ಯು ದೂರನ್ನು ಎಸ್‌ಐಟಿಗೆ ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಐಟಿ, ಗುರುವಾರವಷ್ಟೇ ಈ ಮಹಿಳೆಯ ಬಗ್ಗೆ ಎಸ್‌ಐಟಿಗೆ ತಿಳಿದುಬಂದಿದೆ.

ಎಸ್‌ಐಟಿಯಿಂದ ಯಾರೂ ಆಕೆಯನ್ನು ಈ ಹಿಂದೆ ಸಂಪರ್ಕಿಸಿಲ್ಲ. ಮಹಿಳಾ ಆಯೋಗಕ್ಕೆ ದೂರು ನೀಡಿದ ಮಹಿಳೆಯು ನಮಗೆ ಯಾವುದೇ ದೂರು ನೀಡಿಲ್ಲ. ಮಹಿಳೆಗೆ ಕರೆ ಮಾಡಿದ ವ್ಯಕ್ತಿಯ ಗುರುತು ತಿಳಿಯಲು ಎಸ್‌ಐಟಿ ವಿಚಾರಣೆ ಆರಂಭಿಸಿದೆ. ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತೆ ಕೋರಿ ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವ ಮಹಿಳೆ

ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD revanna jailed) ಅವರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಜೆಡಿಎಸ್‌ (JDS) ಪ್ರತಿಭಟನೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ದೂರು ಮಹತ್ವ ಪಡೆದುಕೊಂಡಿದೆ. ಸೂಕ್ತ ಭದ್ರತೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡುವಂತೆ ನನಗೆ ಒತ್ತಡ ಹಾಕಲಾಗುತ್ತಿದೆ. ಮೂವರು ಸಿವಿಲ್ ಡ್ರೆಸ್‌ನಲ್ಲಿ ಬಂದವರು ಒತ್ತಡ ಹಾಕಿದ್ದು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

ಮಹಿಳೆ ಪತ್ರ ಬರೆದಿರುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ. ಹಾಸನ ಮೂಲದ ಮಹಿಳೆ ಪತ್ರ ಬರೆದಿದ್ದು, ಪತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ದೂರಿನ ಪ್ರತಿ ಹಾಗೂ ಸೂಕ್ತ ಭದ್ರತೆಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: Lok Sabha Election 2024: ಲೋಕಸಭಾ ಪ್ರಚಾರಕ್ಕೆ 26 ಸಾವಿರ ಕಿಲೋ ಮೀಟರ್ ಸಂಚಾರ, ದಿನಕ್ಕೆ ಸರಾಸರಿ 14-18 ಗಂಟೆ ಸಿಎಂ ಪ್ರಚಾರ!

ಪ್ರಜ್ವಲ್ ಕೇಸ್‌ನಲ್ಲಿ ಮಹಿಳೆಗೆ ದೂರು ನೀಡುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಯೋಗದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಇಂದು ಮತ್ತೆ ಪತ್ರ ಬರೆಯುತ್ತೇವೆ. ಆಯೋಗದ ಅಧಿಕಾರಿಗಳು ಪತ್ರ ಬರೆದ ಮಹಿಳೆಯನ್ನು ಭೇಟಿ ಮಾಡುತ್ತೇವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.

Exit mobile version