ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ದಾಖಲಾಗಿರುವ ಅತ್ಯಾಚಾರ (pen drive case) ಪ್ರಕರಣದಲ್ಲಿ, ಎಸ್‌ಐಟಿ (SIT) ಮುಂದೆ ಹಾಜರಾಗಲು ಪ್ರಜ್ವಲ್ ಕೇಳಿರುವ ಕಾಲಾವಕಾಶ ನಿನ್ನೆಗೆ ಮುಕ್ತಾಯವಾಗಿದೆ. ಆದರೆ ಎಸ್‌ಐಟಿ ಎದುರು ಅವರು ಹಾಜರಾಗುವ ಯಾವುದೇ ಸುಳಿವು ತೋರಿಸಿಲ್ಲ. ಹೀಗಾಗಿ ಪ್ರಜ್ವಲ್ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ.
ಒಂದೆಡೆ ತಂದೆ ಎಚ್.ಡಿ ರೇವಣ್ಣ ಅವರು ಬಂಧನಕ್ಕೊಳಗಾಗಿ ಈಗಾಗಲೇ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ನ್ಯಾಯಾಲಯ ಅವರಿಗೆ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಅದು ಇಂದಿಗೆ ಮುಕ್ತಾಯವಾಗುತ್ತಿದ್ದು, ಜಾಮೀನು ಅರ್ಜಿ ಇಂದು ವಿಚಾರಣೆಯಾಗಲಿದೆ. ಅವರಿಗೆ ಜೈಲಾ, ಬೇಲಾ ಎಂಬುದು ಇಂದು ಫಿಕ್ಸ್ ಆಗಲಿದೆ.
ಪ್ರಜ್ವಲ್‌ಗೂ, ವಿಚಾರಣೆಗೆ ಹಾಜರಾಗಲು ಏಪ್ರಿಲ್ 30ರಂದೇ ಎಸ್‌ಐಟಿ ನೋಟಿಸ್ ಕೊಟ್ಟಿದೆ. ಆದರೆ ಮೇ 1ರಂದು ತಮ್ಮ ವಕೀಲ ಅರುಣ್ ಜಿ. ಮೂಲಕ ಪ್ರಜ್ವಲ್ 7 ದಿನ ಕಾಲಾವಕಾಶ ಕೇಳಿದ್ದರು. “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನನ್ನ ವಕೀಲರ ಮೂಲಕ CID ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ” ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದರು.
ಅದರಂತೆ ಪ್ರಜ್ವಲ್ ಪರ ವಕೀಲ ಅರುಣ್, ಎಸ್ಐಟಿ ಬಳಿ ಏಳು ದಿನ ಕಾಲಾವಕಾಶ ಕೇಳಿದ್ದರು. ಏಳು ದಿನ ಕಾಲಾವಕಾಶ ನೀಡಲು ನಿರಾಕರಿಸಿದ್ದ ಎಸ್ಐಟಿ ಅಧಿಕಾರಿಗಳು, ಕೂಡಲೇ ಹಾಜರಾಗುವಂತೆ ಹೇಳಿದ್ದರು. ಆದರೆ ಪ್ರಜ್ವಲ್ ಬಂದಿರಲಿಲ್ಲ. ಇದೀಗ ಪ್ರಜ್ವಲ್ ತಾವೇ ಕೇಳಿಕೊಂಡಿದ್ದ ಹಾಗೆ ವಿಚಾರಣೆಗೆ ಹಾಜರಾಗಲು ಕೇಳಿದ್ದ ಕಾಲಾವಕಾಶ ಮೇ 07ಕ್ಕೆ ಮುಕ್ತಾಯವಾಗಿದೆ.
ಈಗಾಗಲೇ ಇಂಟರ್‌ಪೋಲ್ ಮೂಲಕ 196 ದೇಶಗಳಿಗೆ ಆರೋಪಿ ಬಗ್ಗೆ ವಿವರವಾದ ಮಾಹಿತಿಯನ್ನು ಗೃಹ ಸಚಿವಾಲಯ ನೀಡಿದೆ. ವಿಚಾರಣೆಗೆ ಹಾಜರಾಗದಿದ್ದರೆ ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ ಒದಗಲಿದೆ. ಹೀಗಾಗಿ, ಮೇ 15ರ ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಏರ್‌ಪೋರ್ಟ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.
15ನೇ ತಾರೀಖು LH764 ವಿಮಾನದಲ್ಲಿ ಪ್ರಜ್ವಲ್ ಬರುವ ಮಾಹಿತಿಯಿದೆ. ಜರ್ಮನಿಯ ಮ್ಯುನಿಚ್ ವಿಮಾನ ನಿಲ್ದಾಣದಿಂದ ಟಿಕೆಟ್ ಬುಕ್ ಆಗಿದೆ ಎಂದು ಇಮಿಗ್ರೇಶನ್ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ದೊರೆತಿದೆ. ಪ್ರಜ್ವಲ್ ರೇವಣ್ಣ ಎರಡು ಬಾರಿ ಟಿಕೆಟ್ ಬುಕ್ ಮಾಡಿ ರದ್ದು ಮಾಡಿದ್ದರು. ಮೇ 15ರಂದು LH764 Munich to Bangalore ವಿಮಾನದಲ್ಲಿ ಪ್ರಯಾಣಿಸಲಿದ್ದು, ಟರ್ಮಿನಲ್ 2ಗೆ ರಾತ್ರಿ 12:30ಕ್ಕೆ ವಿಮಾನ ತಲುಪಲಿದೆ. ಈ ವಿಮಾನದಲ್ಲಿ ಪ್ರಜ್ವಲ್ ಬರುತ್ತಾರಾ ಅಥವಾ ಇನ್ನಷ್ಟು ಕಾಲ ಎಸ್‌ಐಟಿ ಅಧಿಕಾರಿಗಳನ್ನು ಆಟವಾಡಿಸಲಿದ್ದಾರಾ ಎಂದು ನೋಡಬೇಕಿದೆ.
ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ
ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರ ಜಾಮೀನು (bail) ಅರ್ಜಿ ಇಂದು (ಮೇ 8) ವಿಚಾರಣೆಗೆ ಬರಲಿದೆ. ಬುಧವಾರ ಎಚ್.ಡಿ. ರೇವಣ್ಣ ಅವರ ಕಸ್ಟಡಿ ಅಂತ್ಯ ಆಗುವ ಹಿನ್ನೆಲೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಆದರೆ, ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಇನ್ನಷ್ಟು ದಿನ ಕಸ್ಟಡಿಗೆ ಕೊಡುವಂತೆ ಕೋರ್ಟ್‌ನಲ್ಲಿ ಮನವಿ ಮಾಡಲಿದ್ದಾರೆ. ಈಗಷ್ಟೇ ವಿಚಾರಣೆಯನ್ನು ಪ್ರಾರಂಭ ಮಾಡಲಾಗಿದೆ. ಅಲ್ಲದೆ, ರೇವಣ್ಣ ಸಹ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ವಾದಿಸುವ ಸಾಧ್ಯತೆ ಹೆಚ್ಚಿದೆ.
ಇನ್ನು ಜಾಮೀನು ಅರ್ಜಿ ವಿಚಾರಣೆ ಸಂಬಂಧ ನ್ಯಾಯಾಲಯ ಸಹ ಒಂದು ಪ್ರಶ್ನೆ ಎತ್ತಿದೆ. ಆರೋಪಿ ಕಸ್ಟಡಿಯಲ್ಲಿದ್ದಾಗ ಜಾಮೀನು ಅರ್ಜಿ ವಿಚಾರಣೆ ನಡೆಸಲು ಯೋಗ್ಯವೇ ಎಂಬ ಬಗ್ಗೆ ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಶ್ನೆ ಮಾಡಿದೆ. ಆಗ ಈ ಬಗ್ಗೆ ರೇವಣ್ಣ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರು.
ವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ಸೂಚಿಸಿದ್ದು, ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈ ವೇಳೆ ರೇವಣ್ಣ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ಜಾಮೀನು ಸಿಕ್ಕಿಲ್ಲವಾದರೆ, ಪುನಃ ಕಸ್ಟಡಿಗೆ ನೀಡಲಾಗುತ್ತದೆಯೋ? ಅಥವಾ ನ್ಯಾಯಾಂಗ ಬಂಧನಕ್ಕೊಳಪಟ್ಟು ಪರಪ್ಪನ ಅಗ್ರಹಾರ ಸೇರಲಿದ್ದಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.