ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಸ್‌ಐಟಿ ಮುಂದೆ ದಾಖಲಾಗುವ ಪ್ರಕರಣಗಳಿಗೆ ಇಬ್ಬರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನು (Special Public Prosecutors) ನೇಮಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.
ಈ ಪ್ರಕರಣಗಳ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ದಳವು ದಾಖಲಿಸುವ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಪ್ರಕರಣಗಳನ್ನು ನಡೆಸಲು ಸರ್ಕಾರಿ ಅಭಿಯೋಜಕರ ತಂಡವನ್ನು ಬಲಪಡಿಸುವ ಉದ್ದೇಶದಿಂದ ಹಿರಿಯ ವಕೀಲರಾದ ಅಶೋಕ್ ನಾಯಕ್ ಹಾಗೂ ಜಯನಾ ಕೊಠಾರಿ ಅವರನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಆದೇಶದಲ್ಲಿ ತಿಳಿಸಿದೆ.
ಎಚ್.ಡಿ. ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ; ಅಮಾವಾಸ್ಯೆ ದಿನವೇ ಜೈಲಿಗೆ ಶಿಫ್ಟ್!
ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರ ಜಾಮೀನು ಅರ್ಜಿ ವಿಚಾರಣೆ ಬುಧವಾರ (ಮೇ 8) ನಡೆದಿದ್ದು, ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ. ಹೀಗಾಗಿ ಪರಪ್ಪನ ಅಗ್ರಹಾರಕ್ಕೆ ರೇವಣ್ಣ ಶಿಫ್ಟ್ ಆಗಲಿದ್ದಾರೆ. ಅಮಾವಾಸ್ಯೆ ದಿನವೇ ರೇವಣ್ಣ ಅವರಿಗೆ ಜೈಲುವಾಸ ಆದಂತೆ ಆಗಿದೆ.
ವಾದ – ಪ್ರತಿವಾದ ಆಲಿಸಿದ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೇವಣ್ಣ ಅವರನ್ನುದ್ದೇಶಿಸಿ ನಿಮಗೆ ಪೊಲೀಸರಿಂದ ತೊಂದರೆ ಆಗಿದೆಯಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ರೇವಣ್ಣ, ಕಸ್ಟಡಿಗೆ ಬಂದು 3 ದಿನ ಆಗಿದೆ. ಮಾತ್ರೆ ತೆಗೆದುಕೊಳ್ಳಲು ತಡ ಆಗುತ್ತಿದೆ. ನನ್ನನ್ನು ಸುಮ್ಮನೆ ಸತಾಯಿಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು ನನಗೆ ಗೊತ್ತಿಲ್ಲ. ನನಗೆ ಕೇಳಿದ್ದನ್ನು ಹೇಳಿದ್ದೇನೆ. ಎಲ್ಲವೂ ದಾಖಲಿಸಿಕೊಂಡಿದ್ದಾರೆ. ಮೂರು ದಿನದಿಂದ ಹೊಟ್ಟೆ ನೋವು ಇದೆ. ಮಲಗಲು ಕೂಡ ಆಗಿಲ್ಲ. ಎಲ್ಲ ವಿಚಾರಣೆಯೂ ಮುಗಿದಿದೆ ಎಂದು ತನಿಖಾಧಿಕಾರಿಯು ನಿನ್ನೆಯೇ ಹೇಳಿದ್ದರು. ಆದರೆ, ಇಂದು ಮತ್ತೆ ವಿಚಾರಣೆ ಮಾಡಬೇಕಿದೆ ಎಂದು ಹೇಳುತ್ತಿದ್ದಾರೆ. ನನಗೆ ಹೊಟ್ಟೆ ನೋವಿದೆ. ಮೂರು ದಿನಗಳಿಂದ ಸತತವಾಗಿ ನಿದ್ದೆ ಮಾಡಿಲ್ಲ ಸರ್. ನಾನು ತಪ್ಪೇ ಮಾಡಿಲ್ಲ ಅಂದಾಗ ಯಾಕೆ ಒಪ್ಪಿಕೊಳ್ಳಬೇಕು? ದುರುದ್ದೇಶದಿಂದ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾತು ಮುಂದುವರಿಸಿದ ಎಚ್.ಡಿ. ರೇವಣ್ಣ, ಪ್ರಜ್ವಲ್ ತಪ್ಪು ಮಾಡಿರಬಹುದು. ಅದರ ಬಗ್ಗೆ ನನಗೇನು ಗೊತ್ತಿಲ್ಲ. ಬೇಕು ಎಂದೇ ನನ್ನ ಮೇಲೆ ಈ ರೀತಿ ಮಾಡುತ್ತಿದ್ದಾರೆ. ನನಗೆ ಹುಷಾರಿಲ್ಲ, ಬೆಳಗ್ಗೆ ಡ್ರಿಪ್ಸ್ ಹಾಕಿದ್ದಾರೆ. ಹುಷಾರಿಲ್ಲ ಹೊಟ್ಟೆ ಉರಿ ಬಂದಿದೆ. ಗ್ಲುಕೋಸ್ ಹಾಕಿದ್ದಾರೆ. ನಾನು ಶಾಸಕನಾಗಿ 25 ವರ್ಷ ಕಳೆದಿದೆ. ಬೇಕಂತಲೇ ಈ ರೀತಿ ಮಾಡಲಾಗಿದೆ. ವಾರಂಟ್ ಇಲ್ಲದೆಯೆ ಮನೆಗೆ ಬಂದು ಅರೆಸ್ಟ್ ಮಾಡಿದರು ಎಂದೆಲ್ಲ ಮಾಹಿತಿ ನೀಡಿದರು.
ವಾದ – ಪ್ರತಿವಾದ ಆಲಿಸಿದ ನ್ಯಾಯಾದೀಶರು, ಮೇ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಹೀಗಾಗಿ ಇಂದಿನಿಂದ 7 ದಿನಗಳ ವರೆಗೆ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಲಿದ್ದಾರೆ.
ವಾದ – ಪ್ರತಿವಾದ ಹೇಗಿತ್ತು?
ವಿಚಾರಣೆ ಆರಂಭವಾಗುತ್ತಿದ್ದಂತೆ, ಎಚ್.ಡಿ. ರೇವಣ್ಣ ಅವರನ್ನು ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಎಸ್ಐಟಿ ರಿಮ್ಯಾಂಡ್ ಅಪ್ಲಿಕೇಶನ್ ಸಲ್ಲಿಸಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ ಪರ ವಕೀಲರು, ಎಸ್ಐಟಿ ಸಲ್ಲಿಸಿರೋ ವರದಿಯಲ್ಲಿ ಆರೋಪಿ ತನಿಖೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ. ಮೌನ ವಹಿಸುವುದು ಸಹ ವ್ಯಕ್ತಿ ಹಕ್ಕಾಗಿದೆ ಎಂದು ಹೇಳಿದರು.
ಆದರೆ, ಈ ವೇಳೆ ಮಧ್ಯಪ್ರವೇಶ ಮಾಡಿದ ವಿಶೇಷ ಸಾರ್ವಜನಿಕ ಅಭಿಯೋಜಕರು, ಜಾಮೀನು ನೀಡದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮನವಿ ಮಾಡಿದರು. ಇದಕ್ಕೆ ರೇವಣ್ಣ ಪರ ವಕೀಲರಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಅಲ್ಲದೆ, ಹಳೇ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ಆಗ ಎಸ್‌ಐಟಿ ಪರ ವಕೀಲರು, ಆರೋಪಿ ಜಾಮೀನು ನೀಡಿದರೆ ಸಾಕ್ಷಿಯನ್ನು ನಾಶ ಪಡಿಸುತ್ತಾರೆ. ಈಗಾಗಲೇ 354a ಪ್ರಕರಣ ದಾಖಲಾಗಿದೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ವಿಚಾರಗಳನ್ನು ಈ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಆರೋಪಿ ಹೊಳೆನರಸೀಪುರ ತಾಲೂಕಿನಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವೆಲ್ಲವೂ ಜಾಮೀನು ಸಹಿತ ಸೆಕ್ಷನ್‌ಗಳಾಗಿವೆ ಎಂದು ವಾದ ಮಂಡಿಸಿದ್ದಾರೆ.
ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ನೀಡಿರುವ ಮಾಹಿತಿ ಮೆಲೆ ರೇವಣ್ಣ ಪರ ವಕೀಲರು ವಾದ ಮಂಡಿಸಿದ್ದು, ಮೌನ ವಹಿಸುವುದು ತನಿಖೆಗೆ ಸಹಕರಿಸಿಲ್ಲ ಎಂದು ಅಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಮೌನದಿಂದ ಇರುವುದನ್ನು ಒಪ್ಪಿದೆ ಎಂದು ಪ್ರಕರಣವೊಂದನ್ನು ಉಲ್ಲೇಖಿಸಿ ವಾದಿಸಿದ್ದಾರೆ. ಮಹಿಳೆಯನ್ನು ಸ್ವ – ಇಚ್ಛೆಯಿಂದ ಬೈಕ್‌ನಲ್ಲಿ ಕೂರಿಸಿಕೊಂಡು ಹೋದರೆ ಅಪಹರಣ ಏನಾಗುತ್ತದೆ? ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸಿದ್ದಾರೆ. ನೀಡಿದ ಮಾಹಿತಿಯನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ನಕಾರಾತ್ಮಕ ಅಂತ ಹೇಳಿದರೆ ಏನು ಅರ್ಥ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Prajwal Revanna Case: ಕಾರ್ತಿಕ್‌ಗೆ ನೋಟಿಸ್ ನೀಡದ SIT; ರಾಜ್ಯಪಾಲ, ಕೋರ್ಟ್ ಮೊರೆ ಹೋಗಲು ಎಚ್‌ಡಿಕೆ ನಿರ್ಧಾರ
ಹಿಂದಿನ ವಿಚಾರಣೆಯಲ್ಲಿ ಏನಾಗಿತ್ತು?
ಜಾಮೀನು ನೀಡುವಂತೆ ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಆರೋಪಿ ಕಸ್ಟಡಿಯಲ್ಲಿದ್ದಾಗ ಜಾಮೀನು ಅರ್ಜಿ ವಿಚಾರಣೆ ನಡೆಸಲು ಯೋಗ್ಯವೇ ಎಂಬ ಬಗ್ಗೆ ಪ್ರಶ್ನೆ ಮಾಡಿದ್ದರು. ಆಗ ಈ ಬಗ್ಗೆ ರೇವಣ್ಣ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ಸೂಚಿಸಿದ್ದು, ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿದ್ದರು.