ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಹೊಂದಿಕೊಂಡಂತೆ ಹನಿ ಟ್ರ್ಯಾಪ್ ಕೇಸ್‌ನಲ್ಲಿ ವಕೀಲ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ. ಒಂದು ವೇಳೆ ದೇವರಾಜೇಗೌಡ ಅವರನ್ನು ಬಂಧಿಸದೇ ಇದ್ದಿದ್ದರೆ ಇನ್ನಷ್ಟು ಸ್ಫೋಟಕ ಮಾಹಿತಿಯನ್ನು ಹೊರಗೆ ತರುವವರಿದ್ದರು ಎಂಬ ಸಂಗತಿ ಗೊತ್ತಾಗಿದೆ. ಬಿಜೆಪಿ ದೆಹಲಿ ನಾಯಕರ ಜತೆಗೆ ಸುದ್ದಿಗೋಷ್ಠಿ ನಡೆಸಲು ತಯಾರಿ ನಡೆಸಿದ್ದರು.
ವಕೀಲ ದೇವರಾಜೇಗೌಡ ಬಂಧನವಾಗಿರುವುದು ಹನಿ ಟ್ರ್ಯಾಪ್ ಕೇಸ್‌ನಲ್ಲಾದರೂ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆ ನಡೆಸಲಾಗಿದೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಈ ಸಾಕ್ಷಿಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಈಗ ಅವರನ್ನು ಎಸ್‌ಐಟಿ ಬಂಧಿಸಿದೆ.
ದೆಹಲಿ ನಾಯಕರೊಂದಿಗೆ ಸುದ್ದಿಗೋಷ್ಠಿ ನಡೆಸಲು ನಡೆದಿತ್ತು ತಯಾರಿ!
ಬೆಂಗಳೂರಿನಲ್ಲಿ ಈಗಾಗಲೇ ಎರಡೆರಡು ಸುದ್ದಿಗೋಷ್ಠಿ ನಡೆಸಿದ್ದ ವಕೀಲ ದೇವರಾಜೇಗೌಡ, ಕೆಲವೊಂದು ಆಡಿಯೊ ತುಣುಕನ್ನು ಮಾತ್ರವೇ ಪ್ಲೇ ಮಾಡಿದ್ದರು. ಬಳಿಕ ಇದರ ಮುಂದುವರಿದ ಭಾಗವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಇನ್ನಷ್ಟು ಆಡಿಯೊವನ್ನು ಬಿಡುಗಡೆ ಮಾಡಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಎಸ್‌ಐಟಿ ತನಿಖೆ ಬಗ್ಗೆ ನೇರವಾಗಿಯೇ ಅನುಮಾನವನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಇದೇ ವೇಳೆ ದೇವರಾಜೇಗೌಡ, ತಾವು ಬೇರೆ ರಾಜ್ಯಗಳ ಕೆಲವು ದೇವಾಲಯಗಳಿಗೆ ಹೋಗಿ ಬರುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಅವರ ಪ್ಲ್ಯಾನ್ ಬೇರೆಯೇ ಇತ್ತು.
ಪುಣೆ, ದೆಹಲಿಗೆ ಹೊರಟಿದ್ದ ದೇವರಾಜೇಗೌಡ
ತಾನು ಮಾಡಿದ ಸುದ್ದಿಗೋಷ್ಠಿಗಳು ರಾಷ್ಟ್ರ ಮಟ್ಟಕ್ಕೆ ಸುದ್ದಿಯಾಗಿದ್ದನ್ನು ಗಮನಿಸಿದ ದೇವರಾಜೇಗೌಡ, ಈ ವಿಷಯವನ್ನು ಬಿಜೆಪಿ ರಾಷ್ಟ್ರದ ನಾಯಕರ ಬಳಿ ತೆಗೆದುಕೊಂಡು ಹೋಗಬೇಕು ಮೊದಲು ಪುಣೆಗೆ ಹೊರಟರು. ಅಲ್ಲಿಂದ ನವ ದೆಹಲಿಗೆ ಹೋಗಿ ರಾಷ್ಟ್ರ ನಾಯಕರ ಜತೆಗೆ ಸುದ್ದಿಗೋಷ್ಠಿ ನಡೆಸಿ ಆಡಿಯೊ, ವಿಡಿಯೊವನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಡ್ಯಾಮೇಜ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಹೀಗೆ ಮಾಡುವ ಮೂಲಕ ಹೈಕಮಾಂಡ್ ವಿಶ್ವಾಸ ಪಡೆದು ತಾವು ಸಹ ರಾಜ್ಯದಲ್ಲಿ ಭವಿಷ್ಯದಲ್ಲಿ ಸ್ಥಾನಮಾನ ಪಡೆದುಕೊಳ್ಳುವ ಇರಾದೆಯನ್ನು ಹೊಂದಿದ್ದರು ಎನ್ನಲಾಗಿದೆ. ಆದರೆ, ಅವರ ಎಲ್ಲ ಪ್ಲ್ಯಾನ್‌ಗಳು ತಲೆಕೆಳಗಾಗಿವೆ. ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಕೇಸ್; ಇಬ್ಬರು ಪೆನ್‌ಡ್ರೈವ್ ಹಂಚಿಕೆದಾರರ ಅರೆಸ್ಟ್
ಕಾರಿನಲ್ಲಿತ್ತಾ ಮಹತ್ವದ ದಾಖಲೆಗಳು?
ಸದ್ಯ ದೇವರಾಜೇಗೌಡ ಕಾರಿನಲ್ಲಿದ್ದ ಮೊಬೈಲ್‌ಗಳನ್ನು ಸೀಜ್ ಮಾಡಿದ್ದು, ಅದರಲ್ಲಿ ಸಾಕಷ್ಟು ಆಡಿಯೊಗಳಿರುವುದು ಕಂಡು ಬಂದಿದೆ. ಇದು ಪೆನ್ ಡ್ರೈವ್‌ಗೆ ಸಂಬಂಧಪಟ್ಟ ಆಡಿಯೊ ಎನ್ನಲಾಗಿದೆ. ಸದ್ಯ ಹಾಸನ ಪೊಲೀಸರು ದೇವರಾಜೇಗೌಡ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ.