ಬಾಗಲಕೋಟೆ: ಹಾಸನದ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣದ (Hassan Pen Drive Case) ಪ್ರಮುಖ ಆರೋಪಿ ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ದುಬೈ ಅಲ್ಲ, ಎಲ್ಲಿಯಾದರೂ ಎಸ್ಕೇಪ್ ಆಗಲಿ. ಅಲ್ಲಿಂದಲೇ ಹಿಡಿದುಕೊಂಡು ಬರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಜ್ವಲ್ ಜರ್ಮನಿಯಿಂದ ದುಬೈಗೆ ಎಸ್ಕೇಪ್ ಆಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ಎಲ್ಲಿಯಾದರೂ ಎಸ್ಕೇಪ್ ಆಗಲಿ. ಅಲ್ಲಿಂದಲೇ ಹಿಡಿದುಕೊಂಡು ಬರುತ್ತೇವೆ. ಯಾವ ದೇಶದಲ್ಲಿ ಇದ್ದರೂ ಬಿಡುವುದಿಲ್ಲ. ಅಲ್ಲಿಂದಲೇ ಕರೆದುಕೊಂಡು ಬರುತ್ತೇವೆ ಎಂದು ಹೇಳಿದರು.
ಈ ಕಾರಣಕ್ಕಾಗಿಯೇ ನಾನು ಪ್ರಜ್ವಲ್ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅನ್ನು ರದ್ದು ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ. ಪಾಸ್‌ಪೋರ್ಟ್ ಕ್ಯಾನ್ಸಲ್ ಆದ ಮೇಲೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗುವುದಿಲ್ಲವಲ್ಲ. ಈ ಕಾರಣಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಜ್ವಲ್ ಪಾಸ್‌ಪೋರ್ಟ್ ಅನ್ನು ಕ್ಯಾನ್ಸಲ್ ಮಾಡಲಿ ಮಾಡಲಿ. ಪ್ರಜ್ವಲ್ ವಿದೇಶಕ್ಕೆ ಹೋಗಬೇಕಾದರೆ ಕೇಂದ್ರ ಸರ್ಕಾರಕ್ಕೆ ಗೊತ್ತಿರುವುದಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಸಂತ್ರಸ್ತರ ರಕ್ಷಣೆ ಮಾಡಲು ಸೂಚಿಸಿದ್ದೇನೆ
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಸಂತ್ರಸ್ತೆ ಕಿಡ್ನ್ಯಾಪ್ ಆಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಆ ಹೆಣ್ಣುಮಕ್ಕಳ ಎಲ್ಲಿ ಹೋಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರನ್ನು ರಕ್ಷಣೆ ಮಾಡುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Prajwal Revanna Case: ಪ್ರಜ್ವಲ್, ರೇವಣ್ಣಗೆ ಮತ್ತೊಂದು ನೋಟಿಸ್; ವಿಚಾರಣೆಗೆ ಬಾರದಿದ್ದರೆ ಅರೆಸ್ಟ್: ಡಾ. ಜಿ. ಪರಮೇಶ್ವರ್
ರಾಜಕೀಯ ಮಾಡೋದು ಒಟ್ಟಿಗೆ, ಕುಕೃತ್ಯ ಮಾಡೋದೂ ಒಟ್ಟಿಗೆ
ಪ್ರಜ್ವಲ್ ಅವರ ತಂದೆ ಎಚ್.ಡಿ. ರೇವಣ್ಣ ಅವರು ಲಾಯರ್ ಹತ್ತಿರ ಯಾಕೆ ಹೋಗಿದ್ದಾರೆ? ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮನೆಗೆ ಲಾಯರ್ ಅನ್ನು ಕರೆಸಿಕೊಂಡು ಏಕೆ ಚರ್ಚೆ ಮಾಡಿದ್ದಾರೆ? ಎಚ್‌ಡಿಕೆ ಒಮ್ಮೆ ಹೇಳುತ್ತಾರೆ, ರೇವಣ್ಣ, ನಾನು ಬೇರೆ ಬೇರೆ ಆಗಿದ್ದೇವೆ ಅಂತ. ದೇವೇಗೌಡರಿಗೂ, ನಮಗೂ ಈ ಪ್ರಕರಣಕ್ಕೂ ಏನೂ ಸಂಬಂಧ ಇಲ್ಲ ಅಂತ ಹೇಳುತ್ತಾರೆ. ಇನ್ನೊಂದು ಕಡೆ ಇದೆಲ್ಲವನ್ನೂ ಮಾಡುತ್ತಾರೆ. ಚುನಾವಣೆ ಪ್ರಚಾರದಲ್ಲಿ ಪ್ರಜ್ವಲ್ ಬೇರೆ ಅಲ್ಲ, ನನ್ನ ಮಗ ಬೇರೆ ಅಲ್ಲ ಎಂದು ಹೇಳಿದ್ದು ಕುಮಾರಸ್ವಾಂಇ ಅಲ್ಲವೇ? ಇದರ ಅರ್ಥ ಏನು? (What is it mean?) ಅವರು ಮಾಡೋದೆಲ್ಲವನ್ನೂ ಒಟ್ಟಿಗೆ ಮಾಡೋದು. ರಾಜಕೀಯ ಮಾಡೋದು ಒಟ್ಟಿಗೆ, ಕುಕೃತ್ಯ ಮಾಡೋದೂ ಒಟ್ಟಿಗೆ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದರು.