ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಎಸ್‌ಐಟಿ ಮುಂದೆ ಹಾಜರಾಗಿ ಕೆಲವು ಮಹತ್ವದ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಪೆನ್‌ಡ್ರೈವ್ ಲೀಕ್ ಮಾಡಿದ್ದು ಯಾರು ಎಂಬ ಬಗ್ಗೆಯೂ ಹೇಳಿಕೆ ನೀಡಿದ್ದೇನೆ. ಇದನ್ನು ಇಲ್ಲಿ ಹೇಳಲಾಗುವುದಿಲ್ಲ. ಆದರೆ, ಇನ್ನೊಂದು ವಾರದಲ್ಲಿ ಎಲ್ಲವೂ ಹೊರಗೆ ಬರಲಿದೆ ಎಂದು ಹೇಳಿದ್ದಾರೆ.
ಎಸ್‌ಐಟಿ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಕೀಲ ದೇವರಾಜೇಗೌಡ, ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ಗುರುವಾರ ನೋಟಿಸ್ ನೀಡಿದ್ದರು. ಅದರಂತೆ ಇಂದು ಹಾಜರಾಗಿ ನಾನು ಎಲ್ಲ ಸಂಗತಿಗಳನ್ನು ಹೇಳಿದ್ದೇನೆ. ಈ ವಿಡಿಯೊಗಳನ್ನು ವೈರಲ್ ಮಾಡಿದವರು ಯಾರು ಎನ್ನುವ ಮಾಹಿತಿ ನನಗೆ ಗೊತ್ತಿದೆ. ಅದನ್ನು ಎಸ್‌ಐಟಿ ಅಧಿಕಾರಿಗಳಿಗೆ ಹೇಳಿದ್ದೇನೆ. ಯಾರು ಎಂಬುದನ್ನು ನಾನು ಇಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಎಚ್‌ಡಿಕೆಯಿಂದ ಮಹತ್ವದ ನಿರ್ಧಾರ
ಹಾಸನದಲ್ಲಿ ಒಕ್ಕಲಿಗ ನಾಯಕತ್ವಕ್ಕೆ ಇಷ್ಟೆಲ್ಲ ಆಗುತ್ತಲಿದೆ. ಮುಂದಿನ ಒಂದು ವಾರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಆಗ ಎಲ್ಲವನ್ನೂ ಪ್ರಕಟಿಸುವವರಿದ್ದಾರೆ. ಯಾರು ವಿಡಿಯೊಗಳನ್ನು ಬಿಡುಗಡೆ ಮಾಡಿದ್ದಾರೋ ಆ ಎಲ್ಲವೂ ಒಂದು ವಾರದಲ್ಲಿ ಹೊರಗೆ ಬರತ್ತದೆ ಎಂದು ದೇವರಾಜೇಗೌಡ ತಿಳಿಸಿದರು.
ನನ್ನ ಬಳಿ ಇದ್ದ ಎಲ್ಲ ಸಾಕ್ಷಿಗಳನ್ನು ನೀಡಿದ್ದೇನೆ. ನಿನ್ನೆ ನನ್ನನ್ನು ಸಾಕ್ಷಿಯಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ಮತ್ತು ಎಸ್‌ಐಟಿ ಅಧಿಕಾರಿಗಳು ತೀವ್ರ ಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ದೇವರಾಜೇಗೌಡ ಹೇಳಿದರು.
ರಾಜಕೀಯಕ್ಕಾಗಿಯೇ ಇದೆಲ್ಲ ನಡೆಯುತ್ತಿದೆ
ಈ ಎಲ್ಲ ಬೆಳವಣಿಗೆಗಳು ರಾಜಕೀಯ ಕುತಂತ್ರದಿಂದ ನಡೆದಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ದೇವರಾಜೇಗೌಡ, ಇದೆಲ್ಲ ನಡೆಯುತ್ತಿರುವುದೇ ರಾಜಕೀಯವಾಗಿ. ಎಲ್ಲ ದಿಕ್ಕಿನಲ್ಲಿಯೂ ತನಿಖೆ ನಡೆಸುತ್ತಿರುವುದು ಖುಷಿಯನ್ನು ತಂದಿದೆ. ಯಾರೂ ಈ ತನಿಖೆಯಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಅನ್ನಿಸುತ್ತಿಲ್ಲ ಎಂದು ಹೇಳಿದರು.
ಗನ್ ಪಾಯಿಂಟ್‌ನಲ್ಲಿ ಜೆಡಿಎಸ್ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್?
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ರೇಪ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ನೇರವಾಗಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೊಟ್ಟ ದೂರಿನಲ್ಲಿ ಭಯಾನಕ ಸತ್ಯಗಳು ಹೊರಬಂದಿದ್ದು, ಗನ್ ಪಾಯಿಂಟ್‌ನಲ್ಲಿ ಜೆಡಿಎಸ್ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಜೆಡಿಎಸ್ ನಾಯಕಿ, ಸಂತ್ರಸ್ತೆ ದೂರಿನಲ್ಲಿ ತನಗಾದ ಅನ್ಯಾಯವನ್ನು ಹಾಗೂ ಅತ್ಯಾಚಾರದ ಸಂಗತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಮಾತಿಗೆ ಹೋದಾಗ ರೇಪ್?
ಜೆಡಿಎಸ್ ನಾಯಕಿ ತಮ್ಮ ಮೇಲೆ ಯಾವಾಗ ಅತ್ಯಾಚಾರ ನಡೆದಿದೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. 2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮಾತನಾಡಲು ಹೋದಾಗ ತಮ್ಮ ಮೇಲೆರಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ತಾವು ನಿರಾಕರಣೆ ಮಾಡಿದಾಗ ಗನ್ ಹಿಡಿದು ಹೆದರಿಸಿ ಬಲಾತ್ಕಾರ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಹಾಸನದಲ್ಲಿರುವ ಸಂಸದರ ಬಂಗಲೆಯ ಮಹಡಿ ರೂಮ್‌ನಲ್ಲೇ ರೇಪ್ ಮಾಡಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.
ಗಂಡನ ಬಗ್ಗೆ ಬೆದರಿಸಿ ಬಲಾತ್ಕಾರ
ದೈಹಿಕ ಸಂಪರ್ಕ ಬೆಳೆಸಲು ಪ್ರಜ್ವಲ್ ಮುಂದಾಗುತ್ತಿದ್ದಂತೆ ನಾನು ನಿರಾಕರಣೆ ಮಾಡಿದೆ. ಆಗ “ನಿನ್ನ ಗಂಡನನ್ನು ನಾನು ಬಿಡಲ್ಲ” ಎಂದು ಹೆದರಿಸಿ ದೌರ್ಜನ್ಯ ನಡೆಸಿದರು ಎಂದು ಎಸ್‌ಐಟಿಗೆ ಸಂತ್ರಸ್ತೆ ನೀಡಿದ್ದ ದೂರು ಆಧಾರದಲ್ಲಿ ಸಿಐಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 376 (2) (ಎನ್) ಹಾಗೂ ಐಟಿ ಆ್ಯಕ್ಟ್‌ನಲ್ಲಿ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ. ಹೇಗೆಲ್ಲ ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Prajwal Revanna Case: ರೇವಣ್ಣ ಮೇಲಿನ ಮತ್ತೊಂದು ಕೇಸ್ ಎಸ್‌ಐಟಿಗೆ ವರ್ಗ; ಭವಾನಿಗೂ ನೋಟಿಸ್!
ರೇಪ್ ಮತ್ತು ಚಿತ್ರೀಕರಣ ಆರೋಪ
ತಮ್ಮ ಮೇಲೆ ಬಲಾತ್ಕಾರ ಮಾಡಿದ್ದಲ್ಲದೆ, ಅದನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಬಾಯಿ ಬಿಟ್ಟರೆ ಸೋಷಿಯಲ್ ಮೀಡಿಯಾದಲ್ಲಿ ನಿನ್ನ ವಿಡಿಯೊವನ್ನು ಬಿಡುತ್ತೇನೆ ಎಂಧು ಬೆದರಿಕೆ ಒಡ್ಡಿದ್ದಾರೆ. ನಾನು ಕರೆದಾಗೆಲ್ಲ ನೀನು ಬರಬೇಕು. ಇಲ್ಲದಿದ್ದರೆ ನನ್ನ ಬಳಿ ಇರುವ ವಿಡಿಯೊವನ್ನು ಹರಿಬಿಡುತ್ತೇನೆ ಎಂದು ಬೆದರಿಸಿ ಕಳುಹಿಸಿದ್ದಾರೆ. ಇಷ್ಟೇ ಅಲ್ಲದೆ, ಪದೇ ಪದೆ ವಿಡಿಯೊ ಕಾಲ್ ಮಾಡಿ ಬೆತ್ತಲೆಯಾಗು ತಾನು ನೋಡಬೇಕು ಎಂದು ಕಿರುಕುಳ ಕೊಟ್ಟು ನಗ್ನತೆಯನ್ನು ನೋಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಪದೇ ಪದೆ ತಮಗೆ ಬ್ಲ್ಯಾಕ್‌ಮೇಲ್ ಮಾಡಿ ಬಲಾತ್ಕಾರ ಮಾಡುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.