Site icon Vistara News

Prajwal Revanna Case: ವಿದೇಶದಿಂದ ಬಾರದ ಪ್ರಜ್ವಲ್‌; ಜರ್ಮನಿಗೆ ಹೋಗುತ್ತಾ ಎಸ್‌ಐಟಿ ಟೀಂ? ಮುಂದಿನ ಆಯ್ಕೆ ಏನು?

Prajwal Revanna Case

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೆ ಕೇಸ್‌ ಜಟಿಲವಾಗುತ್ತಲೇ ಇದೆ. ಒಂದು ಕಡೆ ಎಸ್‌ಐಟಿ ತನಿಖೆ ಬಗ್ಗೆ ವಿಪಕ್ಷಗಳ ಅಸಮಾಧಾನ ಹಾಗೂ ಆರೋಪ. ಇನ್ನೊಂದು ಕಡೆ ಪ್ರಜ್ವಲ್‌ ರೇವಣ್ಣ ದೇಶಬಿಟ್ಟು 19 ದಿನ ಕಳೆದಿದರೂ ಸುಳಿವಿಲ್ಲ. ಈಗಿನ ಪ್ರಕಾರ, ಸದ್ಯಕ್ಕೆ ಪ್ರಜ್ವಲ್ ವಾಪಸಾಗುವುದು ಅನುಮಾನ ಎನ್ನಲಾಗಿದೆ. ಹಾಗಾಗಿ ಎಸ್‌ಐಟಿ ಅಧಿಕಾರಿಗಳ ಮುಂದಿನ ನಡೆ ಏನು? ಬೇರೆ ದೇಶಕ್ಕೆ ಹೋಗಿ ಅವರನ್ನು ಬಂಧಿಸಿ ಕರೆತರಲು ಸಾಧ್ಯವಿದೆಯೇ? ಅದು ಸಾಧ್ಯವಿಲ್ಲವಾದರೆ ಬೇರೆ ಯಾವ ಮಾರ್ಗವಿದೆ? ಅಥವಾ ಪ್ರಜ್ವಲ್‌ ಬರುವವರೆಗೂ ಕಾಯುತ್ತಾ ಕೂರಬೇಕಾ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ.

ಈಗಿನ ಮಾಹಿತಿ ಪ್ರಕಾರ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಸದ್ಯ ಎಸ್‌ಐಟಿ ತಂಡದವರು ಬೇರೆ ದೇಶಕ್ಕೆ ತೆರಳಿ ಪ್ರಜ್ವಲ್‌ ಅವರನ್ನು ಕರೆತರಲು ಸಾಧ್ಯವಿಲ್ಲ. ಇನ್ನು ಪ್ರಜ್ವಲ್‌ ಇಲ್ಲಿಂದ ಜರ್ಮನಿಗೆ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಿ ಹೋಗಿದ್ದಾರಾದರೂ ಅವರು ಜರ್ಮನಿಯಲ್ಲಿಯೇ ಇದ್ದಾರಾ? ಅಥವಾ ಅಲ್ಲಿಂದ ಬೇರೆ ದೇಶಕ್ಕೇನಾದರೂ ಹೋಗಿದ್ದಾರಾ ಎಂಬುದೂ ಖಾತ್ರಿಯಾಗಿಲ್ಲ. ಆದರೆ, ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಂತೆ ಫ್ಲೈಟ್‌ ಟಿಕೆಟ್‌ ಅನ್ನು ಮಾತ್ರ ಬುಕ್‌ ಮಾಡುತ್ತಾ ಕುಳಿತಿದ್ದಾರೆ. ಕೊನೇ ಕ್ಷಣದಲ್ಲಿ ಫ್ಲೈಟ್‌ ಹತ್ತದೆ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಅದು ಬಿಟ್ಟರೆ ಇತ್ತ ಸುಳಿಯುವ ಯಾವುದೇ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ.

ಹೀಗಾಗಿ ಮೊದಲು ಪ್ರಜ್ವಲ್ ಯಾವ ದೇಶದಲ್ಲಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಕಲೆ ಹಾಕಬೇಕು. ಇಲ್ಲದೆ ಹೋದರೆ ಈಗಾಗಲೇ ಜಾರಿ ಮಾಡಲಾಗಿರುವ ಬ್ಲೂ ಕಾರ್ನರ್ ನೋಟಿಸ್‌ನಿಂದಾಗಿ ಯಾವ ದೇಶದಿಂದಾದರೂ ಮಾಹಿತಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಹೀಗಾಗಿ ಇಂಟರ್ ಪೋಲ್ ಅಧಿಕಾರಿಗಳಿಂದ ಮಾಹಿತಿ ಬರುವವರೆಗೂ ಕಾಯಲೇಬೇಕು.

ಇದನ್ನೂ ಓದಿ: Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

ಪ್ರಜ್ವಲ್‌ ಇರುವ ದೇಶ ಗೊತ್ತಾದರೆ ಎಸ್‌ಐಟಿ ಅರೆಸ್ಟ್‌ ಮಾಡಬಹುದಾ?

ಒಂದು ವೇಳೆ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿಯೇ ಅಥವಾ ಇನ್ಯಾವುದೋ ದೇಶದಲ್ಲಿ ಅಡಗಿದ್ದಾರೆ ಎಂಬುದು ಗೊತ್ತಾದರೆ ಎಸ್‌ಐಟಿ ಹೋಗಿ ಅರೆಸ್ಟ್‌ ಮಾಡಬಹುದಾ ಎಂದು ಕೇಳಿದರೆ, ಅದು ಸಾಧ್ಯವಿಲ್ಲ ಎಂಬ ಉತ್ತರ ಸಿಗಲಿದೆ. ಹಾಗಾಗಿ ಅವರು ಯಾವ ದೇಶದಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಕ್ಕರೆ ಇಂಟರ್ ಪೋಲ್ ಮುಖಾಂತರ ಹಸ್ತಾಂತರ ಮಾಡಿಕೊಳ್ಳಬಹುದು. ಅದು ಕೂಡ ಆ ದೇಶ ಹಾಗೂ ನಮ್ಮ ದೇಶದ ನಡುವೆ ಹಸ್ತಾಂತರ ಒಪ್ಪಂದ (Extradition Treaty) ಇರಬೇಕು. ಆಗ ಅಲ್ಲಿನ ಸರ್ಕಾರಕ್ಕೆ ಮಾಹಿತಿ ನೀಡಿ ಹಸ್ತಾಂತರ ಮಾಡಿಕೊಳ್ಳಬಹುದು. ಅದೂ ಆಗದೇ ಹೋದರೆ, ಅವರು ಎಲ್ಲಿದ್ದಾರೆಂದು ತಿಳಿದುಕೊಂಡು ಸುಮ್ಮನೆ ಕೂರಬಹುದೇ ಹೊರತು ಬೇರೇನೂ ಮಾಡುವುದಕ್ಕೆ ಆಗುವುದಿಲ್ಲ. ಆಗ ಪ್ರಜ್ವಲ್ ತಾನಾಗಿಯೇ ಬರುವವರೆಗೂ ಕಾಯಲೇಬೇಕು.

Exit mobile version