ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣದಲ್ಲಿ (Hassan Pen Drive Case) ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಕೇಸ್‌ಗೆ ಸಂಬಂಧಿಸಿ ಆ ವಿಡಿಯೊದಲ್ಲಿ ಇದ್ದಾರೆ ಎನ್ನಲಾದ ಮೂವರು ಮಹಿಳಾ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಒಬ್ಬೊಬ್ಬರೂ, “ನಾನವಳಲ್ಲ” ಎಂಬ ಉತ್ತರವನ್ನು ನೀಡಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ನಡುವೆ ವಿಡಿಯೊದಲ್ಲಿ ಸಾಕಷ್ಟು ಮಹಿಳಾ ಅಧಿಕಾರಿಗಳೂ ಇದ್ದಾರೆ ಎಂಬ ಬಗ್ಗೆ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಡಿಯೊಗಳಲ್ಲಿ ಕಂಡ ಮುಖವನ್ನಾಧರಿಸಿ ಅವರ ಗುರುತನ್ನು ಪತ್ತೆ ಹಚ್ಚಿರುವ ಎಸ್‌ಐಟಿ ಅಧಿಕಾರಿಗಳು ಆ ಸಂತ್ರಸ್ತ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಈಗಾಗಲೇ ಈ ಪ್ರಕರಣದಲ್ಲಿ ಸಂಪೂರ್ಣ ಮುಜುಗರವನ್ನು ಅನುಭವಿಸಿರುವ ಮಹಿಳಾ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳ ವಿಡಿಯೊ ಹಾಗೂ ಫೋಟೊಗಳು ಸಹ ವೈರಲ್ ಆಗಿದ್ದವು. ಇದರಿಂದ ಅವರು ತೀವ್ರ ಆಘಾತವನ್ನು ಎದುರಿಸಿದ್ದಾರೆ.
ಈಗ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರಿಂದ ಮತ್ತಷ್ಟು ಕಂಗೆಟ್ಟಿರುವ ಮಹಿಳಾ ಅಧಿಕಾರಿಗಳು, ಆ ವಿಡಿಯೊ ಹಾಗೂ ಫೋಟೊಗಳು ನಮ್ಮದಲ್ಲ. ಅದನ್ನು ಮಾರ್ಫ್ ಮಾಡಲಾಗಿದೆ ಎಂದು ನೋಟಿಸ್‌ಗೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ.
ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ
ಒಂದು ವೇಳೆ ಈ ಮಹಿಳಾ ಅಧಿಕಾರಿಗಳು ಎಸ್‌ಐಟಿ ಮುಂದೆ ಬಂದು ತಮ್ಮ ಮೇಲೆ ಪ್ರಜ್ವಲ್ ದೌರ್ಜನ್ಯ ಮಾಡಿದ್ದಾರೆ. ಆಮಿಷವೊಡ್ಡುವ ಮೂಲಕ ಇಲ್ಲವೇ ಕಿರುಕುಳ ನೀಡುವ ಮೂಲಕ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರೆ, ಈ ಕೇಸ್ ಮತ್ತಷ್ಟು ಬಲಿಷ್ಠವಾಗುತ್ತಿತ್ತು. ಆದರೆ, ಈಗ ಈ ಮಹಿಳಾ ಅಧಿಕಾರಿಗಳು ಆ ವಿಡಿಯೊ ಹಾಗೂ ಫೋಟೊದಲ್ಲಿರುವುದು ನಾವೇ ಅಲ್ಲ ಎಂದು ಹೇಳಿಬಿಟ್ಟಿದ್ದಾರೆ. ಹಾಗಾಗಿ ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಎಸ್‌ಐಟಿ ಅಧಿಕಾರಿಗಳು ಅವರ ಮನವೊಲಿಕೆ ಮಾಡಿದಲ್ಲಿ ಗೌಪ್ಯ ಸ್ಥಳದಲ್ಲಿ ಹೇಳಿಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!
ಇಂದು (ಭಾನುವಾರ – ಮೇ 5) ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಏರ್‌ಪೋರ್ಟ್ ಬಳಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡವು ಪ್ರಜ್ವಲ್ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಇಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಜ್ವಲ್ ಯಾವುದೇ ಸಮಯದಲ್ಲಿ ಬೇಕಿದ್ದರೂ ಭಾರತಕ್ಕೆ ಬರಬಹುದು ಎಂಬ ನಿಟ್ಟಿನಲ್ಲಿ ಶನಿವಾರ ರಾತ್ರಿಯಿಂದಲೇ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಟೀಂ ಬೀಡುಬಿಟ್ಟಿದೆ. ಆದರೆ, ಪ್ರಜ್ವಲ್ ರೇವಣ್ಣ ಈವರೆಗೂ ಆಗಮಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಕಾದು ಕಾದು ಅಧಿಕಾರಿಗಳು ಸುಸ್ತಾಗಿದ್ದಾರೆ.
ಆದರೆ, ಈಗಿನ ಮಾಹಿತಿ ಪ್ರಕಾರ, ಪ್ರಜ್ವಲ್ ರೇವಣ್ಣ ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ಗಾಗಿ ಎಸ್ಐಟಿ, ಗುಪ್ತಚರ ತಂಡಗಳು ಕಾದು ಕುಳಿತಿದ್ದು, ವಿದೇಶಿ ವಿಮಾನಗಳ ಪ್ಯಾಸೆಂಜರ್ ಲಿಸ್ಟ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ದುಬೈ, ಮಸ್ಕಟ್, ಪ್ರಾಂಕ್ ಫರ್ಟ್ ವಿಮಾನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಹಾಸನ ಸಂಸದರ ನಿವಾಸವನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು
ಸಂಸದ ಪ್ರಜ್ವಲ್ ರೇವಣ್ಣ ಅವರು ಹಾಸನದ ತಮ್ಮ ನಿವಾಸದಲ್ಲೇ ಅತ್ಯಾಚಾರ (Physical abuse) ನಡೆಸಿರುವ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸಂಸದರ ನಿವಾಸವನ್ನು ಲಾಕ್ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಸರ್ಕಾರ ನೀಡಿದ್ದ ಈ ನಿವಾಸವನ್ನು ಪ್ರಜ್ವಲ್ ಬಳಸಿಕೊಳ್ಳುತ್ತಿದ್ದರು.
ಎಸ್‌ಐಟಿ ಅಧಿಕಾರಿಗಳು ಇದೀಗ ಈ ನಿವಾಸವನ್ನು ವಶಕ್ಕೆ ಪಡೆದಿದ್ದಾರೆ. ಸಂಸದರ ನಿವಾಸದ ರೂಮ್‌ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಹೊರಿಸಿದ್ದ ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ದೇವೇಗೌಡ ಅವರಿಗೆ ಸರ್ಕಾರ ಈ ಬಂಗಲೆಯನ್ನು ನೀಡಿತ್ತು. ಇಂದಿಗೂ ದೇವೇಗೌಡರಿಗೆ ಮೀಸಲಾಗಿರುವ ಸಂಸದರ ನಿವಾಸವನ್ನು ಸದ್ಯ ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿದ್ದಾರೆ.
2019ರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರಿಗಾಗಿಯೇ ಈ ನಿವಾಸವನ್ನು ನಿರ್ಮಾಣ ಮಾಡಲಾಗಿತ್ತು. ಹಾಸನಕ್ಕೆ ಬಂದಾಗ ತಂಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ನಿವಾಸವನ್ನು ನಿರ್ಮಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ದೇವೇಗೌಡರಿಗೆ ನೀಡಿದ್ದ ನಿವಾಸವನ್ನು ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿದ್ದರು.
ದೇವೇಗೌಡರು ಹಾಸನ ನಗರಕ್ಕೆ ಬಂದಾಗ ತಂಗುತ್ತಿದ್ದ ಇದೇ ನಿವಾಸದಲ್ಲಿ ವಾರದಲ್ಲಿ ನಾಲ್ಕು ದಿನ ಪ್ರಜ್ವಲ್ ವಾಸ್ತವ್ಯ ಹೂಡುತ್ತಿದ್ದರು. ಸದ್ಯ ಈ ನಿವಾಸದಲ್ಲೇ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಅಶ್ಲೀಲ ವಿಡಿಯೊ ರೆಕಾರ್ಡ್ ಕೂಡ ಇದೇ ನಿವಾಸದ ರೂಮ್‌ನಲ್ಲಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ನಿವಾಸ ಹಾಸನದ ಆರ್.ಸಿ. ರಸ್ತೆಯಲ್ಲಿದೆ.
ಹೊಳೆನರಸೀಪುರದಲ್ಲಿ ನೀರವ ಮೌನ
ಮಾಜಿ ಸಚಿವ ರೇವಣ್ಣ ಬಂಧನದ ಬಳಿಕ ಹೊಳೆನರಸೀಪುರದಲ್ಲಿ ನೀರವ ಮೌನ ಆವರಿಸಿದೆ. ಸದಾ ಜನರಿಂದ ತುಂಬಿರುತ್ತಿದ್ದ ರೇವಣ್ಣರ ಹೊಳೆನರಸೀಪುರದ ಮನೆ ಖಾಲಿ ಖಾಲಿ ಎನಿಸಿದೆ. ಸದ್ಯ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಮನೆಯಲ್ಲಿಯೇ ಇದ್ದಾರೆ. ಶನಿವಾರ ರೇವಣ್ಣ ಅವರ ಮನೆಯಲ್ಲಿ ಮಹಜರು ನಡೆಸಿದ್ದ ಎಸ್‌ಐಟಿ ತಂಡ ವಶಕ್ಕೆ ಪಡೆದಿತ್ತು. ಹಾಸನ ರಸ್ತೆಯಲ್ಲಿ ರೇವಣ್ಣ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಒಂದು ಕೆಎಸ್ಆರ್‌ಪಿ ತುಕಡಿಯನ್ನ ಮನೆ ಬಳಿ ನಿಯೋಜನೆ ಮಾಡಿ ಭದ್ರತೆ ಖಚಿತಪಡಿಸಲಾಗಿದೆ.
ಇದನ್ನೂ ಓದಿ: Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!
ಈ ಮಧ್ಯೆ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಮತ್ತೆ ಇಂದು ವಿಚಾರಣೆಗೆ ಒಳಪಡಿಸಲಿದೆ. ಶನಿವಾರ ರಾತ್ರಿ ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮತ್ತೆ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ಮಹಿಳೆಯ ಅಪಹರಣ ಪ್ರಕರಣದ ಬಗ್ಗೆ ಕೂಲಂಕಷ ವಿಚಾರಣೆ ನಡೆಸಲಿದ್ದಾರೆ. ಇಂದು ಸಂಜೆ ಕೋರಮಂಗಲದ ಎನ್‌ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ರೇವಣ್ಣ ಅವರನ್ನು ಹಾಜರುಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ನಿವಾಸದ ಎದುರು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.