ನವ ದೆಹಲಿ: ಹೋಮ್ ವರ್ಕ್ ಕಂಪ್ಲೀಟ್ ಮಾಡಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ಸಹೋದರಿಯರಿಬ್ಬರಿಗೆ ಖಾಸಗಿ ಟ್ಯೂಷನ್ ಶಿಕ್ಷಕ(Tution Teacher)ರೊಬ್ಬರು ಅಮಾನುಷವಾಗಿ ಥಳಿಸಿರುವ ಘಟನೆ ದಿಲ್ಲಿಯ ಭಾಲ್ಸ್ವಾ ಡೈರಿ ಪ್ರದೇಶದಲ್ಲಿ ನಡೆದಿದೆ. ಟೀಚರ್ ಪ್ಲಾಸ್ಟಿಕ್ ಪೈಪ್‌ನಿಂದ ಮಕ್ಕಳಿಗೆ ಹೊಡೆದಿದ್ದಾರೆ.
ಸಹೋದರಿಯರಿಬ್ಬರು 6 ಮತ್ತ 8 ವರ್ಷ ವಯಸ್ಸಿನವರಾಗಿದ್ದಾರೆ. ಈ ಘಟನೆ ಸಂಬಂಧ ದಿಲ್ಲಿ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ. ದಿಲ್ಲಿ ಪೊಲೀಸರಿಗೆ ಆಯೋಗವು ನೋಟಿಸ್ ನೀಡಿದ್ದು, ಕ್ರಮದ ಬಗ್ಗೆ ಮಾಹಿತಿಯನ್ನು ಕೇಳಿದೆ ಎಂದು ತಿಳಿದು ಬಂದಿದೆ.
ಮನೆಗೆ ಹತ್ತಿರದಲ್ಲೇ ಇರುವ ಖಾಸಗಿ ಟ್ಯೂಷನ್ ಸೆಂಟರ್‌ಗೆ ಮಕ್ಕಳನ್ನು ಅಧ್ಯಯನ್ಕಕ್ಕೆ ಕಳುಹಿಸುತ್ತಿದ್ದೆವು. ಆಗಸ್ಟ್ 31ರ ಸಂಜೆ ಟ್ಯೂಷನ್‌ನಿಂದ ಮನೆಗೆ ಬಂದ ಮಕ್ಕಳು, ಸಿಕ್ಕಾಪಟ್ಟೆ ಅಳುತ್ತಿದ್ದರು. ಯಾಕೆ ಅಳುತ್ತಿದ್ದೀರಿ ಎಂದು ವಿಚಾರಿಸಿದಾಗ, ಹೋಮ್ ವರ್ಕ್ ಪೂರ್ತಿ ಮಾಡದ್ದಕ್ಕೆ ಟ್ಯೂಷನ್ ಟೀಚರ್ ಅಮಾನುಷವಾಗಿ ಹೊಡೆದಿರುವ ವಿಷಯವನ್ನು ತಿಳಿಸಿದ್ದಾರೆ ಎಂದು ಮಕ್ಕಳ ತಂದೆ ಮಾಹಿತಿ ನೀಡಿದ್ದಾರೆ.
ಟ್ಯೂಷನ್ ಟೀಚರ್ ಸಂತ್ರಸ್ತ ಮಕ್ಕಳಿಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಅವರಿಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಪೈಪ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಕ್ಕಳ ದೇಹದ ಮೇಲೆ ಸಾಕಷ್ಟು ಬಾಸುಂಡೆಗಳು ಮೂಡಿವೆ. ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಪೋಷಕರು ಅವರಿಗೆ ಚಿಕಿತ್ಸೆ ನೀಡಿದ್ದಾರೆ.
ಮಕ್ಕಳನ್ನು ಅಮಾನುಷವಾಗಿ ಹೊಡೆದಿರುವ ಪ್ರಕರಣವನ್ನು ಮಹಿಳಾ ಮತ್ತು ಮಕ್ಕಳ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಆಪಾದಿತ ಟ್ಯೂಷನ್ ಟೀಚರ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಯೋಗವು ದಿಲ್ಲಿ ಪೋಲಿಸರಿಗೆ ನೋಟಿಸ್ ನೀಡಿದೆ. ಆರೋಪಿಯ ವಿರುದ್ಧ ಕೈಗೊಂಡ ಕ್ರಮ ಮತ್ತು ಎಫ್ಐಆರ್ ದಾಖಲಿಸಿದ ಮಾಹಿತಿಯನ್ನು ಒದಗಿಸುವಂತೆಯೂ ಸೂಚಿಸಿದೆ. ಅಷ್ಟು ಮಾತ್ರವಲ್ಲದೇ, ಆಪಾದಿತ ಟೀಚರ್ ವಿರುದ್ಧ ಸೆಪ್ಟೆಂಬರ್ 6ರೊಳಗೇ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ.
ಇದನ್ನೂ ಓದಿ | Kidnap Case | ಟ್ಯೂಷನ್‌ಗೆ ಹೋಗಿದ್ದ ಬಾಲಕನ ಕಿಡ್ನ್ಯಾಪ್ ಮಾಡಿದ್ದ ಗ್ಯಾಂಗ್ 2 ಗಂಟೇಲಿ ಅರೆಸ್ಟ್!