ಪುಣೆ: ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಇನ್ನೊಬ್ಬರ ಖಾಸಗಿ ವಿಡಿಯೊಗಳನ್ನು ವೈರಲ್ ಮಾಡುವುದು, ವಿಡಿಯೊ, ಫೋಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವುದು ಹೆಚ್ಚಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಪುಣೆಯಲ್ಲಿ ಯುವಕನೊಬ್ಬ ತನ್ನ ಮಹಿಳಾ ಪ್ರೊಫೆಸರ್ ಅವರ ಬೆತ್ತಲೆ ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ (Blackmail Case) ಹಾಕಿದ್ದಾನೆ. ಹಾಗೆಯೇ, 4 ಲಕ್ಷ ರೂಪಾಯಿ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾನೆ.
ಹೌದು, ಪುಣೆಯಲ್ಲಿರುವ ಅಭಿಮತ ವಿಶ್ವವಿದ್ಯಾಲಯದ ಮಹಿಳಾ ಪ್ರೊಫೆಸರ್ ಒಬ್ಬರಿಗೆ ಅವರ ಮಾಜಿ ಶಿಷ್ಯ ಮಯಾಕ್ ಸಿಂಗ್ ಎಂಬಾತನೇ ಮುಳುವಾಗಿದ್ದಾನೆ. ಪ್ರೊಫೆಸರ್ ಹಾಗೂ ಅವರ ಪತಿಗೆ ಬೆತ್ತಲೆ ವಿಡಿಯೊ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. 4 ಲಕ್ಷ ರೂಪಾಯಿ ಕೊಡಬೇಕು. ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಮಯಾಕ್ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ.
ಮಯಾಂಕ್ ಸಿಂಗ್ ಬಿಹಾರ ಮೂಲದವನಾಗಿದ್ದು, ಸದ್ಯ ಪುಣೆ ವಿವಿಯಲ್ಲಿ ಓದುತ್ತಿದ್ದಾನೆ. ಈತ ಪ್ರೊಫೆಸರ್ ಜತೆ ಇನ್‌ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದಾನೆ. ವಾಯ್ಸ್ ಕಾಲ್, ವಿಡಿಯೊ ಕಾಲ್ ಮಾಡುತ್ತ ಪ್ರೊಫೆಸರ್ ಸ್ನೇಹ ಗಳಿಸಿದ್ದಾನೆ. ಒಂದು ದಿನ ವಿಡಿಯೊ ಕಾಲ್ ಮಾಡಿ, ತಾನು ಹೇಳಿದ ಹಾಗೆ ಕೇಳಬೇಕು. ಇಲ್ಲದಿದ್ದರೆ, ಇಬ್ಬರ ನಡುವಿನ ಸಂಭಾಷಣೆಯನ್ನು ವಿವಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಪ್ರೊಫೆಸರ್, ಆತ ಹೇಳಿದ ಹಾಗೆ ಕೇಳಿದ್ದಾರೆ.
ಇದನ್ನೂ ಓದಿ: Cyber Crime: ಯುವ ವೈದ್ಯೆಯ ಬೆನ್ನುಬಿದ್ದ ಕಿರಾತಕ; ಅಶ್ಲೀಲ ಫೋಟೊ ತಂದೆಗೆ ಕಳಿಸಿ ಬ್ಲ್ಯಾಕ್‌ಮೇಲ್
ಪ್ರೊಫೆಸರ್ ಬಟ್ಟೆ ಬಿಚ್ಚಿದ ವಿಡಿಯೊ ರೆಕಾರ್ಡ್ ಮಾಡಿದ ಆತ ಸುಮ್ಮನಿರದೆ ಆ ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಯಾವಾಗ ಮಯಾಂಕ್ ಸಿಂಗ್ ಬ್ಲ್ಯಾಕ್‌ಮೇಲ್ ಮಾಡಿದನೋ, ಕೂಡಲೇ ಪ್ರೊಫೆಸರ್ ಹಾಗೂ ಅವರ ಪತಿಯು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.