Site icon Vistara News

Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಬಾಲಕನ ಅಜ್ಜನೂ ಪೊಲೀಸ್‌ ವಶಕ್ಕೆ

Pune Porsche accident

Pune Porsche accident

ಪುಣೆ: ಪುಣೆ ನಗರದಲ್ಲಿ ಐಷಾರಾಮಿ ಪೋರ್ಷೆ ಕಾರನ್ನು (Pune Porsche accident) ಚಲಾಯಿಸಿ ಇಬ್ಬರು ಐಟಿ ವೃತ್ತಿಪರರನ್ನು (IT Engineers) ಸಾಯಿಸಿದ 17 ವರ್ಷದ ಬಾಲಕನ (juvenile) ಅಜ್ಜ (grandfather) ಸುರೇಂದ್ರ ಕುಮಾರ್ ಅಗರ್ವಾಲ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ತಪ್ಪು ಮಾಹಿತಿ ನೀಡಿ ಕುಟುಂಬದ ಚಾಲಕನನ್ನು (Driver) ತಪ್ಪಾಗಿ ಬಂಧನಕ್ಕೆ ಒಳಪಡಿಸಿದ್ದಕ್ಕಾಗಿ ಅಜ್ಜನನ್ನು ಬಂಧಿಸಲಾಗಿದೆ. ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದ ಆರೋಪಿಗಳಲ್ಲಿ ಬಾಲಕನ ತಂದೆಯ ಹೆಸರೂ ಇದೆ.

ಭಾನುವಾರ ಮುಂಜಾನೆ ಕಲ್ಯಾಣಿನಗರದ ಬಳಿ ಬಿಲ್ಡರ್‌ ಮಗನಾದ 17 ವರ್ಷದ ಬಾಲಕ ಕಾರು ಯದ್ವಾತದ್ವಾ ಚಲಾಯಿಸಿ ಮೋಟಾರ್‌ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ. ಬೈಕ್‌ನಲ್ಲಿದ್ದ ಇಬ್ಬರು ಯುವ ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟ ಸಾವನ್ನಪ್ಪಿದ್ದರು. ಬಾಲಕ ಕಾರನ್ನು ಓಡಿಸಿಲ್ಲ, ಚಾಲಕ ಓಡಿಸಿದ್ದಾನೆ ಎಂದು ತನಿಖೆಯ ದಿಕ್ಕನ್ನು ತಪ್ಪಿಸಲು ಬಾಲಕ ಕುಟುಂಬದವರು ಯತ್ನಿಸಿದ್ದಾರೆ ಎಂದು ಶುಕ್ರವಾರ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

ಬಾಲಾಪರಾಧಿಯ ಕುಟುಂಬದ ಚಾಲಕನ ದೂರಿನ ಆಧಾರದ ಮೇಲೆ, ಯರವಾಡ ಪೊಲೀಸರು ಅಪ್ರಾಪ್ತನ ಅಜ್ಜ ಮತ್ತು ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 365 (ಒಬ್ಬ ವ್ಯಕ್ತಿಯನ್ನು ರಹಸ್ಯವಾಗಿ ಮತ್ತು ತಪ್ಪಾಗಿ ಬಂಧಿಸುವ ಉದ್ದೇಶದಿಂದ ಅಪಹರಣ) ಮತ್ತು 368 (ಬಚ್ಚಿಡುವುದು ಅಥವಾ ವ್ಯಕ್ತಿಯನ್ನು ಸೆರೆಯಲ್ಲಿಡುವುದು) ಅಡಿಯಲ್ಲಿ ಪ್ರತ್ಯೇಕ ಅಪರಾಧಗಳನ್ನು ದಾಖಲಿಸಿದ್ದಾರೆ.

“ಅಪಘಾತದ ನಂತರ, ಅಪ್ರಾಪ್ತನ ಅಜ್ಜ ಮತ್ತು ತಂದೆ ಚಾಲಕನ ಫೋನ್ ತೆಗೆದುಕೊಂಡು, ಮೇ 19ರಿಂದ ಮೇ 20ರವರೆಗೆ ತಮ್ಮ ಬಂಗಲೆಯ ಆವರಣದಲ್ಲಿರುವ ಅವರ ಮನೆಯಲ್ಲಿ ಆತನನ್ನು ಬಂಧಿಸಿದ್ದಾರೆ. ಚಾಲಕನನ್ನು ಅವನ ಹೆಂಡತಿ ಬಿಡುಗಡೆ ಮಾಡಿದ್ದಾಳೆ” ಎಂದು ಪೊಲೀಸರು ಹೇಳಿದ್ದಾರೆ. ಚಾಲನೆ ಸಮಯದಲ್ಲಿ ಬಾಲಕ ಪಾನಮತ್ತನಾಗಿದ್ದ ಎಂದು ಪೋಲೀಸರು ಹೇಳಿದ್ದಾರೆ.

ಶುಕ್ರವಾರ, ಪುಣೆಯ ಸ್ಥಳೀಯ ನ್ಯಾಯಾಲಯವು ಅಪ್ರಾಪ್ತನ ತಂದೆ ಸೇರಿದಂತೆ ಪ್ರಕರಣದಲ್ಲಿ ಬಂಧಿತ ಆರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಬಾಲಕ ಜೂನ್ 5ರವರೆಗೆ ಅಬ್ಸರ್ವೇಶನ್ ಹೋಮ್‌ನಲ್ಲಿರಲಿದ್ದಾನೆ.

ಕಲ್ಯಾಣಿನಗರ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಡಿಕ್ಕಿ ಹೊಡೆದು ಕೊಂದ ಪೋರ್ಷೆ ಕಾರನ್ನು 17 ವರ್ಷದ ಯುವಕ ಓಡಿಸಿಲ್ಲ ಎಂದು ಸಾಬೀತುಪಡಿಸಲು ಪ್ರಯತ್ನಿಸಲಾಗಿದೆ. ಅವರ ಕುಟುಂಬದಲ್ಲಿ ಕೆಲಸ ಮಾಡುತ್ತಿದ್ದ ಚಾಲಕ ಜವಾಬ್ದಾರಿಯನ್ನು ಹೊರಲು ಪ್ರಯತ್ನಿಸಿದ್ದಾನೆ. ತನಿಖೆಯ ವೇಳೆ ಎಸಗಿದ ಲೋಪಕ್ಕಾಗಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಶುಕ್ರವಾರ ಸಂಜೆ ತನಿಖೆಯನ್ನು ಯರವಾಡ ಪೊಲೀಸ್ ಠಾಣೆಯಿಂದ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮೇ 19ರಂದು ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರು ಐಟಿ ವೃತ್ತಿಪರರು ಮಧ್ಯಪ್ರದೇಶ ಮೂಲದವರು. ಇವರ ಪೋಷಕರು ಸುಪ್ರೀಂ ಕೋರ್ಟ್ ತನಿಖೆಯ ಮೇಲ್ವಿಚಾರಣೆ ವಹಿಸಬೇಕು ಮತ್ತು ವಿಚಾರಣೆಯನ್ನು ತಮ್ಮ ರಾಜ್ಯದಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.

ಅಪ್ರಾಪ್ತ ವಯಸ್ಕ ಕಾರು ಚಲಾಯಿಸುತ್ತಿದ್ದ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅವನು (ಬಾಲಾಪರಾಧಿ) ಪಬ್‌ನಲ್ಲಿ ಮದ್ಯ ಸೇವಿಸಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ನಮ್ಮ ಬಳಿ ಇವೆ. ಅವನು ಸಂಪೂರ್ಣವಾಗಿ ಪ್ರಜ್ಞೆ ಹೊಂದಿದ್ದ. ಈ ಅಪಘಾತಕ್ಕೆ ಐಪಿಸಿ ಸೆಕ್ಷನ್ 304 ಅನ್ವಯವಾಗುತ್ತದೆ ಎಂಬ ಸಂಪೂರ್ಣ ಜ್ಞಾನವನ್ನು ಹೊಂದಿದ್ದನು ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.

ಠಾಣೆಯಲ್ಲಿ ಪಿಜ್ಜಾ ನೀಡಲಾಗಿದೆಯೇ?

ಘಟನೆಯ ನಂತರ ಬಂಧಿತ ಬಾಲಾಪರಾಧಿಗೆ ಠಾನೆಯಲ್ಲಿ ಪಿಜ್ಜಾ ನೀಡಲಾಗಿದೆ ಎಂಬ ವರದಿಯನ್ನು ಕಮಿಷನರ್‌ ನಿರಾಕರಿಸಿದ್ದು, “ಪೊಲೀಸ್ ಠಾಣೆಯಲ್ಲಿ ಪಿಜ್ಜಾ ಪಾರ್ಟಿ ನಡೆಯಲಿಲ್ಲ. ಆದರೆ ನಾವು ಆ ಬಗ್ಗೆ ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ಹೇಳಿದ್ದಾರೆ. “ನಮ್ಮ ತನಿಖೆಯ ಸಮಯದಲ್ಲಿ, ಬಾಲಾಪರಾಧಿ ಕಾರನ್ನು ಚಾಲನೆ ಮಾಡುತ್ತಿದ್ದ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ನಾವು ಈಗಾಗಲೇ ಅಗತ್ಯವಿರುವ ಎಲ್ಲಾ ಕಾಲಾನುಕ್ರಮದ ಪುರಾವೆಗಳನ್ನು ಸಂಗ್ರಹಿಸಿದ್ದೇವೆ” ಎಂದು ಪೊಲೀಸ್ ಕಮಿಷನರ್ ಹೇಳಿದರು.

ಅಪ್ರಾಪ್ತನ ಕುಟುಂಬದ ಚಾಲಕ ಆಗ ಕಾರಿನಲ್ಲಿದ್ದ. ಅಪಘಾತದ ನಂತರ, ಚಾಲಕನು ತಾನು ಕಾರನ್ನು ಓಡಿಸುತ್ತಿದ್ದೆ ಎಂದು ಆರಂಭದಲ್ಲಿ ಹೇಳಿಕೊಂಡಿದ್ದಾನೆ. ಆರಂಭಿಕ ಎಫ್‌ಐಆರ್‌ನಲ್ಲಿ, ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅನ್ವಯಿಸಲಾಗಿದೆ. ಅದೇ ದಿನ ಅದನ್ನು ಸೆಕ್ಷನ್ 304 ಮಾಡಲಾಯಿತು. ಅಪಘಾತದ ನಂತರ ಅಪ್ರಾಪ್ತ ವಯಸ್ಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ ಮುಂದೆ ಹಾಜರುಪಡಿಸಲಾಗಿದೆ. ಅದು ಅವನಿಗೆ 300 ಪದಗಳ ಪ್ರಬಂಧವನ್ನು ಬರೆಯಲು ಕೇಳಿ, ಜಾಮೀನು ನೀಡಿತು. ನಂತರ ಜಾಮೀನು ರದ್ದುಪಡಿಸಿ, ಜೂನ್ 5 ರವರೆಗೆ ವೀಕ್ಷಣಾ ಕೇಂದ್ರಕ್ಕೆ ರಿಮಾಂಡ್ ಮಾಡಿದೆ.

ಇದನ್ನೂ ಓದಿ: ಕುಡಿದು ಕಾರು ಓಡಿಸಿ ಇಬ್ಬರ ಕೊಂದ ಬಾಲಕನಿಗೆ ರಿಮಾಂಡ್ ಹೋಮ್‌ನಲ್ಲಿ ಏನೆಲ್ಲ ಸವಲತ್ತಿದೆ ನೋಡಿ!

Exit mobile version