ಜೈಪುರ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮಾನುಷ ಘಟನೆ ರಾಜಸ್ಥಾನದ ದೌಸಾ (Rajasthan’s Dausa) ಜಿಲ್ಲೆಯಲ್ಲಿ ನಡೆದಿದೆ. ಲಾಲ್ಸೋಟ್ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ 4 ವರ್ಷದ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದು ಭೂಪೇಂದ್ರ ಸಿಂಗ್ (Bhupendra Singh) ಅತ್ಯಾಚಾರ ಎಸಗಿದ್ದಾನೆ ಎಂದು ಎಸಿಪಿ ರಾಮಚಂದ್ರ ಸಿಂಗ್ ನೆಹ್ರಾ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿತ್ತು ತನಿಖೆ ನಡೆಸಲಾಗುತ್ತಿದೆ (Rajasthan Crime).
ಪೊಲೀಸರು ವಶಕ್ಕೆ ಪಡೆಯುವ ಮೊದಲು ಅತ್ಯಾಚಾರ ನಡೆಸಿದ ಸಬ್ ಇನ್ಸ್‌ಪೆಕ್ಟರ್‌ಗೆ ಸ್ಥಳೀಯರು ಥಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾತ್ರವಲ್ಲ ರಾಹುವಾಸ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಬಾಲಕಿಯ ಮೇಲೆ ಪೊಲೀಸ್ ಅತ್ಯಾಚಾರ ಎಸಗಿದ ಘಟನೆಯ ಬಗ್ಗೆ ಜನರಲ್ಲಿ ತೀವ್ರ ಆಕ್ರೋಶವಿದೆ. ಮುಗ್ಧ ಮಗುವಿಗೆ ನ್ಯಾಯ ಕೇಳಲು ನಾನು ಸ್ಥಳಕ್ಕೆ ತಲುಪಿದ್ದೇನೆʼʼ ಎಂದು ಅವರು ಹೇಳಿದರು. ಗ್ರಾಮಸ್ಥರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊಗಳನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಬಾಲಕಿಯ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರವನ್ನು ಮೀನಾ ಘೋಷಿಸಿದ್ದಾರೆ.
ಘಟನೆಯ ಹಿನ್ನಲೆ
ಚುನಾವಣಾ ಕರ್ತವ್ಯದಲ್ಲಿದ್ದ ಭೂಪೇಂದ್ರ ಸಿಂಗ್ ತನ್ನ ಸಹೋದ್ಯೋಗಿ ಕಾನ್‌ಸ್ಟೇಬಲ್ ಬಾಡಿಗೆ ಮನೆಗೆ ಬಂದಿದ್ದ. ಅಲ್ಲಿಗೆ ಪಕ್ಕದ ಮನೆಯ ಬಾಲಕಿ ಆಟವಾಡಲು ಬಂದಿದ್ದಾಗ ಭೂಪೇಂದ್ರ ಸಿಂಗ್ ಕೃತ್ಯ ಎಸಗಿದ್ದಾನೆ ಎಂದು ದೂರಲಾಗಿದೆ. ಜೈಪುರದಲ್ಲಿ ಕಾನ್‌ಸ್ಟೇಬಲ್ ಆಗಿರುವ ಅಪ್ರಾಪ್ತೆಯ ತಂದೆ ರಾಹುವಾಸ್ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ತಿಳಿಸಿದ್ದರೂ ದೂರು ದಾಖಲಾಗಿರಲಿಲ್ಲ. ಸ್ಥಳೀಯರ ಪ್ರತಿಭಟನೆಯ ನಂತರವೇ ಪೊಲೀಸರು ದೂರು ದಾಖಲಿಸಿ ಪೋಕ್ಸೊ (Protection of Children from Sexual Offences Act-POCSO) ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Delhi Court Firing: ಕೋರ್ಟ್ ಆವರಣದಲ್ಲಿ ಹೈಡ್ರಾಮಾ; ವಕೀಲರ ಮಧ್ಯೆಯೇ ಸಂಘರ್ಷ, ಫೈರಿಂಗ್ ವಿಡಿಯೊ ವೈರಲ್
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
“ಆರೋಪಿ ಭೂಪೇಂದ್ರ ಸಿಂಗ್‌ನನ್ನು ಶೀಘ್ರದಲ್ಲೇ ಕೆಲಸದಿಂದ ವಜಾಗೊಳಿಸಲಾಗುವುದುʼʼ ಎಂದು ಭರವಸೆ ನೀಡಿದ ಮೀನಾ, “ಅಶೋಕ್ ಗೆಹ್ಲೋಟ್ ಸರ್ಕಾರ ಕಾನೂನು ಸುವ್ಯವಸ್ಥೆ ಪಾಲಿಸುವಲ್ಲಿ ಅಸಮರ್ಥವಾಗಿದೆ. ಚುನಾವಣೆಯಂತಹ ಸೂಕ್ಷ್ಮ ಸಂದರ್ಭದಲ್ಲೂ ದೌರ್ಜನ್ಯ ಎಸಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲʼʼ ಎಂದು ದೂರಿದರು. ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೂಡ ರಾಜಸ್ಥಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯದ ಕಾನೂನು ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. “ರಾಜಸ್ಥಾನದಲ್ಲಿ ಸುಮಾರು 35,000 ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ನಡೆದಿದೆ. ಆದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಮತ್ತು ಗೃಹ ಸಚಿವ ಅಶೋಕ್ ಗೆಹ್ಲೋಟ್ ಕಾನೂನು ಸುವ್ಯವಸ್ಥೆ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಅವರು ಟೀಕಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ