ಲಕ್ನೋ: ಹಲವು ವಿಚಾರಕ್ಕೆ ಮದುವೆ ಮನೆಯಲ್ಲಿ ಜಗಳ ನಡೆದ ಘಟನೆಗಳನ್ನು ಕೇಳಿದ್ದೇವೆ. ಕೆಲವೊಮ್ಮೆ ತೀರಾ ಸಣ್ಣ ವಿಚಾರಕ್ಕೂ ಮದುವೆ ಮಂಟಪ ರಣರಂಗವಾಗಿದ್ದೂ ಇದೆ. ಇದೀಗ ಅಂತಹದ್ದೇ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಆಗ್ರಾದ (Agra) ಮದುವೆ ಮನೆಯೊಂದರಲ್ಲಿ ರಸಗುಲ್ಲಾ (Rasgulla) ಕಡಿಮೆಯಾಗಿದೆ ಎನ್ನುವ ವಿಚಾರಕ್ಕೆ ನಡೆದ ಗಲಾಟೆಯಿಂದ ಸುಮಾರು 6 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಶಂಸಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾನುವಾರ (ನವೆಂಬರ್ 19)ರ ರಾತ್ರಿ ಈ ಹೊಡೆದಾಟ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ʼʼಘಟನೆಯಿಂದ ಆರು ಮಂದಿಗೆ ಗಾಯಗಳಾಗಿದ್ದು, ದೂರು ದಾಖಲಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆʼʼ ಎಂದು ಶಂಸಾಬಾದ್ ಪೊಲೀಸ್ ಠಾಣೆಯ ಅನಿಲ್ ಶರ್ಮಾ ತಿಳಿಸಿದ್ದಾರೆ.
ಘಟನೆಯ ಹಿನ್ನಲೆ
ಬ್ರಿಜ್ಭಾನ್ ಕುಶ್ವಾಹಾ ಅವರ ನಿವಾಸದಲ್ಲಿ ಭಾನುವಾರ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬರು ರಸಗುಲ್ಲಾ ಕೊರತೆ ಬಗ್ಗೆ ಕಮೆಂಟ್ ಮಾಡಿದ್ದರು. ಇದರಿಂದ ಜಗಳ ಆರಂಭವಾಯಿತು ಎಂದು ಅನಿಲ್ ಶರ್ಮಾ ಹೇಳಿದ್ದಾರೆ. ಹೊಡೆದಾಟದಲ್ಲಿ ಭಗವಾನ್ ದೇವಿ, ಯೋಗೇಶ್, ಮನೋಜ್, ಕೈಲಾಶ್, ಧರ್ಮೇಂದ್ರ ಮತ್ತು ಪವನ್ ಗಾಯಗೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡಿದ ಪತ್ನಿ; ಸಿಟ್ಟಾಗಿ ಇಬ್ಬರು ಸೋದರರನ್ನು ಕೊಂದು, ಇನ್ನಿಬ್ಬರ ಮೇಲೆ ಹಲ್ಲೆ ಮಾಡಿದ ಪತಿ!
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಎತ್ಮಾದ್‌ಪುರದಲ್ಲಿ ನಡೆದ ಮದುವೆಯೊಂದರಲ್ಲಿ ಸಿಹಿತಿಂಡಿಗಳ ಕೊರತೆ ಬಗ್ಗೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ