ಉಡುಪಿ/ಮಂಡ್ಯ/ಚಿತ್ರದುರ್ಗ/ ಚಿಕ್ಕಮಗಳೂರು: ಪ್ರತ್ಯೇಕ ಕಡೆಗಳಲ್ಲಿ ನಡೆದ ನಾಲ್ಕು ಅಪಘಾತದಲ್ಲಿ ಪವಾಡ ಸದೃಶ್ಯದಂತೆ ಪಾರಾಗಿದ್ದಾರೆ. ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿಯ ಅಂಬಾಗಿಲು ಪೆರಂಪಳ್ಳಿ ಕ್ರಾಸ್ ಬಳಿ ಸ್ಕೂಟರ್‌ಗೆ ಟ್ರಕ್‌ವೊಂದು ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಕಟ್ಟಡವೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ ನೇರವಾಗಿ ಹೋಗುತ್ತಿದ್ದರು. ಈ ವೇಳೆ ಲೆಫ್ಟ್ ಟರ್ನ್ ತೆಗೆದುಕೊಳ್ಳುವ ಧಾವಂತದಲ್ಲಿ ಟ್ರಕ್ ಸ್ಕೂಟಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಮಹಿಳೆ ಸ್ಕೂಟರ್ ಸಮೇತ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಟ್ರಕ್ ಚಾಲಕ ತಕ್ಷಣ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ದುರಂತ ತಪ್ಪಿದೆ. ಒಂದು ತಿಂಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಇದೇ ರೀತಿಯ ಅಪಘಾತ ನಡೆದಿತ್ತು.
ಮಂಡ್ಯದಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ; ಮೂವರು ಗಂಭೀರ
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್‌ಗೆ ಕಾರೊಂದು ಗುದ್ದಿದೆ. ಮಂಡ್ಯದ ಹನಕೆರೆ ಗ್ರಾಮದ ಸಮೀಪದ ಎಕ್ಸ್‌ಪ್ರೆಸ್ ಹೈವೆಯಲ್ಲಿ ಭೀಕರ ಅಪಘಾತ ನಡೆದಿದೆ. ಕೇರಳ ಮೂಲದ ಮೂವರಿಗೆ ಗಂಭೀರ ಗಾಯವಾಗಿದೆ. ಕೇರಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಹೈವೆಯಲ್ಲಿ ಉರುಳಿಬಿದ್ದು ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಗಾಯಾಳುಗಳು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗದಲ್ಲಿ ಲಾರಿ- ಬಸ್ ನಡುವೆ ಅಪಘಾತ
ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮದದಲ್ಲಿ ಲಾರಿ ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ವೋಲ್ವೋ ಬಸ್ ಹೊರಟಿತ್ತು. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದು ವೋಲ್ವೋ ಬಸ್ ಜಮೀನಿಗೆ ನುಗ್ಗಿದೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:Love Failure : ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
ಚಿಕ್ಕಮಗಳೂರಲ್ಲಿ ರಸ್ತೆ ಮಧ್ಯೆ ಹೊತ್ತಿ ಉರಿದ ಐರಾವತ ಬಸ್
ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಚಾಲಕನ-ನಿರ್ವಾಹಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಶಿವಮೊಗ್ಗದಿಂದ ಮೈಸೂರಿಗೆ ಹೋಗುತ್ತಿದ್ದ ಎ.ಸಿ ಬಸ್‌ನಲ್ಲಿ ಡ್ರೈವರ್-ಕಂಡಕ್ಟರ್ ಸೇರಿ 40 ಮಂದಿ ಪ್ರಯಣಿಕರಿದ್ದರು. ತರೀಕೆರೆ ತಾಲೂಕಿನ ನೇರಲಕೆರೆ ಕ್ರಾಸ್ ಬಳಿ ಬೆಳಗಿನ ಜಾವ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಇದನ್ನೂ ಗಮನಿಸಿದ ಚಾಲಕ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಳಿಕ ನೋಡನೋಡುತ್ತಿದ್ದ ಐರಾವತ ಎಸಿ ಸ್ಲೀಪರ್ ಬಸ್ ಸುಟ್ಟು ಕರಕಲಾಗಿದೆ. ವಿಷಯ ತಿಳಿದು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ