ಬೆಂಗಳೂರು: ಒಂದು ಸಣ್ಣ ನಿರ್ಲಕ್ಷ್ಯಕ್ಕೆ 5 ವರ್ಷದ ಮಗುವೊಂದು ಕಾರು ಅಪಘಾತದಲ್ಲಿ (Road Accident) ದುರ್ಮರಣ ಹೊಂದಿದೆ. ಆರವ್ (5) ಮೃತ ದುರ್ದೈವಿ. ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆ ಮುರುಗೇಶಪಾಳ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
ನಿನ್ನೆ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ನಡೆದಿದೆ. 15 ವರ್ಷದ ಬಾಲಕನೊರ್ವ ತಂದೆಯ ಜತೆ ಕಾರ್ ವಾಶ್ ಮಾಡುತ್ತಿದ್ದ. ಇದೇ ವೇಳೆ ಕಾರಿನ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತ ಬಾಲಕ ಏಕಾಏಕಿ ಎಕ್ಸಿಲೇಟರ್ ಒತ್ತಿದ್ದಾನೆ. ಪರಿಣಾಮ ಕಾರು ರಭಸವಾಗಿ ಚಲಿಸಿದೆ. ಅಲ್ಲೇ ಕಾರ್ ಬಳಿ ಆಟವಾಡುತ್ತಿದ್ದ 5 ವರ್ಷದ ಆರವ್ ಮೇಲೆ ಗುದ್ದಿದೆ.
ಕಾರು ಗುದ್ದಿದ ರಭಸಕ್ಕೆ ಆರವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರವ್ ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯವಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮೃತದೇಹವು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮಣಿಪಾಲ್ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಘಟನೆಯಲ್ಲಿ ಬಾಲಕಿಗೆ ಗುದ್ದಿ ನಂತರ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೂ ಕಾರು ಗುದ್ದಿದೆ. ಪರಿಣಾಮ ಸಂಪೂರ್ಣ ಜಖಂಗೊಂಡಿದೆ. ಜೆಬಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತ ಮಾಡಿದ ಕಾರಿನೊಳಗೆ ಪೊಲೀಸ್ ಎಂಬ ನೇಮ್ ಬೋರ್ಡ್ ಇದೆ. ಕಚೇರಿ ಕೆಲಸಕ್ಕಾಗಿ ಪೊಲೀಸರು ಖಾಸಗಿ ವಾಹನ ಬಳಕೆ ಮಾಡುತ್ತಾರೆ ಎನ್ನಲಾಗಿದೆ.
ಇನ್ನೂ ಮಗನನ್ನು ಬಚಾವ್ ಮಾಡಲು ತಾನೇ ಕಾರು ಓಡಿಸಿದ್ದು ಎಂದು ತಂದೆ ತ್ಯಾಮರೇಕಣ್ಣನ್ ಹೇಳಿಕೊಂಡಿದ್ದಾರೆ. ಆದರೆ ಕಾರು ಓಡಿಸಿದ್ದು ತಂದೆಯಲ್ಲ ಆ ಬಾಲಕನೇ ಕಾರು ಓಡಿಸಿದ್ದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತವಾದ ಬಳಿಕ ತ್ಯಾಮರೇಕಣ್ಣನ್ ಓಡಿಬಂದು ಕಾರು ಹತ್ತಿದರು. ಬಾಲಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು
ಆಕಸ್ಮಿಕ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಮೂಕಿಹಾಳ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹುಸೇನಭಾಷಾ ಎಂಬುವವರು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟವರು.
ಮೂಕಿಹಾಳ ಗ್ರಾಮದ ಹೊರವಲಯದಿಂದ ಶಿವಪೂರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ದುರ್ಘಟನೆ ನಡೆದಿದೆ. ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Dead Body Found : ಡ್ಯಾಂನಲ್ಲಿ ಬಿದ್ದಿತ್ತು ವ್ಯಕ್ತಿ ಶವ; ರೈಲು ಬೋಗಿ ಒಳಗೆ ಕೊಳೆಯುತ್ತಿತ್ತು ಮಹಿಳೆಯ ಡೆಡ್‌ಬಾಡಿ
ತುಮಕೂರಿನಲ್ಲಿ ಕಾರು ಪಲ್ಟಿ; ಮದುವೆಗೆ ಹೋಗಿದ್ದ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವು
ತುಮಕೂರು: ಜಿಲ್ಲೆಯ (Tumkur) ಪಾವಗಡ ತಾಲೂಕಿನಲ್ಲಿ ಕಾರೊಂದು (Pavagada Accident) ಪಲ್ಟಿಯಾಗಿದ್ದು, ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಶಿಕ್ಷಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಬೆಂಗಳೂರಿನ (Bengaluru) ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಣಿವೆನಹಳ್ಳಿ ಗೇಟ್ ಬಳಿ ಕಾರು ಪಲ್ಟಿಯಾಗಿದೆ. ನಾಲ್ವರೂ ತುಮಕೂರಿನಲ್ಲಿ ಮದುವೆ ಆರತಕ್ಷತೆ ಮುಗಿಸಿಕೊಂಡು ಪಾವಗಡಕ್ಕೆ ತೆರಳುತ್ತಿದ್ದರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿದೆ. ಕಾರು ಪಲ್ಟಿಯಾದ ತೀವ್ರತೆಗೆ ಒ. ಧನಂಜಯ ಹಾಗೂ ಶ್ರೀಕೃಷ್ಣ ಅವರು ಮೃತಪಟ್ಟಿದ್ದಾರೆ. ಶಿಕ್ಷಕರಾದ ನರಸಿಂಹ ಹಾಗೂ ವೆಂಕಟಾಚಲಪತಿ ಎಂಬುವರು ಗಾಯಗೊಂಡಿದ್ದಾರೆ.
ಒ. ಧನಂಜಯ ಅವರು ಪಾವಗಡ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾಗಿದ್ದರು. ಇನ್ನು ಶ್ರೀಕೃಷ್ಣ ಅವರು ಪಾವಗಡ ತಾಲೂಕಿನ ಗೌಡೇಟಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಪಲ್ಟಿಯಾದ ತೀವ್ರತೆಗೆ ಕಾರು ಕೂಡ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪಾವಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರವಷ್ಟೇ (ಮೇ 11) ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮಹಿಳೆಯರು ಮೃತರಾಗಿದ್ದರು. ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಮೃತರು. ಬಳ್ಳಿಗೇರಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನದ ಎಡಬದಿಯ ಟೈರ್ ಸ್ಫೋಟಗೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ