Site icon Vistara News

Road Accident : ಗಣೇಶ ಹಬ್ಬದ ದಿನವೇ ಡೆಡ್ಲಿ ಆ್ಯಕ್ಸಿಡೆಂಟ್ಸ್‌; ಐವರು ಸ್ಥಳದಲ್ಲೇ ಸಾವು

Deadly accidents on the day of Ganesh festival Five killed on the spot

ಬೆಂಗಳೂರು: ಕಾರು ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಆಟೋ ಚಾಲಕ ದುರ್ಮರಣ ಹೊಂದಿದ್ದಾರೆ. ಬೆಂಗಳೂರಿನ ಜ್ಞಾನಭಾರತಿ ಸಂಚಾರ ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ಘಟನೆ ನಡೆದಿದೆ. ಕಿರಣ್ (32) ಮೃತ ದುರ್ದೈವಿ. ನಿನ್ನೆ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಕಾರೊಂದು ಮುದ್ದಿನಪಾಳ್ಯ ಕಡೆಯಿಂದ ದೀಪಾ ಕಾಂಪ್ಲೆಕ್ಸ್ ಕಡೆಗೆ ತೆರಳುತ್ತಿತ್ತು.

ಈ ವೇಳೆ ಎದುರಿಗೆ ಬರುತ್ತಿದ್ದ ಆಟೋಗೆ ಕಾರು ಡಿಕ್ಕಿಯಾಗಿದೆ. ಘಟನೆಯಿಂದ ಆಟೋ ಚಾಲಕ ಮತ್ತು ಪ್ರಯಾಣಿಕನಿಗೆ ಗಾಯವಾಗಿತ್ತು. ಕೂಡಲೇ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಧ್ಯರಾತ್ರಿ ಆಟೋ ಚಾಲಕ ಕಿರಣ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕ ಗುರು ರಾಘವೇಂದ್ರ ಎಂಬಾತ ವಿರುದ್ಧ ಪ್ರಕರಣ ದಾಖಲಾಗಿದೆ.

ನಿಂತಿದ್ದ ಟ್ರ್ಯಾಕ್ಟರ್ ಬೈಕ್ ಡಿಕ್ಕಿ; ಬಸ್‌ ಹರಿದು ಸವಾರರಿಬ್ಬರು ದುರ್ಮರಣ

ನಿಂತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬಂದ ಬೈಕ್‌ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಮರೇಶ್ ಬಸಯ್ಯ ಬೆನಕನಾಳಮಠ (21), ಶರಣಬಸಯ್ಯ ಬಸಯ್ಯ ಬೆನಕನಾಳಮಠ (16) ಮೃತ ದುರ್ದೈವಿ.

ಮೃತ ಅಮರೇಶ್ ಮತ್ತು ಬಸಯ್ಯ ಇಬ್ಬರು ಅಣ್ಣ -ತಮ್ಮಂದಿರು. ‌ ಮೂಲತಃ ಇಳಕಲ್ಲ ನಗರ ನಿವಾಸಿಯಾಗಿದ್ದಾರೆ. ಪಲ್ಸರ್ ಬೈಕ್ ಮೂಲಕ ಬಾಗಲಕೋಟೆಯಿಂದ ಇಳಕಲ್ಲಗೆ ತೆರಳುತ್ತಿದ್ದರು. ಇತ್ತ ಡಿಸೇಲ್ ಖಾಲಿ ಆಗಿದ್ದರಿಂದ ರಸ್ತೆ ಪಕ್ಕ ಟ್ರ್ಯಾಕ್ಟರ್‌ಗೆ ನಿಲ್ಲಿಸಲಾಗಿತ್ತು. ನಿಂತಿದ್ದ ಟ್ರ್ಯಾಕ್ಟರ್‌ ಹಿಂಬದಿಗೆ ಬೈಕ್‌ ಡಿಕ್ಕಿ ಹೊಡೆದಿದೆ.

ಬೈಕ್‌ನಿಂದ ಕೆಳಗೆ ಬಿದ್ದವರ ಮೇಲೆ ಚಲಿಸುತ್ತಿದ್ದ ಬಸ್ ಅಡಿಗೆ ಸಿಲುಕಿ ಸಹೋದರರು ಮೃತಪಟ್ಟಿದ್ದಾರೆ. ಅಮಿನಗಡ ಹೊರವಲಯದ ರಾಜ್ಯ ಹೆದ್ದಾರಿ 20 ರಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅಮಿನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಅಮಿನಗಡ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ರಸ್ತೆ ದಾಟುತ್ತಿದ್ದ ಮಹಿಳೆಗೆ ಆಟೋ ರಿಕ್ಷಾ ಡಿಕ್ಕಿ

ರಸ್ತೆ ದಾಟುತ್ತಿದ್ದ ಮಹಿಳೆಗೆ ಆಟೋವೊಂದು ಡಿಕ್ಕಿ ಹೊಡೆದಿದೆ. ಮಂಗಳೂರಿನ ಕಿನ್ನಿಗೋಳಿಯ ರಾಮನಗರ ಬಳಿ ಅಪಘಾತ ನಡೆದಿದೆ. ಅಪಘಾತದಲ್ಲಿ ರಾಜರತ್ನಪುರ ನಿವಾಸಿ ಚೇತನ (35) ಗಂಭೀರ ಗಾಯಗೊಂಡಿದ್ದಾರೆ. ಟ್ಯೂಶನ್‌ಗೆ ತೆರಳಿದ್ದ ಮಗಳನ್ನು ಕರೆ ತರುವಾಗ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಪಲ್ಟಿ ಹೊಡೆದ ಆಟೋ ಎತ್ತಿದ ನಂತರ ತಾಯಿಯನ್ನು ಮಗಳು ಮೇಲಕ್ಕೆತ್ತಿದ್ದಾಳೆ. ಆಟೋ ಚಾಲಕ, ಪ್ರಯಾಣಿಕ ಸೇರಿ ಸ್ಥಳದಲ್ಲಿದ್ದವರಿಗೂ ಸಣ್ಣ ಪುಟ್ಟ ಗಾಯವಾಗಿದೆ. ಆಟೋ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.

ಟಾಟಾ ಏಸ್ ಆಟೋ ಪಲ್ಟಿ, ಸ್ಥಳದಲ್ಲೇ ಇಬ್ಬರ ಸಾವು

ಹಬ್ಬಕ್ಕೆ ಗಣಪತಿ ಮೂರ್ತಿ ತರಲು ಹೋಗುತ್ತಿದ್ದಾಗ ಟಾಟಾ ಏಸ್‌ ಆಟೋ ಪಲ್ಟಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋದಲ್ಲಿ 9 ಯುವಕರು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ .ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಘಟನೆ ನಡೆದಿದೆ.
ಶ್ರೀಧರ್ (20), ಧನುಷ್ (20) ಮೃತ ಯುವಕರು.

ಇವರಿಬ್ಬರ ತಲೆಗೆ ಗಂಭೀರ ಗಾಯವಾಗಿತ್ತು, ಹೀಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೂವರು ಯುವಕರಿಗೆ ಹೆಚ್ಚಿನ ಗಾಯವಾಗಿದ್ದು, ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಹಾಗೂ ಗಾಯಾಳುಗಳೆಲ್ಲಾ ಲಿಂಗದಹಳ್ಳಿ ನಿವಾಸಿಗಳಾಗಿದ್ದಾರೆ. ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ಕಾರು ಓಡಿಸುವಾಗ ಕಣ್ಣು ಮಂಜು ಆಗಿ ನಿಯಂತ್ರಣ ಕಳೆದುಕೊಂಡೆ; ಚಿತ್ರ ನಿರ್ದೇಶಕ ನಾಗಶೇಖರ್‌

ಗಣೇಶ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಲಾರಿ ಮಧ್ಯೆ ಅಪಘಾತ

ಗಣೇಶ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಾಗೂ ಲಾರಿ ಮಧ್ಯೆ ಅಪಘಾತ ನಡೆದಿದೆ. ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬಂದು ಲಾರಿಯೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪಳ ತಾಲೂಕಿನ ಕೋಳೂರು ಕ್ರಾಸ್ ಬಳಿ ಅಪಘಾತ ನಡೆದಿದೆ. ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮಕ್ಕೆ ತೆರಳುವಾಗ ಅಪಘಾತ ನಡೆದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿಯರಿಗಾಗಿ ವ್ಹೀಲಿಂಗ್‌ ಮಾಡುತ್ತಿದ್ದವರು ಅರೆಸ್ಟ್‌

ಬೈಕ್‌ ವ್ಹೀಲಿಂಗ್‌ ಮಾಡುತ್ತಾ ಇನ್ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್ಲೋಡ್ ಮಾಡುತ್ತೀರಾ?ಹಾಗಿದ್ದರೆ ಹುಷಾರಾಗಿರಿ. ಯಾಕೆಂದರೆ ಹುಡುಗೀಯರನ್ನು ಪಟಾಯಿಸಲು ಬಸ್‌ಗಳ ಹಿಂದೆ ವ್ಹೀಲಿಂಗ್‌ ಮಾಡಿ ಫೋಸ್ ಕೊಟ್ಟ ಪುಂಡರು ಅರೆಸ್ಟ್ ಆಗಿದ್ದಾರೆ. ತೌಫೀಕ್‌ ,ಅಸ್ಮಲ್ ,‌ಮುಜಾಯಿದ್ ಬಂಧಿತರು.

ಆರೋಪಿಗಳಿಂದ ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ. ಕಳೆದ ತಿಂಗಳು ವ್ಹೀಲಿಂಗ್‌ ಶೂರರ ಪುಂಡಾಟಿಕೆ ಬಗ್ಗೆ ವಿಸ್ತಾರ ನ್ಯೂಸ್ ವರದಿ ಮಾಡಿತ್ತು. ವಿಸ್ತಾರ ನ್ಯೂಸ್ ವರದಿ ಬೆನ್ನಲ್ಲೇ ಎಚ್ಚೆತ್ತ ಚಿಕ್ಕಬಳ್ಳಾಪುರ ಪೊಲೀಸರು, ವ್ಹೀಲಿಂಗ್‌ ಶೂರರ ಸೋಷಿಯಲ್ ಮೀಡಿಯಾಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಬಾಗೇಪಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version