Site icon Vistara News

Road Accident : ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತ್ಯು; 30ಕ್ಕೂ ಹೆಚ್ಚು ಮಂದಿಗೆ ಗಾಯ

Road Accident

ಚಿತ್ರದುರ್ಗ/ಚಿಕ್ಕಮಗಳೂರು/ಮೈಸೂರು: ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತಗಳಲ್ಲಿ (Road Accident) ಸಾವು-ನೋವು ಸಂಭವಿಸಿದೆ. ಅತಿ ವೇಗ ಚಾಲನೆಗೆ ನಾಲ್ವರು ಪ್ರಾಣವನ್ನೇ ತೆತ್ತಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಚರಂಡಿಗೆ ಪಲ್ಟಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದ್ದು, ಕಾರಿನಲ್ಲಿದ್ದ ಇಬ್ಬರು ವೃದ್ಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ. ಹರಿಹರದ ಸಾರಥಿ ಗ್ರಾಮದ ಕೊಟ್ರೇಶಪ್ಪ (65), ಹುಬ್ಬಳ್ಳಿಯ ಪುಷ್ಟ (55) ಮೃತ ದುರ್ದೈವಿಗಳು.

ಚಿತ್ರದುರ್ಗದಲ್ಲಿ ಮದುವೆ ಮುಗಿಸಿಕೊಂಡು ವಾಪಸ್‌ ಬರುವಾಗ ಈ ದುರ್ಘಟನೆ ನಡೆದಿದೆ. ಅತಿ ವೇಗದ ಚಾಲನೆಯಿಂದ‌ಲೇ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಗಾಯಗೊಂಡವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Drowned In water : ಈಜಲು 20 ಅಡಿ ಎತ್ತರದಿಂದ ನೀರಿನ ಬುಗ್ಗೆಗೆ ಜಿಗಿದವನು ಮತ್ತೆ ಏಳಲೇ ಇಲ್ಲ!

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಕರಗುಂದ ಗ್ರಾಮದ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಸವಾರರು ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಗುದ್ದಿದ್ದಾರೆ. ಪರಿಣಾಮ ಬೈಕ್‌ನಿಂದ ಹಾರಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಪೆಟ್ಟಾಗಿದೆ.

ಇದರಿಂದಾಗಿ ಹೊರನಾಡು ಗ್ರಾಮದ ಉಮೇಶ್, ಮುಂಡಗದ ಮನೆ ಗ್ರಾಮದ ಸುನಿಲ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಮುಂಡಗದ ಮನೆ ಗ್ರಾಮದ ಉಮೇಶ್, ಸುನೀಲನನ್ನು ಶಿವಮೊಗ್ಗಕ್ಕೆ ಬಿಡಲು ಹೋಗುತ್ತಿದ್ದರು. ತಿರುವಿನಲ್ಲಿ ನಿಯಂತ್ರಣಕ್ಕೆ ಬೈಕ್ ನೇರ ವಿದ್ಯುತ್‌ ಕಂಬಕ್ಕೆ ಗುದ್ದಿದೆ.

ಸ್ಥಳಕ್ಕೆ ಎನ್‌.ಆರ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನಲ್ಲಿ ಘಟನೆ ನಡೆದಿದೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Drowned In water : ಹೆತ್ತವರ ಕಣ್ಣೇದುರಿಗೆ ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋದರು ಪುತ್ರಿಯರು

ಸ್ಟೇರಿಂಗ್‌ ಕಟ್‌ ಆಗಿ ಗದ್ದೆಗೆ ನುಗ್ಗಿದ ಕೆಎಸ್ಆರ್‌ಟಿಸಿ ಬಸ್

30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಸ್ಟೇರಿಂಗ್‌ ಕಟ್ಟಿಂಗ್‌ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದೆ. ಘಟನೆಯಲ್ಲಿ 30 ಪ್ರಯಾಣಿಕರು ಗಾಯಗೊಂಡಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗೇಟ್ ಬಳಿ ನಡೆದಿದೆ.

ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೆ.ಆರ್.ನಗರ ಮತ್ತು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಕೆಆರ್‌ನಗರ ಡಿಪೋಗೆ ಸೇರಿದ ಬಸ್ ಕೇರಳಾಪುರದಿಂದ ಸಾಲಿಗ್ರಾಮ, ಚುಂಚನಕಟ್ಟೆ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದರು. ಕೆಆರ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version