Site icon Vistara News

Road Accident: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಜೀಪು; ಬಸ್‌ ನಿಲ್ಲಿಸದ ಕೋಪಕ್ಕೆ ಕಲ್ಲು ತೂರಿದವ ಪೊಲೀಸ್‌ ಅತಿಥಿ

Road Accident

Road Accident

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಥಾರ್ ಜೀಪೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಶಾಂತಿನಗರದಿಂದ ರಿಚ್‌ಮಂಡ್‌ ಸರ್ಕಲ್‌ಗೆ ಹೋಗುವ ಮಾರ್ಗದಲ್ಲಿ ನಡೆದಿದೆ. ಅಪಘಾತದ ವೇಳೆ ಏರ್‌ಬ್ಯಾಗ್ ಓಪನ್ ಆಗಿರುವುದರಿಂದ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ (Road Accident).

ಶಾಂತಿನಗರದಿಂದ ರಿಚ್‌ಮಂಡ್ ಸರ್ಕಲ್‌ಗೆ ಹೋಗುವ ಶಾಂತಿನಗರ ಡಬಲ್ ರೋಡ್ ಬಳಿ ನಡೆದ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಜೀಪು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಥಾರ್‌ನಲ್ಲಿ ಕೇರಳ ಮೂಲದ ಆರು ಜನರು ಪ್ರಯಾಣಿಸುತ್ತಿದ್ದರು. ಅಪಘಾತ ನಡೆದ ತಕ್ಷಣ ಏರ್‌ಬ್ಯಾಗ್ ಓಪನ್ ಆಗಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ವಾಹನ ತೆರವುಗೊಳಿಸಿದ್ದಾರೆ. ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಮಿಳುನಾಡು ಸರ್ಕಾರಿ ಬಸ್‌ಗೆ ಕಲ್ಲೇಟು

ಬೆಂಗಳೂರು: ತಮಿಳುನಾಡಿಗೆ ತೆರಳುತ್ತಿದ್ದ ಆ ರಾಜ್ಯದ ಸರ್ಕಾರಿ ಬಸ್‌ಗೆ ಯುವಕನೋರ್ವ ಕಲ್ಲು ತೂರಿರುವ ಘಟನೆ ನಡೆದಿದೆ. ಕಲ್ಲೇಟಿಗೆ ಬಸ್‌ನ ಹಿಂಬದಿ ಗಾಜು ಪುಡಿ ಪುಡಿಯಾಗಿದ್ದು, ಕೃತ್ಯ ಎಸಗಿದವರು ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಬಸ್‌ ಟೌನ್‌ಹಾಲ್ ಬಳಿ ಬರುತ್ತಿದ್ದಂತೆ ಮಹಾರಾಜ ಎನ್ನುವ ಯುವಕ ಬಸ್‌ಗೆ ಕಲ್ಲು ಹೊಡೆದು ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಆತನನ್ನು ಹಿಡಿದ ಪ್ರಯಾಣಿಕರು ಪೊಲೀಸರಿಗೆ ಒಪ್ಪಿಸಿದರು. ಬೆಂಗಳೂರಿನಿಂದ ತಿರುವಣ್ಣಮಲೈಗೆ ಹೋಗುತ್ತಿದ್ದ ತಮಿಳುನಾಡಿನ ಸರ್ಕಾರಿ ಬಸ್ ಇದಾಗಿದ್ದು, ಸ್ಯಾಟ್‌ಲೈಟ್‌ನಲ್ಲೇ ಫುಲ್ ರಶ್ ಆಗಿದ್ದ ಕಾರಣ ನಿಲ್ಲಿಸಿರಲಿಲ್ಲ.

ಬಸ್ ನಿಲ್ಲಿಸಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ಮಹಾರಾಜ ಬಸ್‌ಗೆ ಕಲ್ಲು ತೂರಾಟ ನಡೆಸಿದ್ದ. ಆತನ್ನು ತಮಿಳುನಾಡು ಮೂಲದವನು ಎಂದು ಗುರುತಿಸಲಾಗಿದ್ದು, ಎಸ್‌ಜೆ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವರಾಜನಿಂದಾಗಿ ಊರಿಗೆ ಹೋಗಬೇಕೆಂದು ಬಸ್ ಹತ್ತಿದ್ದ ಪ್ರಯಾಣಿಕರು ಠಾಣೆ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಪ್ರಯಾಣಿಕರ ಸಮೇತ ಬಸ್‌ ಅನ್ನು ಚಾಲಕ ಎಸ್‌ಜೆ ಪಾರ್ಕ್ ಸ್ಟೇಷನ್‌ಗೆ ತಂದಿದ್ದ. ಹೀಗಾಗಿ ಪ್ರಯಾಣಿಕರು ಸ್ಟೇಷನ್ ಮುಂದೆಯೆ ಗಂಟೆಗೂ ಹೆಚ್ಚು ಕಾಲ ಕಾದು ನಿಂತಿದ್ದರು. ಘಟನೆ ಸಂಬಂಧ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫುಟ್‌ಪಾತ್ ಮೇಲೆ ನಿಂತಿದ್ದ ಕಾರ್ಮಿಕರ ಮೇಲೆ ಹರಿದ ಟಾಟಾ ಏಸ್

ಚಿಕ್ಕಬಳ್ಳಾಪುರ: ಫುಟ್‌ಪಾತ್‌ ಮೇಲೆ ನಿಂತಿದ್ದ ಕೂಲಿ ಕಾರ್ಮಿಕರ ಮೇಲೆ ಟಾಟಾ ಏಸ್‌ ವಾಹನವೊಂದು ಹರಿದಿದೆ. ಅಪಘಾತದ ತೀವ್ರತೆಗೆ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಪೋಶೆಟ್ಟಿಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಚಿಂತಾಮಣಿ ತಾಲೂಕಿನ ನರಸಿಂಹ (50) ಮೃತ ದುರ್ದೈವಿ. ಬೆಳಗ್ಗೆ ಕೂಲಿಗೆ ಹೋಗಲು ಬಸ್‌ಗಾಗಿ ಫುಟ್ ಪಾತ್ ಮೇಲೆ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟಾಟಾಏಸ್‌ ವಾಹನವು ಏಕಾಏಕಿ ನಿಯಂತ್ರಣ ತಪ್ಪಿ ಕೂಲಿ ಕಾರ್ಮಿಕರಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ನರಸಿಂಹ ಸ್ಥಳದಲ್ಲೇ ಮೃತಪಟ್ಟರೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ನಾಲ್ವರು ಪಾರಾಗಿದ್ದಾರೆ. ಇತ್ತ ನರಸಿಂಹ ಮೃತದೇಹದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Udupi News : ಸತ್ತ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಅಸಾಮಿ!

Exit mobile version