Site icon Vistara News

Road Accident : ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್‌ಗೆ ಗುದ್ದಿ ಹಳ್ಳಕ್ಕೆ ಜಿಗಿದ ಕೆಎಸ್‌ಆರ್‌ಟಿಸಿ; ಶಿರಾಡಿಘಾಟ್‌ನಲ್ಲಿ ಸರಣಿ ಅಪಘಾತ

Road Accident

ಮಂಡ್ಯ/ಮಂಗಳೂರು: ಶನಿವಾರ ಒಂದೇ ದಿನ ಹಲವೆಡೆ ರಸ್ತೆ ಅಪಘಾತಗಳು (Road Accident) ಸಂಭವಿಸಿದೆ. ಮಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಡಿವೈಡರ್ ದಾಟಿ ಸರ್ವಿಸ್ ರಸ್ತೆಯ ಹಳ್ಳಕ್ಕೆ ಉರುಳಿದ ಘಟನೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್‌ ವೇಗವಾಗಿ ಬಂದು ನೋಡನೋಡುತ್ತಿದ್ದಂತೆ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಮೇಲೆ ಹತ್ತಿದೆ. ಬಳಿಕ ಸರ್ವಿಸ್ ರಸ್ತೆಗೆ ಬಂದು ಹಳ್ಳಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ.

ಗಂಭೀರವಾಗಿ ಗಾಯಗೊಂಡವರನ್ನು ಮಂಡ್ಯ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಣ್ಣ-ಪುಟ್ಟ ಗಾಯಗೊಂಡವರು ಬೇರೆ ಬಸ್‌ ಮುಖಾಂತರ ತೆರಳಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಾಡಿಘಾಟ್‌ನಲ್ಲಿ ಸರಣಿ ಅಪಘಾತ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನಲ್ಲಿ ಸರಣಿ ಅಪಘಾತ ಸಂಭವಿಸಿದೆ. ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತ ತಪ್ಪಿಸಲು ಹೋಗಿ ಟೆಂಪೋ ಚರಂಡಿಗೆ ಬಿದ್ದ ಬಿದ್ದಿದೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ. ಅಪಘಾತದಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಬಸ್‌ಗಳನ್ನು ತೆರವುಗೊಳಿಸಿದ್ದರು.

ಇದನ್ನೂ ಓದಿ: Road Accident: ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು ನವ ವಿವಾಹಿತೆ ಸಾವು

ಸುಟ್ಟು ಕರಕಲಾದ ಬಸ್‌ಗಳು

ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್ ಬಳಿ ಅಗ್ನಿ ಅವಘಡ ಸಂಭವಿಸಿದೆ. ಖಾಸಗಿ ನರ್ಸಿಂಗ್ ಕಾಲೇಜಿನ ಐದು ಬಸ್‌ಗಳಿಗೆ ಬೆಂಕಿ ತಗುಲಿದ್ದು, ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ 2.40ರ ಸುಮಾರಿಗೆ ಘಟನೆ ನಡೆದಿದೆ. ಕಾಲೇಜಿನ ಖಾಲಿ ಜಾಗವೊಂದರಲ್ಲಿ ಕೆಟ್ಟಿದ್ದ ಹಳೆ ಬಸ್‌ಗಳು ನಿಲ್ಲಿಸಲಾಗಿತ್ತು. ನಿಂತಿದ್ದ ಬಸ್‌ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಲ್ಲಿದ್ದ ಇತರೆ ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ‌. ಕೂಡಲೇ ಕಾಲೇಜು ಮಂಡಳಿಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯ ವರದಿ ಆಗಿಲ್ಲ.

ಕರೆಂಟ್‌ ಶಾಕ್‌ಗೆ ಮೊಸಳೆ ಸಾವು

ವಿದ್ಯುತ್ ತಗುಲಿ ಮೊಸಳೆಯೊಂದು ಮೃತಪಟ್ಟಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ದೂಧಗಂಗಾ ನದಿಯಲ್ಲಿ ಘಟನೆ ನಡೆದಿದೆ. ದೂಧಗಂಗಾ ನದಿಯಲ್ಲಿ ವಿದ್ಯುತ್‌ ಸ್ಪರ್ಶದಿಂದಾಗಿ ಸುಮಾರು 8 ಅಡಿ ಉದ್ದದ ಮೊಸಳೆ ಸಾವನ್ನಪ್ಪಿದೆ.

ರಿಪೇರಿಗೆ ತಂದಿದ್ದ ಮೊಬೈಲ್ ಬ್ಯಾಟರಿ ಬ್ಲಾಸ್ಟ್

ರಿಪೇರಿಗೆ ತಂದಿದ್ದ ಮೊಬೈಲ್ ಬ್ಯಾಟರಿ ಬ್ಲಾಸ್ಟ್ ಆಗಿದೆ. ಕೊಪ್ಪಳ ನಗರದ ಜಗದಂಬಾ ಮೊಬೈಲ್ ಸೆಂಟರ್‌ನಲ್ಲಿ ಘಟನೆ ನಡೆದಿದೆ. ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ಮೊಬೈಲ್ ಶಾಪ್‌ನಲ್ಲಿ ಗ್ರಾಹಕರೊಬ್ಬರು ರಿಪೇರಿಗೆಂದು ಮೊಬೈಲ್‌ ಕೊಟ್ಟು ಹೋಗಿದ್ದರು. ರಿಪೇರಿ ಮಾಡುವಾಗ ಏಕಾಏಕಿ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version