Site icon Vistara News

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು; ಇಬ್ಬರು ಅಯ್ಯಪ್ಪ ಭಕ್ತರ ಸಾವು

Ayyappa Swamy Accident

ವಿಜಯನಗರ : ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಳ್ಳಿ‌ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ಇಬ್ಬರು ಅಯ್ಯಪ್ಪ ಭಕ್ತರು ದಾರುಣವಾಗಿ ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್‌ ಡಿಸೈರ್‌ ಕಾರು ರಸ್ತೆ ವಿಭಜಕಕ್ಕೆ (Car Hits Divider) ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರು ಕಾನಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಮೃತಪಟ್ಟ ಅಯ್ಯಪ್ಪ ಭಕ್ತರನ್ನು ಗದಗ ಮೂಲದ ಯುವರಾಜ್ ಮತ್ತು ಚೆನ್ನವೀರ ಗೌಡ ಎಂದು ಗುರುತಿಸಲಾಗಿದೆ.

ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಘಟನೆಯ ವೇಳೆ ತೀವ್ರ ಗಾಯಗೊಂಡಿದ್ದ ಐವರನ್ನು ಜಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಯುವರಾಜ್‌ ಮತ್ತು ಚೆನ್ನವೀರ ಗೌಡ ಅವರು ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಉಳಿದ ಮೂವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾನಾಹೊಸಳ್ಳಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ತಾಳಿಕೋಟೆ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ: ಸವಾರ ಸ್ಥಳದಲ್ಲೇ ಬಲಿ

ವಿಜಯಪುರ: ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಬಳಿ ನಿಂತಿದ್ದ ಟ್ರ್ಯಾಕ್ಟರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಿಣಜಗಿ ಗ್ರಾಮದ ಶ್ರೀಧರ ಮಾದರ (24) ಮೃತಪಟ್ಟ ದುರ್ದೈವಿ. ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಬ್ಬು ತುಂಬಿದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು

ಚಿಕ್ಕೋಡಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಹಿನ್ನೆಲೆಯಲ್ಲಿ ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಗ್ರಾಮದ ಚಾಲಕ ಮಹಾರುದ್ರ ಸಂಕೇಶ್ವರಿ (24) ಮೃತಪಟ್ಟವರು.

ಹಂಜಾನಟ್ಟಿ ಗ್ರಾಮದಿಂದ ಸಂಕೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಟ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Killer CEO: ಮಗನನ್ನು ಕೊಂದು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಬಂದ ಬೆಂಗಳೂರಿನ ಸ್ಟಾರ್ಟಪ್ ಸಿಇಒ!

ಸ್ಕೂಲ್ ವ್ಯಾನ್ ಡಿಕ್ಕಿಯಾಗಿ ಮಹಿಳೆ‌ ಸ್ಥಳದಲ್ಲೇ ದುರ್ಮರಣ

ಚಿಕ್ಕಬಳ್ಳಾಪುರ: ಸ್ಕೂಲ್ ವ್ಯಾನ್ ಡಿಕ್ಕಿಯಾಗಿ ಮಹಿಳೆ‌ಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಂತಾಮಣಿ ತಾಲ್ಲೂಕಿನ ಚಲಂಕೋಟೆ ಗ್ರಾಮದಲ್ಲಿ ನಡೆದಿದೆ. ಮುರುಗಮಲ್ಲ ಗ್ರಾಮದ ನಿವಾಸಿ ನಜ್ಮಾ ತಾಜ್ ಮೃತಪಟ್ಟವರು.

ನಜ್ಮಾ ತಾಜ್‌ ಅವರು ಮನೆಗೆ ಸೌದೆ ಹೊತ್ತೊಯ್ಯುವಾಗ ಚಿಂತಾಮಣಿ ನಗರದ ಪ್ರತಿಷ್ಠಿತ ಎಸ್ ಎನ್ ಆರ್ ಸ್ಕೂಲ್ ವ್ಯಾನ್‌ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕೆಂಚಾರ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version