Site icon Vistara News

Road Accident: ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರ ಸಾವು

andhra accident

andhra accident

ಹೈದರಾಬಾದ್‌: ಆಂಧ್ರಪ್ರದೇಶದ ನಂದ್ಯಾಳ ಅಲ್ಲಗಡ್ಡ ಮಂಡಲದ ನಲ್ಲಗಟ್ಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಭೀಕರ ಅಪಘಾತವೊಂದು ನಡೆದಿದ್ದು, ನವ ವಿವಾಹಿತರು ಸೇರಿ ಒಂದೇ ಕುಟುಂಬದ 5 ಮಂದಿ ಮೃತಪಟ್ಟಿದ್ದಾರೆ (Road Accident). ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ನಂದ್ಯಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌.ಪಿ.) ಕೆ.ರಘುವೀರ ರೆಡ್ಡಿ ತಿಳಿಸಿದ್ದಾರೆ.

ʼʼತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಈ ಕುಟುಂಬ ಹಿಂದಿರುಗುತ್ತಿದ್ದ ವೇಳೆ ಬುಧವಾರ ಮುಂಜಾನೆ 5.15ರ ಸುಮಾರಿಗೆ ಅಪಘಾತ ಸಂಭವಿಸಿದೆʼʼ ಎಂದು ರಘುವೀರ ರೆಡ್ಡಿ ಹೇಳಿದ್ದಾರೆ. ʼʼರಸ್ತೆ ಬದಿ ನಿಲ್ಲಿಸಿದ್ದ ಟ್ರಕ್‌ ಅನ್ನು ಕಾರು ಚಾಲಕ ಗಮನಿಸದೇ ಇದ್ದುದು ಅಪಘಾತಕ್ಕೆ ಕಾರಣ. ಮೃತರು ಹೈದರಾಬಾದ್‌ ಮೂಲದವರು. ಬಾಲ ಕಿರಣ್‌, ಕಾವ್ಯಾ, ಮಂತ್ರಿ ಲಕ್ಷ್ಮೀ, ಮಂತ್ರಿ ರವೀಂದರ್‌ ಮತ್ತು ಉದಯ್‌ ಮೃತರು. ಫೆಬ್ರವರಿ 29ರಂದು ಬಾಲ ಕಿರಣ್‌ ಮತ್ತು ಕಾವ್ಯಾ ಅವರ ವಿವಾಹ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಕುಟುಂಬ ಸಮೇತ ತಿರುಪತಿಯ ತಿರುಮಲ ದರ್ಶನಕ್ಕೆ ತೆರಳಿದ್ದರುʼʼ ಎಂದು ಅವರು ವಿವರಿಸಿದ್ದಾರೆ.

ಅಪಘಾತದ ನಂತರ ಪೊಲೀಸರು ಸಂತ್ರಸ್ತರೊಬ್ಬರ ಮೊಬೈಲ್ ಫೋನ್‌ನಿಂದ ಅವರ ಸಂಬಂಧಿಕರಿಗೆ ಕರೆ ಮಾಡಿ, ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತ ಎಷ್ಟು ತೀವ್ರತೆಯಲ್ಲಿತ್ತು ಎಂದರೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹರ್ಯಾಣದಲ್ಲಿಯೂ ಭೀಕರ ರಸ್ತೆ ಅಪಘಾತ

ಇತ್ತ ಹರ್ಯಾಣದಲ್ಲಿಯೂ ಬುಧವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಐವರು ಮೃತಪಟ್ಟಿದ್ದಾರೆ. ಹರ್ಯಾಣದ ರೇವಾರಿಯಲ್ಲಿ ಸರ್ಕಾರಿ ಬಸ್​ ಮತ್ತು ಕಾರು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದು ಈ ದುರಂತ ನಡೆದಿದೆ. ಮಹೇಂದ್ರಗಢ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮೃತರು ಮದುವೆ ಸಮಾರಂಭವೊಂದನ್ನು ಮುಗಿಸಿ ಬರುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಮೃತರೆಲ್ಲ ಹರ್ಯಾಣದ ಚಾರ್ಕಿ ದಾದ್ರಿ ನಿವಾಸಿಗಳು.

ಮೃತರನ್ನು ಚಾರ್ಖಿ ದಾದ್ರಿಯ ಚಾಂಗ್ರೋಡ್ ಗ್ರಾಮದ ಅಜಿತ್ (45), ಸುಂದರ್ (42), ಬಿಲ್ಲು (38) ಮತ್ತು ಭಿವಾನಿ ಜಿಲ್ಲೆಯ ಸೂರತ್ (70) ಮತ್ತು ಪ್ರತಾಪ್ (55) ಎಂದು ಗುರುತಿಸಲಾಗಿದೆ. ಈ ಐವರು ಮಂಗಳವಾರ ರಾತ್ರಿ ತಾತರ್ಪುರದಲ್ಲಿ ನಡೆದ ಅಜಿತ್ ಅವರ ಸೋದರಳಿಯನ ಮದುವೆಯಲ್ಲಿ ಭಾಗವಹಿಸಲು ಚಾರ್ಖಿ ದಾದ್ರಿ ಜಿಲ್ಲೆಗೆ ಮರಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

“ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಿದ್ದೇವೆ. ಅಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಕುಟುಂಬ ಸದಸ್ಯರ ಆಗಮನದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಆ್ಯನಿವರ್ಸರಿಗೆ ಪತಿ ಕೊಡಲಿಲ್ಲ ಗಿಫ್ಟು- ಕೇಕು, ರೊಚ್ಚಿಗೆದ್ದ ಪತ್ನಿ ಹಾಕಿದಳು ಚಾಕು!

ವಿದ್ಯಾರ್ಥಿ ಸಾವು

ವಿಜಯನಗರ: ಆಟೋಗೆ ಲಾರಿ ಡಿಕ್ಕಿಯಾಗಿ ಒಬ್ಬ ವಿದ್ಯಾರ್ಥಿ ಮೃತಪಟ್ಟು, 6 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದ ಬಳಿ ನಡೆದಿದೆ. ಮಲ್ಲಿಕಾರ್ಜುನ (17) ಮೃತ ವಿದ್ಯಾರ್ಥಿ. ಗಾಯಗೊಂಡ ಆರು ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಆಟೋಗೆ ಡಿಕ್ಕಿ ಹೊಡೆದ ಬಳಿಕ ನಿಲ್ಲಿಸದೆ ಖಾಸಗಿ ಗೂಡ್ಸ್ ವಾಹನ ಚಾಲಕ ಪರಾರಿಯಾಗಿದ್ದ. ಆದರೆ, ಪೊಲೀಸರ ಚಾಣಾಕ್ಷತನದಿಂದ ಕೊಪ್ಪಳದ ಹಿಟ್ನಾಳ್ ಕ್ರಾಸ್ ಬಳಿ ಲಾರಿ ಚಾಲಕ ಸಿಕ್ಕಿಸಿದ್ದಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version