Site icon Vistara News

Road Accident : ಸವಾರನ ತಲೆ ಅಪ್ಪಚ್ಚಿ ಮಾಡಿದ ಟಿಪ್ಪರ್‌ ಲಾರಿ; ಬರ್ತ್‌ ಡೇ ದಿನವೇ ಯುವಕರಿಬ್ಬರ ಡೆತ್‌ ಡೇ

Three Dead in road accident

ಬೆಂಗಳೂರು ಗ್ರಾಮಾಂತರ/ಹಾಸನ: ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಚಿಂತಾಮಣಿ ರಸ್ತೆಯ ಸಣ್ಣದೇನಹಳ್ಳಿ ಬಳಿ ಭೀಕರ ಅಪಘಾತ (Road Accident) ಸಂಭವಿಸಿದೆ. ಟಿಪ್ಪರ್ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿಯಾಗಿದ್ದು, ಸವಾರನ ತಲೆಯೇ ಅಪ್ಪಚ್ಚಿ ಆಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ ಕೂಡ ಪೀಸ್ ಪೀಸ್ ಆಗಿದೆ. ವರದರಾಜು (35) ಎಂಬಾತ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ನಿರ್ಗಮಿಸಿತೇ ಮಳೆ; ಹೇಗಿರಲಿದೆ ಚಳಿಯ ಅಬ್ಬರ

ಗೆಳೆಯರ ಜಾಲಿ ರೈಡ್‌ ಇಬ್ಬರ ಸಾವಿನಲ್ಲಿ ಅಂತ್ಯ

ಹಾಸನ: ಐವರು ಯುವಕರು ಬರ್ತ್‌ಡೇ ಸೆಲೆಬ್ರೇಷನ್‌ ಮಾಡಿ ಕಾರಲ್ಲಿ ಜಾಲಿ ರೈಡ್ ಹೋಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯ ಜಮೀನಿಗೆ ಹಾರಿ ಬಿದ್ದಿತ್ತು. ಇದರಲ್ಲಿ ಬರ್ತ್‌ಡೇ ಬಾಯ್ ಸೇರಿ ಯುವಕನೊರ್ವ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ರಕ್ಷಿತ್ (22), ಕುಶಾಲ್ (24) ಎಂಬುವವರು ಮೃತಪಟ್ಟಿದ್ದಾರೆ. ಹಾಸನದ ಮಡೆನೂರು ಫ್ಲೈಓವರ್ ಬಳಿ ಈ ಅಪಘಾತ ಸಂಭವಿಸಿದ್ದು, ಅಭಿಷೇಕ್, ನಿಶಾಂತ್, ಮಂಜುನಾಥ್ ಗಂಭೀರ ಗಾಯಗೊಂಡಿದ್ದಾರೆ.

ಕಳೆದ ರಾತ್ರಿ (ಜ.11) ಫ್ಲೈಓವರ್ ಮೇಲೆ ಸ್ನೇಹಿತರೆಲ್ಲರೂ ಸೇರಿ ರಕ್ಷಿತ್ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದರು. ನಂತರ ಕಾರಿನಲ್ಲಿ ಹಾಸನದ ಕಡೆಗೆ ಜಾಲಿ ರೈಡ್ ಹೋದಾಗ ಈ ಅಪಘಾತ ನಡೆದಿದೆ. ಯುವಕರೆಲ್ಲರೂ ಚನ್ನರಾಯಪಟ್ಟಣ ಮೂಲದವರು ಎಂದು ತಿಳಿದು ಬಂದಿದೆ. ಕುಶಾಲ್ ತನ್ನೂರಿನ ಗಿರೀಶ್ ಎಂಬುವವರಿಂದ ಕಾರು ಪಡೆದುಕೊಂಡು ಬಂದಿದ್ದ.

ಅಪಘಾತದಲ್ಲಿ ರಕ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಕುಶಾಲ್ ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ಯಾಸ್‌ ತುಂಬಿದ್ದ ಟ್ಯಾಂಕರ್‌ ಪಲ್ಟಿ

ಧಾರವಾಡದ ಹೊರಹೊಲಯದ ಕೆಲಗೇರಿ ಬೈಪಾಸ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಟ್ಯಾಂಕರ್ ವಾಹನವು ಪಲ್ಟಿಯಾಗಿದೆ. ಗ್ಯಾಸ್ ತುಂಬಿದ್ದ ಟ್ಯಾಂಕರ್ ಪೂನಾದಿಂದ ಬೆಂಗಳೂರಿಗೆ ಹೊರಟಿತ್ತು. ಯಾವುದೇ ಲಿಕೇಜ್ ಇಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ.

ಇದನ್ನೂ ಓದಿ: Road Accident : ಯಮನಂತೆ ಬಂದ ಸರ್ಕಾರಿ ಬಸ್‌; ಸ್ಮಶಾನ ಸೇರಿದ ಬೈಕ್‌ ಸವಾರರು

ಹಳ್ಳಕ್ಕೆ ಸಿಲುಕಿ ವಾಲಿದ ಚಲಿಸುತ್ತಿದ್ದ ಸ್ಕೂಲ್‌ ಬಸ್‌

ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಚಲಿಸುತ್ತಿದ್ದ ಶಾಲಾ ಬಸ್‌ ಹಳ್ಳಕ್ಕೆ ಕುಸಿದ ಘಟನೆ ನಡೆದಿದೆ. ಕಾವೇರಿ ಪಬ್ಲಿಕ್‌ ಶಾಲೆಗೆ ಸೇರಿದ ಬಸ್‌ ಇದಾಗಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವೇಳೆ ಅಪಘಾತ ನಡೆದಿದೆ. ಗ್ರಾಮದಿಂದ ಅಣತಿ ದೂರದಲ್ಲಿರುವ ರಸ್ತೆಯ ಮಧ್ಯೆ ಪೈಪ್‌ಗಳನ್ನು ಹಾಕಿ ಮಣ್ಣಿನಿಂದ ಮುಚ್ಚಲಾಗಿತ್ತು. ಆದರೆ ಹಳ್ಳಕ್ಕೆ ಬಸ್‌ನ ಹಿಂಬದಿ ಚಕ್ರ ಸಿಲುಕಿದ್ದರಿಂದ ವಾಲಿಕೊಂಡಿತ್ತು. ಬಸ್‌ ಒಮ್ಮೆಲೆ ವಾಲಿಕೊಂಡ ರಭಸಕ್ಕೆ ಮಕ್ಕಳೆಲ್ಲರೂ ಚೀರಾಡಿದ್ದರು. ಕೂಡಲೇ ಚಾಲಕ ತಕ್ಷಣ ಬಸ್‌ ನಿಲ್ಲಿಸಿ ಮಕ್ಕಳನ್ನು ಹೊರಗಡೆ ಇಳಿಸಿಕೊಂಡಿದ್ದಾರೆ. ಬಳಿಕ ಕ್ರೇನ್ ಮೂಲಕ ಬಸ್ ಮೇಲೆತ್ತಲಾಗಿದೆ.

ಬೆಂ-ಮೈ ಹೈವೇಯಲ್ಲಿ ಉರುಳಿದ ವಿದ್ಯುತ್‌ ಕಂಬ

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಾಗಿ ಮುದ್ದನಹಳ್ಳಿ ಬಳಿ ಹೈಟೆನ್ಷನ್ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ವಾಹನ ಸವಾರರ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲೆ ಅನಾಹುತವೊಂದು ತಪ್ಪಿದೆ. ವಿದ್ಯುತ್‌ ಕಂಬ ಬೀಳುಲು ಕಾರಣ ಕಳ್ಳರು ಎನ್ನಲಾಗಿದೆ. ವಿದ್ಯುತ್ ಕಂಬಕ್ಕೆ ಕಬ್ಬಿಣದ ಪ್ಲೇಟ್‌ಗಳನ್ನು ಅಳವಡಿಸಲಾಗಿತ್ತು. ರಾತ್ರಿ ವೇಳೆ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಲ್ಲಿ ಕಬ್ಬಿಣದ ಪ್ಲೇಟ್‌ಗಳನ್ನು ಕಳವು ಮಾಡಿದ್ದಾರೆ. ಪ್ಲೇಟ್‌ಗಳು ಕಳುವಾದ ಹಿನ್ನೆಲೆಯಲ್ಲಿ ಬೃಹತ್ ವಿದ್ಯುತ್ ಕಂಬಗಳು ನಿಯಂತ್ರಣ ಕಳೆದುಕೊಂಡು ಹೆದ್ದಾರಿಗೆ ಉರುಳುತ್ತಿವೆ. ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದಾಕ್ಷಣ ಹೆದ್ದಾರಿಯಲ್ಲಿದ್ದ ವಿದ್ಯುತ್ ಕಂಬವನ್ನು ಸಿಬ್ಬಂದಿ ಪಕ್ಕಕ್ಕೆ ಸರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version