Site icon Vistara News

Road Rage: ರಾಜಧಾನಿಯಲ್ಲಿ ಹೆಚ್ಚುತ್ತಿದೆ ರೋಡ್‌ ರೇಜ್‌, ಮತ್ತೊಂದು ಹಲ್ಲೆ

road rage bangalore

ಬೆಂಗಳೂರು: ರಾಜಧಾನಿಯಲ್ಲಿ ರೋಡ್ ರೇಜ್ (Road Rage) ಪ್ರಕರಣಗಳು ಮಿತಿಮೀರಿ ಹೆಚ್ಚುತ್ತಿವೆ. ಕೆಲವು ವರದಿಯಾಗುತ್ತಿವೆ, ಕೆಲವು ಗಮನಕ್ಕೆ ಬರದೇ ಹೋಗುತ್ತಿವೆ. ಮೇ 17ರಂದು ಸರ್ಜಾಪುರ ರಸ್ತೆಯಲ್ಲಿ (Sarjapura road) ನಡೆದ ಘಟನೆಯ ವಿಡಿಯೋವನ್ನು ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ದೂರು ನೀಡಲಾಗಿದ್ದು, ಇದರಲ್ಲಿ ಸ್ಕೂಟರ್‌ ಸವಾರನೊಬ್ಬ ಕಾರು ಪ್ರಯಾಣಿಕರ ಮೇಲೆ ಹಲ್ಲೆ (Assault Case) ನಡೆಸಿದ್ದಾನೆ.

ಕೇರಳ ಮೂಲದ ಅಖಿಲ್ ಸಾಬು ಎಂಬವರು ಸರ್ಜಾಪುರ ರಸ್ತೆಯಲ್ಲಿ ಅನುಭವಿಸಿದ ಯಾತನೆಯನ್ನು ನಗರ ಪೊಲೀಸರು, ಗೃಹ ಸಚಿವರಿಗೆ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ದೂರು‌‌ ನೀಡಿದ್ದಾರೆ. ಬಳಿಕ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸರ್ಜಾಪುರ ರಸ್ತೆಯಲ್ಲಿ ಕುಟುಂಬದೊಂದಿಗೆ ಅಖಿಲ್ ಸಾಬು ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾಗ, ಹೋಂಡಾ ಆ್ಯಕ್ಟಿವಾ ಬೈಕ್‌ನಲ್ಲಿ ಬಂದ ವ್ಯಕ್ತಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ನಡುರಸ್ತೆಯಲ್ಲಿ ಜಗಳವಾಗಿದೆ. ಜಗಳದ ವೇಳೆ ಕಾರಿನ ಎಡಭಾಗದ ಕಿಟಕಿಯನ್ನು ಆರೋಪಿ ಹೆಲ್ಮೆಟ್‌ನಿಂದ ಹೊಡೆದು ಒಡೆದುಹಾಕಿದ್ದಾನೆ. ಆಗ ಕಾರಿನಲ್ಲಿದ್ದ ಅಖಿಲ್ ಪತ್ನಿ ಹಾಗೂ ಮಗುವಿನ ಕೈಗೆ ಗಾಯವಾಗಿದೆ.

ಇದನ್ನು ಪ್ರಶ್ನೆ ಮಾಡಿದ ಅಖಿಲ್ ಮೇಲೂ ಹಲ್ಲೆ ಎಸಗಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ. ಜಗದೀಶ್ ಎಂಬಾತನ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಾರು ಚಾಲಕನ ಹುಚ್ಚಾಟ

ಬೆಂಗಳೂರಿನಲ್ಲಿ ಕಾರು ಚಾಲಕನೊಬ್ಬ ಮನ ಬಂದಂತೆ ಕಾರು ಚಲಾಯಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದಿದ್ದಾನೆ. ಹುಚ್ಚಾಪಟ್ಟೆ ಕಾರು ಚಲಾಯಿಸಿ ಪಾದಚಾರಿಗಳಿಗೆ ಹಾಗೂ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಚಾಲಕ‌ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೇ 21ರ ಬೆಳಿಗ್ಗೆ 8:30ರ ಸುಮಾರಿಗೆ ವೆಸ್ಟ್ ಆಫ್ ಕಾರ್ಡ್ ರೋಡ್‌ನ ಎನ್‌ಪಿಎಸ್ ಜಂಕ್ಷನ್ ಬಳಿ KA02MK4206 ಸಂಖ್ಯೆಯ ಮಾರುತಿ ಕಾರಿನಲ್ಲಿ ಬಂದ ಚಾಲಕನಿಂದ ಕೃತ್ಯ ನಡೆದಿದೆ. ಘಟನೆಯಲ್ಲಿ ಪಾದಚಾರಿ ವೆಂಕಟೇಶ್ ಎಂಬವರ ಕೈಕಾಲುಗಳಿಗೆ ಗಾಯವಾಗಿದೆ. ಇದೇ ವೇಳೆ ಬೇರೆ ವಾಹನಗಳಿಗೂ ಡಿಕ್ಕಿ ಹೊಡೆಸಿದ್ದಾನೆ.

ಘಟನೆ ಸಂಬಂಧ ವಿಜಯನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ವೆಂಕಟೇಶ್ ಮಗನ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ವಾಹನದ ಜೊತೆ ಚಾಲಕನನ್ನು ವಶಕ್ಕೆ ಪಡೆದು ವಿಜಯನಗರ ಸಂಚಾರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

ಕಾರವಾರ: ತಾನು ಪ್ರೀತಿಸುತ್ತಿದ್ದ ಯುವತಿ ತನ್ನ ಪ್ರೀತಿ ನಿರಾಕರಿಸಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದಕ್ಕೆ ಕೋಪಗೊಂಡ ಮಾಜಿ ಪ್ರಿಯಕರ ಹಾಲಿ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದು ಹಲ್ಲೆ (Assault Case) ಮಾಡಿರುವ ಘಟನೆ ಕುಮಟಾ ಪಟ್ಟಣ ಮಣಕಿ ಮೈದಾನದಲ್ಲಿ ನಡೆದಿದೆ.

ಸಂತೋಷ ಅಂಬಿಗ ಎಂಬಾತನೆ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದು, ರಾಜೇಶ ಅಂಬಿಗ ಎಂಬಾತ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ರಾಜೇಶ ಅಂಬಿಗ ಯುವತಿಯೋರ್ವಳನ್ನು ಪ್ರೀತಿ ಮಾಡುತ್ತಿದ್ದು, ಇಬ್ಬರೂ ಚೆನ್ನಾಗಿಯೇ ಇದ್ದರು ಎನ್ನಲಾಗಿದೆ. ಕಳೆದ ‌ಒಂದು ವರ್ಷದಿಂದ ರಾಜೇಶನ ನಡವಳಿಕೆ ಸರಿಯಿಲ್ಲದ ಕಾರಣ ಆಕೆ ರಾಜೇಶ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು ಎನ್ನಲಾಗಿದೆ. ನಂತರದಲ್ಲಿ ಇದೀಗ ಹಲ್ಲೆಗೆ ಒಳಗಾದ ಸಂತೋಷ ಅಂಬಿಗ ಈ ಹಿಂದೆ ರಾಜೇಶ ಪ್ರೀತಿ ಮಾಡುತ್ತಿದ್ದ ಯುವತಿಯನ್ನ ಪ್ರೀತಿ ಮಾಡಲು ಆರಂಭಿಸಿ ವಿವಾಹ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ಸಿಟ್ಟಾದ ರಾಜೇಶ ಅಂಬಿಗ ಬುಧವಾರ ಸಂತೋಷ ಅಂಬಿಗನಿಗೆ ಪೋನ್ ಮಾಡಿ ಮಾತನಾಡಬೇಕೆಂದು ಒಬ್ಬನನ್ನೇ ಮಣಕಿ ಮೈದಾನಕ್ಕೆ ಕರೆಸಿಕೊಂಡಿದ್ದಾನೆ. ಆದರೆ ಸಂತೋಷ ಬರುವಾಗ ತನ್ನ ಜತೆ ಒಂದಿಬ್ಬರು ಸ್ನೇಹಿತರನ್ನ ಕರೆದುಕೊಂಡು ಬಂದಿದ್ದು, ಈ ವೇಳೆ ರಾಜೇಶ, ಸಂತೋಷನ ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ‌ ಎಂದು ತಿಳಿದುಬಂದಿದೆ‌. ಘಟನೆಯಿಂದ ಸಂತೋಷ ಅಂಬಿಗ ಗಂಭೀರವಾಗಿ ಗಾಯಗೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

Exit mobile version